ಅರವ್‍ಗೆ ಒಲಿದ ತಮಿಳಿನ ಬಿಗ್‍ಬಾಸ್ ಪಟ್ಟ

ತಮಿಳುನಾಡಿನ ಖ್ಯಾತ ಸೂಪರ್‍ಸ್ಟಾರ್ ಕಮಲ್‍ಹಾಸನ್ ಅವರು ನಡೆಸಿಕೊಡುತ್ತಿದ್ದ ತಮಿಳು ಮೂಲದ ಬಿಗ್‍ಬಾಸ್‍ನ 1 ಸೀಸನ್ ಮುಕ್ತಾಯಗೊಂಡಿದ್ದು ಅರವ್ ಬಿಗ್‍ಬಾಸ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ. ಫೈನಲ್ಸ್‍ನಲ್ಲಿ ಗೌರಿ ವೆಂಕಟರಾಮನ್, ಹರಿಶ್, ಸ್ನೇಹಾನ್, ಯಶ್ ಅಭಿನಯದ ಕಿರಾತಕ ಚಿತ್ರದಲ್ಲಿ ನಟಿಸಿದ ಓವಿಯಾ ಅವರು ಅರವ್‍ಗೆ ತೀವ್ರ ಪೈಪೋಟಿ ನೀಡಿದರು.
ಆದರೆ ನೆರೆದಿದ್ದ ಅಭಿಮಾನಿಗಳು ಕೊನೆಯವರೆಗೂ ಓವಿಯಾನೇ ಬಿಗ್‍ಬಾಸ್ 1 ನ ವಿನ್ನರ್ ಆಗುತ್ತಾರೆ ಎಂದು ಜಯಘೋಷ ಮೊಳಗಿಸುತ್ತಿದ್ದರಾದರೂ ಅಂತಿಮವಾಗಿ ಅರವ್ ಬಿಗ್‍ಬಾಸ್ ಮುಕುಟವನ್ನು ತನ್ನದಾಗಿಸಿಕೊಂಡಿದ್ದಾರೆ.

ಮೊದಲ ಸ್ಥಾನ ಗಳಿಸಿದ ಅರವ್ ಟ್ರೋಫಿಯೊಂದಿಗೆ 50 ಲಕ್ಷದ ಬಹುಮಾನವನ್ನು ತನ್ನದಾಗಿಸಿ ಕೊಂಡರೆ, ಸ್ನೇಹಾನ್ ಹಾಗೂ ಹರೀಶ್ ಅವರು ನಂತರದ ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
ತಮಿಳು ಮೂಲದ ಬಿಗ್‍ಬಾಸ್‍ನ 1ರ ಉದ್ದಕ್ಕೂ ಕಮಲಹಾಸನ್ ಅವರು ತಮ್ಮ ರಾಜಕೀಯ ವಿಚಾರಗಳನ್ನೇ ವೈಭವೀಕರಿಸಿದಂತೆ ಫೈನಲ್ಸ್‍ನಲ್ಲೂ ಕೂಡ ರಾಜಕೀಯವನ್ನೇ ಮೆರೆದಿದ್ದಾರೆ ಎಂದು ನೆರೆದಿದ್ದವರ ಬಹುತೇಕ ಅನಿಸಿಕೆ ಆಗಿತ್ತು.