Cini Reviews Cinisuddi Fresh Cini News 

“ಪುರುಷೋತ್ತಮ” ಚಿತ್ರ ಹೇಗಿದೆ..? (ಚಿತ್ರವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5

ಚಿತ್ರ : ಪುರುಷೋತ್ತಮ ನಿರ್ದೇಶಕ : ಅಮರನಾಥ್ .ಎಸ್.ವಿ ನಿರ್ಮಾಪಕ : ಎ.ವಿ. ರವಿ ಸಂಗೀತ : ಶ್ರೀಧರ್ .ವಿ. ಸಂಭ್ರಮ್
ಛಾಯಾಗ್ರಹಣ : ಕುಮಾರ್.ಎಂ
ತಾರಾಗಣ : ಜಿಮ್ ರವಿ , ಅಪೂರ್ವ , ಬೇಬಿ ಅಂಕಿತಾ ಮೂರ್ತಿ, ಕವಿತಾ, ಶರಣ್, ಕಿರಣ್, ಎ.ವಿ. ಹರೀಶ್ ಮೈಸೂರು ಪ್ರಭು ಹಾಗೂ ಮುಂತಾದವರು…

ಪ್ರತಿಯೊಬ್ಬರ ಕುಟುಂಬವು ನೆಮ್ಮದಿ, ಸುಖ, ಶಾಂತಿ ಸಂತೋಷದಿಂದ ಕೂಡಿರಬೇಕು ಎಂದು ಆಸೆ ಪಡುವುದು ಸರ್ವೇಸಾಮಾನ್ಯ. ಮುದ್ದಾದ ಗಂಡ , ಹೆಂಡತಿ ಮತ್ತು ಮಗುವಿನ ಸುಂದರ ಪ್ರಪಂಚದಲ್ಲಿ ಯಾವುದೇ ಸಮಸ್ಯೆ ಎದುರಾದರೆ ಅದಕ್ಕೆ ಮನೆಯ ಮುಖ್ಯಸ್ಥ ಎಷ್ಟು ಜಾಗ್ರತೆಯಿಂದ ಕಾಪಾಡಿಕೊಳ್ಳುತ್ತಾನೆ. ಯುವಕ ಯುವತಿಯರು ಡ್ರಗ್ಸ್ ವ್ಯಸನಿಗಳಾದರೆ ಏನಾಗುತ್ತೆ. ಹಾಗೆಯೇ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರಕ್ಕೆ ಕಡಿವಾಣ ಇದೆಯೇ… ಎಂಬ ಸೂಕ್ಷ್ಮ ವಿಚಾರವನ್ನು ಸಸ್ಪೆನ್ಸ್ ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಮೂಲಕ ತೆರೆದಿಟ್ಟಿರುವಂತ ಚಿತ್ರ “ಪುರುಷೋತ್ತಮ”.

ಅಪಾರ್ಟ್ ಮೆಂಟ್ ನಲ್ಲಿ ವಾಸಿಸುವ ಹಲವಾರು ಕುಟುಂಬಗಳಲ್ಲಿ ತನ್ನದೂ ಒಂದು ಸುಂದರ ಕುಟುಂಬ ಎಂದು ಭಾವಿಸುವ ನಾಯಕ ಪುರುಷೋತ್ತಮ (ಜಿಮ್ ರವಿ) ಅವನ ಮಡದಿ ನಾಯಕಿ ವಾಸುಕಿ (ಅಪೂರ್ವ) ಇವರಿಬ್ಬರ ಮುದ್ದಾದ ಮಗಳು ಪಿಂಕಿ(ಬೇಬಿ ಅಂಕಿತ ಮೂರ್ತಿ). ವೃತ್ತಿಯಲ್ಲಿ ವಕೀಲನಾದ ಪುರುಷೋತ್ತಮನ ಬಳಿ ಹೆಚ್ಚಾಗಿ ಬರುವುದು ಡೈವೋರ್ಸ್ ಕೇಸ್ ಗಳು ,ತನ್ನ ಬಳಿ ಬರುವವರಿಗೆ ನೀತಿಪಾಠ ಹೇಳಿ, ಬದುಕು ಕಟ್ಟಿಕೊಳ್ಳಬೇಕೆಂದು ದಾರಿ ತೋರಿಸುತ್ತಾನೆ. ಇದರ ನಡುವೆ ಟಿವಿ ವಾಹಿನಿಯ ಸಿನಿಮಾ ವರದಿಗಾರನಾಗಿ ಕೂಡ ಕೆಲಸ ಮಾಡುತ್ತಿರುತ್ತಾನೆ.

ಚಿತ್ರಗಳ ವಿಶ್ಲೇಷಣೆ ಮಾಡುತ್ತಾ ವಿಶೇಷ ಕಾರ್ಯಕ್ರಮದ ರೂವಾರಿಯೂ ಆಗಿರುತ್ತಾನೆ. ಇನ್ನು ವಾಸುಕಿ ಯಕ್ಷ ಗಾನ ಪ್ರತಿಭೆ. ಗಂಡನಿಗೆ ತಕ್ಕ ಮಡದಿ ಯಾಗಿ ಮನೆಯ ಬದುಕು ಹೊರ ಪ್ರಪಂಚ ಅಗತ್ಯವಿಲ್ಲ ಎಂಬಂತೆ ಚಡಪಡಿಸುತ್ತಿರುತ್ತಾಳೆ. ಇದರ ಹಿಂದೆ ದೊಡ್ಡ ರಹಸ್ಯವು ಕೂಡ ಅಡಗಿರುತ್ತದೆ.

ಅಪಾರ್ಟ್ ಮೆಂಟ್ ಅಂದರೆ ಹಲವು ಆಲೋಚನೆಗಳ ಮನಸುಗಳು, ವ್ಯಕ್ತಿಗಳು ವಾಸ ಮಾಡುವುದು ಸಾಮಾನ್ಯ.ಕುಪ್ಪಸ್ವಾಮಿ ಎಂಬ ವ್ಯಕ್ತಿ ಅಪಾರ್ಟ್ ಮೆಂಟ್ ವಾಸಿಗಳ ಬಟ್ಟೆ ಇಸ್ತ್ರಿ ಮಾಡುವವನು , ಟಿವಿ ವಾಹಿನಿಯಲ್ಲಿ ಕೆಲಸ ಮಾಡುವ ಸುನೀತಾ ಒಂದೇ ಅಪಾರ್ಟ್ ಮೆಂಟ್ ನಲ್ಲೇ ಇದ್ದರೂ ಮದುವೆ ಆಗಿರುವ ಪುರುಷೋತ್ತಮನಿಗೆ ಮಾತಿನಲ್ಲೇ ಬಲೆ ಬೀಸುತ್ತಾಳೆ.

ಈತನಿಗೆ ಒಬ್ಬ ತಮ್ಮ ಬಾಲು, ಆತನಿಗೊಬ್ಬ ಗೆಳೆಯ ಗುರು. ಇದರ ನಡುವೆ ಒಂದಷ್ಟು ಗೊಂದಲ , ಏನೋ ಹೇಳಲು ಬಯಸುವ ಚರ್ಚ್ ಫಾದರ್, ಕೊಲೆಯ ಇನ್ವೆಸ್ಟಿಗೇಷನ್ ವಿಚಾರದ ಹುಡುಕಾಟದಲ್ಲಿ ಇರುವ ಡಿಸಿಪಿ ರಮ್ಯಾ(ಕವಿತಾ). ಏನಿರಬಹುದು ಎಂಬ ಸಂಶಯ ಮೂಡುತ್ತಿರುವಾಗಲೇ ಫ್ಲ್ಯಾಶ್ ಬ್ಯಾಕ್ ಮೂಲಕ ತೆರೆದುಕೊಳ್ಳುವ ಕಟುಸತ್ಯ.

ನೆಮ್ಮದಿಯ ಬದುಕು ನಡೆಸುವ ಪುರುಷೋತ್ತಮನ ಕುಟುಂಬದಲ್ಲಿ ಬಿರುಗಾಳಿ ಬೀಸಿರುತ್ತದೆ. ಸೌಂದರ್ಯ, ಮುಗ್ಧತೆ, ನಂಬಿಕೆ ಕೆಲವೊಮ್ಮೆ ಜಾಗ್ರತೆಯನ್ನ ಮರೆಸುತ್ತದೆ. ಎಲ್ಲರನ್ನು ನಂಬುವ ವಾಸುಕಿ ಮೂವರು ಕಿಡಿಗೇಡಿಗಳ ಕಾಮ ದಾಹಕ್ಕೆ ಬಲಿಯಾಗುತ್ತಾಳೆ. ಇಲ್ಲಿಂದ ಕಥೆಗೆ ಹೊಸ ದಿಕ್ಕು ತೆರೆದುಕೊಳ್ಳುತ್ತಾ ಹೋಗುತ್ತದೆ.

ಚಿತ್ರದ ಮೊದಲ ಭಾಗ ಬಹಳ ಸರಳವಾಗಿ ನಿಧಾನಗತಿಯಲ್ಲಿ ಸಾಗಿದರು, ಚಿತ್ರದ ಎರಡನೇ ಭಾಗ ಹಲವಾರು ತಿರುವುಗಳ ಮೂಲಕ ಮಾಸ್ಟರ್ ಮೈಂಡ್ ಗೇಮ್ ಮೂಲಕ ರೋಮಾಂಚನವಾಗಿ ಸಾಗುತ್ತದೆ.

ವಾಸುಕಿಯ ನಿರ್ಧಾರ ಏನು…
ಕಾಮುಕರಿಗೆ ಶಿಕ್ಷೆ ಆಗತ್ತಾ…
ಡಿಸಿಪಿ ಏನ್ ಮಾಡುತ್ತಾರೆ…
ಮಾಸ್ಟರ್ ಮೈಂಡ್ ಯಾರು…
ಹೀಗೆ ಹಲವಾರು ಪ್ರಶ್ನೆಗಳು ಪುರುಷೋತ್ತಮ ಚಿತ್ರದಲ್ಲಿ ಕಾಣುತ್ತದೆ. ಇದಕ್ಕೆಲ್ಲಾ ಉತ್ತರ ತಿಳಿಯಬೇಕಾದರೆ ನೀವೆಲ್ಲರೂ ಈ ಚಿತ್ರವನ್ನ ತೆರೆಮೇಲೆ ನೋಡಬೇಕು.

ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ, ಅತ್ಯಾಚಾರಕ್ಕೆ ಕಡಿವಾಣ ಹಾಕಲು ಜಾಗೃತಿ ಮೂಡಿಸಿದ ಚಿತ್ರ ಎಂದರೆ ತಪ್ಪಾಗಲಾರದು. ಇನ್ನು ಹೆಣ್ಣು ದೃತಿಗೆಡಬಾರದು , ಧೈರ್ಯವಾಗಿ ಎದುರಿಸುವ ಶಕ್ತಿಯನ್ನು ಹೊಂದಬೇಕು ಎಂಬ ಅಂಶವನ್ನು ಹೇಳುವ ರೀತಿ ಇಂದಿನ ಸಮಾಜಕ್ಕೆ ತುಂಬಾ ಅವಶ್ಯಕವಾಗಿದೆ.

ನಿರ್ದೇಶಕ ಅಮರನಾಥ್ .ಎಸ್.ವಿ. ಸೂಕ್ಷ್ಮ ವಿಷಯಗಳನ್ನು ಬಹಳ ಎಚ್ಚರಿಕೆಯಿಂದ ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ. ಚಿತ್ರದ ವೇಗ ಇನ್ನಷ್ಟು ಬಿಗಿ ಮಾಡಬಹುದಿತ್ತು , ಮೊದಲ ಭಾಗ ನಿಧಾನಗತಿಯಲ್ಲಿ ಸಾಗಿದ್ದು, ಎರಡನೇ ಭಾಗ ಗಮನಾರ್ಹವಾಗಿದೆ. ಸಂಭಾಷಣೆ ಮಿತವಾಗಿದ್ದರೆ ಚೆನ್ನಾಗಿರುತ್ತಿತ್ತು.

ಒಂದು ಸದಭಿರುಚಿಯ ಕೌಟುಂಬಿಕ ಕಥಾನಕದಲ್ಲಿ ಜಾಗೃತಿ ಮೂಡಿಸುವದರ ಜೊತೆಗೆ ಸಂದೇಶವನ್ನು ಹೇಳಿರುವ ಈ ಪುರುಷೋತ್ತಮ ಚಿತ್ರವನ್ನು ಬೂಕನಕೆರೆ ವಿಜಯ್ ರಾಮೇಗೌಡ ಅರ್ಪಿಸಿದ್ದು, ಜಿಮ್ ರವಿ ರವರ ಧೈರ್ಯದಿಂದ ಈ ಚಿತ್ರ ನಿರ್ಮಿಸಿರುವ ರೀತಿಯನ್ನು ಮೆಚ್ಚಲೆಬೇಕು.

ಜಿಮ್ ಟ್ರೈನರ್ ಆಗಿ ಬೆಳೆದು, ಹಲವಾರು ಪ್ರಶಸ್ತಿಗಳನ್ನು ಪಡೆದು, ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿದರು ಪೂರ್ಣ ಪ್ರಮಾಣದ ನಾಯಕನಾಗಿ ಪುರುಷರಲ್ಲಿ ಉತ್ತಮನು ಎನ್ನುವಂತೆ ಕುಟುಂಬವನ್ನು ರಕ್ಷಿಸುವ ಪಾತ್ರವನ್ನು ಜಿಮ್ ರವಿ ನಿಭಾಯಿಸಿದ್ದಾರೆ. ನಟನೆಯನ್ನ ತಕ್ಕಮಟ್ಟಿಗೆ ನಿಭಾಯಿಸಿದ್ದರು , ಡ್ಯಾನ್ಸ್ ಸ್ಟೇಪ್ಸ್ ಗಮನ ಸೆಳೆಯುತ್ತವೆ. ಮತ್ತಷ್ಟು ಪ್ರಯತ್ನ ಅಗತ್ಯ ಎನಿಸಿದರೂ , ಮಾಸ್ಟರ್ ಮೈಂಡ್ ಪಾತ್ರ ಪೋಷಣೆ ಉತ್ತಮವಾಗಿದೆ.

ಇನ್ನು ನಾಯಕಿಯಾಗಿ ಅಭಿನಯಿಸಿರುವ ಅಪೂರ್ವ ಕೂಡ ಈ ಚಿತ್ರದ ಪಾತ್ರದಲ್ಲಿ ಜೀವಿಸುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಕೆಲವೊಂದು ಸೂಕ್ಷ್ಮ ಸನ್ನಿವೇಶವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮುಂದೆ ಉಜ್ವಲ ಭವಿಷ್ಯದ ನಟಿಯಾಗುವ ಲಕ್ಷಣ ಕಾಣುತ್ತಿದೆ.

ಅದೇ ರೀತಿ ಇವರಿಬ್ಬರ ಮುದ್ದಿನ ಮಗಳಾಗಿ ಅಭಿನಯಿಸಿರುವ ಪುಟಾಣಿ ಅಂಕಿತ ಮೂರ್ತಿ ಕೂಡ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ.ಹಾಗೆಯೇ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕವಿತಾ ಎಂಬ ಪ್ರತಿಭೆ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಗಳೂ ಕೂಡ ಚಿತ್ರಕ್ಕೆ ಜೀವ ತುಂಬಿ ಅಭಿನಯಿಸಿ ಚಿತ್ರದ ಓಟಕ್ಕೆ ಸಾಥ್ ನೀಡಿದ್ದಾರೆ.

ಇನ್ನು ಶ್ರೀಧರ್. ವಿ. ಸಂಭ್ರಮ್ ಸಂಗೀತ ನೀಡಿದ್ದು, ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಛಾಯಾಗ್ರಹಕ ಕುಮಾರ್.ಎo ಕೈಚಳಕ ಉತ್ತಮವಾಗಿ ಮೂಡಿಬಂದಿದೆ. ಅರ್ಜುನ್ ಸಂಕಲನ ಕೂಡ ಸೊಗಸಾಗಿದೆ. ಒಟ್ಟಾರೆ ಇಡೀ ತಂಡದ ಶ್ರಮದ ಫಲವಾಗಿ ಹೊರಬಂದಿರುವ ಪುರುಷೋತ್ತಮ ಚಿತ್ರವನ್ನ ಎಲ್ಲಾ ವರ್ಗದ ಪ್ರೇಕ್ಷಕರು ಕೂಡ ಒಮ್ಮೆ ತೆರೆಮೇಲೆ ನೋಡಬೇಕು.

Related posts