Cini Reviews Cinisuddi Fresh Cini News 

‘ಪೆಟ್ರೋಮ್ಯಾಕ್ಸ್’ ನಲ್ಲಿ ಪೋಲಿತನದ ಜೊತೆಗೆ ವಾಸ್ತವತೆಯ ಅನಾವರಣ (ಚಿತ್ರವಿಮರ್ಶೆ-ರೇಟಿಂಗ್ : 3.5/5

ಚಿತ್ರ : ಪೆಟ್ರೋಮ್ಯಾಕ್ಸ್
ನಿರ್ದೇಶಕ : ವಿಜಯ್ ಪ್ರಸಾದ್
ನಿರ್ಮಾಣ : ಸತೀಶ್‌ ಪಿಕ್ಚರ್ ಹೌಸ್, ಸ್ಟುಡಿಯೋ 18, ಪೆಟ್ರೋಮ್ಯಾಕ್ಸ್‌ ಪಿಕ್ಚರ್ಸ್‌
ಸಂಗೀತ : ಅನೂಪ್ ಸೀಳಿನ್ ಛಾಯಾಗ್ರಾಹಕ : ನಿರಂಜನ್ ಬಾಬು
ತಾರಾಗಣ : ನೀನಾಸಂ ಸತೀಶ್, ಹರಿಪ್ರಿಯಾ, ನಾಗಭೂಷಣ್, ಕಾರುಣ್ಯಾ ರಾಮ್, ಅರುಣ್ ಕುಮಾರ್, ವಿಜಯಲಕ್ಷ್ಮಿ ಸಿಂಗ್, ಸಿದ್ಲಿಂಗು ಶ್ರೀಧರ್, ಅಚ್ಯುತ್ ಕುಮಾರ್​ , ಪದ್ಮಜಾ ರಾವ್ ಹಾಗೂ ಮುಂತಾದವರು…
ರೇಟಿಂಗ್ : 3.5/5

ಜೀವನದಲ್ಲಿ ವಾಸ್ತವತೆಯನ್ನು ಅರ್ಥಮಾಡಿಕೊಳ್ಳದ ಬಹಳ ಮುಖ್ಯ. ಸತ್ಯ ಕಹಿ ಅಂತ ತಿಳಿದಿದ್ರು, ಮುಖವಾಡ ಹಾಕಿಕೊಂಡು ಬದುಕುವ ಮಂದಿಯೇ ಹೆಚ್ಚು ಪಾಲು ಕಾಣಿಸುತ್ತಾರೆ. ಆದರೆ ನಾವು ಹಾಗೆ ಬದ್ಕಲ್ಲ ನಮ್ಮದು ನಡೆ, ನುಡಿ ಎಲ್ಲಾ ನೇರ ಮಾತುಗಳು ಎನ್ನುವ ಅನಾಥಾಶ್ರಮದಲ್ಲಿ ಬೆಳೆದ 3ತುಂಡು 1ಚೆಂಡಿನ ಬದುಕಿನ ಕಥೆ ಹಾಗೂ ವ್ಯಥೆ ಪಯಣದ ಹಾದಿಯಲ್ಲಿ ಮೈಚಳಿ ಬಿಡಿಸುವ ಮಾತುಗಳ ಜೊತೆಗೆ ಮನ ತಟ್ಟುವ ಸಂದೇಶವನ್ನು ಹೇಳಲು ಮುಂದಾದ ಚಿತ್ರವೇ ಪೆಟ್ರೋಮ್ಯಾಕ್ಸ್.

ಚಿತ್ರದ ಕಥಾ ನಿರೂಪಣಾ ಶೈಲಿ ವಿಭಿನ್ನವಾಗಿ ತಮ್ಮ ತಮ್ಮ ವೃತ್ತಿ ಹಾಗೂ ಪ್ರವೃತ್ತಿಯ ಮೂಲಕ ತೆರೆದುಕೊಳ್ಳುತ್ತದೆ. ಕರೆ ಮಾಡಿ ಊಟ ಮಾಡಿ ಫುಡ್​ ಡೆಲಿವರಿ ಬಾಯ್ ಊದುಬತ್ತಿ ಶಿವಪ್ಪ (ನೀನಾಸಂ ಸತೀಶ್), ಎಲೆಕ್ಟ್ರಿಷಿಯನ್ ಅಗರಬತ್ತಿ ಮಾದಪ್ಪ (ಅರುಣ್), ಬ್ಯೂಟಿಷಿಯನ್ ಕವಿತಾ ಕೃಷ್ಣಮೂರ್ತಿ (ಕಾರುಣ್ಯಾ ರಾಮ್) ಹಾಗೂ ಲಾಯರ್ ಕೃಷ್ಣಮೂರ್ತಿ (ನಾಗಭೂಷಣ್) ಈ ನಾಲ್ವರು ಒಂದೊಂದು ಸ್ಥಳದಲ್ಲಿ ಅನಾಥವಾಗಿ ಸಿಕ್ಕವರು.

ಮುಂದೆ ಒಂದೇ ಅನಾಥಾಶ್ರಮದಲ್ಲಿ ಮೂವರು ಹುಡುಗರು ಒಂದು ಹುಡುಗಿ ತಮ್ಮ ಮಾತಿಗೆ ಯಾವುದೇ ಲಂಗು ಲಗಾಮಿಲ್ಲದೆ ಬೆಳೆದ ಇವರಿಗೆ ಆಶ್ರಮದ ಗುರುಗಳು ಹೊರ ಪ್ರಪಂಚದ ಕಡೆ ಗಮನ ಹರಿಸಿ ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ತಿಳಿಸುತ್ತಾರೆ. ಈ ನಾಲ್ವರು ಅನಾಥಶ್ರಮ ಬಿಟ್ಟು ಹೊಸ ಗೂಡು ಹುಡುಕಿ ಜೀವನ ಪ್ರಾರಂಭಿಸಲು ಮುಂದಾಗ್ತಾರೆ.

ಮೂವರು ಹುಡುಗರು ಒಂದು ಹುಡುಗಿ ಒಟ್ಟಿಗೆ ಇರುವವರಿಗೆ ಎಲ್ಲೂ ಮನೆ ಸಿಗದೆ ಪರದಾಡುವ ಸ್ಥಿತಿ ಉಂಟಾಗುತ್ತದೆ. ಈ ಹಾದಿಯಲ್ಲಿ ಇವ್ರಿಗೆ ರಿಯಲ್ ಎಸ್ಟೇಟ್ ಬ್ರೋಕರ್ ಮೀನಾಕ್ಷಿ (ಹರಿಪ್ರಿಯಾ) ಭೇಟಿ. ಈ ನಾಲ್ವರು ಹಾಗೂ ಮೀನಾಕ್ಷಿ ನಡುವೆ ನಡೆಯುವ ಒಂದಷ್ಟು ಮಾತಿನ ಚಕಮಕಿ, ಖಾಲಿ ಪೋಲಿ ಮಾತುಗಳ ಚಮಕ್ ಒಟ್ಟೊಟ್ಟಿಗೆ ಎಲ್ಲರನ್ನು ಕರೆದುಕೊಂಡು ಹೋಗುತ್ತದೆ.

ಇನ್ನು ಮತ್ತೊಂದೆಡೆ ಮಗ, ಸೊಸೆಗೆ ಬೇಡವಾದ ಹಿರಿಯ ಜೀವ ಸುಧಾಮೂರ್ತಿ (ವಿಜಯಲಕ್ಷ್ಮಿ ಸಿಂಗ್) ಸಿಗ್ತಾರೆ. ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಸಾಗುವ ಹಾದಿಯಲ್ಲಿ ಹಲವಾರು ಏರಿಳಿತಗಳನ್ನು ಎದುರಾಗುತ್ತವೆ.
ನಾಲ್ವರಿಗೆ ಮನೆ ಸಿಗುತ್ತಾ…
ಬ್ರೋಕರ್ ಮೀನಾಕ್ಷಿ ಕಣ್ಣು ಯಾರ್ ಮೇಲೆ…
ಹಿರಿಯ ಜೀವ ಬದುಕು ಏನು…
ಪೆಟ್ರೋಮ್ಯಾಕ್ಸ್ ಯಾಕೆ…
ಈ ಎಲ್ಲ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಒಮ್ಮೆ ಪೆಟ್ರೋಮ್ಯಾಕ್ಸ್ ಚಿತ್ರವನ್ನ ತೆರೆಮೇಲೆ ನೋಡಲೇಬೇಕು.

ಈ ಚಿತ್ರದ ಮೂಲಕ ಅಸ್ತ್ರ ನಿರ್ದೇಶಕ ವಿಜಯ್​ ಪ್ರಸಾದ್​. ಚಿತ್ರದ ಪ್ರತಿ ಸಂಭಾಷಣೆಯನ್ನು ಪಟಾಕಿಯಂತೆ ಸಿಡಿಸುತ್ತಾನೇ ಇರುತ್ತಾರೆ. ಈ ಹಿಂದೆ ಬಂದಂತಹ ಚಿತ್ರಗಳಿಗಿಂತ ಈ ಸಿನಿಮಾದಲ್ಲಿ ಚೇಷ್ಟೆ, ಕೀಟಲೆ, ಪೋಲಿತನ ಜಾಸ್ತಿ ಅನ್ನಿಸುತ್ತದೆ. ಚಿತ್ರದ ಮೊದಲ ಭಾಗ ಮೈಚಳಿ ಬಿಡಿಸುವಂತಹ ಮಾತೆ ಮುತ್ತಾಗಿ ಸುರಿಸಿದ್ದಾರೆ.

ಇನ್ನು ದ್ವಿತೀಯ ಭಾಗದಲ್ಲಿ ಅಷ್ಟೆ ಮನಮುಟ್ಟುವಂತ ಅನಾಥ ಪ್ರಜ್ಞೆ ಬಗ್ಗೆ, ಸಂಬಂಧದ ತಳಮಳ, ಹಿರಿಯರ ಬಗ್ಗೆ ತೋರುವ ತಾತ್ಸಾರದ ವಿಚಾರವು ಎಲ್ಲರ ಕಣ್ಣು ತೆರೆಯುವಂತೆ ಮಾಡಿದೆ. ಕೆಲವು ದೃಶ್ಯಗಳು ನೋಡಲು ಮುಜುಗರ ಅನಿಸಿದರೂ ವಾಸ್ತವತೆಯ ದರ್ಶನ ಮಾಡಿಸಿರುವದಂತೂ ಮೆಚ್ಚುವಂತಿದೆ.

ಇಂತಹ ಚಿತ್ರ ನಿರ್ಮಾಣ ಮಾಡಲು ಮುಂದಾದ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು. ಇನ್ನು ಊದುಬತ್ತಿ ಶಿವಪ್ಪನ ಪಾತ್ರದಲ್ಲಿ ನೀನಾಸಂ ಸತೀಶ್​​​ ಬಹಳ ನೈಜವಾಗಿ ಅಭಿನಯಿಸಿದ್ದಾರೆ. ಇನ್ನು ಅಗರಬತ್ತಿ ಮಾದಪ್ಪನಾಗಿ ಅರುಣ್ ಕುಮಾರ್ ಪಂಚಿಂಗ್ ಟೈಮಿಂಗ್ಸ್ ಗಮನ ಸೆಳೆಯುತ್ತದೆ. ಬ್ಯೂಟಿಷಿಯನ್ ಕವಿತಾ ಕೃಷ್ಣಮೂರ್ತಿಯಾಗಿ ಕಾರುಣ್ಯ ಇಡೀ ಸಿನಿಮಾದುದ್ದಕ್ಕೂ ರತಿ ವಿಜ್ಞಾನದ ಪಾಠ ಹೇಳುವ ಮೂಲಕ ಎಲ್ಲದಕ್ಕೂ ಸೈ ಎನ್ನುವಂತೆ ನಟಿಸಿದ್ದಾರೆ.

ಅಸಿಸ್ಟೆಂಟ್ ಲಾಯರ್ ಆಗಿ ಅಭಿನಯಿಸಿರುವ ಕೃಷ್ಣಮೂರ್ತಿಯ ಪಾತ್ರಧಾರಿ ನಾಗಭೂಷಣ್ ಕೂಡ ಬಾಣ ಬಿಟ್ಟರೆ ನಾಟುವಂತಿರಬೇಕು ಎನ್ನುವ ಹಾಗೆ ಪಂಚಿಂಗ್ ಡೈಲಾಗ್ ನಲ್ಲಿ ಮಿಂಚಿದ್ದಾರೆ. ರಿಯಲ್​ ಎಸ್ಟೇಟ್​ ಬ್ರೋಕರ್ ಮೀನಾಕ್ಷಿ ಆಗಿ ಬೋಲ್ಡ್​ ಡೈಲಾಗ್​ಗಳಿಂದ ಹರಿಪ್ರಿಯಾ ಫಿಲ್ಟರ್​ಲೆಸ್​ ಮಾತಿನೊಂದಿಗೆ ಮೈಚಳಿ ಬಿಟ್ಟು ನಟಿಸಿದ್ದಾರೆ.

ಹಾಗೆಯೇ ಕಮಿಷನ್ ಗಾಗಿ ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡುವವರಲ್ಲೂ ಕೂಡ ಮಾನವೀಯತೆ ಇದೆ ಎಂಬುದನ್ನು ತೆರೆದಿಟ್ಟಿದ್ದಾರೆ. ಕಥೆಗೆ ತಿರುವ ಕೊಡುವ ಸುಧಾಮೂರ್ತಿ ಅನ್ನೋ ಪಾತ್ರದಲ್ಲಿ ವಿಜಯಲಕ್ಷ್ಮಿ ಸಿಂಗ್​ ನೆನಪಿನಲ್ಲಿ ಉಳಿಯುತ್ತಾರೆ. ಈ ಚಿತ್ರದ ನಿರ್ಮಾಪಕರಲ್ಲಿ ಸುಧೀರ್ ಪೆಟ್ರೊಮ್ಯಾಕ್ಸ್ ರಿಪೇರಿ ಮಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಉಳಿದಂತೆ ಬರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ.

ಅನೂಪ್ ಸಿಳೀನ್​ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ ಉತ್ತಮವಾಗಿ ಮೂಡಿಬಂದಿದೆ. ಈ ಸಿನಿಮಾದಲ್ಲಿ ಚೇಷ್ಟೆ, ಕೀಟಲೆ, ಪೋಲಿತನ ಜಾಸ್ತಿ ಇದು ನೋಡೋಕೆ ಸ್ವಲ್ಪ ಇರಿಸು ಮುರಿಸು ಆದ್ರೂ ಕೊನೆಗೆ ಮದರ್ ಸೆಂಟಿಮೆಂಟ್​ ಸಿನಿಮಾ ನೋಡಬೇಕು ಎನ್ನುವಂತೆ ಮಾಡುತ್ತದೆ. ಎಲ್ಲರನ್ನೂ ನಗಿಸುತ್ತಲೇ ಮನ ಮುಟ್ಟುವಂತೆ ಮಾಡಿರುವ ಈ ಪೆಟ್ರೋಮ್ಯಾಕ್ಸ್ ಚಿತ್ರವನ್ನ ಒಮ್ಮೆ ನೋಡಬಹುದು.

Related posts