ಮಲೆಯಾಳಂ ಖ್ಯಾತ ನಟ ದಿಲೀಪ್‍ ಗೆ ಜೈಲೇ ಗತಿ

ದಕ್ಷಿಣ ಭಾರತದ ಖ್ಯಾತ ನಟಿಯ ಅಪಹರಣ ಮತ್ತು ಲೈಂಗಿಕ ಕಿರುಕುಳ ಸಂಚು ಪ್ರಕರಣದಲ್ಲಿ ಬಂಧಿತನಾಗಿರುವ ಮಲೆಯಾಳಂ ಖ್ಯಾತ ನಟ ದಿಲೀಪ್‍ಗೆ ಕೇರಳ ಹೈಕೋರ್ಟ್ ಇಂದು ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಈ ತೀರ್ಪಿನೊಂದಿಗೆ ಪ್ರಸಿದ್ಧ ಅಭಿನೇತ್ರನ ಕೊರಳಿಗೆ ಸುತ್ತಿಕೊಂಡಿರುವ ಕಾನೂನು ಉರುಳು ಮತ್ತಷ್ಟು ಬಿಗಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹರಾದ ಲಕೋಟೆಯಲ್ಲಿ ಪ್ರಾಸಿಕ್ಯೂಷನ್‍ನಿಂದ ದಿಲೀಪ್ ವಿರುದ್ಧ ಸಲ್ಲಿಸಿದ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ ನ್ಯಾಯಮೂರ್ತಿ ಸುನಿಲ್ ಥಾಮಸ್, ನಟನ ಜಾಮೀನು ಅರ್ಜಿಯನ್ನು ತಳ್ಳಿ ಹಾಕಿದರು. ಈ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ.ಹಾಗೂ ಸನ್ನಿವೇಶದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ. ಹೀಗಾಗಿ ಜಾಮೀನು ಅರ್ಜಿಯನ್ನು ನಿರಾಕರಿಸುವುದಾಗಿ ನ್ಯಾಯಮೂರ್ತಿ ಹೇಳಿದರು.

ನಟ ಅತ್ಯಂತ ಪ್ರಭಾವಿಯಾಗಿದ್ದು, ಆತನಿಗೆ ಜಾಮೀನು ನೀಡಿದ್ದೇ ಆದರೆ ಸಾಕ್ಷ್ಯಾಧಾರಗಳು ಮತ್ತು ಪುರಾವೆಗಳನ್ನು ವಿರೂಪಗೊಳಿಸಬಹುದು ಹಾಗೂ ಸಾಕ್ಷಿದಾರರ ಮೇಲೆ ಒತ್ತಡ ಹೇರಬಹುದು ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಾಲಯ ಮಾನ್ಯ ಮಾಡಿದೆ. ಜುಲೈ 10ರಂದು ಬಂಧಿತನಾದ ನಂತರ ದಿಲೀಪ್ ಜಾಮೀನು ಅರ್ಜಿ ತಿರಸ್ಕøತವಾಗಿರುವುದು ಇದು ಎರಡನೇ ಬಾರಿ. ಜುಲೈ 24ರಂದು ಸಹ ಇದೇ ಕಾರಣಕ್ಕಾಗಿ ಕೊಚ್ಚಿಯ ನ್ಯಾಯಾಲಯವೊಂದು ನಟನ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

ಫೆಬ್ರವರಿಯಲ್ಲಿ ದಕ್ಷಿಣ ಭಾರತದ ಖ್ಯಾತ ನಟಿಯನ್ನು ದಿಲೀಪ್ ತನ್ನ ಸಹಚರ ಸುನಿಲ್‍ರಾಜ್ ಅಲಿಯಾಸ್ ಅಪ್ಪುಣ್ಣಿ ಮತ್ತು ಬೆಂಬಲಿಗರ ಮೂಲಕ ಕಾರಿನಲ್ಲಿ ಅಪಹರಿಸಿ ಲೈಂಗಿಕ ಕಿರುಕುಳ ನೀಡಲು ತಿಳಿಸಿದ್ದ. ಅದರಂತೆ ನಡೆದ ಈ ಕೃತ್ಯ ಮಲೆಯಾಳಂ ಚಿತ್ರೋದ್ಯಮದಲ್ಲಿ ದೊಡ್ಡ ಬಿರುಗಾಳೆಯನ್ನೇ ಎಬ್ಬಿಸಿತು. ತನ್ನ ಮೊದಲ ದಾಂಪತ್ಯ ಜೀವನ ಬಿರುಕು ಬಿಡಲು ಈ ನಟಿಯೇ ಕಾರಣ ಎಂಬ ದ್ವೇಷಕ್ಕಾಗಿ ದಿಲೀಪ್ ಈ ಸಂಚು ರೂಪಿಸಿದ್ದ. ಬಂಧಿತನಾಗಿರುವ ಸುನಿಲ್‍ಗೂ ಹೈಕೋರ್ಟ್ ಈಗಾಗಲೇ ಜಾಮೀನು ನಿರಾಕರಿಸಿದೆ.