ಈ ವಾರ ಬಿಡುಗಡೆಯಾದ 'ನಾನು ಲವರ್ ಆಫ್ ಜಾನು' ಚಿತ್ರ ಹೇಗಿದೆ ..? (ಚಿತ್ರ ವಿಮರ್ಶೆ)

ಚಿತ್ರ : 'ನಾನು ಲವರ್ ಆಫ್ ಜಾನು'

ನಿರ್ಮಾಣ: ವಿಷ್ಣು ಭಂಡಾರಿ, ರವಿಶಂಕರ್. ಕೆ.ಬಿ., ರಾಜು, ಚಂದ್ರು ಕೆ.ವಿ.
ನಿರ್ದೇಶನ: ಸುರೇಶ್ ಜಿ.
ಸಂಗೀತ: ಶ್ರೀನಾಥ್ ವಿಜಯ್
ಛಾಯಾಗ್ರಹಣ: ಶಿವು ಬಿ.ಕೆ
ತಾರಾಗಣ: ವಿಶಾಲ್, ಮಂಜುಳಾ ಗಂಗಪ್ಪ, ವಿಷ್ಣು ಭಂಡಾರಿ, ಚಿಕ್ಕಣ್ಣ , ಕಡ್ಡಿಪುಡಿ ಚಂದ್ರು, ಸುಚೇಂದ್ರ ಪ್ರಸಾದ್, ರಾಕ್‍ಲೈನ್ ಸುದಾಕರ್ ಹಾಗೂ ಮುಂತಾದವರು ...
ರೇಟಿಂಗ್ 3/5

ನಮ್ಮಲ್ಲಿ ಹಲವಾರು ಪ್ರೀತಿ ಪ್ರಣಯದ ಸುತ್ತ ಸಾಗುವ ಕಥೆಗಳು ಬಂದು ಹೋಗಿವೆ.ಪ್ರೀತಿಯ ಜೊತೆಗೆ ಕ್ರಾಂತಿಯ ನೆರಳನ್ನು ಕೂಡ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ ನಾನು ಲವರ್ ಆಫ್ ಜಾನು. ನಕ್ಸಲೈಟ್ ಹಿನ್ನೆಲೆಯಲ್ಲಿ ಮೂಡಿಬರುವ ಹೊಸ ರೀತಿಯ ಪ್ರೇಮಕಥೆಯನ್ನು ನಿರ್ದೇಶಕ ಜಿ.ಸುರೇಶ್ ಬಹು ಸುಂದರವಾಗಿ ತೆರೆಮೇಲೆ ನಿರೂಪಿಸಿದ್ದಾರೆ. ಪ್ರೀತಿ ಎನ್ನುವುದು ಕ್ರಾಂತಿಯನ್ನು ಹೇಗೆ ಗೆಲ್ಲುತ್ತದೆ ಎನ್ನುವುದನ್ನು ಈ ಸಿನಿಮಾದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿದೆ. ನಾಯಕ ದೇವ್(ವಿಶಾಲ್) ಒಬ್ಬ ಮೆಕ್ಯಾನಿಕ್. ತನ್ನ ಸ್ನೇಹಿತರೊಂದಿಗೆ ಖುಷ್ ಖುಷಿಯಾಗಿ ಆಡಿಕೊಂಡಿದ್ದ ದೇವ್ ಬಾಳಿನಲ್ಲಿ ಒಬ್ಬ ಸುಂದರ ಯುವತಿ ಜಾನಕಿ(ಮಂಜುಳಾ ಗಂಗಪ್ಪ) ಎಂಟ್ರಿ ಆಗುತ್ತಾಳೆ.

ಜಾನಕಿಯನ್ನು ದೇವ್ ಮನಸಾರೆ ಲವ್ ಮಾಡುತ್ತಾನೆ. ಆಕೆಯೂ ಈತನನ್ನು ತುಂಬಾ ಹಚ್ಚಿಕೊಂಡುಬಿಡುತ್ತಾಳೆ. ಎಷ್ಟೆಂದರೆ ತಾನು ಇಟ್ಟುಕೊಂಡು ಬಂದ ಉದ್ದೇಶವನ್ನೇ ಮರೆಯುವಷ್ಟು. ಜಾನಕಿ ಎಂಟ್ರಿಯಾದ ನಂತರ ದೇವ್ ಕೂಡ ತನ್ನ ಜೀವನದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಳ್ಳುತ್ತಾನೆ. ಆದರೆ ಜಾನಕಿ ದೇವ್ ಮುಗ್ಧ ಪ್ರೀತಿಗೆ ಮೋಸಮಾಡಲು ಇಚ್ಚಿಸದೆ ತನ್ನ ಹಿಂದಿನ ವೃತ್ತಾಂತವನ್ನು ಬಿಚ್ಚಿಡುತ್ತಾಳೆ.

ತಾನು ಚಿಕ್ಕವಳಿದ್ದಾಗ ಕ್ರಾಂತಿಕಾರಿಗಳು ಹಾಗೂ ಪೋಲೀಸರ ನಡುವಿನ ಹೋರಾಟದಲ್ಲಿ ತನ್ನ ಪೋಷಕರು ಸಾವಿಗೀಡಾದದ್ದು, ಅದೇ ಕ್ರಾಂತಿಕಾರಿಗಳ ನಡುವೆ ತಾನು ಬೆಳೆದದ್ದು, ಪ್ರಮುಖವಾಗಿ ತಾನು ನೂರಾರು ಜನರನ್ನು ಹತ್ಯೆ ಮಾಡಲು ಬಂದ ನಕ್ಸಲೈಟ್ ಎಂಬುದನ್ನು ಕೂಡ ಹೇಳಿಕೊಳ್ಳುತ್ತಾಳೆ. ಕೆಲವೇ ದಿನಗಳಲ್ಲಿ ತಾನು ಇಂಜೆಕ್ಟ್ ಮಾಡಿಕೊಂಡಿರುವ ದ್ರವರೂಪದ ವಿಷಕಾರಿ ವಸ್ತುವಿನಿಂದ ತನ್ನೊಂದಿಗೆ ನೂರಾರು ಜನರನ್ನು ಸಾಯುವ ವಿಚಾರವನ್ನು ಕೂಡ ತಿಳಿಸುತ್ತಾಳೆ. ಇಡೀ ಚಿತ್ರದ ಕಥೆ ಟ್ವಿಸ್ಟ್ ಪಡೆಯುವುದೇ ಇಲ್ಲಿಂದ. ಕೊನೆಗೆ ಈ ನಾಯಕಿ ಪ್ರಿಯಕರನ ಪ್ರೀತಿ ಪಡೆಯುತ್ತಾಳಾ... ಅಥವಾ ಜನರೊಂದಿಗೆ ತಾನು ಸಾಯುತ್ತಾಳಾ... ಎಂಬುದನ್ನು ತೆರೆಯ ಮೇಲೆ ನೋಡಿದರೆ ಚೆಂದ.

ನಾಯಕ ನಟ ವಿಶಾಲ್ ಅಭಿನಯದ ಉತ್ತಮವಾಗಿದೆ. ನಾಯಕಿ ಜಾನು ಈ ಚಿತ್ರದ ಕೇಂದ್ರಬಿಂದು. ಆ ಪಾತ್ರಕ್ಕೆ ಮಂಜುಳಾ ಗಂಗಪ್ಪ ಜೀವ ತುಂಬಿ ಅಭಿನಯಿಸಿದ್ದಾರೆ. ನೋಡುಗರ ಅನುಕಂಪಕ್ಕೆ ಪಾತ್ರಳಾಗುವ ಜಾನಕಿಯಾಗಿ ಗಮನ ಸೆಳೆಯುತ್ತಾರೆ. ಇನ್ನುಕ್ರಾಂತಿಕಾರಿಯ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಎಂದಿನಂತೆ ಆದ ತನ್ನದೇ ಧಾಟಿಯನ್ನು ಈ ಚಿತ್ರದಲ್ಲೂ ಮುಂದುವರೆಸಿದ್ದಾರೆ. ಚಿತ್ರದಲ್ಲಿ ಖಳನಾಯಕನಾಗಿ ಬಣ್ಣಹಚ್ಚಿರುವ ನಿರ್ಮಾಪಕ ವಿಷ್ಣು ಭಂಡಾರಿ ಒಂದೆರಡು ಸೀನ್‍ಗಳಲ್ಲಿ ಮಾತ್ರ ಬಂದು ಹೋಗುತ್ತಾರೆ.

ಶ್ರೀನಾಥ್ ವಿಜಯ್ ಅವರ ಸಂಗೀತ ಸಂಯೋಜನೆಯಲ್ಲಿ ಎಲ್ಲಾ ಹಾಡುಗಳು ಸುಂದರವಾಗಿ ಮೂಡಿಬಂದಿದ್ದು ಕೇಳಲು ಕೂಡ ಇಂಪಾಗಿವೆ. ಚಿತ್ರದ ಮುನ್ನುಡಿಯನ್ನು ಯೋಗರಾಜ್ ಭಟ್ ಅವರಿಂದ ಹೇಳಿಸಿರುವುದು ಚಿತ್ರದ ಹೈಲೈಟ್. ಆರಂಭದಲ್ಲಿ ನಿಧಾನಗತಿಯಾಗಿ ಸಾಗುವ ಚಿತ್ರದ ಕಥೆ ಮಧ್ಯಂತರದ ನಂತರ ನಕ್ಸಲೈಟ್ ಸ್ಟೋರಿಯಾಗಿ ಬದಲಾಗಿ ಕುತೂಹಲ ಉಳಿಸಿಕೊಂಡು ಹೋಗುತ್ತದೆ.ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಳ್ಳದೆ ಒಂದು ವಿಭಿನ್ನ ಪ್ರಯತ್ನದ ಚಿತ್ರವನ್ನು ನೋಡಬಯಸುವವರಿಗೆ ಈ ಚಿತ್ರ ಖಂಡಿತವಾಗಿಯೂ ಇಷ್ಟವಾಗುತ್ತದೆ.