Cinisuddi Fresh Cini News 

21 ಮಿಲಿಯನ್ ದಾಟಿದ “ಪೊಗರು” ಚಿತ್ರದ ಖರಾಬು ಸಾಂಗ್

ಸ್ಯಾಂಡಲ್ ವುಡ್ ನಲ್ಲಿ ತನ್ನ ಮೊದಲ ಚಿತ್ರದಿಂದ ಇಲ್ಲಿವರೆಗೂ ಬಹಳಷ್ಟು ಸದ್ದನ್ನು ಮಾಡುತ್ತಾ ಯಶಸ್ವಿ ನಾಯಕ ಎಂದು ಗುರುತಿಸಿಕೊಂಡಿರುವ ನಟ ಧ್ರುವ ಸರ್ಜಾ. ಈ ಆ್ಯಕ್ಷನ್ ಪ್ರಿನ್ಸ್ ಅಭಿನಯದ ಪೊಗರು ಚಿತ್ರದ ಖರಾಬು ಸಾಂಗು ಈಗ ಇಪ್ಪತ್ತೊಂದು ಮಿಲಿಯನ್ ದಾಟಿ ಮುಂದೆ ಸಾಗುತ್ತಿದೆ.

ನಂದ ಕಿಶೋರ್ ನಿರ್ದೇಶನದ ‘ಪೊಗರು’ ಚಿತ್ರದ ಖರಾಬು ಹಾಡಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಬಿ.ಕೆ. ಗಂಗಾಧರ್ ನಿರ್ಮಾಣದಲ್ಲಿ ಸಿದ್ಧವಾಗುತ್ತಿರುವ ಈ ಖರಾಬು ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ 21 ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದಿದೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರದ ಹಾಡೊಂದಕ್ಕೆ ಯೂಟ್ಯೂಬ್‌ನಲ್ಲಿ ಸಿಕ್ಕ ಬಹುದೊಡ್ಡ ಹಿಟ್ ಎನ್ನಬಹುದು. ಈ ಖುಷಿಯಲ್ಲಿರುವ ಚಿತ್ರ ತಂಡವು ಮತ್ತೊಂದು ಪ್ಲಾನ್ ಮಾಡಿದೆ. ಧ್ರುವ ಸರ್ಜಾ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಪ್ರೀತಿಸುವಂತೆ ಪೀಡಿಸುವ ದೃಶ್ಯಗಳಿವೆ,

ಆನಂದ್ ಆಡಿಯೋ ಬಿಡುಗಡೆ ಮಾಡಿರುವ ಈ ಹಾಡು ವೈರಲ್ ಆಗಿದೆ. ಚಂದನ್ ಶೆಟ್ಟಿ ಸಂಗೀತ ನೀಡಿರುವ ಈ ಹಾಡು ಬಹಳಷ್ಟು ನಿರೀಕ್ಷೆಯನ್ನ ಮೂಡಿಸಿದೆ. ಈ ಕಾರಣದಿಂದ ಈ ಹಾಡಿನ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಲು ನಿರ್ದೇಶಕ ನಂದಕಿಶೋರ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಪೊಗರು ಚಿತ್ರದಲ್ಲಿ ನಾಯಕನ ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣ ಬಾಕಿ ಉಳಿದಿದ್ದು, ನಿಗದಿಯಾದಂತೆ ನಡೆದಿದ್ದರೆ ಈ ವೇಳೆಗೆ ಪೊಗರು ಚಿತ್ರಮಂದಿರಕ್ಕೆ ಬರುತ್ತಿತ್ತು. ಆದರೆ ಕೊರೋನಾ ವೈರಸ್ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು.

ಸದ್ಯಕ್ಕೆ ಸಿನಿಮಾದ ಎರಡನೆಯ ಭಾಗದ ಹಿನ್ನೆಲೆ ಸಂಗೀತ ನೀಡುವ ಕಾರ್ಯ ನಡೆಯುತ್ತಿದೆ. ಚಿತ್ರದ ಹಾಡುಗಳಿಗೆ ಸಂಗೀತ ನೀಡಿರುವ ಚಂದನ್ ಶೆಟ್ಟಿ ಮತ್ತು ವಿ. ಹರಿಕೃಷ್ಣ ಹಿನ್ನೆಲೆ ಸಂಗೀತ ನೀಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ಮಯೂರಿ, ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್ ಮುಂತಾದವರು ಚಿತ್ರದಲ್ಲಿದ್ದಾರೆ. ಲಾಕ್​ಡೌನ್​ ಮುಗಿದು ಸುಧಾರಿಸಿದ ಮೇಲೆ ಚಿತ್ರವನ್ನು ಅದ್ಧೂರಿ ಪ್ರಚಾರದ ಮೂಲಕ ಬೆಳ್ಳಿ ಪರದೆ ಮೇಲೆ ತರಲು ಪೊಗರು ತಂಡ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.

Share This With Your Friends

Related posts