ಪ್ರೇಕ್ಷಕರಿಗೆ 'ಭರ್ಜರಿ' ಬಂಪರ್ **** ( ಚಿತ್ರವಿಮರ್ಶೆ )

ಚಿತ್ರ : ಭರ್ಜರಿ
ನಿರ್ಮಾಣ: ಆರ್.ಶ್ರೀನಿವಾಸ್
ನಿರ್ದೇಶನ: ಚೇತನ್ ಕುಮಾರ್
ಸಂಗೀತ: ವಿ.ಹರಿಕೃಷ್ಣ
ಛಾಯಾಗ್ರಹಣ: ಶ್ರೀಶ ಕೂದುವಳ್ಳಿ,
ತಾರಾಗಣ: ಧ್ರುವ ಸರ್ಜಾ, ರಚಿತಾ ರಾಮ್, ಹರಿಪ್ರಿಯಾ, ವೈಶಾಲಿ ದೀಪಕ್, ತಾರಾ, ಸುಚೇಂದ್ರ ಪ್ರಸಾದ್, ಶ್ರೀನಿವಾಸ ಮೂರ್ತಿ, ಅವಿನಾಶ್, ರಂಗಾಯಣ ರಘು ಹಾಗೂ ಮುಂತಾದವರು...

ನಿರೀಕ್ಷೆಯಂತೆ ಬಿಡುಗಡೆಗೊಂಡ ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರ ಅದ್ಧೂರಿ ಪ್ರದರ್ಶನಗೊಳ್ಳುವ ಮೂಲಕ ಪ್ರೇಕ್ಷಕರ ಮನವನ್ನು ಗೆದ್ದಿದೆ. ಆಸೆ ಕನಸು ಹಾಗೂ ವಯಸ್ಸಿನ ಸುತ್ತ ಗಿರಕಿ ಹೊಡೆಯುವ ಒಂದು ರೊಮ್ಯಾಂಟಿಕ್ ಆ್ಯಂಗ್ರಿ ಯಂಗ್ ಮ್ಯಾನ್ ನ ಕಥೆಯನ್ನು ಬಹಳ ವಿಭಿನ್ನವಾಗಿ ಸೆರೆಹಿಡಿದಿದೆ ಚಿತ್ರತಂಡ. ಬಾಲ್ಯದಲ್ಲಿ ಹುಡುಗ ಸೂರ್ಯ (ದ್ರುವ ಸರ್ಜಾ)ನಿಗೆ ಸೈನಿಕನಾಗಬೇಕು ಅನಿಸಿದರೆ, ಇನ್ನು ಸ್ವಲ್ಪ ದೊಡ್ಡವನಾದ ನಂತರ ಡಾಕ್ಟರ್ ಆಗಬೇಕು ಅನಿಸುತ್ತದೆ. ಆ ನಂತರ ಲಾಯರ್ ಆಗ್ಬೇಕು.., ಅದಾದ ನಂತರ ಫೈಟರ್ ಆಗ್ಬೇಕು..., ಹೀಗೆ ಹುಡುಗನೊಬ್ಬನ ಕನಸುಗಳು ವಯಸ್ಸಿನಿಂದ ವಯಸ್ಸಿಗೆ ಬದಲಾಗುತ್ತಾ ಸರ್‍ಪ್ರೈಸ್ ಕೊಡುತ್ತಾ ಲೋಕಲ್ ಲೀಡರ್‍ನನ್ನಾಗಿ ಮಾಡುತ್ತದೆ.

ಇಂಥ ಹುಡುಗ ಒಮ್ಮೆ `ತಂದೆ' ಆಗ್ಬೇಕು ಎನ್ನುವ ಆಸೆಯಾಗುತ್ತದೆ. ಹೇಗಾದ್ರೂ ಸರಿ ತನಗೊಪ್ಪುವ ಹುಡುಗಿಯನ್ನು ಪ್ರೀತಿಸಿ ಮದುವೆ ಆಗ್ಬೇಕೆನ್ನುವ ಸೂರ್ಯನಿಗೆ `ಡಿಂಪಲ್' ಹುಡುಗಿ ಗೌರಿ (ರಚಿತಾ ರಾಮ್) ಕಣ್ಣಿಗೆ ಬೀಳುತ್ತಾಳೆ. `ಡಿಂಪಲ್' ಹುಡುಗಿಯರ ಸಹವಾಸ ಬೇಡವೆಂದರೂ, ಸೂರ್ಯನಿಗೆ ಗೌರಿ ಮೇಲೆ ಲವ್ ಆಗುತ್ತೆ. ಹುಡುಗಿಯೂ ಒಪ್ಪುತ್ತಾಳೆ, ಇಬ್ಬರ ಮನೆಯವರೂ ಒಪ್ಪುತ್ತಾರೆ. ನಿಶ್ಚಿತಾರ್ಥ ಕೂಡ ನಡೆಯುತ್ತದೆ. ಗೌರಿಯ ಕಾಲ್ಗುಣವೆಂಬಂತೆ ಖಾಲಿ ಕೈಯಲ್ಲಿದ್ದ ಹುಡುಗನಿಗೆ ಸೋಲ್ಡಜರ್ ಕೆಲಸ ಕೂಡ ಸಿಗುತ್ತದೆ.

ಇನ್ನೇನು ಎಲ್ಲವೂ ಸರಿ ಹೋಯಿತಲ್ಲ, ಎನ್ನುವಾಗಲೇ ಟ್ರೈನಲ್ಲಿ ಎಂಟ್ರಿಕೊಡುವ ಹಾಸಿನಿ (ಹರಿಪ್ರಿಯಾ) ಸೂರ್ಯನ ಗುರಿಯ ದಿಕ್ಕನ್ನು ಬದಲಾಯಿಸಿ ಮತ್ತೊಂದ ಕಡೆಗೆ ಕರೆದುಕೊಂಡು ಹೋಗುತ್ತಾಳೆ. ದೇಶ ಕಾಯಬೇಕೆಂದಿದ್ದ ಸೂರ್ಯ, ಹಾಸಿನಿ ಜೊತೆಗೆ `ಸಿಂಹದಟ್ಟಿ'ಗೆ ಕಾಲಿಡುತ್ತಾನೆ. ಹಾಗಾದ್ರೆ, ಈ ಹಾಸಿನಿ ಯಾರು...? ಅವಳೇಕೆ ಸೂರ್ಯನ ಹಿಂದೆ ಬೀಳುತ್ತಾಳೆ..? ಅವಳಿಗೂ ಸೂರ್ಯನಿಗೂ ಏನು ಸಂಬಂಧ..? `ಸಿಂಹದಟ್ಟಿ' ಸೂರ್ಯನ ನಡುವಿನ ವೃತ್ತಾಂತವೇನು..? ಅಂತಿಮವಾಗಿ ತಾನು ಏನು ಆಗಬೇಕು ಎಂಬುದು ಸ್ಪಷ್ಟವಾಗುವ ಹೊತ್ತಿಗೆ ಸೂರ್ಯನ ಕಥೆ ಏನಾಗಿರುತ್ತದೆ..? ಎಂಬುದನ್ನು ತಿಳಿಯಬೇಕಾದರೆ, ಭರ್ಜರಿ ಎಂಬ ಲವ್ ಕಂ ಆ್ಯಕ್ಷನ್ ಕಹಾನಿಯನ್ನು ಥಿಯೇಟರ್‍ನಲ್ಲಿಯೇ ನೋಡಬೇಕು.

ಈ ಚಿತ್ರದಲ್ಲಿ ಡೈಲಾಗ್ ಗಳ ಸುರಿಮಳೆ ಹರಿದಿದೆ, ಕೆಲವರು ಹೊಡದ್ರೆ ಮಾಸ್ ಆಗಿರತ್ತೆ, ಇನ್ನು ಕೆಲವರು ಹೊಡದ್ರೆ ಕ್ಲಾಸ್ ಆಗಿರತ್ತೆ, ಮತ್ತೆ ಕೆಲವರು ಹೊಡದ್ರೆ ಕಾಮಿಡಿಯಾಗಿರತ್ತೆ... ನಾನ್ ಹೊಡದ್ರೆ... ಯಾವಾಗ್ಲೂ ಭರ್ಜರಿ ಆಗಿರತ್ತೆ...' ಹೀಗೆ ಮಾಸ್ ಡೈಲಾಗ್‍ಗಳ ಮೂಲಕ ನಟ ಧ್ರುವ ಸರ್ಜಾ ರ ಡೈಲಾಗ್ ಡೆಲಿವರಿ, ಡ್ಯಾನ್ಸ್, ಫೈಟ್ಸ್ ಒಟ್ಟಾರೆ ಅಭಿನಯ ಎಲ್ಲದರಲ್ಲೂ ಪರ್ಫಾಮೆನ್ಸ್ `ಭರ್ಜರಿ' ಆಗಿಯೇ ಕಣುತ್ತದೆ. ದ್ವಿತೀಯಾರ್ಧದಲ್ಲಿ ಚಿಕ್ಕಪಾತ್ರವಾದರೂ ವೈಶಾಲಿ ದೀಪಕ್ ಅತ್ಯುತ್ತಮ ಅಭಿನಯ ನೀಡಿದ್ದಾರೆ. ಉಳಿದಂತೆ ತಾರಾ, ಸುಚೇಂದ್ರ ಪ್ರಸಾದ್, ರಂಗಾಯಣ ರಘು, ಶ್ರೀನಿವಾಸ್ ಮೂರ್ತಿ, ಸಾಯಿ ಕುಮಾರ್, ಅವಿನಾಶ್ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ನಿರ್ಮಾಪಕ ಆರ್. ಶ್ರೀನಿವಾಸ್ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಉತ್ತಮ ಛಾಯಾಗ್ರಹಣ, ಪೂರಕ ಸಂಗೀತ, ಕಮರ್ಷಿಯಲ್ ಸಿನಿಮಾವೊಂದಕ್ಕೆ ಏನೆಲ್ಲಾ ಬೇಕೋ ಅದೆಲ್ಲವನ್ನು ಬಹಳ ಅಚ್ಚುಕಟ್ಟಾಗಿ ನೀಡಿದ್ದಾರೆ ಯುವ ನಿರ್ದೇಶಕ ಚೇತನ್ ಕುಮಾರ್.ಅದ್ದೂರಿ, ಬಹದ್ದೂರ್ ಚಿತ್ರಗಳ ನಂತರ ಧ್ರುವ ಸರ್ಜಾ ಈಗ ಭರ್ಜರಿ ಚಿತ್ರದ ಮೂಲಕ ಹ್ಯಾಟ್ರಿಕ್ ಬಾರಿಸಲು ಸಿದ್ಧರಾಗಿದ್ದಾರೆ ಎನ್ನಬಹುದು.