Cinisuddi Fresh Cini News 

ಮೊಬೈಲ್ ಮತ್ತು ಇಂಗ್ಲಿಷ್ ಇಲ್ಲದ ‘ಪ್ರೆಮಯುದ್ದಂ’ ಸಿನಿಮಾ

ಸ್ಯಾಂಡಲ್‍ವುಡ್‍ನಲ್ಲಿ ಬರುತ್ತಿರುವ ಬಹುತೇಕ ಚಿತ್ರಗಳು ಆಂಗ್ಲಮಯವಾಗಿರುತ್ತದೆ, ಇಂಗ್ಲೀಷ್ ಟೈಟಲ್, ಹಾಡುಗಳ ಸದ್ದು ಜೋರಾಗಿಯೇ ಇದೆ, ಆದರೆ ನಿರ್ದೇಶಕ ಶ್ರೀಮಂಜು ಅವರು ತಮ್ಮ ಪ್ರೇಮ ಯುದ್ಧಂ ಚಿತ್ರದಲ್ಲಿ ಕನ್ನಡತನವನ್ನು ಮೆರೆಯಲು ಹೊರಟಿದ್ದಾರೆ.

ಇದೊಂದು ಅಪ್ಪಟ ಹಳ್ಳಿಗಾಡಿನಲ್ಲಿ ನಡೆಯುವ ಚಿತ್ರವಾಗಿರುವುದು ಒಂದು ವಿಶೇಷತೆಯಾದರೆ, ಚಿತ್ರದುದ್ದಕ್ಕೂ ಎಲ್ಲೂ ಆಂಗ್ಲ ಶಬ್ದಗಳು ಮತ್ತು ಮೊಬೈಲ್ ಅನ್ನು ಬಳಸದಿರುವುದು ಮತ್ತೊಂದು ಸೋಜಿಗ. ಪ್ರೇಮಯುದ್ಧಂ ಎಂಬ ಅಪ್ಪಟ ಕನ್ನಡ ಶೀರ್ಷಿಕೆ ಹೊಂದಿರುವ ಚಿತ್ರಕ್ಕೆ ಶ್ರೀಮಂಜು ಅವರು ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಒದಗಿಸಿದ್ದು ಮೊನ್ನೆ ಈ ಚಿತ್ರದ ಧ್ವನಿಸುರುಳಿ ಬಿಡುಗಡೆಯನ್ನು ಮಾಡಲಾಯಿತು.

ಸಾಹಿತಿ ಕಾರ್ತಿಕ್ ವೆಂಕಟೇಶ್ ಮಾತನಾಡಿ, ಹಳ್ಳಿಗಾಡಿನಲ್ಲಿ ನಡೆಯುವ ಅಪ್ಪಟ ಪ್ರೇಮಕಥೆಯನ್ನು ಹೊಂದಿರುವ ಚಿತ್ರವಾಗಿದ್ದು ಪ್ರೇಮಿಗಳು ತಮ್ಮ ಕಣ್ಣ ಸನ್ನೆಯಲ್ಲೇ ಪ್ರೀತಿಯನ್ನು ತೋರಿಸುತ್ತಾರೆ, ನಿರ್ದೇಶಕರು ಮತ್ತು ನಿರ್ಮಾಪಕರು ಒಮ್ಮೆ ಕಾರಿನಲ್ಲಿ ದೇವಸ್ಥಾನಕ್ಕೆ ಹೋಗುವ ದಾರಿಮಧ್ಯೆ ಈ ಕಥೆ ಹೊಳೆಯಿತಂತೆ.

ಚಿತ್ರಕ್ಕೆ ಸಂದರ್ಭಕ್ಕೆ ತಕ್ಕಂತೆ ಬರುವ ಹಾಡುಗಳು ಕೇಳುಗರ ಮನಸೆಳೆಯಲಿದೆ. ನಾನು ಕೂಡ ಎರಡು ಗೀತೆಗಳನ್ನು ಬರೆದಿದ್ದೇನೆ. ಕನ್ನಡ, ಸಂಸ್ಕøತಿ ಭಾಷೆ ಮಹತ್ವವನ್ನು ಸಾರುವ ಈ ಚಿತ್ರದಲ್ಲಿ ಪ್ರೀತಿ ಅಂದರೆ ಈಗೂ ಇರಬಹುದಾ ಎಂಬ ಪ್ರಶ್ನೆಯನ್ನು ಮೂಡಿಸುವಂತಿದೆ ಮಂಡ್ಯ, ಪಾಂಡವಪುರ, ಕನಕನಮರುಡಿ ಹಾಗೂ ಬ್ಯಾಡರಹಳ್ಳಿಯ ಸುಂದರ ವಾತವರಣದಲ್ಲಿ ಪ್ರೇಮಯುದ್ದಂ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ನಿರ್ಮಾಪಕ ಗುರುಮೂರ್ತಿ ಅವರು ಇದೇ ಮೊದಲಬಾರಿಗೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬೇರೆ ಭಾಷೆ ಚಿತ್ರಗಳ ವೀಕ್ಷಕರನ್ನು ಸೆಳೆಯಲೆಂದೇ ಈ ಚಿತ್ರಕ್ಕೆ ಪ್ರೇಮಂಯುದ್ಧಂ ಎಂಬ ಶೀರ್ಷಿಕೆಯನ್ನು ಇಟ್ಟಿದ್ದೇವೆ ಎಂದು ಹೇಳಿದರು.

ನಿಜ ಜೀವನದಲ್ಲಿ ಸಾಫ್ಟ್‍ವೇರ್ ಉದ್ಯೋಗಿಯಾಗಿರುವ ಅನಿಲ್ ಈ ಚಿತ್ರದ ನಾಯಕ. ಈಗಾಗಲೇ ಹಲವು ಸೀರಿಯಲ್‍ಗಳಲ್ಲಿ ನಟಿಸಿರುವ ಚಿತ್ರದುರ್ಗದ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಹಲವು ಯುವ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ರಾಮು ನರಹಳ್ಳಿ ಛಾಯಾಗ್ರಹಣ, ವೈಲೆಂಟ್ ವೇಲು ಸಾಹಸವಿದೆ. ಮೊನ್ನೆ ನಡೆದ ಈ ಚಿತ್ರದ ಧ್ವನಿಸುರುಳಿಯನ್ನು ಸಿರಿ ಮ್ಯೂಸಿಕ್ ಹೊರ ತಂದಿದ್ದು ನಟಿ ಸ್ಪರ್ಶ ರೇಖಾ ಹಾಡುಗಳನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಇದೇ ವೇಳೆ ಚಿತ್ರದ ಲಿರಿಕಲ್ ಹಾಡುಗಳನ್ನು ಪ್ರದರ್ಶಿಸಲಾಯಿತು. ಕನ್ನಡ ಪ್ರೇಮವನ್ನು ತೋರಿಸಲು ಹೊರಟಿರುವ ಪ್ರೇಮಯುದ್ಧಂ ಚಿತ್ರತಂಡದವರ ಪ್ರಯತ್ನವನ್ನು ಕನ್ನಡಿಗರು ಪ್ರೊತ್ಸಾಹಿಸಲಿ.

Related posts