Cinisuddi Fresh Cini News 

ನವೆಂಬರ್ 12ಕ್ಕೆ ಪರಿಶುದ್ಧ ಪ್ರೇಮ… “ಪ್ರೇಮಂ ಪೂಜ್ಯಂ”

ಚಂದನವನದಲ್ಲಿ ಬಹಳ ವರ್ಷಗಳ ನಂತರ ಮತ್ತೊಮ್ಮೆ ನವಿರಾದ ಪರಿಶುದ್ಧ ಪ್ರೇಮ ಕಾವ್ಯ ತೆರೆಮೇಲೆ ರಾರಾಜಿಸಲಿದೆಯoತೆ. ಹೌದು ಅದುವೇ “ಪ್ರೇಮಂ ಪೂಜ್ಯಂ” ಇಂತಹ ಚಿತ್ರವನ್ನ ನಿರ್ದೇಶನ ಮಾಡಿರುವುದು ವೈದ್ಯರಾದ ಡಾ.ಬಿ.ಎಸ್. ರಾಘವೇಂದ್ರ.ಬಹುತೇಕ ಡಾಕ್ಟರ್‌ಗಳೇ ಸೇರಿ ನಿರ್ಮಿಸಿರುವ ಈ ಚಿತ್ರದಲ್ಲಿ ಲವ್ಲಿಸ್ಟಾರ್ ಪ್ರೇಮ್ ಅಭಿನಯದವಿದೆ. ಇದು ನಟ ಪ್ರೇಮ್ 25ನೇ ಚಿತ್ರ. ಅಂದುಕೊಂಡಂತೇ ಆಗಿದ್ದರೆ ಇದೇ ೨೯ಕ್ಕೆ ಬಿಡುಗಡೆಯಾಗ ಬೇಕಿತ್ತು.

ಈಗ ಸಲಗ, ಕೋಟಿಗೊಬ್ಬ ೩ ಚಿತ್ರಗಳು ಯಶಸ್ವಿ ಪ್ರದರ್ಶನಗೊಳ್ಳುತ್ತಿವೆ, ಅಲ್ಲದೆ 29ಕ್ಕೆ ಭಜರಂಗಿ-2 ಕೂಡ ರಿಲೀಸಾಗುತ್ತಿದೆ. ಈ ಮೂರೂ ಚಿತ್ರಗಳೇ ಬಹುತೇಕ ಥೇಟರ್‌ಗಳನ್ನು ಆಕ್ರಮಿಸಿಕೊಳ್ಳುತ್ತಿರುವ ಕಾರಣ ಹಾಗೂ ವಿತರಕರ ಅಭಿಪ್ರಾಯದ ಮೇರೆಗೆ ನವೆಂಬರ್ 12ಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಚಿತ್ರತಂಡ ಈ ವಿಚಾರವನ್ನು ಹಂಚಿಕೊಳ್ಳಲು ಪತ್ರಿಕಾಗೋಷ್ಟಿ ಆಯೋಜಿಸಿತ್ತು.

ನಿರ್ದೇಶಕ ಡಾ.ರಾಘವೇಂದ್ರ ಮಾತನಾಡಿ ಓಟಿಟಿ ಕಡೆಯಿಂದ ನಮಗೆ ತುಂಬಾನೇ ಆಫರ್ ಬಂದರೂ ಸಹ, ನಾವು ಥೇಟರಿನಲ್ಲೇ ಚಿತ್ರ ರಿಲೀಸ್ ಮಾಡಬೇಕೆಂದು ಇಲ್ಲಿಯವರೆಗೆ ಕಾದಿದ್ದೇವೆ, ಒಂದು ಉತ್ತಮತಂಡ ಇಲ್ಲದಿದ್ರೆ ಇಂಥ ಸಿನಿಮಾ ಮಾಡಲು ಖಂಡಿತ ಆಗ್ತಿರಲಿಲ್ಲ, ಉತ್ತಮ ಕಥೆ, ಸಂಗೀತ, ಸಾಹಿತ್ಯ, ಕ್ಯಾಮೆರಾವರ್ಕ್ ನೋಡುಗರ ಕಣ್ಣಿಗೆ ಹಬ್ಬವಾಗಲಿದೆ. ಇಡೀ ಫ್ಯಾಮಿಲಿ ಕೂತು ಥೇಟರಿನಲ್ಲಿ ಈ ಚಿತ್ರದ ಸೌಂದರ್ಯವನ್ನು ಸವಿಯಬಹುದು. ನವೀನ್‌ಕುಮಾರ್ ಅಷ್ಟು ಅದ್ಭುತವಾಗಿ ಕ್ಯಾಮೆರಾವರ್ಕ್ ಮಾಡಿದ್ದಾರೆ.

ನಾನು ತ್ಯಾಗು ಸೇರಿ ಲೈವ್ ಇನ್‌ಸ್ಟ್ರು ಮೆಂಟ್ಸ್ ಬಳಸಿ ಚಿತ್ರಕ್ಕೆ ಸಂಗೀತ ಮಾಡಿದ್ದೇವೆ. ನಾಯಕ ಪ್ರೇಮ್ ಏಳು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆಯ ಜೊತೆ ಮ್ಯೂಸಿಕ್, ಕ್ಯಾಮೆರಾವರ್ಕ್ ನಮ್ಮ ಚಿತ್ರದ ಆಧಾರ ಸ್ತಂಭಗಳು ಎಂದು ಹೇಳಿದರು. ಎಷ್ಟೋ ಸಲ ಡೇಟ್ ಅನೌನ್ಸ್ ಮಾಡಿ ಬರಬೇಕೆಂದಾಗಲೂ ಕೊರೋನಾ ಅಡ್ಡಿಯಾಗುತ್ತಿತ್ತು, ಮಂಡ್ಯದಿಂದ ವಿಯಟ್ನಾಂ ವರೆಗೂ ಹೋಗಿ ಚಿತ್ರವನ್ನು ಶೂಟ್ ಮಾಡಿದ್ದೇವೆ. ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಪ್ರೇಮಿಗಳು, ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜನೀಯ ಭಾವನೆ ಇರಬೇಕೆಂದು ಹೇಳಹೊರಟಿದ್ದೇನೆ. ಚಿತ್ರ ೨ ಗಂಟೆ ೪೯ ನಿಮಿಷ ಇದ್ದರೂ, ಮುಗಿದದ್ದೇ ಗೊತ್ತಾಗುವುದಿಲ್ಲ ಎಂದರು.

ನಂತರ ಪ್ರೇಮ್ ಮಾತನಾಡಿ ನಾಯಕ, ನಾಯಕಿಯನ್ನು ಇಡೀ ಚಿತ್ರದಲ್ಲಿ ಟಚ್ ಮಾಡುವುದೇ ಇಲ್ಲ, ಇದೇ ಪ್ರೇಮಂ ಪೂಜ್ಯಂನ ವಿಶೇಷ. ನನ್ನ 25 ಚಿತ್ರಗಳಲ್ಲಿ ಇಂಥ ಕಥೆ ಮಾಡಿರುವುದು ಇದೇ ಮೊದಲೆನ್ನಬಹುದು, ಪ್ರೀತಿ ಎನ್ನುವ ಪದಕ್ಕೆ ದೈವಿಕಭಾವನೆ, ಹೊಸ ವ್ಯಾಖ್ಯಾನ ಕೊಡುವ ಸಿನಿಮಾವಿದು, ಈವರೆಗೆ ನಮ್ಮ ಚಿತ್ರದ ಬಗ್ಗೆ ಒಂದೇ ಒಂದು ನೆಗೆಟಿವ್ ಪಾಯಿಂಟ್ ಕೇಳಿಬಂದಿಲ್ಲ, ನಮ್ಮ ಟ್ರೈಲರ್ ಇಷ್ಟರಮಟ್ಟಿಗೆ ಸೌಂಡ್ ಮಾಡಿದೆ ಎಂದರೆ ಅದಕ್ಕೆ ಕಾರಣ ಮಾಧ್ಯಮಗಳು ನೀಡಿದ ಪ್ರಚಾರ, ಈಗ ಸಲಗ, ಕೋಟಿಗೊಬ್ಬ ಅಲ್ಲದೆ ಮುಂದಿನವಾರ ಭಜರಂಗಿ ೨ ಕೂಡ ಬರುತ್ತಿರುವುದರಿಂದ, ವಿತರಕರ, ಸ್ನೇಹಿತರ ಸಲಹೆಯ ಮೇರೆಗೆ ನಾವು ಮುಂದಿನ ತಿಂಗಳು 12ಕ್ಕೆ ರಿಲೀಸ್ ಮಾಡುತ್ತಿದ್ದೇವೆ. ಈಗಾಗಲೇ ಕಲ್ಕತ್ತ, ಕೊಚ್ಚಿನ್‌ನಿಂದ ರೀಮೇಕ್‌ಗೆ ಆಫರ್ ಬರ‍್ತಿದೆ. ಸಬ್‌ಟೈಟಲ್ ಹಾಕಿ ಕೇರಳದಲ್ಲೂ ಚಿತ್ರವನ್ನು ರಿಲೀಸ್ ಮಾಡುವ ಯೋಚನೆಯಿದೆ, ಈಗಿನ ಬೆಳವಣಿಗೆ ನೋಡಿದರೆ ಎಲ್ಲ ಭಾಷೆಗಳಲ್ಲೂ ಪ್ರೇಮಂ ಪೂಜ್ಯಂ ಚಿತ್ರವನ್ನು ರಿಲೀಸ್ ಮಾಡುವ ನಿರೀಕ್ಷೆಯಿದೆ ಎಂದು ಹೇಳಿದರು.

ನಾಯಕಿ ಬೃಂದಾ ಆಚಾರ್ಯ, ವಿತರಕರಾದ ಗಿರೀಶ್, ಜಗದೀಶ್ ಕೂಡ ಚಿತ್ರದ ಕುರಿತಂತೆ ಮಾತನಾಡಿದರು. ಡಾ.ರಕ್ಷಿತ್ ಕದಂಬಾಡಿ, ಹಾಗೂ ಡಾ. ರಾಜ್‌ಕುಮಾರ್ ಜಾನಕಿರಾಮನ್ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮಾಧವ ಕಿರಣ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಒಟ್ಟಾರೆ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಪ್ರೇಮಂ ಪೂಜ್ಯಂ ತೆರೆಯ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಲು ಸಕಲ ಸಿದ್ಧತೆಯನ್ನ ಚಿತ್ರತಂಡ ಮಾಡಿಕೊಳ್ಳುತ್ತಿದೆ.

Related posts