Cini Reviews Cinisuddi Fresh Cini News 

“ಪಡ್ಡೆ ಹುಲಿ” ಘರ್ಜನೆ ಹೇಗಿದೆ..? (ಚಿತ್ರ ವಿಮರ್ಶೆ-ರೇಟಿಂಗ್ : 3.5/5 )

ಚಿತ್ರ : ಪಡ್ಡೆ ಹುಲಿ
ನಿರ್ದೇಶಕ : ಗುರು ದೇಶಪಾಂಡೆ
ನಿರ್ಮಾಪಕ : ರಮೇಶ್ ರೆಡ್ಡಿ (ನಂಗ್ಲಿ)
ಸಂಗೀತ : ಅಜನೀಶ್ ಲೋಕನಾಥ್ ಛಾಯಾಗ್ರಾಹಕ : ಕೆ. ಎಸ್. ಚಂದ್ರಶೇಖರ್
ತಾರಾಗಣ : ಶ್ರೇಯಸ್. ಕೆ.ಮಂಜು , ನಿಶ್ವಿಕಾ ನಾಯ್ಡು , ವಿ. ರವಿಚಂದ್ರನ್ ಸುಧಾರಾಣಿ , ಮಧುಸೂದನ್, ರಂಜಿತಾ, ಚಿಕ್ಕಣ್ಣ , ಬರಮಣ್ಣ ಹಾಗೂ ಮುಂತಾದವರು…
ರೇಟಿಂಗ್ : 3.5/5

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಒಂದು ಗುರಿ ಅನ್ನೋದು ಬಹಳ ಮುಖ್ಯ .
ಅದನ್ನು ಪಡೆಯುವುದಕ್ಕೆ ಹಲವಾರು ಸಮಸ್ಯೆಗಳು ಎದುರಾಗುವುದು ಸರ್ವೇ ಸಾಮಾನ್ಯ ಅಂತಹ ಎಡರು ತೊಡರುಗಳನ್ನು ಮೆಟ್ಟಿನಿಂತು ಗೆಲುವು ಸಾಧಿಸುವ ಗುರಿ ಹೊಂದಿರುವಂತಹ ಚಿತ್ರವೇ “ಪಡ್ಡೆ ಹುಲಿ”
ಮಧ್ಯಮ ವರ್ಗದ ಕುಟುಂಬದ ಕಥಾಹಂದರ ಇದಾಗಿದ್ದು , ಕನ್ನಡ ಮಾಸ್ಟರ್ ಆಗಿ ಕ್ರೇಜಿಸ್ಟಾರ್ ರವಿಚಂದ್ರನ್ ಧರ್ಮಪತ್ನಿ ಯಾಗಿ ಸುಧಾರಾಣಿ ಇವರಿಗೆ ಇಬ್ಬರು ಪುತ್ರರು, ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಭವಿಷ್ಯದಲಿ ಸುಖವಾಗಿರಲಿ ಎಂದು ಆಸೆ ಪಡುವುದು ಸರ್ವೇ ಸಾಮಾನ್ಯ. ಚಿತ್ರದ ನಾಯಕ ಶ್ರೇಯಸ್ ಬಾಲ್ಯದಿಂದಲೂ ಸಂಗೀತವೇ ಜೀವನ ,ನನ್ನ ಗುರಿ ಎಂದು ನಿರ್ಧರಿಸುತ್ತಾನೆ.

ಹಾಗೆಯೇ ತಂದೆ ತಾಯಿಯ ಆಸೆಯಂತೆ ವಿದ್ಯೆಯಲ್ಲೂ ಗಮನ ಸೆಳೆಯುವ ನಾಯಕ ಬಾಲ್ಯದ ಗೆಳತಿ ಯೊಂದಿಗೆ ಪ್ರೇಮದ ಸುಳಿಯಲ್ಲಿ ಸಿಲುಕುತ್ತಾನೆ. ಇಡೀ ಚಿತ್ರದುದ್ದಕ್ಕೂ ಹಾಡುಗಳ ಸರಮಾಲೆಯೇ ಹಾದು ಹೋಗುತ್ತದೆ. ಚಿತ್ರದ ನಾಯಕನ ಇಂಟರ್ಡಕ್ಷನ್ ಸಾಂಗ್ ಚಿತ್ರದುರ್ಗದ ಕೋಟೆಯಲ್ಲಿ ಚಿತ್ರೀಕರಿಸಿದ್ದು , ವಿಷ್ಣುವರ್ಧನ್ ರವರ ನೆನಪನ್ನ ತರುತ್ತದೆ. ನಾಯಕ ಆತನ ಗೆಳೆಯರ ಜೊತೆ ಕಾಲೇಜಿನಲ್ಲಿ ತುಂಟತನ, ತರ್ಲೆ ಮನೆಯವರ ಪ್ರೀತಿ, ಬಾಂಧವ್ಯ ಹಾಗೂ ತಾನು ಪ್ರೀತಿಸುವ ಗೆಳತಿಯೂಂದಿಗೆ ಪ್ರೇಮ ಪಯಣವೇ ಚಿತ್ರದ ಮೊದಲ ಭಾಗ ಆವರಿಸಿದೆ.

ಇನ್ನು ಎರಡನೇ ಭಾಗ ಒಂದಷ್ಟು ಇಂಟ್ರಸ್ಟಿಂಗ್ ವಿಷಯಗಳೊಂದಿಗೆ ಸಾಗುತ್ತದೆ. ಸಂಗೀತದಲ್ಲಿ ಸಾಧನೆ ಮಾಡಲು ಮನೆಯವರ ಹಾಗೂ ಪ್ರೇಯಸಿಯ ಬೆಂಬಲವಿದ್ದರೂ ಓದಿಗೆ ಹೆಚ್ಚು ಗಮನ ನೀಡಬೇಕೆಂಬ ಮನೆಯವರ ಮಾತಿಗೆ ಒಪ್ಪಿ ಒಂದು ವರ್ಷ ಗಡುವು ಪಡೆದು ಸಿಟಿಗೆ ಸಂಗೀತದಲ್ಲಿ ಏನಾದರೂ ಸಾಧನೆ ಮಾಡಲು ಗೆಳೆಯರೊಂದಿಗೆ ಬರುತ್ತಾನೆ. ನಂತರ ಅವನು ತನ್ನ ಸಾಧನೆಯ ಹಾದಿಯಲ್ಲಿ ಸಾಲುಸಾಲಾಗಿ ನಿರಾಸೆಯನ್ನು ಎದುರಿಸುತ್ತಾನೆ.

ಈತ ಇಷ್ಟಪಟ್ಟ ಪ್ರೇಯಸಿಯನ್ನು ಮದುವೆಯಾಗಲು ಅಡ್ಡಿ ಆಗುತ್ತದೆ. ಇನ್ನು ತಂದೆ ತಾಯಿಯ ಆಸೆಯನ್ನು ಪೂರ್ಣಗೊಳಿಸಲು ಮನಸು ಕಗ್ಗಂಟಾಗುತ್ತದೆ. ಜೀವನದುದ್ದಕ್ಕೂ ಹಲವು ಸಮಸ್ಯೆಗಳನ್ನು ಎದುರಿಸುವ ನಾಯಕನ ಹಾದಿ ಸುಗಮವಾಗುತ್ತಾ… ತಾನು ಇಷ್ಟ ಪಟ್ಟ ಹುಡುಗಿ ಸಿಗುತ್ತಾಳಾ… ತನ್ನ ತಂದೆ ತಾಯಿಯ ಆಸೆಯಂತೆ ಓದಿನಲ್ಲಿ ಮುಂದೆ ಬರುತ್ತಾನಾ… ಅಥವಾ ತನ್ನ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾನಾ… ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೋಡಬೇಕಾದರೆ ನೀವು ಚಿತ್ರಮಂದಿರಕ್ಕೆ ಹೋಗಬೇಕು.

ಇನ್ನು ನಿರ್ದೇಶಕ ಗುರುದೇಶ್ ಪಾಂಡೆ ಈ ಚಿತ್ರದ ಮೂಲಕ ಸಾಧನೆಯ ಗುರಿ ಎಷ್ಟೇ ಕಠಿಣವಾದರೂ ಮುನ್ನುಗ್ಗಬೇಕು ಎಂಬುದನ್ನು ಹೇಳಿದ್ದಾರೆ. ಕ್ಲಾಸ್ ಹಾಗೂ ಮಾಸ್ ಇಷ್ಟವಾಗುವಂಥ ಮಸಾಲೆ ಮಿಕ್ಸ್ ಮಾಡಿ ಅಧಿಕ ಊಟವನ್ನು ಬಡಸಿದ್ದಾರೆ. ಕಮರ್ಷಿಯಲ್ ಹಾಡುಗಳ ಜೊತೆಗೆ ಸನ್ನಿವೇಶಗಳಿಗೆ ತಕ್ಕಂತೆ ವಚನ, ದಾಸರ ಪದಗಳು , ಭಾವಗೀತೆಗಳನ್ನು ಬಳಸಿಕೊಂಡಿದ್ದಾರೆ.

ಇನ್ನು ಕ್ರೇಜಿ ಸ್ಟಾರ್ ರವಿಚಂದ್ರನ್ ನಾಯಕನ ತಂದೆಯಾಗಿ ಕನ್ನಡ ಮೇಷ್ಟ್ರು ಪಾತ್ರದಲ್ಲಿ ಮಗನಿಗೆ ಧೈರ್ಯ ತುಂಬುತ್ತಾ “ಯಾವುದೇ ಸಮಯ ಸಂದರ್ಭ ಎದುರಾದರೂ ಕಾಲರ್ ಏರಿಸು , ಗೆಲುವು ಸೋಲಿನಲ್ಲೂ ಕೂಡ ಮೀಸೆಯನ್ನು ತಿರುಗಿಸು ಎಂದು ಹೇಳುವ ಡೈಲಾಗ್ಸ್ ಚಿತ್ರದ ಹೈಲೇಟ್ ನಲ್ಲಿ ಒಂದು. ಮನೆದೇವ್ರು ಚಿತ್ರದಲ್ಲಿ ಜೋಡಿ ಆಗಿ ಕಾಣಿಸಿಕೊಂಡ ಸುಧಾರಣೆ ಮತ್ತೊಮ್ಮೆ ರವಿಚಂದ್ರನ್ ಧರ್ಮಪತ್ನಿಯಾಗಿ ಸಿಕ್ಕ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಯುವ ನಾಯಕ ಶ್ರೇಯಸ್. ಕೆ. ಮಂಜು ತನ್ನ ಪ್ರಥಮ ಚಿತ್ರದಲ್ಲೇ ಗಮನ ಸೆಳೆದಿದ್ದಾರೆ. ಆಕ್ಷನ್ , ಡ್ಯಾನ್ಸ್ , ರೋಮ್ಯಾನ್ಸ್ ಉತ್ತಮವಾಗಿ ನಿರ್ವಹಿಸಿದ್ದಾರೆ. ಇನ್ನು ಡೈಲಾಗ್ ಡೆಲಿವರಿ ಬಗ್ಗೆ ಮತ್ತಷ್ಟು ಗಮನ ಹರಿಸಿದರೆ ಚೆನ್ನಾಗಿರುತ್ತಿತ್ತು. ನಾಯಕಿ ಆಗಿ ಅಭಿನಯಿಸಿರುವ ನಿಶ್ವಿಕಾ ನಾಯ್ಡು ಕೂಡಾ ಸಿಕ್ಕ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಸ್ಯಾಂಡಲ್ ವುಡ್ ಗೆ ಭರವಸೆಯ ನಟಿಯಾಗಿ ನಿಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

ವಿಲನ್ ಪಾತ್ರದಲ್ಲಿ ಮಧುಸೂದನ್ ಕೂಡ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಸ್ಯ ಪಾತ್ರದಲ್ಲಿ ಬರುವ ಚಿಕ್ಕಣ್ಣ ,ಧರ್ಮಣ್ಣ ಸೇರಿದಂತೆ ಹಲವು ಪ್ರತಿಭೆಗಳು ತಮ್ಮ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದ್ದಾರೆ. 25 ಚಿತ್ರಗಳನ್ನು ಪೂರೈಸಿರುವ ಕೆ .ಎಸ್. ಚಂದ್ರಶೇಖರ್ ಅವರ ಕ್ಯಾಮೆರಾ ಕೈಚಳಕ ಸುಂದರವಾಗಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ರ 11 ಹಾಡುಗಳ ರಾಗ ಸುಧೆ ಇಡೀ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ.

ವಿಶೇಷ ಪಾತ್ರದಲ್ಲಿ ಕಾಲೇಜ್ ನ ಸೀನಿಯರ್ ಸ್ಟೂಡೆಂಟ್ ಆಗಿ ನಾಯಕ (ಸಂಪತ್) ನಿಗೆ ರಕ್ಷಿತ್ ಶೆಟ್ಟಿ ಬೆನ್ನೆಲುಬಾಗಿ ನಿಂತು ಸಾಥ್ ನೀಡುತ್ತಾನೆ. ಹಾಗೂ ಆತನ ಸಂಗೀತ ಸಾಧನೆಗೆ ತಿರುವು ನೀಡುವ ಪಿ.ಆರ್. ಕೆ ಸಂಗೀತ ಸಂಸ್ಥೆ ಮಾಲೀಕನ ಪಾತ್ರದಲ್ಲಿ ಅತಿಥಿ ನಟನಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾಣಿಸಿ ಕೊಂಡಿದ್ದಾರೆ. ಇಬ್ಬರು ಪ್ರಮುಖ ನಟರು ಈ ಚಿತ್ರದ ಓಟಕ್ಕೆ ಸಹಕಾರಿ ಯಾಗಿರುವುದು ವಿಶೇಷ.

ಇದಲ್ಲದೆ ದೃಶ್ಯವೊಂದರಲ್ಲಿ ನಿರ್ದೇಶಕ ಯೋಗರಾಜ್ ಭಟ್, ಕೆ. ಮಂಜು ಅವರು ಕಾಣಿಸಿಕೊಂಡಿದ್ದಾರೆ.
ತೇಜಸ್ವಿನಿ ಎಂಟರ್ ಪ್ರೈಸಸ್ ಮೂಲಕ ರಮೇಶ್ ರೆಡ್ಡಿ (ನಂಗ್ಲಿ) ಅದ್ದೂರಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಂಗೀತವನ್ನು ಇಷ್ಟಪಡುವ ಸಿನಿಪ್ರಿಯರಿಗೆ ರಸದೌತಣವನ್ನು ಚಿತ್ರ ತಂಡ ನೀಡಿದೆ. ಮನೋರಂಜನೆ ನಿರೀಕ್ಷಿಸುವ ಚಿತ್ರಪ್ರೇಮಿಗಳು ಕುಟುಂಬ ಸಮೇತ ಎಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಬಹುದು.

Share This With Your Friends

Related posts