ಸತ್ಯ ಅಸತ್ಯಗಳ ನಡುವಿನ "ವೈರ" : ಚಿತ್ರವಿಮರ್ಶೆ

ಚಿತ್ರ : ವೈರ
ನಿರ್ಮಾಪಕ : ಧರ್ಮಶ್ರೀ ಮಂಜುನಾಥ್
ನಿರ್ದೇಶನ : ನವರಸನ್
ಹಿನ್ನೆಲೆ ಸಂಗೀತ : ರವಿ ಬಸ್ರೂರ್
ಛಾಯಾಗ್ರಹಣ : ನಿತಿನ್
ತಾರಾಗಣ: ನವರಸನ್, ಪ್ರಿಯಾಂಕಾ ಮಲ್ನಾಡ್, ತಬಲಾ ನಾಣಿ, ಕೃಷ್ಣಮೂರ್ತಿ , ಸುಧೀರ್ ಹಾಗೂ ಮುಂತಾದವರು...
ರೇಟಿಂಗ್ : 3.5/5

ಒಂದು ಸಿನಿಮಾ ಗಮನ ಸೆಳೆಯಬೇಕಾದರೆ ಅದರ ಕಥೆಯ ಹೂರಣ ಗಟ್ಟಿಯಾಗಿರಬೇಕು, ಆಗ ಜನರನ್ನು ಸೆಳೆಯುವುದಕ್ಕೆ ಸಾಧ್ಯ. ಅಂತ ಪ್ರಯತ್ನ ಈ ವೈರ ಚಿತ್ರದಲ್ಲಿ ನಡೆದಿದೆ.
ರಾಜ್(ನವರಸನ್) ಒಬ್ಬ ಹವ್ಯಾಸಿ ಛಾಯಾಗ್ರಾಹಕ. ಸಮಾರಂಭವೊಂದರ ಫೋಟೋ ತೆಗೆಯಲೆಂದು ಆತ ಮಡಿಕೇರಿಗೆ ಬರುತ್ತಾನೆ. ಹಿಂದಿನ ದಿನವೇ ಬಂದ ಆತ ಊರ ಹೊರಗಿನ ಮನೆಯೊಂದರಲ್ಲಿ ಉಳಿದುಕೊಳ್ಳುತ್ತಾನೆ. ಪ್ರಿಯಾಂಕ(ಪ್ರಿಯಾಂಕ ಮಲ್ನಾಡ್)ಳ ಹುಟ್ಟುಹಬ್ಬದ ಸಮಾರಂಭಕ್ಕೆ ಬಂದಿದ್ದ ರಾಜ್ ಆಕಸ್ಮಿಕವಾಗಿ ಆಕೆ ರೂಂನಲ್ಲಿ ಬಟ್ಟೆ ಬದಲಿಸುವಾಗ ನೋಡಿಬಿಡುತ್ತಾನೆ.

ಅದೇ ಸಿಟ್ಟಿನಲ್ಲಿ ಪ್ರಿಯಾಂಕಳಿಂದ ಕಪಾಳಮೋಕ್ಷ ಕೂಡ ಮಾಡಿಸಿಕೊಳ್ಳುತ್ತಾನೆ. ನಂತರದಲ್ಲಿ ಪ್ರಿಯಾಂಕ ಮನೆಯಿಂದ ಕಾಣೆಯಾಗುತ್ತಾಳೆ.ಪೊಲೀಸ್ ತನಿಖೆಯ ಸಮಯದಲ್ಲಿ ರಾಜ್ ಪ್ರಕರಣದ ಹಿನ್ನೆಲೆಯಲ್ಲಿ ಆತನೇ ಆಕೆಯನ್ನು ಅಪಹರಿಸಿರಬಹುದು ಎಂಬ ಅನುಮಾನದ ಮೇಲೆ ಆತನನ್ನು ಪೊಲೀಸರು ಬಂಧಿಸುತ್ತಾರೆ. ಆತ ಉಳಿದುಕೊಂಡಿದ್ದ ದೆವ್ವದ ಮನೆಗೆ ಆತನನ್ನು ಕರೆತರುತ್ತಾರೆ. ಪೊಲೀಸರ ಒದೆ ತಾಳಲಾರದೆ ರಾಜ್ ಆಕೆಯ ಬಗ್ಗೆ ಎಲ್ಲವನ್ನೂ ಹೇಳುತ್ತಾನೆ. ಆತನ ಮಾತಿನ ಮೇಲೆ ನಂಬಿಕೆ ಬರದ ಪೊಲೀಸರಿಗೆ ಅಲ್ಲೇ ಇದ್ದ ಸಿಸಿ ಕ್ಯಾಮೆರಾ ಕಣ್ಣಿಗೆ ಬೀಳುತ್ತದೆ. ಅದರಲ್ಲಿ ರೆಕಾರ್ಡ್ ಆಗಿದ್ದನ್ನು ನೋಡಿದಾಗ ರಾಜ್ ರಾಘವನಾಗಿ ಬದಲಾದದ್ದು, ಆಕೆಯ ಕೊಲೆಯಾದದ್ದು, ಎಲ್ಲಾ ಅದರಲ್ಲಿರುತ್ತದೆ. ಅಲ್ಲಿಗೆ ಪೊಲೀಸರಿಗೆ ಇದು ದೆವ್ವದ ಕೆಲಸವೇ ಎಂದು ಕನ್‍ಫರ್ಮ್ ಆಗುತ್ತದೆ.

ನಂತರ ರಾಜ್ ದೇಹದಲ್ಲಿ ಬಂದ ರಾಘವನ ಆತ್ಮ ತಾನು ಪ್ರೀತಿಸುತ್ತಿದ್ದ ಪ್ರಿಯಾಂಕಳನ್ನು ತನ್ನಿಂದ ದೂರಮಾಡಿದ ಅಕ್ಷಯ್‍ನನ್ನು ಬರ್ಬರವಾಗಿ ಕೊಲೆಮಾಡುವುದು ಪೊಲೀಸ್ ಎದುರೇ ನಡೆಯುತ್ತದೆ. ಕೊನೆಗೆ ಪೊಲೀಸರೇ ರಾಜ್‍ನನ್ನು ನಿರಪರಾಧಿಯೆಂದು ತೀರ್ಮಾನಿಸಿ ಆತನ ಊರಿಗೆ ಕಳಿಸುತ್ತಾರೆ. ಆದರೆ ನಿಜಕ್ಕೂ ರಾಘವ ಯಾರು, ಆತನ ಆತ್ಮ ರಾಜ್ ದೇಹದಲ್ಲಿ ಬಂದಿತ್ತಾ, ಇದಕ್ಕೆಲ್ಲ ಉತ್ತರ ವೈರ ಸಿನಿಮಾದಲ್ಲಿದೆ. ನಿಮ್ಮ ಕುತೂಹಲ ತಣಿಸಿಕೊಳ್ಳಲು ಥಿಯೇಟರಿಗೆ ಹೋಗಿ ವೈರ ನೋಡಿ.


ಈ ಚಿತ್ರವನ್ನು ರಥಾವರ ಚಿತ್ರ ನಿರ್ಮಿಸಿದ ಧರ್ಮಶ್ರೀ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಹಾಗೂ ವಿತರಕನಾಗಿ ಗುರುತಿಸಿಕೊಂಡಿದ್ದ ನವರಸನ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳುವುದರ ಜೊತೆಗೆ ನಾಯಕನಾಗಿ ಗಮನ ಸೆಳೆದಿದ್ದಾರೆ. ಆಗಿದ್ದಾರೆ. ನಾಯಕಿ ಪ್ರಿಯಾಂಕ ಮಲ್ನಾಡ್ ತನಗೆ ಕೊಟ್ಟ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಚಿತ್ರದಲ್ಲಿ ರವಿಬಸ್ರೂರ್ ಅವರು ಹಿನ್ನೆಲೆ ಸಂಗೀತವನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಬಹುದಿತ್ತು.

ಹಾಡುಗಳಿಲ್ಲದೆ ಇದ್ದರೂ ಚಿತ್ರ ಕೊನೆಯ ಸೀನ್‍ವರೆಗೆ ಕುತೂಹಲ ಕಾಯ್ದುಕೊಂಡಿರುವುದು ನಿರ್ದೇಶಕರ ಜಾಣ್ಮೆಯನ್ನು ತೋರಿಸುತ್ತದೆ. ಛಾಯಾಗ್ರಾಹಕ ನಿತಿನ್ ಕೈಚಳಕ ಗಮನ ಸೆಳೆಯುತ್ತದೆ. ಉಳಿದಂತೆ ಪೊಲೀಸ್ ಕಾನ್ಸ್‍ಟೇಬಲ್ ಆಗಿ ತಬಲಾನಾಣಿ, ನಾಯಕಿಯ ತಂದೆಯಾಗಿ ಕೃಷ್ಣಮೂರ್ತಿ ಕೌತಾರ್, ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ಅವರ ಪುತ್ರ ಸುಧೀರ್ ಚಿಂಟು ಪಾತ್ರಗಳು ಗಮನಸೆಳೆಯುತ್ತದೆ. ಒಂದಷ್ಟು ಕೌತುಕ ವಿಚಾರವನ್ನು ಬಹಳ ಎಳೆಎಳೆಯಾಗಿ ಚಿತ್ರ ನಿರ್ದೇಶಕರು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ ವೀಕ್ಷಿಸುವವರಿಗೆ ಬಹಳ ಬೇಗ ಸೆಳೆಯಲಿದೆ. ಎಲ್ಲರೂ ಕೂತು ಒಮ್ಮೆ ಚಿತ್ರವನ್ನು ನೋಡಬಹುದು.