ಮುಲ್ಟಿಫ್ಲೆಕ್ಸ್ ಗಳಲ್ಲಿ ಜೋರಾಗಿದೆ 'ಸ್ಪೈಡರ್' ಹವಾ

ಕನ್ನಡ ಚಿತ್ರಗಳೆಂದರೆ ಮಲ್ಟಿಪ್ಲೆಕ್ಸ್‍ಗಳಲ್ಲಿ ಏನೋ ಒಂದು ತಾತ್ಸಾರ ಅದು ಈ ವಾರ ಬಿಡುಗಡೆಯಾಗುತ್ತಿರುವ ತಾರಕ್‍ಗೂ ತಟ್ಟಿದೆ. ಬಲು ನಿರೀಕ್ಷೆಯೊಂದಿಗೆ ಬಿಡುಗಡೆಗೊಳ್ಳಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್‍ಗೆ ಮುಲ್ಟಿಫ್ಲೆಕ್ಸ್ ಗಳಲ್ಲಿ ಅಗ್ರ ಆದ್ಯತೆ ದೊರೆಯುತ್ತದೆ ಎಂದು ಭಾವಿಸಲಾಗಿತ್ತಾದರೂ ಮಹೇಶ್‍ಬಾಬು ನಟನೆಯ ಸ್ಪೈಡರ್ ಹವಾ ಜೋರಾಗಿದೆ.

ಪ್ರಿನ್ಸ್ ಮಹೇಶ್‍ಬಾಬು ನಟನೆಯ , ಮುರುಗದಾಸ್ ನಿರ್ದೇಶನದ ಸ್ಪೈಡರ್ ಚಿತ್ರ ಬುಧವಾರ ಮತ್ತು ಗುರುವಾರ 217 ಪ್ರದರ್ಶನಗಳು ಮುಲ್ಟಿಫ್ಲೆಕ್ಸ್ ಗಳಲ್ಲಿ ಕಂಡಿದ್ದರೆ, ಶುಕ್ರವಾರದಿಂದ ತೆಲುಗು ಭಾಷೆಯ ಸ್ಪೈಡರ್‍ಗೆ 105, ತಮಿಳು ಅವತರಣಿಕೆಗೆ 35 ಹಾಗೂ ಮಲಯಾಳಂಗೆ 4 ಪ್ರದರ್ಶನಗಳನ್ನು ಮೀಸಲಿಡಲಾಗಿದೆ.

ಅಲ್ಲದೆ ಕಳೆದ ವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಜ್ಯೂ. ಎನ್.ಟಿ.ಆರ್. ಅಭಿನಯ ಜೈಲವಕುಶ ಚಿತ್ರ ಮುಲ್ಟಿಫ್ಲೆಕ್ಸ್ ಗಳಲ್ಲಿ ಇಂದು 85 ಪ್ರದರ್ಶನಗಳನ್ನು ಕಂಡರೆ, ನಾಳೆಯಿಂದ 33 ಷೋಗಳಿಗೆ ಇಳಿಸಲಾಗಿದೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರಕ್ಕೆ ಮಲ್ಟಿಪ್ಲೆಕ್ಸ್‍ಗಳಲ್ಲಿ 78 ಪ್ರದರ್ಶನಗಳು ಕಾಣುತ್ತವೆ. ಇದುವರೆಗೂ 65 ಷೋಗಳ ಪ್ರದರ್ಶನ ಕಾಣುತ್ತಿದ್ದ ಧ್ರುವಸರ್ಜಾ ಅಭಿನಯದ ಭರ್ಜರಿ ಚಿತ್ರ ನಾಳೆಯಿಂದ ಕೇವಲ 19 ಪ್ರದರ್ಶನಗಳಿಗೆ ಸೀಮಿತವಾಗಿದೆ.

ಇನ್ನು ನಾಳೆ ಬಿಡುಗಡೆಯಾಗಲಿರುವ ಮಾರುತಿ ನಿರ್ದೇಶನದ ಸರ್ವಆನಂದ್ ಅಭಿನಯದ ಮಹಾನುಭಾವುಡು ಚಿತ್ರಕ್ಕೂ 59 ಪ್ರದರ್ಶನಗಳನ್ನು ಮಲ್ಟಿಪ್ಲೆಕ್ಸ್‍ಗಳು ಮೀಸಲಿಟ್ಟಿರುವುದನ್ನು ಕಂಡರೆ ಮಲ್ಟಿಪ್ಲೆಕ್ಸ್‍ಗಳಲ್ಲಿ ಕನ್ನಡ ಭಾಷೆಗಿಂತ ಪರಭಾಷೆಯ ವ್ಯಾಮೋಹವೇ ಹೆಚ್ಚು ಎಂದೆನಿಸುತ್ತದೆ.