ಸಿಂಹಾದ್ರಿಯ ಸಿಂಹನ ದಾರಿಯಲ್ಲೇ 'ರಾಜಾಸಿಂಹ' (ಚಿತ್ರ ವಿಮರ್ಶೆ)

ಬೆಳ್ಳಿ ಪರದೆ ಮೇಲೆ ರಾಜಾಸಿಂಹನ ಆರ್ಭಟ ಶುರುವಾಗಿದೆ.ಈ ಹಿಂದೆ ಬಂದಂಥ ಸಿಂಹಾದ್ರಿಯ ಸಿಂಹ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಅಭಿನಯಿಸಿದ ನರಸಿಂಹೇಗೌಡ ಮಗನಾಗಿ ಅನಿರುದ್ಧ ಈ ಚಿತ್ರದಲ್ಲಿ ಯುವರಾಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಲು ಅಮೃತವಿದ್ದಂತೆ ಅಂತ ಹಾಲಿಗೆ ಕಲಬೆರಕೆ ಮಾಡುವ ಖದೀಮರ ಮಟ್ಟ ಹಾಕಲು ಭರ್ಜರಿ ಎಂಟ್ರಿ ಕೊಡುವ ಅನಿರುದ್ಧ ಸಾಹಸಸಿಂಹರ ಸ್ಟೈಲ್ಲ್ ನಲ್ಲಿ ಎಂಟ್ರಿ ಕೊಡ್ತಾರೆ.

ಈ ಚಿತ್ರದ ಮೂಲಕ ಆ್ಯಕ್ಷನ್ ಹೀರೋ ಆಗಿ ಗುರುತಿಸಿಕೊಳ್ಳುವ ಎಲ್ಲ ಲಕ್ಷ ಣಗಳು ಇದೆ ಎನ್ನಬಹುದು.ಎನ್.ಜಿ.ಓ ಸಂಸ್ಥೆಯ ಮೂಲಕ ಜನರಿಗೆ ಸಹಾಯ ಹಸ್ತ ಮಾಡುವ ಅನಿರುದ್ ಹಾಗೂ ಲಾಯರ್ ಆಗಿ ಕಾರ್ಯ ನಿರ್ವಹಿಸುವ ಪಾತ್ರದಲ್ಲಿ ಶ್ರೀಮತಿ ಭಾರತಿ ವಿಷ್ಣುವರ್ಧನ್ ಕಾಣಿಸಿಕೊಂಡಿದ್ದಾರೆ. ತಾಯಿ ಮಗನಾಗಿ ಇವರಿಬ್ಬರು ಜೀವನ ನಡೆಸುತ್ತಿರುತ್ತಾರೆ. ಇದರ ನಡುವೆ ನಾಯಕಿಯಾಗಿ ನಿಖಿತಾ ತುಕ್ರಾಲ್ ಪ್ರವೇಶ. ಜೊತೆಗೆ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ ನ ಫ್ಲಾಶ್ ಬ್ಯಾಕ್ ಕಥೆ . ಆಪ್ತಮಿತ್ರ ಚಿತ್ರದ ದೃಶ್ಯಗಳು ನೆನಪಿಸುವಂಥ ಒಂದು ಹಾಸ್ಯ ಪ್ರಸಂಗ ಅನಿರುದ್ಧ , ನಿಖಿತಾ ಹಾಗೂ ಬುಲೆಟ್ ಪ್ರಕಾಶ್ ನಡುವೆ ನಡೆಯುತ್ತೆ. ಇದು ಚಿತ್ರದ ಆರಂಭದ ಓಟಕ್ಕೆ ದಾರಿ ಮಾಡಿಕೊಡುತ್ತದೆ. ಅಲ್ಲಲ್ಲಿ ಬರುವ ಕೆಲವು ಹಾಸ್ಯ ಪ್ರಸಂಗ ಕೊಂಚ ಮುಜುಗರ ಅನ್ಸುತ್ತೆ. ಪ್ರೀತಿಯೇ ಮುಖ್ಯ ಕೊಂಡಿಯಾಗಿ ಸಾಗುವ ಈ ಕಥೆಯಲ್ಲಿ ಇಂಟರ್ವಲ್ ಗೆ ಒಂದು ಸತ್ಯ ಹೊರಬೀಳುತ್ತದೆ.

ಸಿಂಹಾದ್ರಿಯ ಸಿಂಹ ಚಿತ್ರಕ್ಕೂ ಈ ಚಿತ್ರಕ್ಕೂ ಕಥೆ ಬೆಸೆದುಕೊಳ್ಳುತ್ತಾ ಸಾಗುತ್ತದೆ. ಇದರಲ್ಲಿ ಡಾ. ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿ ಸಿಂಹ ಕೆಲವು ದೃಶ್ಯಗಳನ್ನು ಬಳಸಿಕೊಂಡಿದ್ದಾರೆ. ಹಾಗೆ ಕಥೆಗೆ ಪೂರಕವಾಗಿ ಅದನ್ನು ಜೋಡಿಸಿಕೊಂಡಿರುವ ವಿಶೇಷವಾಗಿದೆ. ಸಿಂಹಾದ್ರಿಯ ಸಿಂಹ ಚಿತ್ರದಲ್ಲಿ ಡಾ. ವಿಷ್ಣುವರ್ಧನ್ ಹಳ್ಳಿ ಜನರಿಗಾಗಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆರೆ ಕಟ್ಟಲು ಮುಂದಾಗುವ ವಿಚಾರವನ್ನಿಟ್ಟುಕೊಂಡಾಗ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಿಂದ ಆ ಕುಟುಂಬ ಏನಾಗುತ್ತೆ ಅನ್ನೋ ಅಂಶವನ್ನು ಈ ಚಿತ್ರದ ಕಥೆ ಪೂರಕವಾಗಿ ಬಳಸಿಕೊಂಡಿದ್ದಾರೆ.ಅಪ್ಪೊರು ಕಂಡ ಕನಸನ್ನು ಮಗ ಪೂರೈಸುತ್ತಾನಾ, ತಾಯಿ ಮತ್ತೆ ಊರಿಗೆ ಬರುತ್ತಾಳಾ,ಸತ್ಯ ಎಲ್ಲರಿಗೂ ತಿಳಿಯುತ್ತಾ, ದಾಯಾದಿಗಳು ಒಂದಾಗುತ್ತಾರಾ ಎಂಬ ಎಲ್ಲ ಅಂಶಗಳನ್ನು ನೀವು ಬೆಳ್ಳಿ ಪರದೆಯ ಮೇಲೆ ನೋಡಬೇಕು.

ಈ ಚಿತ್ರದಲ್ಲಿ ವಿಶೇಷವಾಗಿ ಮಂತ್ರಿ ಪಾತ್ರದಲ್ಲಿ ಬಂದಿರುವ ರೆಬೆಲ್ ಸ್ಟಾರ್ ಅಂಬರೀಶ್ ಗೆಳೆಯನನ್ನು ನೆನೆಯುವುದು ಮನಮುಟ್ಟುವಂತಿದೆ.ಸಿಂಹನ ಆದರ್ಶದ ಹಾದಿಯಲ್ಲಿ ಅನಿರುದ್ಧ ಸಾಗಲಿ ಎನ್ನುತ್ತಾರೆ.ಇನ್ನು ಕೆರೆ ಕಟ್ಟುವ ಪ್ರಾಜೆಕ್ಟ್ ಪ್ಲಾನರ್ ಯಾಗಿ ಬರುವ ಸಂಜನಾ ಮೈ ಚಳಿ ಬಿಡಿಸುವಂತೆ ಅಭಿನಯಿಸಿದ್ದಾರೆ.ಇನ್ನು ಶರತ್ ಲೋಹಿತಾಶ್ವ ಗೌಡನ ಪಾತ್ರದಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಅವರ ಪುತ್ರನಾಗಿ ಅರುಣ್ ಸಾಗರ್ ಪಾತ್ರಕ್ಕೆ ಜೀವ ತುಂಬಿ ನಡೆಸಿದ್ದಾರೆ.ಐಟಂ ಹಾಡು ಒಂದರಲ್ಲಿ ಕಾಮನಾ ಸಿಂಗ್ ಹೆಜ್ಜೆ ಹಾಕಿದ್ದಾರೆ ಇನ್ನು ಉಳಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದ್ದು ವಿಶೇಷವಾಗಿ ನಿರ್ಮಾಪಕ ಸಿ.ಡಿ .ಬಸಪ್ಪ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರೆ.

ನಿರ್ದೇಶಕ ರವಿರಾಮ್ ಈ ಚಿತ್ರದಲ್ಲಿ ವಿಷ್ಣು ದಾದಾ ರ ಮೇಲೆ ಅವರಿಗಿರುವ ಪ್ರೀತಿಯನ್ನು ಬಹಳ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಹಾಗೇ ಈ ಚಿತ್ರದ ಮೂಲಕ ನಟ ಅನಿರುದ್ ಗೆ ಹೊಸ ಇಮೇಜ್ ನೇ ನೀಡಿದ್ದಾರೆ ಎನ್ನಬಹುದು. ಹಾಗೆ ಜೆಸ್ಸಿ ಗಿಫ್ಟ್ ಸಂಗೀತ ಭಾರಿ ಸದ್ದನ್ನೇ ಮಾಡಿದೆ.ಕೆ.ಎಂ. ವಿಷ್ಣುವರ್ಧನ್ ಅವರ ಛಾಯಾಗ್ರಹಣ ಹಾಗೂ ಸಾಧು ಕೋಕಿಲರ ಹಿನ್ನೆಲೆ ಸಂಗೀತ ಹಾಗೂ ಫೈಟ್ ಮಾಸ್ಟರ್ ಗಳ ಸಾಹಸ ಈ ಚಿತ್ರದ ಪ್ಲಸ್ ಪಾಯಿಂಟ್ ಎಂದು ಹೇಳಬಹುದು.ಡಾ. ವಿಷ್ಣುವರ್ಧನ್ ಅವರ ಅಭಿಮಾನಿ ಆಗಿರುವ ನಿರ್ಮಾಪಕ ಸಿ.ಡಿ.ಬಸಪ್ಪ ಈ ಚಿತ್ರವನ್ನು ಅದ್ಧೂರಿಯಾಗಿ ತರಲು ಬಹಳಷ್ಟು ಖರ್ಚು ಮಾಡಿರೋದ್ದು ಪರದೆ ಮೇಲೆ ಕಾಣಲಿದೆ.ಅದ್ಧೂರಿಯಾಗಿ ಬಂದಿರುವ ರಾಜಾಸಿಂಹ ನನ್ನ ಎಲ್ಲರೂ ಒಮ್ಮೆ ನೋಡಬಹುದು.

ಚಿತ್ರ : ರಾಜಾಸಿಂಹ
ನಿರ್ಮಾಪಕ : ಸಿ.ಡಿ.ಬಸಪ್ಪ
ನಿರ್ದೇಶಕ : ರವಿರಾಮ್
ಸಂಗೀತ : ಜೆಸ್ಸಿ ಗಿಫ್ಟ್
ಛಾಯಾಗ್ರಹಣ : ಕೆ .ಎಂ. ವಿಷ್ಣುವರ್ಧನ್
ತಾರಾಗಣ : ಅನಿರುಧ್, ಶ್ರೀಮತಿ ಭಾರತಿ ವಿಷ್ಣುವರ್ಧನ್ , ರೆಬೆಲ್ ಸ್ಟಾರ್ ಅಂಬರೀಶ್, ನಿಖಿತಾ ತುಕ್ರಾಲ್ , ಸಂಜನಾ, ಸಿ.ಡಿ. ಬಸಪ್ಪ , ಶರತ್ ಲೋಹಿತಾಶ್ವ , ಅರುಣ್ ಸಾಗರ್ ಹಾಗೂ ಮುಂತಾದವರು...
ರೇಟಿಂಗ್ :3.5/5