'ರಾಜರಥ'ದ ಮೂಲಕ ಆರ್ಯ ಸ್ಯಾಂಡಲ್ವುಡ್ ಗೆ ಎಂಟ್ರಿ

ಅನೂಪ್ ಭಂಡಾರಿ ನಿರ್ದೇಶನದ ನಿರೂಪ್ ಭಂಡಾರಿ ನಾಯಕತ್ವದ ರಾಜರಥ ಚಿತ್ರದ ಮುಖಾಂತರ ದಕ್ಷಿಣ ಭಾರತದ ಸ್ಟಾರ್ ನಟ ಆರ್ಯ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಆರ್ಯ ಅಂದಾಗ ಬಾಲ ನಿರ್ದೇಶನದ ನಾನ್ ಕಡವುಳ್ ಚಿತ್ರದ ಭೀಕರ ಅಘೋರಿ ಪಾತ್ರ. 1947ರ ಪ್ರೇಮಕಥೆ ಮದರಾಸಿಪಟ್ನಂನ ಅಂದಿನ ಅಮರ ರ್ಪೆಈ್ಮ, ರಾಜ ರಾಣಿ ಚಿತ್ರದ ಇಂದಿನ ಪ್ರೇಮಿ ಪಾತ್ರ ನಮ್ಮ ಕಣ್ಣ ಮುಂದೆ ಬರುತ್ತದೆ. ಇದು ಆರ್ಯನ ನಟನಾ ಪರಿಪಕ್ವತೆಗೆ ಹಿಡಿದ ಕನ್ನಡಿ ಮತ್ತು ಇಂತಹ ವೈವಿಧ್ಯಮಯ ಪಾತ್ರಗಳು ಅವರಿಗೆ ದಕ್ಷಿಣ ಭಾರತದಲ್ಲಿ ತಾರಾಪಟ್ಟ ನೀಡಿದೆ ಎಂದರೆ ತಪ್ಪಾಗಲಾರದು.

ಇಂಥ ಪ್ರತಿಭಾವಂತ ನಟನ ಕನ್ನಡ ಸಿನಿ ಪಯಣ ಹೇಗೆ ಸಾಧ್ಯವಾಯಿತು ಎಂದು ಜಾಡು ಹಿಡಿದು ಹೋದಾಗ ನಮಗೆ ಸಿಗುವುದು ಕನ್ನಡ ಚಿತ್ರಗಳಿಗೆ ಅಂತರ್ರಾಷ್ಟ್ರೀಯ ಮಾರುಕಟ್ಟೆಯನ್ನು ತೆರೆದಿಟ್ಟ ಅಪೂರ್ವ ಚಿತ್ರ ರಂಗಿತರಂಗ ಮಾಡಿದ ಮೋಡಿ. ಆರ್ಯ ತುಂಬಾ ಮೆಚ್ಚಿದ ಚಿತ್ರ ಇದು. ರಂಗಿತರಂಗ ಚಿತ್ರ ಚೆನ್ನೈನಲ್ಲಿ ಬಿಡುಗಡೆಯಾದಾಗ ನೋಡಿದ ಆರ್ಯ ತಕ್ಷಣ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಸುಧಾಕರ್ ಸಾಜ ಅವರಿಗೆ ಫೋನಾಯಿಸಿ ತುಂಬು ಹೃದಯದ ಮೆಚ್ಚುಗೆಯನ್ನು ತಿಳಿಸಿದರು.
ರಾಜರಥದ ಬಹು ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡುವ ಸಂದರ್ಭದಲ್ಲಿ ಆ ಪಾತ್ರಕ್ಕೆ ಆರ್ಯ ಸೂಕ್ತ ಅನ್ನುವ ಅಭಿಪ್ರಾಯ ಮೂಡಿಬಂತು. ಕೂಡಲೇ ಅನೂಪ್ ಆರ್ಯನನ್ನು ಸಂಪರ್ಕಿಸಿದರು. ಆದರೆ ಆರ್ಯ ಆಗ ಲಂಡನ್‍ನಿಂದ ಎಡಿನ್ ಬರೋಗೆ ಹೋಗಿ ವಾಪಸ್ ಬರುವ ವಿಶ್ವಮಟ್ಟದ ಸೈಕಲ್ ಚ್ಯಾಲೆಂಜ್‍ನಲ್ಲಿ ಭಾಗವಹಿಸಿದ್ದರು. ಅಲ್ಲಿ ಸುಮಾರು 1450ಕಿ.ಮೀ. ದೂರವನ್ನು ಅವರು ಐದು ದಿನದ ಒಳಗೆ ಸೈಕಲ್ ಸವಾರಿ ಮಾಡಿ ತಲುಪುವ ಸವಾಲಿತ್ತು.

ಇದರಿಂದಾಗಿ ಅವರು ದಿನಕ್ಕೆ ಕೇವಲ ಎರಡು ಗಂಟೆ ನಿದ್ರೆ ಮತ್ತು ನಿಗದಿತ ಅವಧಿಯಲ್ಲಿ ಹದಿನೈದು ನಿಮಿಷ ರಿಫ್ರೆಷಿಂಗ್ ವಿರಾಮ ಬಿಟ್ಟರೆ ಎಡಬಿಡದೆ ಸೈಕ್ಲಿಂಗ್ ಸ್ಪರ್ಧೆಯಲ್ಲಿ ತೊಡಗಿಸಿಕೊಂಡಿದ್ದರು. ಈ ವಿರಾಮ ಸಮಯದಲ್ಲಿ ಆರ್ಯ ಅವರನ್ನು ಸಂಪರ್ಕಿಸಬೇಕಾದ ಅನಿವಾರ್ಯತೆ ನಮ್ಮದಾಗಿತ್ತು. ಯಾರ ಕರೆಯನ್ನೂ ಸ್ವೀಕರಿಸುತ್ತಿಲ್ಲವೆಂಬ ಎಚ್ಚರಿಕೆಯ ನಡುವೆ ಹಾಗೂ ಫೋನ್ ಮಾಡಿದಾಗ ಅನೂಪ್ ಹೆಸರಿಗೆ ಸ್ಪಂದಿಸಿ ಆರ್ಯ ಕರೆ ಸ್ವೀಕರಿಸಿದರು.

ಮುಂದಿನ ಐದು ನಿಮಿಷಗಳಲ್ಲಿ ಅನೂಪ್ ಕಥೆಯ ಸಾರ ಹಾಗೂ ಅವರ ಪಾತ್ರದ ವಿವರವನ್ನು ಚುಟುಕಾಗಿ ಪ್ರಸ್ತುತಪಡಿಸಿದರು. ತಕ್ಷಣ ಸ್ಪಂದಿಸಿದ ಆರ್ಯ ಪಾತ್ರ ನನಗೆ ಇಷ್ಟ ಆಗಿದೆ ಬ್ರದರ್. ನಾನು ಮಾಡ್ತೀನಿ ಎಂದು ಒಪ್ಪಿದರು. ಲಂಡನ್‍ನಿಂದ ಬಂದ ಕೂಡಲೇ ಒಪ್ಪಂದದ ವಿಷಯ ಮಾತಾಡಲು ಸಂಪರ್ಕಿಸಿದ ಕಾರ್ಯಕಾರಿ ನಿರ್ಮಾಪಕ ಸುಧಾಕರ್ ಸಾಜ ಅವರಿಗೆ ಆರ್ಯ ನಾನು ಅನೂಪ್ ಜೊತೆ ಕೆಲಸ ಮಾಡ್ಬೇಕಿತ್ತು. ಮಾಡ್ತಿದ್ದೀನಿ. ಮಿಕ್ಕಿದೆಲ್ಲ ಸೆಕೆಂಡರಿ ಎಂದು ಹೇಳಿದರು. ಅಂತಹ ದೇಹ ದಂಡಿಸುವ ಸೈಕಲ್ ಚ್ಯಾಲೆಂಜ್ ಮುಗಿಸಿ ಲಂಡನ್‍ನಿಂದ ಬಂದು ಎರಡು ದಿನದಲ್ಲೇ ಚಿತ್ರೀಕರಣದಲ್ಲಿ ಭಾಗವಹಿಸಿದರು.

ರಾಜರಥದಲ್ಲಿ ಆರ್ಯ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಅವರ ಸಹಾಯಕನ ಮಾತಲ್ಲಿ, ಅಣ್ಣ ಇತ್ತೀಚಿನ ದಿನಗಳಲ್ಲಿ ಲವರ್ ಬಾಯ್ ಪಾತ್ರಗಳನ್ನು ಹೆಚ್ಚಾಗಿ ಮಾಡುತ್ತಿದ್ದರು. ಹೆಚ್ಚಿನ ಸೀನ್‍ಗಳಲ್ಲಿ ಹೆಣ್ಣು ಮಕ್ಕಳ ದಂಡೇ ಜೊತೆಗಿರುತ್ತಿತ್ತು. ಆದರೆ ಆ ಪಾತ್ರ ಬೇರನೇ ತರ ಇದೆ. ಅವರಿಗೂ ತುಂಬಾ ಖುಷಿಯಾಗಿದೆ.

ಹೆಚ್ಚಿನವರಿಗೆ ತಿಳಿದಿರದ ವಿಷಯ ಏನೆಂದರೆ ಆರ್ಯ ಕನ್ನಡಿಗರೇ ಹೆಚ್ಚಿರುವ, ನಂತರ ಕೇರಳದ ಪಾಲಾದ ಕಾಸರಗೋಡು ಜಿಲ್ಲೆಯ ಕಾಂಗಾಡ್ ಬಳಿ ಇರುವ ತಿಕಾರಿಪುರ ಗ್ರಾಮದವರು. ಪ್ರಸ್ತುತ ಆರ್ಯ, ಸಿ.ಸುಂದರ್ ನಿರ್ದೇಶನದ ಬಹುಕೋಟಿ ವೆಚ್ಚದ ಚಾರಿತ್ರಿಕ ಚಿತ್ರ ಸಂಘಮಿತ್ರ ಮತ್ತು ಸಾಮಾಜಿಕ ಚಿತ್ರ ಸಂತಾನದೆವನ್‍ನಲ್ಲಿ ನಟಿಸುತ್ತಿದ್ದಾರೆ. ಹೀಗೆ ರಾಜರಥವೇರಿ ಆರ್ಯ ಕನ್ನಡ ಚಿತ್ರರಂಗಕ್ಕೆ ಬರಲು ಪ್ರೇರಣೆಯಾಗಿದ್ದು, ಕನ್ನಡ ಚಿತ್ರ ರಂಗಿತರಂಗ. ಬಾಕ್ಸ್ ಆಫೀಸ್‍ನಲ್ಲಿ ಸಂಚಲನ ಮೂಡಿಸಿದ ರಂಗಿತರಂಗ 2015ರಲ್ಲಿ ಆಸ್ಕರ್ ಪ್ರಶಸ್ತಿಗೆ ಶಾರ್ಟ್‍ಲಿಸ್ಟ್ ಆಗಿದ್ದೇ ಅಲ್ಲದೆ ಈ ಕೆಳಗಿನ ಪ್ರಶಸ್ತಿಗಳಿಗೆ ಭಾಜನವಾಗಿದೆ.

ಅತ್ಯುತ್ತಮ ಚಿತ್ರ ಪ್ರಶಸ್ತಿ ಸೇರಿ 8 ಐಫಾ ಪ್ರಶಸ್ತಿಗಳು, ಅತ್ಯುತ್ತಮ ಚಿತ್ರ ಪ್ರಶಸ್ತಿ ಸೇರಿ 4 ಫಿಲಂ ಫೇರ್ ಪ್ರಶಸ್ತಿಗಳು, 4 ಸೈಮಾ ಪ್ರಶಸ್ತಿಗಳು, ಕರ್ನಾಟಕ ರಾಜ್ಯ ಸರ್ಕಾರದಿಂದ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ. ಈ ಪೈಕಿ ಅನೂಪ್ ಭಂಡಾರಿ 9 ಪ್ರಶಸ್ತಿಗಳನ್ನು ಗೆದ್ದಿದ್ದರೆ ಚಿತ್ರದ ನಾಯಕ ನಿರೂಪ್ ಭಂಡಾರಿ ಉತ್ತಮ ಪ್ರಥಮ ಚಿತ್ರದ ನಾಯಕ ಪ್ರಶಸ್ತಿಗಾಗಿ ನಾಮನಿರ್ದೇಶಿತರಾಗಿದ್ದರು.

ಅನೂಪ್ ಭಂಡಾರಿ ನಿರ್ದೇಶನ ಹಾಗೂ ನಿರೂಪ್ ಭಂಡಾರಿ ನಾಯಕತ್ವದ ರಾಜರಥದಲ್ಲಿ ಆರ್ಯ ಅವರೊಂದಿಗೆ ರವಿಶಂಕರ್, ವಿನಯ ಪ್ರಸಾದ್, ಕಾರ್ತಿಕ್ ಕೊರ್ಡೇಲ್ ಮುಂತಾದವರು ತಾರಾಗಣದಲ್ಲಿದ್ದಾರೆ. ಜಾಲಿಹಿಟ್ಸ್‍ನ ಅಜಯ್ ರೆಡ್ಡಿ, ಅಂಜು ವಲ್ಲಭನೇನಿ, ವಿಶು ಡಾಕಪ್ಪಗಾರಿ ಮತ್ತು ಸತೀಶ್ ಶಾಸ್ತ್ರಿ ನಿರ್ಮಾಣದ ರಾಜರಥಕ್ಕೆ ಸಂಗೀತ, ಸಾಹಿತ್ಯ- ಅನೂಪ್ ಭಂಡಾರಿ, ಹಿನ್ನೆಲೆ ಸಂಗೀತ- ಅಜನೀಶ್ ಲೋಕನಾಥ್, ಸಂಕಲನ- ಶಾಂತಕುಮಾರ್ ಹಾಗೂ ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ.