'ಕ್ರ್ಯಾಕ್'ನಲ್ಲಿ ಘರ್ಜಿಸಿದ ಮರಿಟೈಗರ್ **** (ಚಿತ್ರವಿಮರ್ಶೆ )

ಚಿತ್ರ: ಕ್ರ್ಯಾಕ್
ನಿರ್ಮಾಣ: ವೈ. ವಿಜಯಕುಮಾರ್ , ಶಂಕರ ಇಳಕಲ್
ನಿರ್ದೇಶನ: ಕೆ.ರಾಮ್‍ನಾರಾಯಣ್
ಸಂಗೀತ: ಶಮಿತಾ ಮಲ್ನಾಡ್, ಎಸ್.ಚಿನ್ನಾ
ಛಾಯಾಗ್ರಹಣ: ಜಬೇಜ್ ಕೆ.ಗಣೇಶ್
ತಾರಾಗಣ: ವಿನೋದ್ ಪ್ರಭಾಕರ್, ಆಕಾಂಕ್ಷ , ದತ್ತಣ್ಣ, ಅರವಿಂದ್, ಹೆಚ್.ವಾಸು,ಹಾಗೂ ಮುಂತಾದವರು
ರೇಟಿಂಗ್ : 4/5

ಸ್ಯಾಂಡಲ್ ವುಡ್ ನಲ್ಲಿ ಕ್ರೈಮ್ ಬೆಸ್ ಹಾಗೂ ಆ್ಯಕ್ಷನ್ ಕಾಪ್ ನ ಕಥಾಹಂದರದ ಚಿತ್ರ ಬೆಳ್ಳಿ ಪರದೆ ಮೇಲೆ ರಾರಾಜಿಸುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರಣಿ ಕೊಲೆಗಳ ರಹಸ್ಯವನ್ನು ಕಂಡುಹಿಡಿಯುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುತ್ತದೆ. ಎಷ್ಟೇ ತಲೆ ಕೆಡಿಸಿಕೊಂಡರೂ ಆ ಕೊಲೆಗಳ ಹಿಂದೆ ಯಾರಿದ್ದಾರೆಂಬುದನ್ನು ಬಯಲು ಮಾಡಲು ಸಾಧ್ಯವಾಗುವುದಿಲ್ಲ. ಅದನ್ನು ಕಂಡುಹಿಡಿಯಲೆಂದೇ ಕ್ರೈಮ್‍ಬ್ರ್ಯಾಂಚ್ ಎನ್‍ಕೌಂಟರ್ ಸ್ಟೆಷಲಿಸ್ಟ್ ಎನಿಸಿಕೊಂಡ ಕ್ರ್ಯಾಕ್(ವಿನೋದ್ ಪ್ರಭಾಕರ್)ಹುಬ್ಬಳ್ಳಿಯಿಂದ ಸಿಲಿಕಾನ್ ಸಿಟಿಗೆ ವರ್ಗವಾಗಿ ಬರುತ್ತಾರೆ.

ನಗರ ಪ್ರವೇಶವಾಗುತ್ತಿದ್ದಂತೆ ನಾಯಕಿ ಕಾವೇರಿ( ಆಕಾಂಕ್ಷ )ಯ ಪರಿಚಯವಾಗುತ್ತದೆ. ಹುಡುಗಾಟದಿಂದ ಆರಂಭವಾಗುವ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಬೆಂಗಳೂರಿನಲ್ಲಿ ನಡೆಯುವ ಕೊಲೆಗಳಿಗೂ ಚೆನ್ನೈನಲ್ಲಿರುವ ಸುಪಾರಿ ಹಂತಕರಿಗೂ ಏನೋ ಸಂಬಂಧವಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್‍ಪೆಕ್ಟರ್ ವಿನೋದ್ ಪ್ರಭಾಕರ್ ಪ್ರಕರಣದ ತನಿಖೆಗಾಗಿ ಚೆನ್ನೈಗೆ ತೆರಳುತ್ತಾನೆ. ಅದೇ ಸಮಯದಲ್ಲಿ ಕಾವೇರಿ ತನ್ನ ಸ್ನೇಹಿತೆಯ ಮದುವೆಗೆಂದು ಚೆನ್ನೈಗೆ ತೆರಳಿರುತ್ತಾಳೆ. ಆಕೆಯನ್ನು ಸೇಫಾಗಿ ಬೆಂಗಳೂರಿಗೆ ಕರೆತರುವ ಜವಾಬ್ದಾರಿಯೂ ವಿನೋದ್ ಮೇಲೆ ಬೀಳುತ್ತದೆ. ಆ ಕೊಲೆಗಳನ್ನು ಮಾಡುತ್ತಿರುವವರು ಯಾರು, ಅದರ ಹಿಂದೆ ಯಾರ್ಯಾರಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಾ ಹೋದಂತೆ ನಾಯಕನಿಗೆ ಮತ್ತೊಂದು ಕೊಲೆ ಪ್ರಕರಣದ ಸುಳಿವು ಸಿಗುತ್ತದೆ. ಆ ಕೊಲೆಯನ್ನು ಮಾಡಿಸಿದ ಪ್ರಭಾವೀ ವ್ಯಕ್ತಿಯ ಬಗ್ಗೆಯೂ ತಿಳಿಯುತ್ತದೆ. ಆದರೆ ಸರಣಿ ಕೊಲೆಗಳನ್ನು ಮಾಡಿಸುತ್ತಿರುವವರು ಯಾರು, ಏಕೆ ಅಷ್ಟೊಂದು ಜನರನ್ನು ಹತ್ಯೆ ಮಾಡುತ್ತಿದ್ದಾರೆ ಎಂಬುದನ್ನು ಕಂಡುಹಿಡಿದು, ಕಾವೇರಿಯನ್ನು ನಾಯಕ ಕರ್ನಾಟಕಕ್ಕೆ ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾದನೇ ಎಂಬುದನ್ನು ತಿಳಿದುಕೊಳ್ಳಲು ಒಮ್ಮೆ ಥಿಯೇಟರಿಗೆ ಹೋಗಿ ಕ್ರ್ಯಾಕ್ ಚಲನಚಿತ್ರವನ್ನು ವೀಕ್ಷಿಸಿದರೇ ಚೆನ್ನ.

ಚಿತ್ರದ ಕೆಲವೊಮದು ಸೀನ್‍ಗಳಲ್ಲಿ ನಾಯಕನಟ ವಿನೋದ್ ಪ್ರಭಾಕರ್ ಅವರು ಟೈಗರ್ ಪ್ರಭಾಕರ್ ಅವರಂತೆಯೇ ಕಾಣುತ್ತಾರೆ. ಈ ಹಿಂದೆ ಟೈಸನ್ ಚಿತ್ರದ ಹಿಟ್ ಕಾಬಿನೇಷನ್ ಎನಿಸಿಕೊಂಡಿದ್ದ ವಿನೋದ್ ಪ್ರಭಾಕರ್ ಹಾಗೂ ನಿರ್ದೇಶಕ ರಾಮ್‍ನಾರಾಯಣ್ ಜೋಡಿ ಕ್ರ್ಯಾಕ್ ಚಿತ್ರದಲ್ಲಿ ಮತ್ತೊಮ್ಮೆ ಕನ್ನಡ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ವಿ. ಆನಂದಪ್ರಿಯ ಅವರ ಚುರುಕಾದ ಸಂಭಾಷಣೆಗಳು ಚಿತ್ರಕಥೆಯ ಓಟಕ್ಕೆ ಪೂರಕವಾಗಿ ಮೂಡಿಬಂದಿವೆ. ಚಿತ್ರದಲ್ಲಿ ಮೂಡಿಬಂದಿರುವ ಆ್ಯಕ್ಷನ್ ದೃಷ್ಯಗಳು ಮಾಸ್ ಪ್ರಿಯರನ್ನು ಸೆಳೆಯುತ್ತವೆ.

ವಿಜಯ್ ಸಿನಿಮಾಸ್ ಮೂಲಕ ಗಾಂಧಿನಗರದಲ್ಲಿ ವಿತರಕನಾಗಿ ಗುರುತಿಸಿಕೊಂಡಿರುವ ವಿಜಯ್‍ಕುಮಾರ್ ತಮ್ಮ ಸ್ನೇಹಿತ ಶಂಕರ್ ಇಳಕಲ್ ಅವರ ಜೊತೆ ಸೇರಿ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕರೂ ಆಗಿದ್ದಾರೆ. ನಾಯಕಿ ಆಕಾಂಕ್ಷ ಕಾವೇರಿ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಚಿತ್ರದ ದ್ವಿತೀಯಾರ್ಧದ ಕಥೆ ನಡೆಯುವುದು ಅಕೆಯ ಪಾತ್ರದ ಮೇಲೆಯೇ. ಡಾ.ಶಮಿತಾ ಮಲ್ನಾಡ್ ಹಾಗೂ ಎಸ್.ಚಿನ್ನ ಅವರ ಸಂಗೀತ ಸಂಯೋಜನೆಯ ಹಾಡುಗಳು ಇಷ್ಟವಾಗುತ್ತದೆ. ಅದರಲ್ಲೂ ಶರಣ್ ಹಾಡಿರುವ ಕಾವೇರಿ ಸೋ ಸಾರಿ ಹಾಡಂತೂ ಪ್ರೇಕ್ಷಕರು ಥಿಯೇಟರಿನಿಂದ ಹೊರಬಂದ ನಂತರವೂ ಮನದಲ್ಲಿ ಉಳಿಯುವಂತಿದೆ. ವಿನೋದ್ ಪ್ರಭಾಕರ್‍ಗಿರುವ ಮಾಸ್ ಆಡಿಯನ್ಸ್‍ಗಂತೂ ಈ ಚಿತ್ರ ಹಬ್ಬವನ್ನುಂಟುಮಾಡುತ್ತದೆ. ಈ ಕ್ರ್ಯಾಕ್ ಚಿತ್ರ ಮಾಸ್ ಹಾಗೂ ಕ್ಲಾಸ್ ಆಡಿಯನ್ಸ್ ಇಬ್ಬರು ಒಮ್ಮೆ ನೋಡಬಹುದು.