Cinisuddi Fresh Cini News 

“ಪಿಂಕ್ ನೋಟ್” ಚಿತ್ರಕ್ಕೆ ಚಾಲನೆ ನೀಡಿದ ಶರಣರು

ಜೀವನ ನಡೆಸುವುದಕ್ಕೆ ದುಡ್ಡು ಬಹಳ ಮುಖ್ಯ. ಆದರೆ ದುಡ್ಡಿನ ವ್ಯಾಮೋಹಕ್ಕೆ ಬಿದ್ದಾಗ ಅದರಿಂದ ಆಗುವ ಏರುಪೇರುಗಳನ್ನು ಎದುರಿಸುವುದು ಸುಲಭವಲ್ಲ. ಅದೇನೇ ಇರಲಿ ಇತ್ತೀಚಿಗೆ ನೋಟಿನ ವಿಚಾರ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಅದರಲ್ಲಿ ಬಣ್ಣ ಬಣ್ಣದ ನೋಟುಗಳು ಕೂಡ ಹೊರಬಂದವು. ಎರಡು ಸಾವಿರದ ನೋಟು ಗುಲಾಬಿ ಬಣ್ಣದಲ್ಲಿ ಬಂದಿರುವುದು ಎಲ್ಲರಿಗೂ ತಿಳಿದೇ ಇದೆ.

ಅದನ್ನ ಇಂಗ್ಲಿಷ್ ನಲ್ಲಿ ಪಿಂಕ್ ನೋಟ್ ಎಂದು ಕೂಡ ಕರೆಯುತ್ತಾರೆ. ಈಗ ಇದೇ “ಪಿಂಕ್ ನೋಟ್” ಎಂಬ ಶೀರ್ಷಿಕೆಯೊಂದಿಗೆ ನೂತನ ಚಿತ್ರವೊಂದು ಶುಭಾರಂಭವಾಗಿದೆ. ರಾಜರಾಜೇಶ್ವರಿ ನಗರದ ಗುಡ್ಡದ ಮೇಲಿರುವ ಶೃಂಗಗಿರಿ ಶ್ರೀಷಣ್ಮುಖ ಸ್ವಾಮಿ ದೇವಸ್ಥಾನದಲ್ಲಿ ಪಿಂಕ್ ನೋಟ್ ಚಿತ್ರದ ಮುಹೂರ್ತ ಸಮಾರಂಭ ನೆರೆವೇರಿದ್ದು , ಡಾ.ಶ್ರೀ ಶಿವಮೂರ್ತಿ ಮುರಘಾ ಶರಣರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ದಾವಣಗೆರೆ ಮೂಲದ ರಾಜಕೀಯ ಧುರೀಣ ಹೆಚ್.ಆನಂದಪ್ಪ ಅವರು ಅಮ್ಮ ಎಂಟರ್‌ಟೈನ್‌ಮೆಂಟ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ದಿಗಂತ್ ಚಿತ್ರವನ್ನ ನಿರ್ದೇಶನ ಮಾಡಿದಂತಹ
ರುದ್ರೇಶ್ ಈ ಚಿತ್ರದ ಮೂಲಕ ತಮ್ಮ ಹೆಸರನ್ನು ರಕ್ಷಣ್ ಎಂದು ಮರುನಾಮಕರಣ ಮಾಡಿಕೊಂಡು ಈ ಪಿಂಕ್ ನೋಟ್ ಗೆ ಕಥೆ ,ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

2010ರಂದು ಮಂಗಳೂರುದಲ್ಲಿ ನಡೆದ ಸತ್ಯ ಘಟನೆಗಳನ್ನು ಚಿತ್ರರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಜಾಕಿ ಭಾವನಾ ಎಂದೇ ಖ್ಯಾತಿ ಪಡೆದಿರುವ ಈ ನಟಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಮಧ್ಯಮ ವರ್ಗದ ಅಕ್ಕ-ತಂಗಿಯರಾಗಿ ಇಲ್ಲಿಯವರೆಗೂ ಮಾಡಿರದ ಪಾತ್ರದಲ್ಲಿ ನಟಿಸಲಿದ್ದಾರೆ. ಅವರ ಪಾತ್ರ ಏನೆಂಬುದನ್ನು ಗೌಪ್ಯವಾಗಿಡಲಾಗಿದೆ.

ನಾಯಕನ ಆಯ್ಕೆ ಸದ್ಯದಲ್ಲೇ ನಡೆಯಲಿದೆ. ಉಳಿದಂತೆ ಪದ್ಮಜ ರಾವ್, ಶ್ರೀನಿವಾಸಪ್ರಭು, ನಿಶಾ ,ಸಮೀಕ್ಷಾ, ದಡಿಯ ಗಿರಿ, ರಾಮ್ ಜನಾರ್ಧನ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಮಹಿಳಾ ಪ್ರಧಾನ ಕತೆಯಲ್ಲಿ ಪ್ರಶಸ್ತಿ ಮತ್ತು ಕಮರ್ಷಿಯಲ್‌ಗೆ ಬೇಕಾದ ಸನ್ನಿವೇಶಗಳನ್ನು ಸೇರಿಸಲಾಗುತ್ತಿದೆಯಂತೆ. ನಿರ್ದೇಶಕರು ದಿನಪತ್ರಿಕೆಯಲ್ಲಿ ಬಂದಂತ ಸುದ್ದಿಗಳನ್ನು ಚಿತ್ರಕಥೆಗೆ ಬಳಸಿಕೊಂಡಿದ್ದಾರೆ.

ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ದುಡ್ಡಿನ ಅವಶ್ಯಕತೆ ಇರುತ್ತದೆ. ಅದರ ಹಿಂದೆ ಬಿದ್ದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂಬುದು ಚಿತ್ರದ ಸಾರಾಂಶವಾಗಿದೆ.ಬಹುಪಾಲು ಕಥೆಯು ಅರಬ್ ಪ್ರಾಂತ್ಯದಲ್ಲಿ ನಡೆಯುವುದರಿಂದ ದುಬೈನ ರ‍್ಯಾಸೆಲ್‌ ಖೈಮ್‌ದಲ್ಲಿ ಶೇಕಡ ಅರವತ್ತಷ್ಟು ಚಿತ್ರೀಕರಣ ಮಾಡಲಿದ್ದು, ಉಳಿದಂತೆ ಬೆಂಗಳೂರು, ಉಡುಪಿ, ಮಲ್ಪೆ, ಚಿಕ್ಕಮಗಳೂರು ಕಡೆಗಳಲ್ಲಿ ಶೂಟಿಂಗ್ ನಡೆಯಲಿದೆ.

ಡಾ.ನಾಗೇಂದ್ರಪ್ರಸಾದ್ ಬರೆದಿರುವ ಮೂರು ಹಾಡುಗಳಿಗೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಸೆಲ್ವಮ್ ಮಾದಪ್ಪ , ಸಂಕಲನ ಕೆ.ಎಂ.ಪ್ರಕಾಶ್, ಸಂಭಾಷಣೆ ಜಗದೀಶ್ ಅವರದಾಗಿದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಚಿತ್ರತಂಡ ನೀಡಲಿದೆಯಂತೆ.

Related posts