Cinisuddi Fresh Cini News Tv / Serial 

ನಿರ್ಮಾಪಕರ ಸಂಘದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ತಂಡ.

ಕನ್ನಡ ಚಿತ್ರೋದ್ಯಮದ ಅನ್ನದಾತ ನಿರ್ಮಾಪಕ ಎಂದು ಅಣ್ಣಾವ್ರು ಹೇಳಿದ ಮಾತು ಅಕ್ಷರಸಹ ಸತ್ಯ. ನಿರ್ಮಾಪಕ ಇದ್ದರೆ ಸಿನಿಮಾ ಕಲಾವಿದರ, ತಂತ್ರಜ್ಞರ ಎಲ್ಲರ ಬದುಕು ಸಾಗುವುದು. ಅಂತಹ ನಿರ್ಮಾಪಕರ ಸಂಘದ ನೂತನ ಅಧ್ಯಕ್ಷರಾಗಿ ನಿರ್ಮಾಪಕ ಉಮೇಶ್ ಬಣಕಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೋವಿಡ್ ಹಾಗೂ ನಾನಾ ಕಾರಣಗಳಿಂದ ನಿರ್ಮಾಪಕರ ಸಂಘದ ಚುನಾವಣೆ ನಡೆಯದೆ ಒಂದಷ್ಟು ಗೊಂದಲಗಳು ಉಂಟಾಗಿತ್ತು. ಅದೆಲ್ಲದಕ್ಕೂ ಇಂದು ಚುನಾವಣೆ ನಡೆದು ತೆರೆ ಬಿದ್ದಂತಾಗಿದೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉಮೇಶ್ ಬಣಕಾರ್ ಮಾತನಾಡುತ್ತಾ ಚಿತ್ರೋದ್ಯಮದಲ್ಲಿ ಹಲವಾರು ಸಮಸ್ಯೆಗಳು ಇವೆ. ನಿರ್ಮಾಪಕರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಹಾಗೂ ಹೆಲ್ತ್ ಇನ್ಶೂರೆನ್ಸ್ ಹೀಗೆ ನಾನಾ ವಿಚಾರಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಹಿರಿಯರು ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಸೂಕ್ತವಾಗಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ವಿಶೇಷವಾಗಿ ಸ್ವಾತಂತ್ರೋತ್ಸವದ ದಿನದಂದು ನಾನು ಸಂಘದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿಕೊಂಡರು.

ಚಿತ್ರೋದ್ಯಮದ ನಿರ್ಮಾಪಕರು ಹಿತವನ್ನು ಕಾಯುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ನೇರವಾಗಿ ಮಾತನಾಡುವ ಸಂಪರ್ಕ ಹೊಂದಿರುವ ಉಮೇಶ್ ಬಣಕಾರ್ ಹಲವು ಸೂಕ್ಷ್ಮ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸಾಗಲಿದ್ದಾರಂತೆ. ಸದ್ಯ ನಿರ್ಮಾಪಕರ ಸಂಘದ ಕಟ್ಟಡ ಕಾರ್ಯ ನಡೆಯುತ್ತಿದ್ದು, ನೂತನ ಅಧ್ಯಕ್ಷರ ಅವಧಿಯಲ್ಲೇ ಕಟ್ಟಡ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎನ್ನಬಹುದು. ಗೊಂದಲದ ನಡುವೆಯೇ ಅಂತೂ ಇಂತೂ ನಿರ್ಮಾಪಕರ ಸಂಘದ ಚುನಾವಣೆ ನಡೆಯಿತು. ಭಾನವಾರ ಬೆಳಿಗ್ಗೆ 11 ಗಂಟೆಗೆ ಫಿಲಂ ಚೇಂಬರ್ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ
ನಿರ್ಮಾಪಕರ ಸಂಘದ ಸರ್ವಸದಸ್ಯರ ಸಭೆ ನಡೆದು, ಮಧ್ಯಾಹ್ನ 2 ಗಂಟೆಯಿಂದ 6ಗಂಟೆಯವರೆಗೆ ಮತದಾನ
ಪ್ರಕ್ರಿಯೆ ನಡೆಯಿತು. ಒಟ್ಟು 518 ನಿರ್ಮಾಪಕರು ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದು, ಅದರಲ್ಲಿ 231 ನಿರ್ಮಾಪಕರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ, ಅದರಲ್ಲೂ
ಹನ್ನೊಂದು ಮತಗಳು ತಿರಸ್ಕೃತಗೊಂಡಿದ್ದು, 220 ಮತಗಳನ್ನು ಮಾತ್ರ ಅಧಿಕೃತ ಎಂದು ಪರಿಗಣಿಸಲಾಗಿದೆ. ರಾತ್ರಿ 9ರ ವೇಳೆಗೆ ಆಯ್ಕೆಯಾದವರ
ಪಟ್ಟಿಯನ್ನು ಘೋಷಿಸಿದರು.

ನಿರ್ಮಾಪಕರ ಸಂಘದ ಉಪಾಧ್ಯಕ್ಷರಾಗಿ ಎಂ.ಜಿ.ರಾಮಮೂರ್ತಿ, ಖಜಾಂಚಿಯಾಗಿ ಆರ್.ಎಸ್.ಗೌಡ,
ಕಾರ್ಯದರ್ಶಿಯಾಗಿ ಪ್ರವೀಣ್‌ಕುಮಾರ್ , ಜಂಟಿ ಕಾರ್ಯದರ್ಶಿಯಾಗಿ ರಮೇಶ್ ಯಾದವ್
ಆಯ್ಕೆಯಾಗಿದ್ದಾರೆ. ಉಳಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎನ್.ಎಂ. ಸುರೇಶ್, ಬಾ.ಮ. ಗಿರೀಶ್, ರಾಜೇಶ್
ಬ್ರಹ್ಮಾವರ್, ಎ.ಗಣೇಶ್, ಅವಿನಾಶ್ ಯು.ಶೆಟ್ಟಿ, ಶಿಲ್ಪಾ ಶ್ರೀನಿವಾಸ್, ಟೇಶಿ ವೆಂಕಟೇಶ್, ಜೆ.ಜಿ. ಕೃಷ್ಣ, ಪತ್ತಿ
ಗುರುಪ್ರಸಾದ್, ಪ್ರಿಯಾಹಾಸನ್, ಅನಿತಾರಾಣಿ, ಆಂತರ್ಯ ಸತೀಶ್ ಆಯ್ಕೆಯಾಗಿದ್ದಾರೆ. ಒಟ್ಟಾರೆ ನೂತನವಾಗಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳು ಸ್ವಾತಂತ್ರೋತ್ಸವದಂದು ಅಧಿಕಾರ ಮೂಲಕ ನಿರ್ಮಾಪಕ ಸಂಘದ ಕಾರ್ಯಚಟುವಟಿಕೆಗೆ ಮುಂದಾಗಲಿದ್ದಾರೆ.

Related posts