ವೀಕೆಂಡ್ ಗೆ ಉದಯ ಟಿವಿಯಲ್ಲಿ ಭರಪೂರ ಮನರಂಜನೆ

ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬದಂದು ಉದಯ ಟಿವಿ ತಂಡ ಮೈಸೂರಿನ ಮಹಾರಾಜ ಅಂಗಳದಲ್ಲಿ ಚಿತ್ರಿಸಿದ ಗಂಧದಗುಡಿ ಸ್ಟಾರ್ ನೈಟ್ ವಿಶೇಷ ಕಾರ್ಯಕ್ರಮ ಇದೇ ಅಕ್ಟೋಬರ್ 14ರಂದು ರಾತ್ರಿ 8 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ನಾಡ ಹಬ್ಬ ದಸರಾ ಎಂದರೆ ಎಲ್ಲರಿಗೂ ವಿಶೇಷ. ನಾಡಿನಾದ್ಯಂತ ದಸರ ಹಬ್ಬವನ್ನು ನಾಡಹಬ್ಬವಾಗಿ ವಿಶೇಷವಾಗಿ ಆಚರಿಸಲಾಗುತ್ತದೆ. ಹೀಗಾಗಿ ಯಾವಾಗಲೂ ವಿಶೇಷ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸುವ, ಭರಪೂರ ಮನರಂಜನೆ ನೀಡುವ ಉದಯ ಟಿವಿ ಈಗ ಗಂಧದಗುಡಿ ಸ್ಟಾರ್ ನೈಟ್‍ನ ಮನರಂಜನೆಯನ್ನು ಬಿತ್ತರಿಸಲಿದೆ.

ಈ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಾಧೂ ಕೋಕಿಲ, ಧೃವಾ ಸರ್ಜಾ, ಚಿರು ಸರ್ಜಾ, ಹರ್ಷಿಕ, ಶರ್ಮಿಳಾ ಮಾಂಡ್ರೆ ಹಾಗೂ ಸೃಜನ್ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು. ವೇದಿಕೆಗೆ ಆಗಮಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ  ನೂತನ ತಾರಖ್ ಸಿನಿಮಾದ ಪಂಚ್ ಡೈಲಾಗ್ ಗಳನ್ನು ಹೇಳಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ನಟ ಧೃವಾ ಸರ್ಜಾ ತಮ್ಮ ಭರ್ಜರಿ ಚಿತ್ರದ ಹಾಡಿಗೆ ಡಾನ್ಸ್ ಮಾಡುವ ಮೂಲಕ ಜನರನ್ನು ರಂಜಿಸಿದರೆ, ಸೃಜನ್ ಲೋಕೇಶ್ ಹಾಗೂ ದರ್ಶನ್ ನಡುವಿನ ಭಾವನಾತ್ಮಕ ಸಂಭಾಷಣೆ ಅಭಿಮಾನಿಗಳನ್ನು ಕಣ್ಣಾಲಿಗಳನ್ನು ತೇವಗೊಳಿಸಿತ್ತು.

ಇನ್ನೂ ಕಾಮಿಡಿ ಕಿಂಗ್ ಸಾಧೂ ಕೋಕಿಲ ತಮ್ಮ ವಿಶಿಷ್ಟ ಶೈಲಿಯ ಡೈಲಾಗ್ ಗಳ ಮೂಲಕ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇದಲ್ಲದೆ ಇನ್ನೂ ಹಲವು ಕಲಾವಿದರು. ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಿರುತೆರೆಯ ಯಶಸ್ವಿ ಹಾಗೂ ಜನಪ್ರಿಯ ನಿರೂಪಕಿಯಾದ ಅನುಶ್ರೀ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ದೊಡ್ಡ ಮಟ್ಟದ ಕಾರ್ಯಕ್ರಮಗಳಲ್ಲಿ ಅನುಶ್ರೀ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಡುವಲ್ಲಿ ಯಶಸ್ವಿಯಾದರು.

ಈ ವಿಶೇಷ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಅತಿಥಿಯಾಗಿ ಆಗಮಿಸದ್ದರೆ, ಸುಮಾರು 40 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

ಸ್ಯಾಂಡಲ್‍ವುಡ್ ಸ್ಟಾರ್ ನಟ ನಟಿಯರು ಭರಪೂರ ಮನರಂಜನೆ ನೀಡಿದ “ಗಂಧದಗುಡಿ ಸ್ಟಾರ್ ನೈಟ್” ಕಾರ್ಯಕ್ರಮ ಇದೇ ಅಕ್ಟೋಬರ್ 14 ರಂದು ರಾತ್ರಿ 8 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.