ಯಾಮಿ ಗೌತಮಿ ಕೋರ್ಟ್ ಮೆಟ್ಟಿಲೇರಿದ್ದು ಏಕೆ ಗೊತ್ತಾ..?

ಬಾಲಿವುಡ್ ಬೆಡಗಿ ಯಾಮಿ ಗೌತಮಿ ಜಾರ್ಖಂಡ್‍ನಲ್ಲಿ ಕೋರ್ಟ್ ಮೆಟ್ಟಿಲೇರಿ ವಕೀಲರನ್ನು ಭೇಟಿ ಮಾಡಿ ಕೆಲವು ಮಾರ್ಗದರ್ಶನ ಪಡೆದಿದ್ದಾಳೆ. ನ್ಯಾಯವಾದಿಗಳನ್ನು ಯಾಮಿ ಸಂಪರ್ಕಿಸಿದ್ದಾಳೆ ಎಂದ ಮೇಲೆ ಯಾವುದೋ ತಕರಾರು ಇರಬೇಕು ಎಂಬ ಭಾವನೆ ಮೂಡುವುದು ಸಹಜ.

ಆದರೆ ಈಕೆಯ ಭೇಟಿ ಹಿಂದೆ ಬೇರೆ ಉದ್ದೇಶವಿದೆ. ಹೃತಿಕ್ ರೋಷನ್ ಅಭಿನಯದ ಕಾಬಿಲ್ ಸಿನಿಮಾದಲ್ಲಿ ಅತ್ಯಾಚಾರಕ್ಕೆ ಒಳಗಾಗುವ ಅಂಧೆಯ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡದ್ದ ಯಾಮಿ, ತಾನು ನಟಿಸುತ್ತಿರುವ ``ಬಟ್ಟಿ ಗುಲ್ ಮೀಟರ್ ಚಾಲು" ಸಿನಿಮಾದಲ್ಲಿ ವಕೀಲೆ. ಈ ಚಿತ್ರದ ನಾಯಕ ಶಹೀದ್ ಕಪೂರ್ ಕೂಡ ಅಡ್ವೋಕೇಟ್.

ಹೀಗಾಗಿ ವಕೀಲರು ಯಾವ ರೀತಿ ಇರುತ್ತಾರೆ. ಕೋರ್ಟ್‍ಗಳಲ್ಲಿ ಹೇಗೆ ವಾದ ಮಂಡಿಸುತ್ತಾರೆ ಎಂಬುದನ್ನು ತಿಳಿಯಲು
ಈಕೆ ಜಾರ್ಖಂಡ್‍ನ ಪುಟ್ಟ ಪಟ್ಟಣಗಳ
ತಹಸೀಲ್ ನ್ಯಾಯಾಲಯಗಳಿಗೆ ತೆರಳಿ ಅಲ್ಲಿ ವಕೀಲರನ್ನು ಭೇಟಿ ಮಾಡಿದಳು. ತನ್ನ ಪಾತ್ರಕ್ಕೆ ಅಗತ್ಯವಾದ ಮಾಹಿತಿಗಳನ್ನು ಅವರಿಂದ ಪಡೆದಳು. ವಿದ್ಯುತ್ ಬಿಲ್‍ಗಳ ಏರುಪೇರು ಕುರಿತ ಪ್ರಸಹಸಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ತಾನು ನಿರ್ವಹಿಸಬೇಕಾದ ಪಾತ್ರದ ಬಗ್ಗೆ ಹಿರಿಯ ಮತ್ತು ಖ್ಯಾತ ವಕೀಲರು ಯಾಮಿಗೆ ಸಲಹೆ-ಸೂಚನೆ ಮತ್ತು ಮಾರ್ಗದರ್ಶನ ನೀಡಿದ್ಧಾರೆ.

ಅಲ್ಲದೆ, ತಹಸೀಲ್ ಕೋರ್ಟ್‍ಗಳಿಗೂ ಭೇಟಿ ನೀಡಿದ್ದ ಈ ನಟಿ ನ್ಯಾಯಾಲಯ ಕಲಾಪಗಳು, ವಾದ-ಪ್ರತಿವಾದಗಳ ಮಂಡನೆ ಮೊದಲಾದ ಸಂಗತಿಗಳನ್ನು ಖುದ್ದಾಗಿ ವೀಕ್ಷಿಸಿ ಮನದಟ್ಟು ಮಾಡಿಕೊಂಡಿದ್ದಾಳೆ. ಶ್ರೀ ನಾರಾಯಣ ಸಿಂಗ್ ಅವರ ಬಟ್ಟಿ ಗುಲ್ ಮೀಟರ್ ಚಾಲು ಸಿನಿಮಾ ಪ್ರಸ್ತುತ ಸನ್ನಿವೇಶಗಳ ವಾಸ್ತವ ಚಿತ್ರಣ ಒಳಗೊಂಡಿದೆ.