‘ಪ್ರೇಮಂ ಪೂಜ್ಯಂ’ ದೃಶ್ಯ ಕಾವ್ಯಂ (ಚಿತ್ರವಿಮರ್ಶೆ-ರೇಟಿಂಗ್ : 4/5 )
ರೇಟಿಂಗ್ : 4/5
ಚಿತ್ರ: ಪ್ರೇಮಂ ಪೂಜ್ಯಂ
ನಿರ್ದೇಶಕ : ಡಾ. ಬಿ.ಎಸ್. ರಾಘವೇಂದ್ರ
ನಿರ್ಮಾಣ : ಕೆದoಬಾಡಿ ಕ್ರಿಯೇಷನ್ಸ್
ಛಾಯಾಗ್ರಹಣ : ನವೀನ್ ಕುಮಾರ್
ಸಂಗೀತ, ಸಾಹಿತ್ಯ : ಬಿ.ಎಸ್. ರಾಘವೇಂದ್ರ
ತಾರಾಗಣ : ಲವ್ಲಿ ಸ್ಟಾರ್ ಪ್ರೇಮ್ , ಬೃoದಾ ಆಚಾರ್ಯ, ಮಾಸ್ಟರ್ ಆನಂದ್, ಸಾಧು ಕೋಕಿಲ, ಅವಿನಾಶ್, ಮಾಳವಿಕಾ, ಅಂದ್ರಿತಾ ರೇ , ಅನು ಪ್ರಭಾಕರ್, ಸುಮನ್ ಹಾಗೂ ಮುಂತಾದವರು…
ಪ್ರೀತಿ , ಪ್ರೇಮದ ಸುತ್ತ ಹಲವಾರು ಕಥೆಗಳು ಬಂದು ಹೋಗಿದೆ. ಆದರೆ ಪ್ರೇಮವನ್ನ ಪೂಜ್ಯ ಮನೋಭಾವದಿಂದ ಕೂಡ ನೋಡಬಹುದು ಎಂಬ ಹೊಸ ವ್ಯಾಖ್ಯಾನವನ್ನು ಬರದಂಥ ಚಿತ್ರ ಪ್ರೇಮಂ ಪೂಜ್ಯಂ.
ಕಥಾ ಸಾರಾಂಶ ತೆರೆದುಕೊಳ್ಳುವುದೇ ವಿದ್ಯಾರ್ಥಿಯ ವಿದ್ಯಾಭ್ಯಾಸದ ಫಲಿತಾಂಶದ ಮೂಲಕ. ಮಂಡ್ಯದ ಒಬ್ಬ ರೈತ ಕುಟುಂಬದಲ್ಲಿ ಜನಿಸಿದ ನಾಯಕ ಶ್ರೀಹರಿ (ನಟ ಪ್ರೇಮ್) ಉನ್ನತ ವ್ಯಾಸಂಗ ಮಾಡಿ ಡಾಕ್ಟರ್ ಆಗುವ ಕನಸು, ಆದರೆ ಬಡ ಸ್ಥಿತಿಯಲ್ಲೂ ಮಗನಿಗೆ ಬೆನ್ನಲುಬಾಗಿ ನಿಲ್ಲುವ ತಂದೆ ತಾಯಿ ಹಾಗೂ ಗೆಳೆಯ. ಹಗಲಿರುಳೆನ್ನದೆ ಓದುತ್ತಾ ಕಾಲೇಜನ್ನು ಸೇರುವ ಶ್ರೀಹರಿ.
ಸಹ ಪಾಟಿಯ ಕೀಟಲೆಗಳ ನಡುವೆ ಆತ್ಮೀಯ ಗೆಳೆಯನಾಗಿರುವ ರಂಜನ್ (ಮಾಸ್ಟರ್ ಆನಂದ್) ಇದರ ನಡುವೆ ಸೀನಿಯರ್ ತಲೈವಾ (ಸಾಧು ಕೋಕಿಲ) ರೂಮ್ ಪಾರ್ಟ್ನರ್ ಆಗುವ ಶ್ರೀಹರಿ. ಮೆಡಿಕಲ್ ವಿದ್ಯಾರ್ಥಿಗಳ ಒಂದೆಡೆ ಪರಿಚಯವಾಗುವ ಸಮಯಕ್ಕೆ ನಾಯಕನ ಎದುರಿಗೆ ಬರುವ ಏಂಜಲ್ ಚಿತ್ರದ ಕೇಂದ್ರ ಬಿಂದು ನಾಯಕಿ ಶೆರ್ಲಿನ್ ಪಿಂಟೊ (ಬೃಂದಾ ಆಚಾರ್ಯ).
ನಾಯಕಿಯ ಸೌಂದರ್ಯಕ್ಕೆ ಮನಸೋತ ನಾಯಕ ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಪೂಜನೀಯ ಭಾವವನ್ನು ಬೆಳೆಸಿಕೊಳ್ಳುತ್ತಾನೆ. ವೈದ್ಯಕೀಯ ವಿದ್ಯಾರ್ಥಿಗಳ ಕಾರ್ಯವೈಖರಿಗಳ ಒಂದಷ್ಟು ವಿಚಾರ ಅನಾವರಣ ಜೊತೆಗೆ ಕಾಲೇಜು ಕ್ಯಾಂಪಸ್ ನಲ್ಲಿ ಒಂದಷ್ಟು ತರಲೆ , ತುಂಟಾಟ. ಇದರ ನಡುವೆ ಪ್ರೇಮದ ಸಿಂಚನವು ಎದುರಾಗುತ್ತದೆ.
ವಿದ್ಯಾರ್ಹತೆಯಲ್ಲಿ ಟಾಪರ್ ಆಗಿದ್ದ ಶ್ರೀಹರಿಯ ಸರಳತೆ, ಸೌಮ್ಯತೆಗೆ ಮನಸೋತ ನಾಯಕಿ ಶೆರ್ಲಿನ್ ಒಮ್ಮೆಯಾದರೂ ತನ್ನ ಹಸ್ತವನ್ನು ಮುಟ್ಟಲಿ ಎಂಬ ಆಸೆ. ಆದರೆ ಶ್ರೀಹರಿಗೆ ತಾನು ಇಷ್ಟಪಡುವ ಏಂಜೆಲ್ ತನ್ನ ಮಡದಿ ಆದ ನಂತರವೇ ಮುಟ್ಟಬೇಕೆಂಬ ಕನಸು ಅದರಂತೆ ಆಕೆಯನ್ನು ಮನಸಲ್ಲೆ ನೆನದು ತನ್ನ ಎದೆಯನ್ನು ಮುಟ್ಟಿ ಆರಾಧಿಸುತ್ತಾನೆ.
ಶ್ರೀಹರಿ ಅಪ್ಪಟ ಮಂಡ್ಯ ಗೌಡ , ಹಾಗೆಯೇ ನಾಯಕಿ ಶೆರ್ಲಿನ್ ಪಿಂಟೊ ಕೂಡ ರೋಮನ್ ಕ್ಯಾಥೋಲಿಕ್ ನ ಕ್ರಿಶ್ಚಿಯನ್ ಕುಟುಂಬದವಳು ಇವರಿಬ್ಬರ ಪ್ರೇಮಕ್ಕೆ ಜಾತಿ ಅಡ್ಡ ಬರುತ್ತದೆ ಅದರಿಂದ ಹೊರಬರುವ ಆದಿಯೂ ಕಾಣುತ್ತಿದೆ ಎನ್ನುವಷ್ಟರಲ್ಲಿ ದೊಡ್ಡ ಅನಾಹುತ ಎದುರಾಗುತ್ತದೆ. ಮುಂದೆ ಇವರಿಬ್ಬರ ಪಯಣದ ಹಾದಿಯಲ್ಲಿ ಹಲವಾರು ಏರಿಳಿತಗಳು ಎದುರಾಗುತ್ತಾ ಹೋದರೆ. ಬದುಕು ಮತ್ತೊಂದು ದಿಕ್ಕಿನತ್ತ ಕರೆದೊಯ್ಯುತ್ತದೆ. ಈ ಎಲ್ಲಾ ತಿರುವುಗಳ ನಡುವೆ ನಾಯಕನ ಕನಸು ನನಸಾಗುತ್ತಾ….
ನಾಯಕಿಗೆ ತನ್ನ ಪ್ರೀತಿ ಪಡೆಯುತ್ತಾಳಾ…. ಇವರಿಬ್ಬರಿಗೂ ಬದುಕು ಹೇಳುವ ಪಾಠ ಏನು…. ನಾವು ಬಯಸಿದ್ದು ಸಿಗುತ್ತಾ ಅಥವಾ ಭಗವಂತ ಕೊಟ್ಟಿದ್ದನ್ನು ಪಡೆಯಬೇಕಾ…. ಎಂಬ ಎಲ್ಲಾ ಅಂಶಗಳನ್ನು ನೋಡಬೇಕಾದರೆ ನೀವೆಲ್ಲರೂ ಒಮ್ಮೆ ಈ ಚಿತ್ರವನ್ನು ಕುಟುಂಬ ಸಮೇತ ಹೋಗಿ ನೋಡಲೇಬೇಕು.
ತನ್ನ 25ನೇ ಚಿತ್ರದಲ್ಲೂ ಕೂಡ ನಟ ಪ್ರೇಮ್ ಚಿರಯುವಕನಂತೆ ತೆರೆಯ ಮೇಲೆ ಕಂಗೊಳಿಸುತ್ತಿರುವುದು ಚಿತ್ರದ ಹೈಲೆಟ್ ಗಳಲ್ಲಿ ಒಂದು ಎಂದೇ ಹೇಳಬಹುದು. ಚಿತ್ರದುದ್ದಕ್ಕೂ ನಾಯಕ ನಟ ಪ್ರೇಮ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಯಾಗಿ , ಪ್ರೇಮಿಯಾಗಿ ಒಬ್ಬ ವೈದ್ಯನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಯಾವ ಪಾತ್ರವಾದರೂ ಲೀಲಾಜಾಲವಾಗಿ ಅಭಿನಯಿಸಬಲ್ಲೆ ಎಂದು ಮತ್ತೊಮ್ಮೆ ನಿರೂಪಿಸಿದ್ದಾರೆ.
ಇನ್ನೂ ಏಂಜೆಲ್ ನಂತೆ ಕಂಗೊಳಿಸಲು ಬಂದಂಥ ಬೃಂದಾ ಆಚಾರ್ಯ ಕೂಡ ಸಿಕ್ಕ ಪಾತ್ರಕ್ಕೆ ಅಚ್ಚುಕಟ್ಟಾಗಿ ಅಭಿನಯವನ್ನು ನೀಡಿದ್ದಾರೆ. ಇನ್ನೂ ಬಹಳ ವರ್ಷಗಳ ನಂತರ ಮಾಸ್ಟರ್ ಆನಂದ್ ಕೂಡ ಹಾಸ್ಯದ ರಸದೌತನವನ್ನು ನೀಡುವುದರ ಜೊತೆಗೆ ಜೀವದ ಗೆಳೆಯನಾಗಿ ತೆರೆಮೇಲೆ ಅದ್ಭುತವಾಗಿ ನಟಿಸಿದ್ದಾರೆ.
ಸೀನಿಯರ್ ಆದ್ರೂ ಎಲ್ಲಾ ಸಮಯಕ್ಕೂ ಒಗ್ಗಿಕೊಳ್ಳುವ ಹಾಸ್ಯ ನಟ ಸಾಧು ಕೋಕಿಲಾ ಕೂಡ ತಲೈವಾ ನಾಗಿ ತೆರೆಮೇಲೆ ಅಬ್ಬರಿಸಿದ್ದಾರೆ. ಇನ್ನು ನಟಿ ಅಂದ್ರಿತಾ ರೈ ಪಾತ್ರ ಕೂಡ ಬಹಳ ವಿಶೇಷವಾಗಿ ಪ್ರವೇಶ ಪಡೆಯುವ ಮೂಲಕ ಗಮನ ಸೆಳೆಯುತ್ತದೆ.
ಉಳಿದಂತೆ ನಾಯಕನ ತಂದೆ ತಾಯಿ ಪಾತ್ರದಲ್ಲಿ ಮಾಡಿರುವ ನಾಗಾಭರಣ ಹಾಗು ಚಿತ್ಕಲಾ ಬಿರಾದಾರ್ ಹಾಗೂ ನಾಯಕಿಯ ತಂದೆ ತಾಯಿ ಪಾತ್ರದಲ್ಲಿ ಮಾಡಿರುವ ಅವಿನಾಶ್ ಹಾಗೂ ಮಾಳವಿಕಾ ಅವಿನಾಶ್ ಹಾಗೂ ನಾಯಕನ ಗೆಳೆಯನಾಗಿ ಕಾಣಿಸಿಕೊಂಡಿರುವ ಗೋವಿಂದೇಗೌಡ , ಅನು ಪ್ರಭಾಕರ್ , ಸುಮನ್ ಪಾತ್ರಗಳು ಕೂಡ ಗಮನ ಸೆಳೆಯುತ್ತದೆ.
ಪ್ರಮುಖವಾಗಿ ಈ ಚಿತ್ರದ ಕಥೆ , ಚಿತ್ರಕಥೆ, ಸಾಹಿತ್ಯ ಹಾಗೂ ಸಂಗೀತವನ್ನು ಒದಗಿಸಿ ನಿರ್ದೇಶನ ಮಾಡಿರುವ ಡಾಕ್ಟರ್ ರಾಘವೇಂದ್ರ ಬಿ .ಎಸ್. ನವರ ಧೈರ್ಯವನ್ನ ಮೆಚ್ಚಲೆಬೇಕು. ಈ ಕಥೆಯನ್ನ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ತಿಳಿಸಿದಾಗ ಇದು ಉತ್ತಮ ಕಥೆ ಎಂದು ಬೆನ್ನು ತಟ್ಟಿದೆ ಈ ಚಿತ್ರಕ್ಕೆ ಸ್ಫೂರ್ತಿಯಾಗಿತ್ತಂತೆ ನಿರ್ದೇಶಕರಿಗೆ.
ಇಂಥಹ ಮನ ಮಿಡಿಯುವಂಥ ಪ್ರೇಮಕತೆಯ ಚಿತ್ರವನ್ನು ನಿರ್ಮಿಸಲು ಮುಂದಾ ದಂತ ವೈದ್ಯಕೀಯ ಕ್ಷೇತ್ರದ ಗೆಳೆಯರಾದ ಡಾಕ್ಟರ್ ರಕ್ಷಿತ್ ಕೆದಂಬಾಡಿ , ಡಾಕ್ಟರ್ ರಾಜ್ ಕುಮಾರ್ ಜಾನಕಿರಾಮನ್ , ಡಾಕ್ಟರ್ ರಾಘವೇಂದ್ರ. ಎಸ್, ಮನೋಜ್ ಕೃಷ್ಣನ್ ಸೇರಿದಂತೆ 28 ಗೆಳೆಯರ ಸಹಕಾರವನ್ನು ನೆನೆಯಲೇಬೇಕು.
ವೈದ್ಯೋ ನಾರಾಯಣೋ ಹರಿ…. ಎಂಬ ನುಡಿಮುತ್ತಿನಂತೆ ವೈದ್ಯರ ಕಾರ್ಯ ದಕ್ಷತೆ ಎಷ್ಟು ಮುಖ್ಯ ಎಂಬುದನ್ನು ಬಹಳ ಅಚ್ಚುಕಟ್ಟಾಗಿ ತೆರೆಮೇಲೆ ತೆರೆದಿಡುವುದರ ಜೊತೆಗೆ ಪ್ರೇಮವನ್ನ ಎಷ್ಟು ಪೂಜಿಸಬೇಕು , ಪ್ರೀತಿಗೆ ಸಾವಿಲ್ಲ ಪ್ರೇಮ ಎಷ್ಟು ಸುಂದರ ಹಾಗೂ ಅಮರ ಎಂಬುವುದನ್ನ ಬಹಳ ಸೂಕ್ಷ್ಮವಾಗಿ ಮನಮುಟ್ಟುವಂತೆ ತೆರೆ ಮೇಲೆ ತಂದಿದ್ದಾರೆ. ಚಿತ್ರದ ಸಾಹಿತ್ಯ ಹಾಗೂ ಸಂಗೀತ ಕೂಡ ಚಿತ್ರದ ಓಟಕ್ಕೆ ಅನುಗುಣವಾಗಿದ್ದರೂ ತುಸು ಹಾಡುಗಳು ಹೆಚ್ಚಾಯ್ತು ಹಾಗೂ ಚಿತ್ರಕತೆ ಮತ್ತಷ್ಟು ಬಿಗಿಯಾಗಿದ್ದರೆ ಸಿನಿಮಾ ಇನ್ನೂ ಆಕರ್ಷಣೀಯವಾಗಿ ಕಾಣುತ್ತಿತ್ತು.
ಇಡೀ ಸಿನಿಮಾ ಎಲ್ಲಾ ರೀತಿಯ ಅಂಶವನ್ನು ಒಳಗೊಂಡಿದ್ದು ಲವ್ , ಕಾಮಿಡಿ , ಎಮೋಷನ್ ರೊಮ್ಯಾನ್ಸ್ , ಟ್ರ್ಯಾಜಿಡಿ, ಹಾಗೂ ಗೆಳೆತನವನ್ನ ಬೆಸೆದುಕೊಂಡಿದೆ. ಒಟ್ಟಾರೆ ಇಡೀ ಚಿತ್ರವನ್ನ ಗಮನಿಸುತ್ತಾ ಹೋದರೆ ನಿಜವಾದ ಪ್ರೇಮ ಪೂಜನೀಯ ಭಾವನೆ ಭಾವನೆಯನ್ನು ವ್ಯಕ್ತಪಡಿಸುತ್ತದೆ.
ಅದಕ್ಕಿಂತ ಹೆಚ್ಚಾಗಿ ಜೀವನವೂ ಅಷ್ಟೇ ಮುಖ್ಯ ಎಂಬುದನ್ನು ಕೂಡ ತಿಳಿಸಿರುವ ವಿಚಾರ ಮೆಚ್ಚಲೇಬೇಕು. ಇದು ನಿರ್ದೇಶಕ ರಾಘವೇಂದ್ರ ಅವರ ಜೀವನದ ಕಥೆಯ ಎಳೆ ಇರಬಹುದೇ ಎಂಬ ಅನುಮಾನವೂ ಕಾಡುತ್ತದೆ. ಇನ್ನು ಈ ಚಿತ್ರದ ಹೈಲೈಟ್ ಗಳಲ್ಲಿ ಪ್ರಮುಖವಾದುದು, ಛಾಯಾಗ್ರಾಹಕ ನವೀನ್ ಕುಮಾರ್ ಅವರ ಕೈಚಳಕ.
ಇಡೀ ಚಿತ್ರದ ಪ್ರತಿಯೊಂದು ಫ್ರೇಮ್ ಕೂಡ ಒಂದೊಂದು ಪೇಂಟಿಂಗ್ ರೀತಿಯಲ್ಲಿ ಕಾಣುತ್ತದೆ.ಸುಂದರ ತಾಣಗಳಲ್ಲಿ ಸೆರೆಹಿಡಿದಿರುವ ಒಂದೊಂದು ದೃಶ್ಯವೂ ಮನಮೋಹಕವಾಗಿದೆ. ಬಹಳ ಅಪರೂಪಕ್ಕೆ ಒಂದು ಸುಂದರ ದೃಶ್ಯ ಕಾವ್ಯ ಹಾಗೂ ಪ್ರೇಮಮಯ ಕೌಟುಂಬಿಕ ಚಿತ್ರ ತೆರೆ ಮೇಲೆ ಬಂದಿದೆ.ಎಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಬೇಕು.