'ಕೇದಾರ್‍ನಾಥ್' ಫಸ್ಟ್ ಲುಕ್‍ನಲ್ಲಿ ಸೈಫ್ ಮಗಳು ಸಾರಾ ಮಿಂಚಿಂಗ್

ಯಾವುದೇ ವಿಷಯ ಇರಲಿ ಮೊದಲ ಅನುಭವ ಮರೆಯಲಾರದ ಸಂಗತಿ. ಅದು ಯಾವಾಗಲೂ ಸ್ಮೃತಿ ಪಟಲದಲ್ಲಿ ಹಸಿರಾಗಿರುತ್ತದೆ. ಈಗ ಈ ಖುಷಿಯಲ್ಲಿದ್ದಾಳೆ ನವ ನಟಿ ಸಾರಾ ಅಲಿ ಖಾನ್ (ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಪುತ್ರಿ). ಕೇದಾರ್‍ನಾಥ್ ಸಿನಿಮಾ ಮೂಲಕ ಈ ಸ್ವೀಟ್-ಬ್ಯೂಟಿ ಬಾಲಿವುಡ್ ಅಂಗಳ ಪ್ರವೇಶಿಸುತ್ತಿದ್ದಾಳೆ. ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಬಿ-ಟೌನ್ ಗಮನ ಸೆಳೆದಿದೆ.

ಅಭಿಷೇಕ್ ಕಪೂರ್ (ಗತ್ತು) ನಿರ್ದೇಶನದ ಕೇದಾರ್‍ನಾಥ್ ಸಿನಿಮಾಗಾಗಿ ಚಿತ್ರತಂಡ ಒಂದು ತಿಂಗಳ ಕಾಲ ಪರ್ವತಮಯ ದೇವಾಲಯಗಳ ನಗರಿ ಉತ್ತರಾಖಂಡ್‍ನಲ್ಲಿ ಮೊದಲ ಭಾಗದ ಚಿತ್ರೀಕರಣ ಪೂರೈಸಿ ಮುಂಬೈಗೆ ಹಿಂದಿರುಗಿದೆ. ಶೂಟಿಂಗ್ ಸುಸೂತ್ರವಾಗಿ ಸಾಗಿರುವ ಬಗ್ಗೆ ಎಲ್ಲರೂ ಖುಷಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ನಿರ್ಮಾಪಕರು ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ.
ಉತ್ತರಖಂಡ್‍ನ ಕೇದಾರನಾಥ್‍ನ ಹಸಿರು ಹಿಮಾಚ್ಛಾದಿತ ಪರ್ವತಗಳ ಹಿನ್ನೆಲೆಯಲ್ಲಿ ಹೂವುಗಳ ಚಿತ್ತಾರ ಇರುವ ಸಲ್ವಾರ್ ಕಮೀಜ್ ಧರಿಸಿ ಕೈಯಲ್ಲಿ ನೀಲಿ ಛತ್ರಿ ಹಿಡಿದಿರುವ ಸಾರಾಳ ಫಸ್ಟ್ ಲುಕ್ ಆಕರ್ಷಕವಾಗಿದೆ.

ಕೇದಾರನಾಥ್‍ನ ತ್ರಿಯುಗಿ ನಾರಾಯಣ ದೇವಸ್ಥಾನ ಸೇರಿದಂತೆ ಪರ್ವತದ ದುರ್ಗಮ ಸ್ಥಳಗಳಲ್ಲಿ ಚಿತ್ರದ ಫಸ್ಟ್ ಷೆಡ್ಯೂಲ್ ಶೂಟಿಂಗ್ ಪೂರ್ಣಗೊಂಡಿದೆ. ಇಲ್ಲಿ ಚಿತ್ರೀಕರಣ ನಡೆಸಿದ್ದು ಪ್ರಯಾಸಕಾರಿ ಅನುಭವವಾದರೂ ನಿರೀಕ್ಷೆಯಂತೆ ಉತ್ತಮ ರೀತಿಯಲ್ಲಿ ನಡೆದಿದೆ ಎಂದು ನಿರ್ದೇಶಕ ಕಪೂರ್ ಹೇಳುತ್ತಾರೆ. ಲವ್-ರೋಮ್ಯಾನ್ಸ್ ಡ್ರಾಮವಾದ ಕೇದಾರ್‍ನಾಥ್ ಸಿನಿಮಾದ ನಾಯಕ ಸುಶಾಂತ್ ಸಿಂಗ್ ರಜಪೂತ್.