Cinisuddi Fresh Cini News 

“ರ” ಅಕ್ಷರದ ಕ್ವೀನ್

ಬೆಳ್ಳಿ ಪರದೆ ಮೇಲೆ ನಾಯಕಿಯರ ಸದ್ದು ಕೂಡ ಜೋರಾಗಿ ಬೀಸುತ್ತಿದೆ. ಈ ಹಿಂದೆ “ರ” ಕಾರ ಪ್ರಿಯರಾದ ರಕ್ಷಿತಾ, ರಮ್ಯಾ, ರಾಧಿಕಾ ಕನ್ನಡ ಚಿತ್ರರಂಗದ ಅತಿ ಬೇಡಿಕೆಯ ನಟಿಯರಾಗಿದ್ದರು, ನಂತರ ರಾಧಿಕಾಪಂಡಿತ್, ರಾಗಿಣಿಯ ಹವಾ ಜೋರಾಗಿತ್ತು. ಈಗ ರಚಿತಾರಾಮ್ ಹಾಗೂ ರಶ್ಮಿಕಾ ಚಂದನವನದ ನಂಬರ್ 1 ನಟಿಯರಾಗುವತ್ತ ಚಿತ್ತ ಹರಿಸಿದ್ದಾರೆ.

ದರ್ಶನ್ ಅಭಿನಯದ ಬುಲ್‍ಬುಲ್ ಚಿತ್ರದಿಂದ ಬಣ್ಣದ ಲೋಕಕ್ಕೆ ಬಂದ ರಚಿತಾರಾಮ್, ಚಂದನವನದಲ್ಲಿ ಶಿವರಾಜ್‍ಕುಮಾರ್, ಪುನೀತ್‍ರಾಜ್‍ಕುಮಾರ್, ಉಪೇಂದ್ರ , ಸುದೀಪ್ ಸೇರಿದಂತೆ ಬಹುತೇಕ ಎಲ್ಲಾ ಸ್ಟಾರ್ ನಟರುಗಳ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ರಚಿತಾ ಈಗ ಮಹಿಳಾ ಪ್ರಧಾನ ಚಿತ್ರಗಳಲ್ಲಿ ಮಿಂಚಲು ಹೊರಟಿದ್ದಾರೆ.

ರಚಿತಾ ಚಿತ್ರರಂಗಕ್ಕೆ ಬಂದು 7 ವರ್ಷಗಳಾಗಿದ್ದೂ ಅಂದಿನಿಂದಲೂ ಚಂದನವನದಲ್ಲಿ ಬಲು ಬೇಡಿಕೆಯ ನಟಿಯಾಗಿರುವ ಡಿಂಪಲ್ ಕ್ವೀನ್ ಕೈಯಲ್ಲಿ ಈಗ 10 ಚಿತ್ರಗಳು ಕೈಯಲ್ಲಿದೆ. ಅವುಗಳಲ್ಲಿ 3 ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ.

ಲಾಕ್‍ಡೌನ್ ಸಮಯದಲ್ಲೂ ಸಕ್ರಿಯರಾಗಿದ್ದ ಡಿಂಪಲ್‍ಕ್ವೀನ್ ರಚಿತಾ ಹಲವು ಚಿತ್ರಗಳ ನಿರ್ಮಾಪಕರು ಹಾಗೂ ನಿರ್ದೇಶಕರಿಂದ ಕಥೆಗಳನ್ನು ಕೇಳಿದ್ದು, ಅವುಗಳಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಲು ಸೈನ್ ಹಾಕಿದ್ದಾರೆ.

ಈ ಹಿಂದೆ ರಮೇಶ್ ಅರವಿಂದ್‍ರ 100ನೆ ಚಿತ್ರವಾದ ಪುಷ್ಪಕ ವಿಮಾನವನ್ನು ನಿರ್ಮಿಸಿದ್ದ ವಿಕ್ಯಾತ್ ಮತ್ತು ನಿರ್ದೇಶಕ ಎಸ್.ರವೀಂದ್ರನಾಥ್ ನಿರ್ದೇಶನದ ಹೊಸ ಚಿತ್ರದಲ್ಲೂ ರಚಿತಾರಾಮ್ ನಟಿಸಲಿದ್ದಾರೆ. ಪುಷ್ಪಕವಿಮಾನದಲ್ಲಿ ಡಿಂಪಲ್ ಕ್ವೀನ್ ನಟಿಸಿದ್ದ ವಕೀಲೆ ಪಾತ್ರವು ಎಲ್ಲರ ಮನಗೆದ್ದಿದ್ದು , ಈ ಚಿತ್ರದಲ್ಲೂ ಅವರಿಗೆ ಮನಮುಟ್ಟುವಂತಹ ಪಾತ್ರವಿದ್ದು ಅವರಿಗೆ ಡಾಲಿ ಧನಂಜಯ್ ಜೋಡಿಯಾಗಲಿದ್ದಾರೆ.

ಲಾಕ್‍ಡೌನ್‍ನಿಂದ ಚಿತ್ರರಂಗಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಆದರೆ ತಕ್ಕಮಟ್ಟಿಗೆ ತೆರವು ಗೊಂಡಿರುವುದರಿಂದ ಹೊಸ ಚೈತನ್ಯ ಮೂಡಿದೆ. ನಾನು ಕೂಡ ಮತ್ತೆ ಸಕ್ರಿಯಳಾಗಿದ್ದು ಉತ್ತಮ ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದು , ನನ್ನ ಅಭಿಮಾನಿಗಳನ್ನು ಒಳ್ಳೆಯ ಪಾತ್ರಗಳಿಂದ ರಂಜಿಸುತ್ತೇನೆ. ಸದ್ಯದಲ್ಲೇ ನನ್ನ ಮೂರು ಚಿತ್ರಗಳು ಬಿಡುಗಡೆಯಾಗಲಿದೆ ಎಂದು ಕೂಡ ಹೇಳಿದ್ದಾರೆ.

ಡಿಂಪಲ್ ಕ್ವೀನ್ ರಚಿತಾರಾಮ್ ಈಗ ಫುಲ್ ಬ್ಯುಜಿಯಾಗಿದ್ದಾರೆ. ಮಯೂರ ರಾಘವೇಂದ್ರ ಆ್ಯಕ್ಷನ್ ಕಟ್ ಹೇಳಿರುವ ಒಂದು ಹೊಸ ಚಿತ್ರದಲ್ಲಿ ನಟಿಸಲಿರುವ ರಚಿತಾ, ನಿರ್ದೇಶಕ ದಿನೇಶ್‍ಬಾಬು ಅವರ ನಿರ್ದೇಶನದ ಚಿತ್ರದಲ್ಲೂ ಬಣ್ಣ ಹಚ್ಚಲಿದ್ದು , ಅಯೋಗ್ಯ ಸಿನಿಮಾದ ನಂತರ ನೀನಾಸಂ ಸತೀಶ್‍ರೊಂದಿಗೆ ಅವರು ನಟಿಸಲಿದ್ದಾರೆ. ಇದರೊಂದಿಗೆ ವಿಜಯ್ ಎಸ್.ಗೌಡ ನಿರ್ದೇಶಿಸಿರುವ ಲಿಲ್ಲಿ, ಸತ್ಯರಾಯಲ ನಿರ್ದೇಶನದ ಏಪ್ರಿಲ್ ಚಿತ್ರಗಳಲ್ಲೂ ರಚಿತಾ ನಟಿಸಲಿದ್ದಾರೆ.

ರಮೇಶ್ ಅರವಿಂದ್ ನಿರ್ದೇಶನದ 100 ಚಿತ್ರ , ಪ್ರೇಮ್‍ರ ಏಕ್‍ಲವ್ ಯಾ, ಕಲ್ಯಾಣ್‍ದೇವ್‍ರೊಂದಿಗೆ ನಟಿಸಿರುವ ಕನ್ನಡ ಹಾಗೂ ತೆಲುಗು ಅವತರಣಿಕೆಯ ಸೂಪರ್‍ಮಚ್ಚಿ ಚಿತ್ರಗಳು 2020ರಲ್ಲಿ ಬಿಡುಗಡೆಯಾಗಲಿದೆ. ಇನ್ನುಳಿದ 7 ಚಿತ್ರಗಳು 2021ರಲ್ಲಿ ಬಿಡುಗಡೆಯಾಗುವುದರಿಂದ ರಚಿತಾರಾಮ್ ಚಿತ್ರರಂಗದಲ್ಲಿ ಫುಲ್ ಬ್ಯುಜಿ ನಟಿಯಾಗಿದ್ದಾರೆ.

ಈ ನಡುವೆ ಲೇಡಿ ಸೂಪರ್‍ಸ್ಟಾರ್ ಎಂದೇ ಬಿಂಬಿತಗೊಂಡಿರುವ ನಯನತಾರಾ ನಟಿಸಿದ್ದ ಡಾರ್ಕ್ ಕಾಮಿಡಿ ಮತ್ತು ಥ್ರಿಲ್ಲರ್ ಕಥಾಹಂದರ ಹೊಂದಿರುವ ಕೊಲಮಾವು ಕೋಕಿಲಾ ಚಿತ್ರದ ಕನ್ನಡ ರೀಮೇಕ್‍ನಲ್ಲೂ ರಚಿತಾ ನಟಿಸಲಿದ್ದು , ಆ ಚಿತ್ರದ ಟೈಟಲ್ ನಿರ್ದೇಶಕರ ಬಗ್ಗೆ ಕುತೂಹಲ ಮೂಡಿದೆ.

ವರಮಹಾಲಕ್ಷ್ಮಿ ಹಬ್ಬದಂದು ಸ್ಟಾರ್ ನಟರುಗಳ ಹೊಸ ಚಿತ್ರಗಳ ಘೋಷಣೆಯಾಗಲಿದ್ದು ರಚಿತಾರಾಮ್ ಅವರ ಯಾವ್ಯಾವ ಸಿನಿಮಾಗಳ ಹೆಸರು ಹೊರಬೀಳಲಿವೆಯೋ ಕಾದುನೋಡಬೇಕು.

Related posts