ಜೋರಾಗಿದೆ 'ಕನಕ'ನ ದರ್ಬಾರ್ (ಚಿತ್ರ ವಿಮರ್ಶೆ)

ಚಿತ್ರ : ಕನಕ
ನಿರ್ದೇಶನ ಮತ್ತು ನಿರ್ಮಾಣ : ಆರ್.ಚಂದ್ರು
ಸಂಗೀತ : ನವೀನ್ ಸಜ್ಜು
ಛಾಯಾಗ್ರಹಣ: ಸತ್ಯ ಹೆಗಡೆ
ತಾರಾಗಣ : ದುನಿಯಾ ವಿಜಯ್, ಹರಿಪ್ರಿಯಾ, ಮಾನ್ವಿತಾ ಹರೀಶ್, ರಂಗಾಯಣ ರಘು, ರವಿಶಂಕರ್, ಸಾಧು ಕೋಕಿಲ, ಕೆ.ಪಿ. ನಂಜುಂಡಿ, ಉಗ್ರಂ ಮಂಜು, ಕುರಿ ಪ್ರತಾಪ್, ಯುಗ ಚಂದ್ರು ಮತ್ತು ಇತರರು.
ರೇಟಿಂಗ್ 3.5/5

ಇತ್ತೀಚೆಗೆ ಬರುತ್ತಿರುವ ಬಹುತೇಕ ಚಿತ್ರಗಳಲ್ಲಿ ಮಹಾನ್ ನಟರುಗಳ ಹೆಸರುಗಳನ್ನು ಬಳಸಿಕೊಳ್ಳುತ್ತಾ ಭರ್ಜರಿ ಡೈಲಾಗ್ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಾ ಮಿಂಚುತ್ತಿರುವ ನಟರ ಸಾಲಿಗೆ ಈಗ ಕನಕ ಚಿತ್ರದ ನಾಯಕ ದುನಿಯಾ ವಿಜಯ್ ಸೇರಿಕೊಂಡಿದ್ದಾರೆ ಎನ್ನಬಹುದು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡ ನೆಲದಲ್ಲಿ ಕನ್ನಡ ಸಿನಿಮಾಗಳದ್ದೇ ಹವಾ ಇರಬೇಕು ಎಂದು ಹೇಳುವ ಡೈಲಾಗ್ ಒಂದು ಉದಾಹರಣೆಯಾದರೆ , ಈ ರೀತಿ ಡೈಲಾಗ್ಗಳ ಸುರಿಮಳೆ ಚಿತ್ರದುದ್ದಕ್ಕೂ ಕಾಣಬಹುದಾಗಿದೆ. ಉತ್ತರ ಕರ್ನಾಟಕದ ಬಂಕಾಪುರವೆಂಬ ಪಟ್ಟಣ. ಅಮವಾಸ್ಯೆಯ ದಿನ ಹುಟ್ಟಿದ ಕನಕ ಅದೇ ಕಾರಣಕ್ಕೆ ತಂದೆಯಿಂದ ತಿರಸ್ಕಾರಕ್ಕೊಳಗಾಗಿರುತ್ತಾನೆ. ಆದರೆ ಅಪ್ಪಟ ರಾಜ್ ಅಭಿಮಾನಿಯಾದ ತಾಯಿ ಪ್ರೀತಿಯ ಆಸರೆ ಆತನಿಗೆ ಹೊಸ ಶಕ್ತಿ ನೀಡುತ್ತದೆ. ತಂದೆಯ ನಿಂದನೆ ತಾಳದೆ ಕನಕ ಒಮ್ಮೆ ಮನೆಬಿಟ್ಟು ಬೆಂಗಳೂರಿಗೆ ಬರುತ್ತಾನೆ. ಅನಾಥನಾಗಿ ಕುಳಿತಿದ್ದ ಕನಕನನ್ನು ಸಿನಿಮಾ ಪೋಸ್ಟರ್ ಹಚ್ಚುತ್ತಿದ್ದ ಅಣ್ಣಪ್ಪ (ರಂಗಾಯಣ ರಘು) ನೋಡಿ ಮನೆಗೆ ಕರೆದುಕೊಂಡು ಬಂದು ಸಾಕುತ್ತಾನೆ. ಕನಕ ಬೆಂಗಳೂರಿನಲ್ಲಿ ಅಣ್ಣಪ್ಪನ ಜೊತೆಗೆ ಸೇರಿ ಸಿನಿಮಾ ಪೋಸ್ಟರ್‍ಗಳನ್ನು ಹಚ್ಚುವ ಕೆಲಸ ಮಾಡಿದ ಕನಕ ನಂತರ ಆಟೋ ಡ್ರೈವರ್ ಆಗುತ್ತಾನೆ. ಯಾರೇ ಕಷ್ಟದಲ್ಲಿದ್ದರೂ ಅವರ ಸಹಾಯಕ್ಕೆ ಕನಕ ಸದಾ ಮುಂದಿರುತ್ತಾನೆ. ಇದರ ನಡುವೆ ವೈದ್ಯ ವಿದ್ಯಾರ್ಥಿನಿಯಾದ ಕನಸು (ಮಾನ್ವಿತಾ ಹರೀಶ್) ಆತನನ್ನು ಪ್ರೀತಿಸುತ್ತಾಳೆ. ಈಕೆಯ ತಂದೆ ಕೆ.ಪಿ.ನಂಜುಂಡಿ ಬೆಳಗಾಂನ ಒಬ್ಬ ಹೋರಾಟಗಾರ. ತನ್ನ ಮಗಳನ್ನು ಕರೆದುಕೊಂಡು ಹೋಗಲು ಬೆಂಗಳೂರಿಗೆ ಬಂದಾಗ ಒಂದು ದೊಡ್ಡ ಅನಾಹುತ ನಡೆಯುತ್ತದೆ. ಅದು ಕನಕನ ಬಾಳಿಗೆ ಹೊಸ ಟ್ವಿಸ್ಟ್ ಕೊಡುತ್ತದೆ.

ಸುಮಾರು 20 ವರ್ಷಗಳ ನಂತರ 'ಕನಕ' ತನ್ನ ಹೆತ್ತವರನ್ನು ಹಾಗೂ ತನ್ನ ಸಹೋದರರನ್ನು ಕಾಣಲು ಬಂಕಾಪುರಕ್ಕೆ ಬರುತ್ತಾನೆ. ಅಲ್ಲಿ ಕನಕ, ತನ್ನನ್ನು ತಿರಸ್ಕರಿಸಿದ್ದ ತಂದೆಯ ಮನ ಗೆದ್ದು ಮತ್ತೆ ಹೇಗೆ ಆ ಮನೆ ಸೇರುತ್ತಾನೆ ಎಂಬುದನ್ನು ತೆರೆಯ ಮೇಲೆ ನೋಡಿದರೇನೇ ಚೆನ್ನ. ಈವರೆಗೆ ದುನಿಯಾ ವಿಜಯ್ ಬರೀ ಮಾಸ್ ಹೀರೋ ಆಗಿಯೇ ಮೆರೆದಿದ್ದರು. ಆದರೆ ಈ ಚಿತ್ರದಲ್ಲಿ ಮಾಸ್, ಕ್ಲಾಸ್ ಎರಡೂ ಥರದ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಆ್ಯಕ್ಟಿಂಗ್‍ವೈಸ್ ಅವರು ಯಾವ ದೃಶ್ಯದಲ್ಲಿಯೂ ಹಿಂದೆ ಬಿದ್ದಿಲ್ಲ. ಆಕ್ಷನ್, ಸೆಂಟಿಮೆಂಟ್ ಎಲ್ಲದರಲ್ಲೂ ಅವರು ನೋಡುಗರಿಗೆ ಇಷ್ಟವಾಗುತ್ತಾರೆ. ಆರಂಭದಲ್ಲಿ ಬರುವ ಮಾನ್ವಿತಾ, ನಂತರದಲ್ಲಿ ಬರುವ ಹರಿಪ್ರಿಯಾ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಆದರೆ ಹರಿಪ್ರಿಯ ಪಾತ್ರಕ್ಕೆ ಅವಕಾಶ ಕಮ್ಮಿ. ಆದರೆ ಈ ಇಬ್ಬರೂ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಉಳಿದಂತೆ, ರಂಗಾಯಣ ರಘು, ರವಿಶಂಕರ್, ಸಾಧು ಕೋಕಿಲ, ಕೆ.ಪಿ. ನಂಜುಂಡಿ, ಕುರಿ ಪ್ರತಾಪ್ ಎಲ್ಲರೂ ಅವರವರಿಗೆ ಕೊಟ್ಟಂಥ ಪಾತ್ರಗಳಿಗೆ ಜೀವ ತುಂಬಿದ್ದಾರೆ. ವರನಟ ಡಾ.ರಾಜ್‍ಕುಮಾರ್ ಅವರ ಅನೇಕ ಆದರ್ಶಗಳನ್ನು 'ಕನಕ' ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ನೋಡಿಗರನ್ನು ಭಾವನಾತ್ಮಕ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ರಾಜ್ ಅಭಿಮಾನಿಯಾಗಿ ಕನಕ ಎಲ್ಲರಿಗೂ ಇಷ್ಟ ಆಗುತ್ತಾರೆ. ವಿಶೇಷವಾಗಿ ಚಿತ್ರದಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳೂ ಮತ್ತೆ ಮತ್ತೆ ಕೇಳಬೇಕೆನಿಸುತ್ತವೆ.

ಛಾಯಾಗ್ರಾಹಕ ಸತ್ಯ ಹೆಗಡೆ ಕ್ಯಾಮೆರಾ ಕೈಚಳಕ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ನಿರ್ದೇಶಕ ಆರ್. ಚಂದ್ರು ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಬಂದಂತ ಮೂರನೇ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಇವರಿಗೆ ಮಾಸ್ ಹಾಗೂ ಕ್ಲಾಸ್ ಅಭಿಮಾನಿಗಳಿಗೆ ಯಾವ ಅಂಶ ಬೇಕು ಅವೆಲ್ಲವನ್ನು ಈ ಕನಕ ಚಿತ್ರದಲ್ಲಿ ಒದಗಿಸಿರುವುದು ವಿಶೇಷ.ಚಿತ್ರದ ಬಜೆಟ್ ಲೆಕ್ಕಿಸದೇ ಒಂದು ಉತ್ತಮ ಚಿತ್ರವನ್ನು ನೀಡುವುದರಲ್ಲಿ ಚಂದ್ರು ಸದಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಒಟ್ನಲ್ಲಿ ಒಮ್ಮೆ ಕುಟುಂಬ ಸಮೇತ ಕುಳಿತು ಕನಕ ಚಿತ್ರವನ್ನು ವೀಕ್ಷಿಸಬಹುದು.