ಚಿಕ್ಕಬಳ್ಳಾಪುರ 'ಪವರ್' ಸಂಚಲನ

ನವೀನ್‌ ಕಿರಣ್‌ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ನಡುವೆಯೇ ಅವರ ಮನೆಗೆ ‘ಪವರ್ ಸ್ಟಾರ್‌’ ನಟ ಭೇಟಿ ನೀಡಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ತೆಲುಗು ನಟ, ಜನಸೇನಾ ಪಕ್ಷದ ಸಂಸ್ಥಾಪಕ ಕೆ. ಪವನ್‌ ಕಲ್ಯಾಣ್‌ ಅವರು ಸೋಮವಾರ ಚಿಕ್ಕಬಳ್ಳಾಪುರ ನಗರ ಹೊರವಲಯದ ಕೆ.ವಿ.ಕ್ಯಾಂಪಸ್‌ನಲ್ಲಿರುವ ಕೆ.ವಿ.ಮತ್ತು ಪಂಚಗಿರಿ ದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ಸುದ್ದಿ ತಿಳಿದು ಕ್ಯಾಂಪಸ್‌ನತ್ತ ಧಾವಿಸಿದ ಪವನ್‌ ಕಲ್ಯಾಣ್‌ ಅವರ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲೆ ಹೂವಿನ ಮಳೆಗದೆದು ಜೈಕಾರ ಹಾಕುತ್ತ ಹತ್ತಿರದಿಂದ ನೋಡಲು ಮುಗಿಬಿದ್ದರು. ಉತ್ಸಾಹದಲ್ಲಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಪರಿಸ್ಥಿತಿ ಕೈ ಮೀರುವುದು ಅರಿತು ಲಾಠಿ ಬೀಸಿ ಜನದಟ್ಟಣೆ ಹತೋಟಿಗೆ ತಂದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ನವೀನ್ ಕಿರಣ್ ಅವರ ನಿವಾಸದಲ್ಲಿ ಉಪಾಹಾರ ಸೇವಿಸಿ, ಅವರ ಕುಶಲೋಪರಿ ವಿಚಾರಿಸಿದ ಪವನ್‌ ಕಲ್ಯಾಣ್‌ ಕ್ಯಾಂಪಸ್‌ನಲ್ಲಿ ಸಿದ್ಧಪಡಿಸಿದ್ದ ವೇದಿಕೆಯಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣಿಸಿದರು.