Cinisuddi Fresh Cini News 

ಯಶಸ್ವಿ ಪ್ರದರ್ಶನ ಕಾಣುತ್ತಿರುವ “ಪ್ರಜಾರಾಜ್ಯ” ಚಿತ್ರದ ಭಾಗ 2ಕ್ಕೆ ತಯಾರಿ.

ಪ್ರಜಾಪ್ರಭುತ್ವದ ಮಹತ್ವ ಸಾರುವ , ಉತ್ತಮ ಸಂದೇಶ ಹೊಂದಿರುವ “ಪ್ರಜಾರಾಜ್ಯ” ಚಿತ್ರ ಮಾರ್ಚ್ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ದೊರಕಿರುವ ಪ್ರಶಂಸೆಗೆ ಸಂತಸಗೊಂಡಿರುವ ನಿರ್ಮಾಪಕ ಡಾ.ಡಿ.ಎನ್ ವರದರಾಜು “ಪ್ರಜಾರಾಜ್ಯ ಭಾಗ 2” ನಿರ್ಮಿಸಲು ಮುಂದಾಗಿದ್ದಾರೆ.

ಸದ್ಯ “ಪ್ರಜಾರಾಜ್ಯ” ಚಿತ್ರ ಎರಡನೇ ವಾರ ನಡೆಯುತ್ತಿದೆ. ಮೂರನೇ ವಾರ ಕೂಡ ಕೆಲವು ಚಿತ್ರಮಂದಿರಗಳಲ್ಲಿ ಮುಂದುವರೆಯಲಿದೆ. ಜನರಿಗೆ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸುವ ಚಿತ್ರವಿದು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಕೆಲವು ಅಂಶಗಳಿಗೆ ರಾಜಕೀಯ ನಾಯಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳುವ ಚರ್ಚೆ ಕೂಡ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದ ನಿರ್ಮಾಪಕ ಡಾ||ಡಿ.ಎನ್ ವರದರಾಜು, “ಪ್ರಜಾರಾಜ್ಯ ಭಾಗ 2” ಚಿತ್ರವನ್ನು ಶೀಘ್ರದಲ್ಲೇ ಆರಂಭಿಸುವುದಾಗಿ ಹೇಳಿದರು.
“ಭಾಗ-2” ರಲ್ಲಿ ರಾಜ್ಯ ರಾಜಕಾರಣದಿಂದ, ರಾಷ್ಟ್ರ ರಾಜಕಾರಣದ ಕುರಿತು ಮಾಹಿತಿ ನೀಡಲಾಗುವುದು. ಸದ್ಯ “ಪ್ರಜಾರಾಜ್ಯ ಭಾಗ 2” ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕರು ನೂತನ ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಡೈನಾಮಿಕ್ ಸ್ಟಾರ್ ದೇವರಾಜ್, ನಾಗಾಭರಣ, ಡಾ||ವರದರಾಜು, ಅಚ್ಯತಕುಮಾರ್, ವಿಜಯ್ ಭಾರ್ಗವ, ಸುಧಾ ಬೆಳವಾಡಿ, ದಿವ್ಯ ಗೌಡ, ಸುಧಾರಾಣಿ, ಸಂಪತ್ ಮೈತ್ರೇಯ, ಚಿಕ್ಕಹೆಜ್ಜಾಜಿ ಮಹದೇವ್ ಮುಂತಾದವರು “ಪ್ರಜಾರಾಜ್ಯ” ಚಿತ್ರದ ತಾರಾಬಳಗದಲ್ಲಿದ್ದಾರೆ.

Related posts