ಸಮಾಜದ ಕೈಗನ್ನಡಿ ಚಿತ್ರ ಪ್ರಜಾರಾಜ್ಯ (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಪ್ರಜಾರಾಜ್ಯ
ನಿರ್ದೇಶಕ:ವಿಜಯ್ ಭಾರ್ಗವ್
ನಿರ್ಮಾಪಕ: ಡಾ.ವರದರಾಜು
ಸಂಗೀತ : ವಿಜೇತ್ ಮಂಜಯ್ಯ
ಛಾಯಾಗ್ರಹಕ : ರಾಕೇಶ್.ಸಿ. ತಿಲಕ್
ತಾರಾಗಣ : ದೇವರಾಜ್, ನಾಗಾಭರಣ, ಡಾ.ವರದರಾಜು ಡಿ.ಎನ್, ಅಚ್ಯತಕುಮಾರ್, ವಿಜಯ್ ಭಾರ್ಗವ, ಸುಧಾ ಬೆಳವಾಡಿ, ದಿವ್ಯ ಗೌಡ, ಸುಧಾರಾಣಿ, ಸಂಪತ್ ಮೈತ್ರೇಯ, ಚಿಕ್ಕಹೆಜ್ಜಾಜಿ ಮಹದೇವ್ ಹಾಗೂ ಮುಂತಾದವರು…
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದರೂ ಇನ್ನೂ ಪ್ರಜಾಪ್ರಭುತ್ವದ ಮಹತ್ವ ಜನಸಾಮಾನ್ಯರಿಗೆ ಅರಿವಾಗಬೇಕಿದೆ. ನಮ್ಮ ಹಕ್ಕು ,ನಮ್ಮ ಸ್ವಾತಂತ್ರ , ಸ್ವಾವಲಂಬಿಯಾಗಿ ಬದುಕುವ ಆಲೋಚನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುವಂತಹ ಕಥೆಯೊಂದಿಗೆ ಜನಸಾಮಾನ್ಯರನ್ನ ಎಚ್ಚರಗೊಳಿಸುವ ಉದೇಶದಿಂದ ಈ ವಾರ ತೆರೆಯ ಮೇಲೆ ಬಂದಿರುವ ಚಿತ್ರ “ಪ್ರಜಾ ರಾಜ್ಯ”.
ಪ್ರತಿಪ್ರಜೆಗೂ ಬೇಕಾಗಿರುವಂತ ಅಗತ್ಯ ಸೌಲಭ್ಯಗಳು ಸಿಕ್ಕರೆ ಎಲ್ಲವೂ ಅಚ್ಚುಕಟ್ಟಾಗಿ ಇರುತ್ತದೆ. ಇಂತಹ ಸೌಲಭ್ಯದಿಂದ ವಂಚಿತರಾದವರು ಸರ್ವರಿಗೂ ಒಳಿತಾಗಬೇಕೆಂಬ ಮಹಾದಾಸೆಯೊಂದಿಗೆ ಸಮಾನಮನಸ್ಕರು ಒಗ್ಗೂಡಿಕೊಂಡು ಮೌನ ಪ್ರತಿಭಟನೆ ಹಾದಿಯಲ್ಲಿ ನ್ಯಾಯವನ್ನು ಕೇಳಲು ಮುಂದಾಗುತ್ತಾರೆ. ಇದು ಆಡಳಿತ ಪಕ್ಷಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಗೃಹ ಮಂತ್ರಿಗಳು ಅವರನ್ನು ಚದುರಿಸಿ ಇಲ್ಲದಿದ್ದರೆ ಅರೆಸ್ಟ್ ಮಾಡಿ ಎಂದು ಸೂಚಿಸುತ್ತಾರೆ. ಮುಂದೆ ಈ ಐವರ ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತಾ ಹೋಗುತ್ತದೆ.
ಯುನಿವರ್ಸಲ್ ಮೆಟಲ್ ಇಂಡಸ್ಟ್ರಿ ಮಾಲೀಕ ಭೀಮರಾವ್ (ಅಚುತ್ ಕುಮಾರ್) ಕಷ್ಟದಲ್ಲಿದ್ದರೂ ಉದ್ಯೋಗಗಳಿಗೆ ಸಂಬಳ, ಬ್ಯಾಂಕ್ ಲೋನ್, ಕಟ್ಟಬೇಕಾದ ಜಿ.ಎಸ್.ಟಿ ಯನ್ನ ಕಟ್ಟಿದರು ಒಂದಷ್ಟು ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ಇದರಿಂದ ಸಂಸ್ಥೆ ಮುಚ್ಚ ಬೇಕಾಗುತ್ತದೆ. ಇನ್ನು ಪ್ರತಿಭಾವಂತ, ಹೆಚ್ಚು ಓದಿಕೊಂಡಿರುವ ವ್ಯಕ್ತಿ ತನ್ನ ಅರ್ಹತೆಗೆ ತಕ್ಕ ಕೆಲಸ ಸಿಗದಿದ್ದರೂ, ಸಿಕ್ಕ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ದರ್ಮೆಂಧರ್ (ವರದರಾಜು) ಸತ್ಯ, ನ್ಯಾಯದ ಪರ ನಿಲ್ಲುವ ವ್ಯಕ್ತಿ.
ತನ್ನ ಸ್ನೇಹಿತನಿಗೆ ಪೇಟು ಬಿದ್ದಾಗ ಆಸ್ಪತ್ರೆಗೆ ಸೇರಿಸಲು ಪರದಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗದ ಸೌಲಭ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕತ್ಸೆ ಕೊಡಿಸುತ್ತಾನೆ.ರೈತರ ಕುಟುಂಬದಲ್ಲಿ ಬೆಳೆದು ಉತ್ತಮ ವ್ಯಾಸಂಗ ಮಾಡಿ ಸೂಕ್ತ ಕೆಲಸ ಸಿಗದೇ ಸಿಕ್ಕ ಕೆಲಸವೇ ಸಾಕು ಎನ್ನುವ ಅರ್ಜುನ(ವಿಜಯ್ ಭಾರ್ಗವ್) ಫ್ಯಾಕ್ಟರಿ ಮುಚ್ಚಿದ ನಂತರ ಹಳ್ಳಿಗೆ ಹೋಗಿ ರೈತನಾಗಲು ನಿರ್ಧರಿಸುತ್ತಾನೆ.
ತಂದೆ ತಾಯಿಗೆ ಇಷ್ಟವಿಲ್ಲದಿದ್ದರೂ ಮಗನಿಗೆ ಆಸ್ತಿ ಪತ್ರವನ್ನು ಅಡವಿಟ್ಟು ಮಗನ ಬೆಳವಣಿಗೆ ಸಹಾಯ ಮಾಡುತ್ತಾರೆ. ಆದರೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ನ್ಯಾಯ ಕೇಳಲು ಹೋರಾಡುತ್ತಾನೆ. ಇನ್ನು ಮತ್ತೊಬ್ಬ (ಸಂಪತ್ ಮೈತ್ರೇಯ) ತನ್ನ ಕಷ್ಟದ ಜೀವನದಲ್ಲೂ ಮಗಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಸರ್ಕಾರಿ ಶಾಲೆಯ ಬಿಟ್ಟು ಸಾಲ ಮಾಡಿ ಖಾಸಗಿ ಶಾಲೆಗೆ ಸೇರಿಸಿರುತ್ತಾರೆ.
ಪ್ರೈವೇಟ್ ಶಾಲೆಯ ಡೊನೇಷನ್ ಕಾಟಕ್ಕೆ ನರಳುತ್ತಾರೆ. ಹೀಗೆ ಒಬ್ಬೊಬ್ಬರದು ಒಂದೊಂದು ಸಮಸ್ಯೆ. ಇದಕ್ಕೊಂದು ಪರಿಹಾರ ಸಿಗಬೇಕೆಂದು ನಿರ್ಧರಿಸಿ ಲಾಯರ್ (ಸುಧಾರಾಣಿ) ಮೂಲಕ ಹೋರಾಟಗಾರ ಜಯ ಪ್ರಕಾಶ್ (ದೇವರಾಜ್) ಬೇಟಿ ಮಾಡುತ್ತಾರೆ. ಆಡಳಿತ ನಡೆಸುವ ಪಕ್ಷದವರಿಗೆ ಜಯಪ್ರಕಾಶ್ ಕಂಡರೆ ಇನ್ನಿಲ್ಲದ ಭಯ. ಆದರೆ ಈ ಬಾರಿ ಈ ಹೋರಾಟಗಾರ ಜಯ ಪ್ರಕಾಶ್ ಹೊಸ ದಾರಿಯನ್ನ ಆಯ್ದುಕೊಂಡು ಈ ಯುವ ಸಂಘಟಿತರನ್ನು ಒಗ್ಗೂಡಿಸಿ ಕರ್ನಾಟಕ ಸ್ವಾಭಿಮಾನ ಪಕ್ಷ ಕಟ್ಟಿ ಚುನಾವಣೆಯಲ್ಲಿ ಬಹುಮತದೊಂದಿಗೆ ಜನರ ವಿಶ್ವಾಸ ಪಡೆದು ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ಇಲ್ಲಿಂದ ಅಧಿಕಾರ ಪಡೆದ ನಾಯಕರ ಹಾದಿ ಮತ್ತೊಂದು ದಿಕ್ಕು ತೆರೆದುಕೊಳ್ಳುತ್ತದೆ.
ನೂತನ ಸಚಿವರು ಏನು ಮಾಡುತ್ತಾರೆ…
ಜನರಿಗೆ ಕೊಟ್ಟ ಆಶ್ವಾಸನೆ ಈಡೇರಿಸುತ್ತಾರಾ…
ವಿರೋಧಿಗಳ ಕೈವಾಡ ಏನು…
ಪ್ರತಿಯೊಬ್ಬರ ವೋಟು ಎಷ್ಟು ಮುಖ್ಯ…
ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಒಮ್ಮೆ ನೀವು ಪ್ರಜಾ ರಾಜ್ಯ ಚಿತ್ರವನ್ನು ನೋಡಬೇಕು.
ಒಂದು ಸಂದೇಶದ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಚಿತ್ರವನ್ನು ಪ್ರೇಕ್ಷಕರಿಗೆ ನೀಡುವುದರಲ್ಲಿ ನಿರ್ಮಾಪಕರಾದ ಡಾ. ವರದರಾಜು. ಡಿ. ಎನ್ ಯಶಸ್ವಿಯಾಗಿದ್ದು , ಈ ಚಿತ್ರಕ್ಕೆ ಕಥೆ, ಚಿತ್ರಕಥೆ , ಸಂಭಾಷಣೆ ಬರೆದು ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದಾರೆ.
ಇನ್ನು ಈ ಚಿತ್ರವನ್ನು ನಿರ್ದೇಶನ ಮಾಡಿರುವ ವಿಜಯ್ ಭಾರ್ಗವ್ ಪ್ರಥಮ ಪ್ರತ್ನದಲ್ಲೇ ಒಂದು ಉತ್ತಮ ಚಿತ್ರವನ್ನು ಮಾಡಿ, ಪಾತ್ರವನ್ನು ಕೂಡ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಸಂವಿಧಾನದ ಮಹತ್ವ , ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗಗಳ ಕಾರ್ಯವೈಖರಿಯ ಜೊತೆಗೆ ಪ್ರತಿಯೊಬ್ಬ ನಾಗರಿಕರಿಗೂ ಸಿಗಬೇಕಾದ ಸೌಲಭ್ಯ , ಪ್ರಜಾಪ್ರಭುತ್ವದ ತಿಳುವಳಿಕೆ, ನಮ್ಮ ಹಕ್ಕು, ನಮ್ಮ ಮತ , ಸ್ವಾವಲಂಬಿಯ ಬದುಕು ಎಷ್ಟು ಮುಖ್ಯ ಎಂಬುದನ್ನು ತೆರೆಯ ಮೇಲೆ ತಂದಿದ್ದಾರೆ. ಆದರೆ ಚಿತ್ರಕಥೆಯಲ್ಲಿ ಒಂದಷ್ಟು ಹಿಡಿತ ಜೊತೆಗೆ ವೇಗವಾಗಿ ಸಾಗಬಹುದಿತ್ತು. ಹೆಚ್ಚು ವಿಚಾರಗಳನ್ನು ತುಂಬಿದಂತಿದೆ.
ಈ ಚಿತ್ರಕ್ಕೆ ವಿಜೇತ್ ಮಂಜಯ್ಯ ಸಂಗೀತ ಪೂರಕವಾಗಿದೆ. ರಾಕೇಶ್. ಸಿ. ತಿಲಕ್ ಕ್ಯಾಮರಾ ಕೈಚಳಕ ಉತ್ತಮವಾಗಿದೆ. ಈ ಚಿತ್ರದ ಪ್ರಮುಖ ಹೋರಾಟಗಾರರ ಪಾತ್ರದಲ್ಲಿ ನಟ ದೇವರಾಜ್ , ಲಾಯರ್ ಪಾತ್ರದಲ್ಲಿ ಸುಧಾರಾಣಿ, ನಾಯಕನ ತಂದೆಯ ಪಾತ್ರದಲ್ಲಿ ನಾಗಭರಣ, ತಾಯಿಯ ಪಾತ್ರದಲ್ಲಿ ಸುಧಾ ಬೆಳವಾಡಿ ಸೇರಿದಂತೆ ವಿಜಯ್ ಭಾರ್ಗವ್ , ಡಾ.ವರದರಾಜು , ಅಚ್ಯತಕುಮಾರ್, ದಿವ್ಯ ಗೌಡ, ಸಂಪತ್ ಮೈತ್ರೇಯ, ಚಿಕ್ಕಹೆಜ್ಜಾಜಿ ಮಹದೇವ್ ಸೇರಿದ ಎಲ್ಲಾ ಪಾತ್ರವು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಸದ್ಯ ಎಲೆಕ್ಷನ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಒಂದು ಪ್ರಜಾ ರಾಜ್ಯ ಚಿತ್ರವನ್ನು ಮತ ಚಲಾಯಿಸುವ ಹಕ್ಕು ಹೊಂದಿರುವ ಪ್ರತಿಯೊಬ್ಬರೂ ಕೂಡ ನೋಡಬೇಕಾಗಿದೆ.