Cinisuddi Fresh Cini News 

ಸಕ್ಸಸ್ ಸಂಭ್ರಮದಲ್ಲಿ ‘ಪಡ್ಡೆಹುಲಿ’

ಚುನಾವಣೆ, ಐಪಿಎಲ್ ಅಬ್ಬರದ ನಡುವೆಯೂ ಬಿಡುಗಡೆಗೊಂಡ ಶ್ರೇಯಸ್ ಮಂಜು ನಾಯಕನಾಗಿದ್ದ ಪಡ್ಡೆಹುಲಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಗೆಲುವಿನ ಹಾದಿಯತ್ತ ಹೆಜ್ಜೆ ಹಾಕಿದೆ. ಈ ಸಂತಸವನ್ನು ಹಚ್ಚಿಕೊಳ್ಳಲೆಂದೇ ಮೊನ್ನೆ ಚಿತ್ರತಂಡವು ಸಂತಸ ಕೂಟವನ್ನು ಹಮ್ಮಿಕೊಂಡಿತ್ತು.

ನಿರ್ಮಾಪಕ ಕೆ.ಮಂಜು ಮಾತನಾಡಿ, ನನ್ನ ಪುತ್ರ ಶ್ರೇಯಸ್ ನಟಿಸಿರುವ ಮೊದಲ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ಬರುತ್ತಿರುವುದು ಸಂತಸ ವಾಗಿದೆ. ಚುನಾವಣೆ , ಐಪಿಎಲ್ ಇದ್ದರೂ ಕಲೆಕ್ಷನ್ ಕೂಡ ಸೊಗಸಾಗಿದೆ.

ಹೊಸಬರ ಚಿತ್ರಗಳೆಂದರೆ ಸಾಕು ಅದು ಪ್ರೇಕ್ಷಕರನ್ನು ಮುಟ್ಟುವ ಮುನ್ನವೇ ಥಿಯೇಟರ್‍ನಿಂದ ಎತ್ತಂಗಡಿ ಮಾಡುತ್ತಾರೆ, ತೆಲುಗು, ತಮಿಳು, ಇಂಗ್ಲಿಷ್ ಚಿತ್ರಗಳು ಬಂತೆಂದರೆ ನಮ್ಮ ಸಿನಿಮಾವನ್ನು ಸರಿಸಿ ಬಿಡುತ್ತಾರೆ, ನಮ್ಮ ಭಾಷೆಯ ಚಿತ್ರಗಳಿಗೆ ಮಾರ್ನಿಂಗ್ ಅಥವಾ ನೈಟ್ ಷೋ ಕೊಡುತ್ತಾರೆ ಆ ಸಮಯದಲ್ಲಿ ಜನರು ಬರಲು ಆಗುವುದಿಲ್ಲ ಅದರ ಬದಲು ಆ ಜಾಗದಲ್ಲಿ ಬೇರೆ ಭಾಷೆಯ ಚಿತ್ರಗಳನ್ನು ಹಾಕಿದರೆ ನಮ್ಮ ಚಿತ್ರರಂಗಕ್ಕೆ ಒಳ್ಳೆಯದಾಗುತ್ತದೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.

ನಿರ್ದೇಶಕ ಗುರುದೇಶಪಾಂಡೆ ಮಾತನಾಡಿ, ಇದನ್ನು ಸಕ್ಸಸ್ ಮೀಟ್ ಅನ್ನುವುದರಿಂದ ಕೃತಜ್ಞತೆ ಸಲ್ಲಿಸುವ ಮೀಟಿಂಗ್ ಅನ್ನಬಹುದು. ಮಾಧ್ಯಮದವರು ಬರೆದ ಉತ್ತಮ ರಿವ್ಯೂನಿಂದ ಚಿತ್ರವು ಸಕ್ಸಸ್ ಹಾದಿಯತ್ತ ಸಾಗಿದೆ. ಶ್ರೇಯಸ್ ಹೊಸಬನಾದರೂ ಅನುಭವಿಯಂತೆ ನಟಿಸಿದ್ದಾನೆ. ಈ ಚಿತ್ರದ ಹಾಡುಗಳು ಕೂಡ ಜನರನ್ನು ರಂಜಿಸುತ್ತಿದೆ.

ಬಸವಣ್ಣನವರ ಕಲಬೇಡ, ಕೊಲಬೇಡ, ಬಿ.ಆರ್.ಲಕ್ಷ್ಮಣ್ ರಾವ್ ಅವರ ಹೇಳಿ ಹೋಗು ಕಾರಣ, ಜಿ.ಪಿ. ರಾಜರತ್ನಂ ಅವರ ಹೆಂಡ ಹೆಂಡ್ತಿ ಕಾಣದ ಪದಗೊಳ್, ಡಿ.ವಿ.ಜಿ ಅವರ ಬದುಕು ಜಟಕಾ ಬಂಡಿ ಹಾಗೂ ಕೆ.ಎಸ್.ನರಸಿಂಹಸ್ವಾಮಿ ಅವರ ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ ಹಾಡುಗಳು ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಅದ್ಭುತ ಅನುಭವವನ್ನೇ ನೀಡುತ್ತದೆ.

ಆ ಹಾಡುಗಳನ್ನು ಇಂದಿನ ಜನರೇಷನ್‍ಗೆ ತಕ್ಕನಾಗಿ ಹಾಡಿರುವುದು ನೋಡುಗರಿಗೆ ಇಷ್ಟವಾಗುತ್ತದೆ. ಇನ್ನು 2-3 ಸಿನಿಮಾನ ನಿಲ್ಲಿಸಿದರೆ ಚಿತ್ರ ಖಂಡಿತ ಹಿಟ್ ಆಗುತ್ತದೆ ಎಂದು ಹೇಳಿದರು.

ನಿರ್ಮಾಪಕ ರಮೇಶ್‍ರೆಡ್ಡಿ ಮಾತನಾಡಿ, ಪಡ್ಡೆಹುಲಿ ಚಿತ್ರಕ್ಕೆ ಈವರೆಗೆ ಆವರೇಜ್ ಕಲೆಕ್ಷನ್ ಬಂದಿದೆ. ದಯಮಾಡಿ ಕನ್ನಡ ಸಿನಿಮಾಗಳನ್ನು ನೋಡುವ ಮೂಲಕ ನಮ್ಮ ಶ್ರಮಕ್ಕೆ ಫಲ ದೊರೆಯುವಂತಾಗಲಿ ಎಂದು ಹೇಳಿದರು.

ನಂತರ ನಾಯಕ ಶ್ರೇಯಸ್, ನಾಯಕಿ ನಿಶ್ವಿಕಾ ಮಾತನಾಡಿ ಪ್ರೇಕ್ಷಕರಿಗೆ ಧನ್ಯವಾದ ಹೇಳಿದರು. ಪಡ್ಡೆಹುಲಿ ಚಿತ್ರದ ಮೂಲಕ ತಮ್ಮ ಮೊದಲ ಚಿತ್ರದಲ್ಲೇ ಸಿಕ್ಸರ್ ಸಿಡಿಸಿರುವ ಶ್ರೇಯಸ್‍ಗೆ ಕನ್ನಡದಲ್ಲಿ ಮತ್ತಷ್ಟು ಚಿತ್ರಗಳು ದೊರೆತು ಉತ್ತಮ ನಟನಾಗಿ ಬೆಳೆಯುವಂತಾಗಲಿ.

Share This With Your Friends

Related posts