ರಮ್ಯಾ ಅಕ್ಕ ಇದು ನಿಂಗೆ ಬೇಕಿತ್ತಾ...?

ಗಾಂಧಿನಗರದಲ್ಲಿ ಈಗ ರಾಜಕೀಯ ಗುದ್ದಾಟ ಜೋರಾಗಿದೆ. ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ನಟ-ನಟಿಯರ ಮದ್ಯೆ ಕೂಡ ಕೆಸರೆರಚಾಟ ನಡೆಯುತ್ತಿದೆ. ಕೆಲ ನಟ ನಟಿಯರು ಕಾಂಗ್ರೆಸ್ ಕಡೆ ಯಿಂದ ಕೆಸರೆರಚುತ್ತಿದ್ದರೆ, ಇನ್ನು ಕೆಲವರು ಬಿಜೆಪಿ ಪರ ನಿಂತು ಕೆಸರೆರಚುತ್ತಿದ್ದಾರೆ. ಈವರೆಗೆ ಚಿತ್ರರಂಗದಲ್ಲಿ ಸ್ಟಾರ್‌ವಾರ್ ಮಾತ್ರವೇ ನಡೆಯುತ್ತಿತ್ತು. ಇದೀಗ ಪೊಲಿಟಿಕಲ್ ವಾರ್‌ ಶುರುವಾಗಿದೆ.
ಅಷ್ಟಕ್ಕೂ ಈಗ ಮೋದಿ ರಾಜ್ಯಕ್ಕೆ ಬಂದು ಹೋಗಿದ್ದಕ್ಕಿಂತ ಹೆಚ್ಚು ಸುದ್ದಿಯಾಗಿರುವುದು, ಚರ್ಚೆಯಾಗಿರುವುದು ರಮ್ಯಾ ಮೇಡಂ ವಿಷಯ. ಕೆಲವರಂತೂ 'ಅಕ್ಕ ಇದು ನಿಂಗೆ ಬೇಕಿತ್ತಾ ಅoತ್ತಿದ್ದಾರೆ...
ಇದೀಗ ರಮ್ಯಾ ಮತ್ತು ನವರಸನಾಯಕ ಜಗ್ಗೇಶ್ ನಡುವೆ ಮತ್ತೊಂದು ಸುತ್ತಿನ ಟ್ವೀಟ್ ವಾರ್ ಶುರುವಾಗಿದೆ. ಪ್ರಾಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್ ಮಾಡಿದ್ದ ರಮ್ಯಾಗೆ ಟ್ವಿಟರ್ ನಲ್ಲೆ ಜಗ್ಗೇಶ್ ತಮ್ಮದೇ ಸ್ಟೈಲ್ ನಲ್ಲಿ ಮಂಗಳಾರತಿ ಮಾಡಿದ್ದಾರೆ. ಇದಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಕೂಡ ಗಂಟೆ ಬಾರಿಸಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಹೊಂದುವ ಮೂಲಕ ಆನ್‌ಲೈನ್ ವಿಭಾಗವನ್ನು ನಿರ್ವಹಿಸುತ್ತಿರುವಾಕೆ ರಮ್ಯಾ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿಯೇ ಟ್ವೀಟ್ ಮಾಡುತ್ತಲೇ ರಮ್ಯಾ ಪದೇ ಪದೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೂ ಆಕೆ ಪ್ರಧಾನಿಯನ್ನು ಕೆಣಕುವಂಥಾ ಮಾತಾಡಿದ್ದರು. ಇದರ ವಿರುದ್ಧ ಕೆರಳಿರೋ ಜಗ್ಗೇಶ್ `ಇಡೀ ವಿಶ್ವ ನಾಯಕರೇ ಮೋದಿಯವರನ್ನು ಮೆಚ್ಚಿಕೊಂಡಿದೆ. ದೊಡ್ಡವರ ಬಗ್ಗೆ ಮಾತಾಡುವಾಗ ತಿಳುವಳಿಕೆ ಬೇಕಾಗುತ್ತದೆ. ಇಂಥಾ ತಿಳುವಳಿಕೆ, ಅನುಭವದಿಂದ ಚರ್ಚೆ ಮಾಡಿದರೆ ಅದನ್ನು ಜನ ಒಪ್ಪಿಕೊಳ್ಳುತ್ತಾರೆ. ಆದರೆ ಮೋದಿ ವಿರುದ್ಧ ಮಾತಾಡಲು ಈಕೆ ಯಾರು? ಇವರ ಸಾಧನೆ ಏನು? ಅಂತೆಲ್ಲ ಜಗ್ಗೇಶ್ ತೀಕ್ಷ್ಣವಾಗಿಯೇ ಪ್ರಶ್ನಿಸಿದ್ದಾರೆ.

ರಮ್ಯಾ ಮೋದಿ ವಿರುದ್ಧ ಮಾಡಿರೋ ಮತ್ತೊಂದು ಟ್ವೀಟ್‌ಗೂ ಜಗ್ಗೇಶ್ `ಅಪ್ಪನ ಕಾಸಲ್ಲಿ ಸ್ಟಾರ್ ಹೋಟೆಲ್‌ನಲ್ಲಿ ಕೂತು ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿ, ಪ್ರತೀ ಚಿತ್ರವನ್ನು ಕ್ಯಾಚ್ ಹಾಕಿಕೊಳ್ಳಲು ಅದೇ ಸ್ಟಾರ್ ಹೋಟೆಲನ್ನು ಬಳಸಿಕೊಂಡು, ದೊಡ್ಡವರ ನೆರಳಲ್ಲಿ ರಾಜಕೀಯ ಮಾಡುತ್ತಾ, ಹೈಕಮಾಂಡನ್ನೇ ಕ್ಯಾಚ್ ಹಾಕಿಕೊಂಡವರು ಮೋದಿ, ಗಾಂಧಿ ಯಾರ ಬಗ್ಗೆ ಬೇಕಾದರೂ ಮಾತಾಡ್ತಾರೆ. ಯಾಕಂದ್ರೆ ಅವರು ಶ್ರಮವಿಲ್ಲದೆ ಏರಿದೋರಲ್ಲವೇ? ಅಂತ ಜಗ್ಗೇಶ್ ಕಿಂಡಲ್ ಮಾಡಿದ್ದಾರೆ. ಇದಕ್ಕೆ ಜೊತೆಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ 'ರಮ್ಮು' ಮೇಡಂ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇನ್ನು ಎಲೆಕ್ಷನ್ ಹತ್ತಿರ ಬರುತ್ತಿದೆ ಈ ಸಿನಿಮಾ ಸ್ಟಾರ್ ಗಳ ಕೆಸರೆರಚಾಟದಿಂದ ಯಾವ ಪಕ್ಷಕ್ಕೆ ಅದೇನು ಲಾಭವಾಗುತ್ತೋ ಗೊತ್ತಿಲ್ಲ. ಆದರೆ ಜನರಿಗೆ ಮಾತ್ರ ಭರಪೂರ ಮನೋರಂಜನೆ. ಅಷ್ಟಕ್ಕೂ ಮನುಷ್ಯನ ಸ್ವಭಾವವೇ ಹಾಗಲ್ವೆ ಇಬ್ಬರು ಕಿತ್ತಾಡ್ತಿದ್ರೆ ನೋಡಿ ಮಜಾ ತೊಗೊಳೋರೆ ಜಾಸ್ತಿ. ಈಗ ಜನ ಅದನ್ನೇ ಮಾಡ್ತಿದಾರೆ ಅನ್ಸುತ್ತೆ. ಇದು ಇಷ್ಟಕ್ಕೆ ನಿಲ್ಲೋ ಹಾಗಂತೂ ಕಾಣ್ತಿಲ್ಲ, ಇನ್ನು ಅದೇನೇನು ನೋಡ್ಬೇಕೋ, ಇನ್ನೇನೇನು ಕ್ಳಬೇಕೋ ಕಾದು ನೋಡುವಾ..