ಮೊಸರಲ್ಲಿ ಕಲ್ಲು ಹುಡುಕಿದವರು ಪದ್ಮಾವತ್ ಚಿತ್ರವನ್ನೊಮ್ಮೆ ನೋಡಲೇಬೇಕು..! ಅದ್ಬುತ, ಅತ್ಯದ್ಭುತ

ವಿವಾದಗಳ ಮಧ್ಯೆ ಭಾರಿ ನಿರೀಕ್ಷೆಗಳೊಂದಿಗೆ ಬಾಲಿವುಡ್ ನಲ್ಲಿ ಬಿಡುಗಡೆಯಾಗಿದ್ದ ಪದ್ಮಾವತ್ ಚಿತ್ರಕ್ಕೆ ಪ್ರೇಕ್ಷಕರಿಂದ ಸಕತ್ ರೆಸ್ಪಾನ್ಸ್ ಸಿಕ್ಕಿದೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಕಲ್ಪನೆಯಲ್ಲಿ ಮೂಡಿಬಂದ ವಾಸ್ತವಿಕ ಕಥೆಯ ಸ್ಕ್ರೀನ್ ಪ್ಲೇಯನ್ನು ಮತ್ತೊಬ್ಬರು ಮಾಡಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಬನ್ಸಾಲಿ ಮಾಡಿ ತೋರಿಸಿದ್ದಾರೆ. ಈ ಚಿತ್ರದ ಮೂಲಕ ರಣವೀರ್ ಸಿಂಗ್ ನ ಫ್ಯಾನ್ ಫಾಲೋಯಿಂಗ್ ಹೆಚ್ಚುವುದರಲ್ಲಿ ಯಾವುದೇ ಸಂಶಯವಿಲ್ಲ ಏಕೆಂದರೆ ನೆಗೆಟಿವ್ ರೋಲ್ ನಲ್ಲೂ ಪ್ರೇಕ್ಷಕರ ಮನದಲ್ಲಿ ಪಾಸಿಟಿವ್ ಆಗಿ ಉಳಿದುಕೊಳ್ಳುತ್ತಾನೆ ರಣವೀರ್. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದ ಖದರ್ ಚಿತ್ರದ ಹೈಲೈಟ್ ಎಂದರೆ ತಪ್ಪಾಗಲಾರದು.

ಚಿತ್ರ ಎಲ್ಲಾ ರೀತಿಯಲ್ಲೂ ಕಂಪ್ಲೀಟ್, ಪರ್ಫೆಕ್ಟ್ ಆಗಿದೆ. ವಿವಾದಕ್ಕೆ ಎಡೆ ಮಾಡಿಕೊಡುವ ಒಂದೇ ಒಂದು ಸೀನ್ ಅಥವಾ ಡೈಲಾಗ್ ಸಹ ಚಿತ್ರದಲ್ಲಿ ಇಲ್ಲ. ಅತಿರೇಕಗಳಿಲ್ಲ, ಅಸಂಬದ್ಧ ಸಂಗತಿಗಳಿಲ್ಲ, ಅಶ್ಲೀಲತೆಯಂತೂ ಇಲ್ಲವೇ ಇಲ್ಲ . ಆರಂಭದಿಂದ ಅಂತ್ಯದವರೆಗೆ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಕಥೆ, ಸ್ಕ್ರೀನ್ ಪ್ಲೇ, ಛಾಯಾಗ್ರಹಣ, ಸಂಗೀತ, ಸಾಹಿತ್ಯ, ಸಂಭಾಷಣೆ, ಎಲ್ಲವೂ ಅತ್ಯದ್ಭುತ. ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಈ ಸಿನಿಮಾ ಮೈಲುಗಲ್ಲು ಎಂದರೆ ತಪ್ಪಾಗಲ್ಲ . ಆದರೆ ದುರದೃಷ್ಟ. ಧರ್ಮ, ಪಂಥ, ಪಂಗಡದ ಹೆಸರಿನಲ್ಲಿ ಅದ್ಬುತ ಪ್ರಯತ್ನಕ್ಕೆ ಪ್ರೋತ್ಸಾಹ ಸಿಗಲಿಲ್ಲ, ಎಂದಿನಂತೆ ಇಲ್ಲಿಯೂ ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನಗಳಾದವು. ಆದರೆ ಪದ್ಮವತ್ ಚಿತ್ರ ನಿಜಕ್ಕೂ 13 ನೇ ಶತಮಾನದ ದೃಶ್ಯಗಳನ್ನು ಕಣ್ಮುಂದೆ ತಂದಿಟ್ಟಿದೆ.

ಸಂಧರ್ಭಕ್ಕೆ ತಕ್ಕ ಜಾಗದಲ್ಲಿ ಹಾಡುಗಳು ಪ್ರೇಕ್ಷಕರನ್ನು ಹಿಡಿದಿಡುತ್ತವೆ. ಈ ಚಿತ್ರದಲ್ಲಿ ನಮ್ಮ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ರಜಪೂತ ಸ್ವಾಭಿಮಾನಿ, ವೀರ ರಾಣಿಯ ಪರಕಾಯ ಪ್ರವೇಶ ಮಾಡಿದ್ದಾಳೆ. ವಸ್ತ್ರಗಳಂತೂ ರಿಚ್ಎಂಡ್ ಗ್ರಾಂಡ್. ವರ್ಣನೆಗೆ ನಿಲುಕದ ಗ್ರಾಫಿಕ್ಸ್ ವೈಭವವನ್ನು ನೀವು ಚಿತ್ರ ನೋಡಿಯೇ ಅನುಭವಿಸಬೇಕು. ರಜಪೂತ ಹುಕುಂ ಪಾತ್ರಕ್ಕೆ ಶಾಹಿದ್ ಕಪೂರ್ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸುವ ಪ್ರಯತ್ನ ಮಾಡಿದ್ದಾರೆ. ನಮ್ಮ ಕನ್ನಡದ 'ಗೀತಾ' ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದ ಅಕ್ಷತಾ ರಾವ್ ಮನೋಜ್ಞವಾಗಿ ನಟಿಸಿದ್ದಾರೆ.

ಇಡೀ ಚಿತ್ರವನ್ನೇ ಆವರಿಸಿಕೊಂಡು ಎಲ್ಲದಕ್ಕಿಂತ ಹೆಚ್ಚು ಗಮನ ಸೆಳೆಯುವ ನಟನೆ ಅಲ್ಲಾವುದ್ದಿನ್ ಖಿಲ್ಜಿ ಪಾತ್ರದ ರಣವೀರ್ ಸಿಂಗ್ ನದ್ದು. ನೀವೊಮ್ಮೆ ಸಿನಿಮಾ ನೋಡಿದರೆ, ರಣವೀರ್ ಆ್ಯಕ್ಟಿಂಗ್ ಗೆ ಫಿದಾ ಆಗುವುದರಲ್ಲಿ ಅನುಮಾನವಿಲ್ಲ. ಚಿತ್ರದ ಕೋರಿಯೋಗ್ರಫಿ ಜೊತೆ ಖುದ್ದು ಸಂಜಯ್ ಲೀಲಾ ಬನ್ಸಾಲಿ ಸಂಯೋಜಿಸಿದ ಮ್ಯೂಸಿಕ್ ಮಂತ್ರಮುಗ್ದರನ್ನಾಗಿಸುತ್ತೆ. ಹಾಡುಗಳು ಒಂದಕ್ಕಿಂತ ಒಂದು ಅದ್ಭುತ. ಯುದ್ಧ ದೃಶ್ಯಗಳನ್ನು ಬಾಹುಬಲಿ ಸಿನಿಮಾದಂತೆ ವೈಭವೀಕರಿಸದೆ ವಾಸ್ತವಕ್ಕೆ ಹತ್ತಿರವಾಗಿ ತೋರಿಸಿದ್ದಾರೆ. ಕ್ಲೈಮ್ಯಾಕ್ಸ್ ನ ಜೋಹರ್ ದೃಶ್ಯದಲ್ಲಿ ರಾಣಿ ದೀಪಿಕಾ, ರಾಣಿಯ ಸಹಾಯಕಿ ಅಕ್ಷತಾ ರಾವ್ ಜೊತೆ ರಜಪೂತ ಮಹಿಳೆಯರ ಅದರಲ್ಲೂ ಗರ್ಭಿಣಿ ಮಹಿಳೆಯೊಬ್ಬಳ ಆತ್ಮಾಹುತಿ ದೃಶ್ಯ ಪ್ರೇಕ್ಷಕರ ಮನ ಕಲಕುತ್ತದೆ.

ಒಟ್ಟಿನಲ್ಲಿ ಚಿತ್ರ ನೋಡಿದ ನಂತರ ಈ ಅದ್ಬುತ ಚಿತ್ರದ ಬಗ್ಗೆ ವಿವಾದ ಸೃಷ್ಟಿಸುವ ಅಗತ್ಯವಿರಲಿಲ್ಲ ಎನಿಸುವುದು ನಿಜ . ಆದರೂ ಹಲವು ರಾಜ್ಯಗಳಲ್ಲಿ ಗಲಭೆ ಎಬ್ಬಿಸಿ, ಚಿತ್ರವನ್ನು ಬ್ಯಾನ್ ಮಾಡಿಸಿ, ಮೊಸರಲ್ಲಿ ಕಲ್ಲು ಹುಡುಕಿದರು, ಕೊನೆಯದಾಗಿ ಹೇಳಬೇಕೆಂದರೆ ಚಿತ್ರ ರಜಪೂತರ ಸ್ವಾಭಿಮಾನ ಹಾಗೂ ಆತ್ಮಗೌರವ ಎತ್ತಿ ಹಿಡಿಯುತ್ತದೆ. ರಾಣಿ ಪದ್ಮಾವತಿಯ ಬಗ್ಗೆ ಇದ್ದ ಗೌರವ ಇಮ್ಮಡಿಯಾಗುತ್ತದೆ.