ಬಚ್ಚನ್ ಜೊತೆ ಸೇರಿ ವಿಕಲಚೇತನ ಸಾಹಸಿಯಾಗಿ ಮೌಂಟ್ ಎವರೆಸ್ಟ್ ಏರಲಿದ್ದಾಳೆ ಕಂಗನಾ .!

ಬಾಲಿವುಡ್ ಸಿಡಿಗುಂಡು ಕಂಗನಾ ರನಾವತ್ ಹೊಸ ಪ್ರಾಜೆಕ್ಟ್‍ನಲ್ಲಿ ವಿಕಲಚೇತನ ಸಾಹಸಿಯಾಗಿ ನಟಿಸಲಿದ್ದಾಳೆ. ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ತೆರೆಕಂಡ ಸಿಮ್ರಾನ್ ಸಿನಿಮಾ ವೈಫಲ್ಯದಿಂದ ವಿಚಲಿತಳಾಗದ ಕಂಗನಾ ಝಾನ್ಸಿ ಮಹಾರಾಣಿ ಕುರಿತ ಮಣಿಕರ್ಣಿಕಾ ಸಿನಿಮಾದ ಅಂತಿಮ ಹಂತದ ಚಿತ್ರೀಕರಣದಲ್ಲಿ ನಿರತಳಾಗಿದ್ದಾಳೆ. ಈಕೆ ಕೈಯಲ್ಲಿ ಈ ವರ್ಷವೂ ಕೆಲವು ದೊಡ್ಡ ಪ್ರಾಜೆಕ್ಟ್‍ಗಳಿವೆ. ಅವುಗಳಲ್ಲಿ ಪ್ರತಿಷ್ಠಿತ ಪ್ರಾಜೆಕ್ಟ್ ಎಂದರೆ ನಿರ್ದೇಶಕ ಆರ್.ಬಲ್ಕಿ ಆ್ಯಕ್ಷನ್-ಕಟ್ ಹೇಳಲಿರುವ ಹೊಸ ಸಿನಿಮಾ. ಇದರಲ್ಲಿ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಕೂಡ ನಟಿಸಲಿದ್ದಾರೆ.

ವಿಶ್ವದ ಅತ್ಯಂತ ಎತ್ತರದ ಶಿಖರಾಗ್ರ ಮೌಂಟ್ ಎವರೆಸ್ಟ್ ನನ್ನು ಪ್ರಥಮ ಬಾರಿಗೆ ಏರಿದ ಭಾರತದ ವಿಕಲಚೇತನ ಸಾಹಸಿ ಅರುಣಿಮಾ ಸಿನ್ಹಾ ಅವರ ಜೀವನ ಸಾಧನೆಯಿಂದ ಪ್ರೇರಣೆ ಪಡೆದ ಸಿನಿಮಾ ಇದಾಗಿದೆ ಎಂದು ವರದಿಗಳು ಹೇಳುತ್ತಿವೆ. ಅರುಣಿಮಾ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ. ಬಿಗ್-ಬಿ ಆಕೆಗೆ ಮಾರ್ಗದರ್ಶನ ನೀಡುವ ಮೆಂಟರ್ ಪಾತ್ರ ನಿರ್ವಹಿಸಲಿದ್ದಾರೆ.

ಸಿನಿಮಾ ಬಗ್ಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದೆ. ಕಂಗನಾ ಮತ್ತು ಬಚ್ಚನ್ ಈ ಪ್ರಾಜೆಕ್ಟ್‍ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮುಂದಿನ ವಾರ ಹೊಸ ಪ್ರಾಜೆಕ್ಟ್‍ಗೆ ಸಹಿ ಹಾಕುವ ನಿರೀಕ್ಷೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷಾಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದೆ. ಈ ಸಿನಿಮಾದ ಪಾತ್ರಕ್ಕಾಗಿ ಕಂಗನಾ ಸಾಕಷ್ಟು ಸಿದ್ಧತೆಗಳನ್ನು ನಡೆಸಬೇಕಿದೆ. ವಿಕಲಚೇತನ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ದೇಹಭಾಷ್ಯ ಅಭ್ಯಾಸ ಮಾಡಬೇಕು. ಈ ಸಿನಿಮಾ ಬಗ್ಗೆ ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ.