ಕೋಪದ 'ಕಿಡಿ' ಕಾರುವ ಕಲಿ : ಚಿತ್ರ ವಿಮರ್ಶೆ

ಚಿತ್ರ : ಕಿಡಿ
ನಿರ್ಮಾಪಕರು : ನಾಗರಾಜ್, ಮಲ್ಲಿಕಾರ್ಜುನಯ್ಯ, ಧನಂಜಯ್
ನಿರ್ದೇಶಕ : ಎಸ್ ರಘು ಸಂಗೀತ : ಎಮಿಲ್ ಛಾಯಾಗ್ರಹಣ : ಬೆನಕ ರಾಜು
ತಾರಾಗಣ : ಭುವನ್ ಚಂದ್ರ, ಪಲ್ಲವಿ, ಉಗ್ರಂ ಮಂಜು, ಡ್ಯಾನಿ ಕುಟ್ಟಪ್ಪ, ಯತಿರಾಜ್ ಮುಂತಾದವರು...
ರೇಟಿಂಗ್ : 3.5/5

ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯನಿಗೂ ಕೋಪ ಬರುವುದು ಸಹಜ, ಆದರೆ ಮೂಗಿನ ತುದಿಯಲ್ಲಿ ಮೇಲೆ ಕೋಪ ಇದ್ದವರೊಂದಿಗೆ ಜೀವಿಸುವುದು ಕಷ್ಟ. ಬಹಳ ಸೂಕ್ಷ್ಮ ವಿಚಾರವನ್ನು ಎಳೆಎಳೆಯಾಗಿ ತೆರೆದಿಡುವ ಪ್ರಯತ್ನವನ್ನು ಈ ಕಿಡಿ ಚಿತ್ರತಂಡ ಮಾಡಿದೆ. ನಾಯಕ ಭುವನ್(ಭುವನ್‍ಚಂದ್ರ) ಓರ್ವ ಬ್ಯಾಂಕ್ ಉದ್ಯೋಗಿ. ಚಿಕ್ಕವನಿದ್ದಾಗಿನಿಂದಲೂ ಮೂಗಿನ ತುದಿಯಲ್ಲೇ ಕೋಪವನ್ನು ಮೈಗೂಡಿಸಿಕೊಂಡು ಬಂದ ಈತ ಮನೆಯಲ್ಲಿ ಹಾಗೂ ಬ್ಯಾಂಕ್‍ನಲ್ಲಿ ಎಲ್ಲರಿಂದಲೂ ತನ್ನ ಮುಂಗೋಪದಿಂದ ಸಿಡುಕ ಅಂತ ಹೆಸರುವಾಸಿಯಾಗಿರುತ್ತಾನೆ. ಆತನ ಸ್ವಭಾವದಿಂದ ಪತ್ನಿ(ಪಲ್ಲವಿ) ಕೂಡ ರೋಸಿ ಹೋಗಿರುತ್ತಾಳೆ.

ಒಮ್ಮೆ ತನ್ನ ಭಾಮೈದನಿಗೆ ಹೆಣ್ಣು ನೋಡಲೆಂದು ಹೋಗಲು ಅತ್ತೆ-ಮಾವ, ದಂಪತಿಗಳಿಬ್ಬರನ್ನೂ ಆಹ್ವಾನಿಸುತ್ತಾರೆ. ಆ ಕಾರಣದಿಂದ ಆಗುಂಬೆಯಲ್ಲಿರುವ ಮಾವನ ಮನೆಗೆ ಭುವನ್ ಹೊರಟಿರುತ್ತಾರೆ. ಆದರೆ ಗಂಡನ ಸಿಡುಕಿನ ನಡವಳಿಕೆಗೆ ಬೇಸತ್ತ ಪತ್ನಿ ಒಬ್ಬಳೇ ತವರಿಗೆ ಹೊರಡುತ್ತಾಳೆ. ಆದರೆ ಪತ್ನಿಯನ್ನು ಏಕಾಂಗಿಯಾಗಿ ಕಳಿಸಲು ಒಪ್ಪದ ಭುವನ್ ತಾನೂ ಹೊರಡುತ್ತಾನೆ. ಕಾರಿನಲ್ಲಿ ಹೋಗುವಾಗ ಮಾರ್ಗಮಧ್ಯೆ ಊಟಮಾಡಲೆಂದು ಡಾಬಾ ವೊಂದಕ್ಕೆ ಹೋಗುತ್ತಾರೆ. ಅಲ್ಲಿ ಒಂದಷ್ಟು ಕುತೂಹಲಕರ ತಿರುವುಗಳು, ಅನಿರೀಕ್ಷಿತ ಘಟನಾವಳಿಗಳು ನಡೆಯುತ್ತವೆ. ಚಿಕ್ಕಮಗಳೂರಿನ ಮೂಡಿಗೆರೆ ಬಳಿ ಹಾಕಿರುವ ಈ ಡಾಬಾ ಸೆಟ್‍ನಲ್ಲಿ ಚಿತ್ರೀಕರಣ ನಡೆಸಲಾಗಿದೆ.


ಮನುಷ್ಯನ ಜೀವನದಲ್ಲಿ ಎಲ್ಲಾ ಇದ್ದರೂ, ಕೆಲವೊಮ್ಮ ಏನೂ ಇಲ್ಲದ ಪರಿಸ್ಥಿತಿ ಬಂದಾಗ ಏನೆಲ್ಲಾ ನಡೆಯಬಹುದು ಎಂಬುದನ್ನು ನೈಜವಾಗಿ ಕಿಡಿ ಚಿತ್ರದಲ್ಲಿ ನಿರೂಪಿಸಲಾಗಿದೆ. ಪ್ರತಿದಿನ ನಮ್ಮ ಲೈಫ್‍ನಲ್ಲಿ ಫೇಸ್ ಮಾಡುವಂಥ ಸಣ್ಣಪುಟ್ಟ ವಿಷಯಗಳಿಗೂ ಕೋಪ ಮಾಡಿಕೊಂಡರೆ ಅದರ ಪರಿಣಾಮ ಎಷ್ಟು ಘೋರವಾಗಿರುತ್ತದೆ ಎಂದು ಮುಂಗೋಪಿ ಯುವಕನೊಬ್ಬನ ಮೂಲಕ ನಿರೂಪಿಸಲಾಗಿದೆ. ನಿರ್ದೇಶಕ ರಘುಗೆ ಇದು ಮೊದಲ ಚಿತ್ರವಾದರೂ ಎಲ್ಲೂ ಎಡವದೆ ನೀಟಾಗಿ ಚಿತ್ರವನ್ನು ತೆಗೆದುಕೊಂಡು ಹೋಗಿದ್ದಾರೆ.

ನಾಯಕನಟ ಭುವನ್ ಚಂದ್ರ ಆ್ಯಂಗ್ರಿ ಯಂಗ್‍ಮ್ಯಾನ್ ಆಗಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನು ನಾಯಕಿ ಪಲ್ಲವಿ ಇಡೀ ಚಿತ್ರದಲ್ಲಿ ಮುದ್ದು ಮುದ್ದಾಗಿ ಕಾಣುತ್ತಾರೆ.ಉಳಿದಂತೆ ಉಗ್ರಂ ಮಂಜು ಹಾಗೂ ಡ್ಯಾನಿ ಕುಟ್ಟಪ್ಪ ಖಳನಾಯಕರಾಗಿ ಗಮನ ಸೆಳೆದಿದ್ದಾರೆ. ಹಾಗೇ ಪೊಲೀಸ್ ಅಧಿಕಾರಿಯಾಗಿ ಯತಿರಾಜ್ ನ್ಯಾಯ ಒದಗಿಸಿದ್ದಾರೆ.ಎಮಿಲ್ ಅವರ ಸಂಗೀರದಲ್ಲಿ ಮೂಡಿಬಂದಿರುವ ಹಾಡುಗಳು ಪರವಾಯಿಲ್ಲ.

ಬೆನಕರಾಜು ಅವರ ಕ್ಯಾಮೆರಾ ವರ್ಕ್ ಗಮನ ಸೆಳೆಯುತ್ತದೆ. ಇನ್ನು ಈ ಚಿತ್ರಕ್ಕೆ ನಾಗರಾಜ್ , ಮಲ್ಲಿಕಾರ್ಜುನಯ್ಯ ಹಾಗೂ ಧನಂಜಯ್ ಎಂಬ ತ್ರಿವಳಿ ನಿರ್ಮಾಪಕರು ಸೇರಿ ಬಂಡವಾಳ ಹಾಕಿ ಮೊದಲಬಾರಿಗೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಈ ಚಿತ್ರ ಮೂಗಿನ ತುದಿಯಲ್ಲಿ ಕೋಪ ಇರುವಂತವರು ನೋಡಲೇ ಬೇಕು.
ಒಟ್ಟಿನಲ್ಲಿ ಎಲ್ಲರೂ ಒಮ್ಮೆ ನೋಡಬಹುದು.