ರೂಮರ್‍ಗಳ ಬಗ್ಗೆ ಸಿಡಿಮಿಡಿಗೊಂಡ ಬಾಲಿವುಡ್‍ನ ಸಿಡಿಗುಂಡು ಕಂಗನಾ

ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ನಂತರ ಈಗ ಕಂಗನಾ ರನಾವತ್ ನಟನೆಯ ಮಣಿ ಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ ಸಿನಿಮಾದ ಸುತ್ತ ವಿವಾದದ ಹುತ್ತ ಸೃಷ್ಟಿಯಾಗಿದೆ ಈ ಸಿನಿಮಾದಲ್ಲಿ ಮಹಾರಾಣಿ  ಲಕ್ಷ್ಮಿಭಾಯಿ ಪ್ರಣಯ ಸಲ್ಲಾಪದಲ್ಲಿ ತೊಡಗಿರುವ ದೃಶ್ಯಗಳಿವೆ ಎಂಬ ವದಂತಿ ಬಿ-ಟೌನ್‍ನಲ್ಲಿ ದಟ್ಟವಾಗಿ ಹಬ್ಬಿದೆ. ಆದರೆ ಈ ರೂಮರ್‍ಗಳ ಬಗ್ಗೆ ಬಾಲಿವುಡ್‍ನ ಸಿಡಿಗುಂಡು ಕಂಗನಾ ರನಾವತ್ ಸಿಡಿಮಿಡಿಗೊಂಡಿದ್ದಾಳೆ.

ಇಂಥ ಸುಳ್ಳು ಕಥೆಗಳನ್ನು ಹಬ್ಬಿಸುತ್ತಿರುವ ಮಂದಿ ರಾಣಿ ಝಾನ್ಸಿ ಲಕ್ಷ್ಮೀಬಾಯಿಗೆ
ಕಳಂಕ ತಂದೊಡ್ಡುತ್ತಿದ್ದಾರೆ ಎಂಬುದು ಕಂಗನಾಳ ಆಕ್ರೋಶ.
ಪದ್ಮಾವತಿ ವಿವಾದದ ಕೇಂದ್ರ ಬಿಂದು ರಾಜಸ್ತಾನದಿಂದಲೇ ಮಣಿಕರ್ಣಿಕಾ ಮೇಲೂ ವಕ್ರದೃಷ್ಟಿ ಬಿದ್ದಿದೆ. ಅಲ್ಲಿನ ಸರ್ವ ಬ್ರಾಹ್ಮಣ ಮಹಾಸಭಾ ಮಣಿಕರ್ಣಿಕಾ ಸಿನಿಮಾ ವಿರುದ್ಧ ಗಂಭೀರ ಆರೋಪ ಮಾಡಿದೆ.

ಈ ಚಿತ್ರದಲ್ಲಿ ಕೆಲವು ಆಕ್ಷೇಪಾರ್ಹ ದೃಶ್ಯಗಳಿವೆ. ರಾಣಿ ಲಕ್ಷ್ಮೀಬಾಯಿ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಏಜೆಂಟ್ ನಡುವೆ ಪ್ರಣಯ ದೃಶ್ಯಗಳಿವೆ ಎಂದು ಆರೋಪಿಸಿದೆ.  ಈ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕಂಗನಾ, ಇಂಥ ಇಲ್ಲಸಲ್ಲದ ಆರೋಪಗಳಿಂದ ಚಿತ್ರತಂಡಕ್ಕೆ ಘಾಸಿಯಾಗಿದೆ.

ಈ ಬಗ್ಗೆ ಚಿಂತಿಸುವುದು ಅತ್ಯಂತ ನೀಚ ಸಂಗತಿ. ಇದರಿಂದ ದೇಶದ ವೀರಾಗ್ರಣಿ ಝಾನ್ಸಿ ರಾಣಿಗೆ ಕಳಂಕ ಬಂದಂತಾಗಿದೆ. ಇಂಥ ಯಾವುದೇ ದೃಶ್ಯಗಳು ಸಿನಿಮಾದಲ್ಲಿ ಇಲ್ಲವೇ ಇಲ್ಲ. ಹೀಗಿರುವಾಗ ಇಂಥ ವದಂತಿಗಳನ್ನು ಹುಟ್ಟಿಸಲಾಗುತ್ತಿದೆ ಎಂದು ಕಂಗನಾ ಕಿಡಿಕಾರಿದ್ದಾಳೆ.  ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ ಸಿನಿಮಾ ಆಗಸ್ಟ್ 3ರಂದು ತೆರೆಕಾಣಲಿದೆ.