ಚಿರು, ಮೇಘನಾರಾಜ್‍ರ ಮದುವೆ ಡೇಟ್ ಫಿಕ್ಸ್...?

ವಿಷ್ಣುವರ್ಧನ್- ಭಾರತಿ, ಅಂಬರೀಷ್ - ಸುಮಲತಾ, ಅನಂತ್‍ನಾಗ್- ಗಾಯತ್ರಿ, ಯಶ್- ರಾಧಿಕಾಪಂಡಿತ್ ಹೀಗೆ ತೆರೆಯ ಮೇಲಿನ ಯಶಸ್ವಿ ಜೋಡಿಗಳು ನಿಜ ಜೀವನದಲ್ಲೂ ದಾಂಪತ್ಯ ತುಳಿದಿರುವ ಸಾಕಷ್ಟು ನಿದರ್ಶನಗಳಿವೆ. ಈಗ ಮತ್ತೊಂದು ತಾರಾ ಜೋಡಿ ಸಪ್ತಪದಿ ತುಳಿಯಲು ಸಜ್ಜುಗೊಂಡಿದೆ. ಶಕ್ತಿಪ್ರಸಾದ್‍ರ ಮೊಮ್ಮಗ ಚಿರಂಜೀವಿ ಸರ್ಜಾ ಹಾಗೂ ಪ್ರಮೀಳಾಜೋಷಾಯ್, ಸುಂದರರಾಜ್‍ರ ಪುತ್ರಿ ಮೇಘನಾರಾಜ್ ಅವರು ಡಿಸೆಂಬರ್ 6 ರಂದು ಸಪ್ತಪದಿ ತುಳಿಯಳಿದ್ದಾರಂತೆ.
ದ್ವಾರಕೀಶ್ ನಿರ್ಮಾಣದ ಆಟಗಾರ ಚಿತ್ರ ಸೆಟ್ಟೇರಿದಾಗಿನಿಂದಲೂ ಚಿರು ಹಾಗೂ ಮೇಘನಾ ಮದುವೆಯಾಗುತ್ತಾರೆ ಎಂಬ ಗಾಳಿಸುದ್ದಿಗಳು ಗಾಂಧಿನಗರದಲ್ಲಿ ಹರಿದಾಡುತ್ತಿದ್ದು , ಈಗ ಆ ಸುದ್ದಿ ನಿಜವಾಗುತ್ತಿದೆ.

ಅಂದಿನಿಂದಲೂ ಈ ಜೋಡಿ ಯಾವಾಗ ಸಪ್ತಪದಿ ತುಳಿಯುತ್ತಾರೆ ಎಂಬ ಪ್ರಶ್ನೆ ಚಿರು ಹಾಗೂ ಮೇಘನಾ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಆದರೆ ಈ ಸುದ್ದಿ ಸುಳ್ಳು ಇದಕ್ಕೆ ಯಾರು ಕಿವಿಗೊಡಬೇಡಿ ನಾವಿಬ್ಬರೂ ತುಂಬಾ ಒಳ್ಳೇ ಫ್ರೆಂಡ್ಸ್ ಅದು ಬಿಟ್ಟು ನಮ್ಮಿಬ್ಬರ ನಡುವೆ ಏನೂ ಇಲ್ಲ ಎಂದು ಇಬ್ಬರು ಹೇಳಿಕೊಂಡಿದ್ದರು.

ಆದರೆ ರೆಕ್ಕೆ ಪುಕ್ಕ ಮೂಡಿಸಿಕೊಂಡಿದ್ದ ಸುದ್ದಿ ಈಗ ಹೆಮ್ಮರದಂತಾಗಿದ್ದು ಆ ಸುದ್ದಿ ನಿಜವೆಂದು ಎರಡು ಕುಟುಂಬದವರು ಖಚಿತಪಡಿಸಿದ್ದಾರೆ. ಇದೇ ಸೆಪ್ಟೆಂಬರ್ 22 ರಂದು ಚಿರು ಹಾಗೂ ಮೇಘನಾರ ನಿಶ್ಚಿತಾರ್ಥ ನಡೆಯಲಿದ್ದು , ಡಿಸೆಂಬರ್ 6 ರಂದು ಹಸೆಮಣೆ ಏರಲಿದ್ದಾರಂತೆ.