'ಹುಲಿರಾಯ'ನ ಪರದಾಟ... : ಚಿತ್ರ ವಿಮರ್ಶೆ

ಚಿತ್ರ : ಹುಲಿರಾಯ
ನಿರ್ಮಾಪಕ : ಕೆ.ಎನ್. ನಾಗೇಶ್ ಕೋಗಿಲು
ನಿರ್ದೇಶಕ : ಅರವಿಂದ್ ಕೌಶಿಕ್
ಸಂಗೀತ : ಅರ್ಜುನ್ ರಾಮು ಛಾಯಾಗ್ರಹಣ : ರವಿ
ತಾರಾಗಣ : ಬಾಲು ನಾಗೇಂದ್ರ, ದಿವ್ಯಾ ಉರುಡುಗ, ಚಿರಶ್ರೀ ಅಂಚನ್, ನಾಗೇಂದ್ರ ಕುಮಾರ್ ,ಕುಲದೀಪ್ ಹಾಗೂ ಮುಂತಾದವರು... ರೇಟಿಂಗ್ : 2.5/5


ಮನುಷ್ಯನ ಜೀವನದಲ್ಲಿ ನೆಮ್ಮದಿಯ ಬದುಕು ಕಾಣುವುದು ಅಷ್ಟು ಸುಲಭದ ಮಾತಲ್ಲ... ಅದು ಕಾಡೇ ಆಗಿರಬಹುದು ಅಥವಾ ನಾಡೇ ಆಗಿರಬಹುದು. ಇಂತಹದ್ದೇ ಕಥೆಯ ಎಳೆಯನ್ನು ಇಟ್ಟುಕೊಂಡು ಮಾಡಿರುವಂಥ ಚಿತ್ರವೇ ಹುಲಿರಾಯ. ಕಾಡಿನ ನಡುವೆ ಜೀವನ ಕಟ್ಟಿಕೊಂಡ ಒಂದು ಕುಟುಂಬ. ಆ ಕುಟುಂಬದ ಒಬ್ಬನೇ ಮಗ ಸುರೇಶ(ಬಾಲು ನಾಗೇಂದ್ರ)ನಿಗೆ ಕಾಡೇ ಎಲ್ಲಾ ಆಗಿರುತ್ತದೆ. ಕಾಡಿನಲ್ಲಿ ಹುಲಿಯಂತೆ ಮೆರೆಯುತ್ತಿದ್ದ ಸುರೇಶ, ತನ್ನ ತಾಯಿ ಮತ್ತು ತಾನು ಪ್ರೀತಿಸಿದ ಹುಡುಗಿಯ ಮಾತಿಗೆ ಕಟ್ಟುಬಿದ್ದು ಕೆಲಸ ಹುಡುಕಿಕೊಂಡು ನಾಡಿ(ಬೆಂಗಳೂರಿ)ಗೆ ಬರುತ್ತಾನೆ. ಸಿಟಿ ಜೀವನವನ್ನು ಜೀರ್ಣಿಸಿಕೊಳ್ಳಲು ಆತನಿಗೆ ಕಷ್ಟವಾಗುತ್ತದೆ. ಸಿಟಿ ಜೀವನ ಸಾಕು ವಾಪಾಸು ಕಾಡಿಗೆ ಹೋಗೋಣವೆಂದರೆ, ಬಿಟ್ಟರೂ ಬಿಡದಂತೆ ಹಿಂಬಾಲಿಸುವ ಹಣದ ಅನಿವಾರ್ಯತೆ ಆ ಹುಡುಗನ ಬದುಕನ್ನು ಹೈರಾಣಾಗಿಸುತ್ತದೆ. ಈ ಎಲ್ಲಾ ಜಂಜಾಟಗಳಿಂದ ಕಾಡಿನ ಹುಲಿರಾಯ ಪಾರಾಗಿ ಹೊರಬರುತ್ತಾನಾ... ಅಥವಾ ನಗರ ಜೀವನಕ್ಕೆ ಹೊಂದಿಕೊಳ್ಳುತ್ತಾನಾ... ಎನ್ನುವುದೇ ಹುಲಿರಾಯ ಚಿತ್ರದ ಕಥಾಹಂದರ.

ಹುಲಿರಾಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಾಯಕ ನಟನಾಗಿ ಬಾಲು ನಾಗೇಂದ್ರ ಅಭಿನಯ ಗಮನ ಸೆಳೆಯುತ್ತದೆ.ಈ ಹುಲಿಯ ಕಣ್ಣಿಗೆ ಬೀಳುವ ಎರಡು ಜಿಂಕೆಗಳಾಗಿ ದಿವ್ಯ ಮತ್ತು ಚಿರಶ್ರೀ ಅಂಚನ್ ಕಾಣಿಸಿಕೊಂಡಿದ್ದಾರೆ. ಮೊದಲರ್ಧದಲ್ಲಿ ಹುಲಿ ಕೈಯಿಂದ ಬಚಾವಾಗಲು ಪ್ರಯತ್ನಿಸುವ ಜಿಂಕೆಯಾಗಿ ಚಿರಶ್ರೀ ಆಂಚನ್, ದ್ವಿತಿಯಾರ್ಧದಲ್ಲಿ ಹುಲಿಗೇ ಹುಲ್ಲು ತಿನ್ನಿಸುವ ಜಿಂಕೆಯಾಗಿ ದಿವ್ಯ ಉರುಡುಗ ಉತ್ತಮ ಅಭಿನಯ ನೀಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ಬರುವ ಇತರೆ ಕಲಾವಿದರು ತಮಗೆ ಸಿಕ್ಕ ಅವಕಾಶದಲ್ಲಿಯೇ ಉತ್ತಮ ಅಭಿನಯ ನೀಡಿದ್ದಾರೆ.

ತಾಂತ್ರಿಕವಾಗಿ ಕೂಡ ಚಿತ್ರ ಶ್ರೀಮಂತವಾಗಿ ಮೂಡಿಬಂದಿದೆ. ಅರ್ಜುನ್ ರಾಮು ಸಂಗೀತ, ರವಿ ಛಾಯಾಗ್ರಹಣ ಉತ್ತಮವಾಗಿ ಮೂಡಿಬಂದಿದೆ. ನಿರ್ದೇಶಕ ಅರವಿಂದ್ ಕೌಶಿಕ್ ಚಿತ್ರದ ಓಟವನ್ನು ಬಿಗಿ ಮಾಡಬಹುದಾಗಿತ್ತು. ಹುಲಿರಾಯನ ಅಬ್ಬರ ನಿರೀಕ್ಷೆಯ ಮಟ್ಟಕ್ಕೆ ಕಾಣದಿದ್ದರೂ, ಒಮ್ಮೆ ನೋಡುವುದಕ್ಕೆ ಅಡ್ಡಿ ಇಲ್ಲ.