Cinisuddi Fresh Cini News 

ಪ್ರಶಂಸೆ ಪಡೆದು ಮುನ್ನುಗ್ಗುತ್ತಿದೆ “ಪುರುಷೋತ್ತಮ” ಚಿತ್ರ

ಬೆಳ್ಳಿ ಪರದೆಯ ಮೇಲೆ ಕೌಟುಂಬಿಕ ಹಾಗೂ ಸಾಂಸಾರಿಕ ಚಿತ್ರ ನೋಡಬೇಕೆಂದು ಬಯಸುವವರಿಗಾಗಿ ಬಂದಂತಹ ಚಿತ್ರ “ಪುರುಷೋತ್ತಮ”. ಈಗಾಗಲೇ ಬಿಡುಗಡೆಗೊಂಡು ಪ್ರೇಕ್ಷಕರು ಹಾಗೂ ಮಾಧ್ಯಮದವರಿಂದ ಪ್ರಶಂಸೆಯನ್ನು ಪಡೆದು ಮುನ್ನುಗ್ಗುತ್ತಿದೆ. ನಮ್ಮ ಕರುನಾಡಿನ ಹೆಮ್ಮೆಯ ಪ್ರತೀಕ ಎಂದೇ ಹೇಳಬಹುದು.

ಬಾಡಿ ಬಿಲ್ಡಿಂಗ್ ಮಾಡುವ ಮೂಲಕ ಮಿಸ್ಟರ್ ಇಂಡಿಯಾ ಪ್ರಶಸ್ತಿಯನ್ನು ಪಡೆದ ಜಿಮ್ ರವಿ ತಮ್ಮದೇ ಆದ ಸ್ಥಾನಮಾನವನ್ನು ಪಡೆದು ಬೆಳೆದವರು. ಹಾಗೆಯೇ ಚಿತ್ರರಂಗದವರ ಸಂಪರ್ಕವನ್ನು ಬಳಸಿಕೊಂಡು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಗಮನ ಸೆಳೆದರು.

ಈಗ ಪೂರ್ಣ ಪ್ರಮಾಣದ ನಾಯಕನಾಗಿ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಬೆಳ್ಳಿ ಪರದೆ ಮೇಲೆ “ಪುರುಷೋತ್ತಮ” ನಾಗಿ ಮಿಂಚಿದ್ದಾರೆ.ಇವರಿಗೆ ಜೋಡಿಯಾಗಿ ಯುವ ನಟಿ ಅಪೂರ್ವ ಕಾಣಿಸಿಕೊಂಡಿದ್ದು, ನೊಂದ ಹೆಣ್ಣುಮಕ್ಕಳಿಗೆ ಧೈರ್ಯ ತುಂಬಿ ಜೀವನ ನಡೆಸುವಂತ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಧಾರಿಗಳು ಕೂಡ ಪಾತ್ರಕ್ಕೆ ಜೀವತುಂಬಿ ಅಭಿನಯಿಸಿರುವುದು ವಿಶೇಷ.

ದೇಶವ್ಯಾಪಿ ಕೆಲವೆಡೆ ನಡೆಯುತ್ತಿರುವ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ, ಅತ್ಯಾಚಾರದ ಪ್ರಕರಣಗಳು ಜನಸಾಮಾನ್ಯರಲ್ಲಿ ದೊಡ್ಡ ಆಘಾತವನ್ನೇ ಸೃಷ್ಟಿಸಿದೆ. ಹೆಣ್ಣು ಹೆತ್ತವರು ಹೇಗೆ ಜೀವಿಸಬೇಕು ಎಂಬ ಪ್ರಶ್ನೆ ಎದುರಾಗಿದೆ. ದುಷ್ಟರ ಅಟ್ಟಹಾಸಕ್ಕೆ ಅದೆಷ್ಟೋ ಮಧ್ಯಮ ವರ್ಗದ ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಬಲಿಯಾಗಿದ್ದಾರೆ.

ಪಾಪಿ ರಾಕ್ಷಸರಿಗೆ ತಕ್ಕ ಶಿಕ್ಷೆ ಆಗುವುದು ಬಹಳ ಅಗತ್ಯ. ಆದರೆ ಈ ಚಿತ್ರದಲ್ಲೂ ಕೂಡ ನೊಂದ ಹೆಣ್ಣು ಮಗಳು ಬದುಕಿನಲ್ಲಿ ಹೇಗೆ ಜೀವನ ನಡೆಸಬೇಕು ಎಂಬ ಸೂಕ್ಷ್ಮ ವಿಚಾರವನ್ನು ಹೇಳಿರುವ ರೀತಿ ಉತ್ತಮವಾಗಿದೆ. ಈ “ಪುರುಷೋತ್ತಮ”ನನ್ನು ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರ ಎಂದೇ ಹೇಳಬಹುದು.

ಈ ಚಿತ್ರದಲ್ಲಿ ಬಹಳಷ್ಟು ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಜೊತೆಗೆ ತಂತ್ರಜ್ಞಾನರಿಗೂ ಕೂಡ ಅವಕಾಶವನ್ನ ನೀಡಿರುವುದು ವಿಶೇಷ. ಬಾಲ ಪ್ರತಿಭೆ ಅಂಕಿತಾ ಮೂರ್ತಿ , ಪೊಲೀಸ್ ಅಧಿಕಾರಿ ಪಾತ್ರ ಮಾಡಿದ ಕವಿತಾ , ಇನ್ನು ಖಳ ನಾಯಕರಾಗಿ ಕಾಣಿಸಿಕೊಂಡ ಎ .ವಿ. ಹರೀಶ್, ಶರಣ್, ಕಿರಣ್,ಸೇರಿದಂತೆ ಬಹುತೇಕರು ಉತ್ತಮವಾಗಿ ಪರದೆ ಮೇಲೆ ಅಭಿನಯಿಸಿದ್ದಾರೆ.

ಇನ್ನು ಈ ಚಿತ್ರಕ್ಕೆ ಕುಮಾರ್.ಎಂ ಛಾಯಾಗ್ರಹಣ ಬಹಳ ಉತ್ತಮವಾಗಿ ಮೂಡಿಬಂದಿದ್ದು , ಶ್ರೀಧರ್. ವಿ. ಸಂಭ್ರಮ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಎಲ್ಲರ ಗಮನ ಸೆಳೆದಿದೆ. ಒಂದು ಉತ್ತಮ ಚಿತ್ರವನ್ನು ನೀಡುವುದರಲ್ಲಿ ನಿರ್ದೇಶಕ ಅಮರನಾಥ್.ಎಸ್ .ವಿ ಯಶಸ್ವಿಯಾಗಿದ್ದಾರೆ. ಒಟ್ಟಾರೆ ಉತ್ತಮ ರಲ್ಲಿ ಉತ್ತಮ ಎನ್ನುವಂತೆ “ಪುರುಷೋತ್ತಮ” ಬೆಳ್ಳಿಪರದೆ ಮೇಲೆ ಬಂದಿದ್ದಾನೆ.

ಇಡೀ ಕುಟುಂಬ ಕುಳಿತು ನೋಡಬೇಕಾಗಿರುವಂತಹ ಚಿತ್ರ ಇದಾಗಿದ್ದು , ಎಲ್ಲರೂ ಒಮ್ಮೆ ಚಿತ್ರಮಂದಿರದಲ್ಲಿ ಈ ಪುರುಷೋತ್ತಮ ಚಿತ್ರವನ್ನು ನೋಡಿ. ಹಾಗೆಯೇ ಬೇರೆಯವರು ಚಿತ್ರವನ್ನು ನೋಡಲು ತಿಳಿಸಿ. ಇಂಥ ಚಿತ್ರಗಳು ಬರುವುದು ಬಹಳ ಅಪರೂಪವಾಗಿದೆ. ಹಿರಿಯರು ಹಾಗೂ ಕಿರಿಯರು ಎಲ್ಲರೂ ಕುಳಿತು ನೋಡಬಹುದಾದಂಥ ಚಿತ್ರವಾಗಿದೆ.

Related posts