Cinisuddi Fresh Cini News 

ಮುಳುಗುತ್ತಿರುವ ನಿರ್ಮಾಪಕರಿಗೆ ವರದಾನವಾಗಿ ಬಂದ ಓಟಿಟಿ

ದೇಶಾದ್ಯಂತ ಕೊರೊನಾ ವೈರಸ್ ಹಾವಳಿಯಿಂದ ಪಿವಿಆರ್, ಐನಾಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಸ್ಥಗಿತಗೊಂಡಿದೆ. ಹಾಗೆಯೇ ತಮ್ಮ ಸಿನಿಮಾ ರೆಡಿ ಮಾಡಿಟ್ಟುಕೊಂಡ ನಿರ್ಮಾಪಕರು ಕೂಡ ಚಿತ್ರಗಳನ್ನು ಬಿಡುಗಡೆ ಮಾಡಲಾಗದೆ, ಮಾಡಿಕೊಂಡ ಸಾಲದ ಮೇಲಿನ ಬಡ್ಡಿಯನ್ನು ತೆರಲಾಗದೆ, ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

ಈ ಸಂಕಷ್ಟದ ನಡುವೆ ಅಂಥಾ ನಿರ್ಮಾಪಕರಿಗೆ ಒಟಿಟಿ (ಓವರ್ ದಿ ಟಾಪ್) ಪ್ಲಾಟ್ ಫಾರ್ಮ್ ನಿಜಕ್ಕೂ ಒಂದು ವರದಾನವಾಗಿ ಸಿಕ್ಕಿದೆ. ಇದರ ಫಲವಾಗಿ ಭಾರತದ ವಿವಿಧ ಭಾಷೆಯ ಒಟ್ಟು ಏಳು ಚಿತ್ರಗಳು ಅಮೆಜಾನ್ ಪ್ರೈಮ್‍ನಲ್ಲಿ ನೇರವಾಗಿ ಬಿಡುಗಡೆಯಾಗುತ್ತಿವೆ. ಈಗಂತೂ ಮಲ್ಟಿಪ್ಲೆಕ್ಸ್‍ಗಳಲ್ಲಿ ಯದ್ವಾತದ್ವಾ ಪ್ರವೇಶ ದರ ನಿಗದಿಪಡಿಸಲಾಗುತ್ತಿದೆ. ಅಲ್ಲದೆ ಹೊರಗಿನಿಂದ ತಂದ ತಿಂಡಿ ತಿನಿಸುಗಳನ್ನು ಒಳಗೆ ಕೊಂಡೊಯ್ಯುವಂತಿಲ್ಲ.

ಅಲ್ಲಿಯೇ ಖರೀದಿಸಿದರೆ ನಾಲ್ಕು ಪಟ್ಟು ಹೆಚ್ಚು ಹಣ ತೆರಬೇಕು. ಗುಣಮಟ್ಟದ ಸೌಲಭ್ಯ ಇರಬಹುದು, ಆದರೆ ಒಂದು ಕುಟುಂಬ ಸಿನಿಮಾ ನೋಡಲೆಂದು ಹೋದರೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿದೆ ಎಂದು ಹಿಂದಿನಿಂದಲೂ ಸಿನಿ ಪ್ರಿಯರು ಮಲ್ಟಿಪ್ಲೆಕ್ಸ್‍ಗಳ ವಿರುದ್ಧ ಕಿಡಿ ಕಾರುತ್ತಲೇ ಬಂದಿದ್ದಾರೆ.

ಮಲ್ಟಿಪ್ಲೆಕ್ಸ್‍ಗಳಲ್ಲಿ ಪ್ರವೇಶ ದರವನ್ನು ಕಡಿಮೆ ಮಾಡಲು ಸರ್ಕಾರ ನಿಯಮಾವಳಿ ರೂಪಿಸಿದರೂ ಅದನ್ನು ಗಾಳಿಗೆ ತೂರಲಾಗಿದೆ ಎನ್ನುವುದು ಸಿನಿರಸಿಕರ ಆರೋಪ. ಹಾಗೆಯೇ ಚಿತ್ರರಂಗದವರೂ ಮಲ್ಟಿಪ್ಲೆಕ್ಸ್‍ಗಳ ಈ ಧೋರಣೆಯ ವಿರುದ್ಧ ಸಾಕಷ್ಟು ಬಾರಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಅದರಲ್ಲೂ ಕನ್ನಡ ಚಿತ್ರಗಳಿಗೆ ಸರಿಯಾದ ಸಮಯಾವಕಾಶ ನೀಡುವುದಿಲ್ಲ. ಪ್ರೈಮ್ ಟೈಮ್‍ನಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶನ ಮಾಡುವುದೇ ಇಲ್ಲ. ಅಲ್ಲದೆ ಸಣ್ಣ ಪುಟ್ಟ ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್‍ಗಳಲ್ಲಿ ಅವಕಾಶವೇ ಸಿಗುವುದಿಲ್ಲ ಎಂದು ಚಿತ್ರರಂಗದ ಸಾಕಷ್ಟು ನಿರ್ಮಾಪಕರು ಆರೋಪ ಮಾಡಿದ್ದರು.

ಆದರೀಗ ಬಂದಿರುವ ಕೊರೋನಾ ವೈರಸ್ ಈ ಎಲ್ಲ ಚಿತ್ರಣವನ್ನು ಬದಲಿಸುವ ಸೂಚನೆ ನೀಡಿದೆ. ಇತ್ತೀಚೆಗಷ್ಟೇ ನಟ ಪುನೀತ್ ರಾಜ್ ಕುಮಾರ್ ಕೂಡ ಈ ಬಗ್ಗೆ ಆಕ್ಷೇಪಿಸಿದ್ದರು. ಮಲ್ಟಿಪ್ಲೆಕ್ಸ್‍ಗಳಲ್ಲಿ ಕನ್ನಡ ಸಿನಿಮಾಗಳ ಬಗ್ಗೆ ಅಸಡ್ಡೆ ತೋರಲಾಗುತ್ತಿದೆ. ಪಿವಿಆರ್‍ನಲ್ಲಿ ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡಬೇಕು, ಇಲ್ಲದಿದ್ರೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಹೇಳಿದ್ದರು,

ಅಲ್ಲದೆ ಚಿತ್ರಮಂದಿರಗಳಲ್ಲಿ ಕುಳಿತು ಸಿನಿಮಾ ನೋಡುವುದೇ ತಮಗೆ ಇಷ್ಟ ಎಂದು ಹೇಳುವ ಮೂಲಕ ಮಲ್ಟಿಪ್ಲೆಕ್ಸ್‍ಗಳ ಧೋರಣೆಯನ್ನು ನೇರವಾಗಿಯೇ ವಿರೋಧಿಸಿದ್ದರು. ಕೊರೊನಾ ವೈರಸ್ ಕಾರಣದಿಂದ ಇದೀಗ ಪಿವಿಆರ್, ಐನಾಕ್ಸ್ ಸೇರಿದಂತೆ ಎಲ್ಲಾ ಚಿತ್ರಮಂದಿರಗಳು ಸ್ಥಗಿತಗೊಂಡಿವೆ.

ಹಾಗೆಯೇ ತಮ್ಮ ಸಿನಿಮಾ ರೆಡಿ ಮಾಡಿಟ್ಟುಕೊಂಡ ನಿರ್ಮಾಪಕರು ಕೂಡ ಚಿತ್ರಗಳನ್ನು ಬಿಡುಗಡೆ ಮಾಡಲಾಗದೆ, ಮಾಡಿಕೊಂಡ ಸಾಲದ ಮೇಲಿನ ಬಡ್ಡಿಯನ್ನು ತೆರಲಾಗದೆ, ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಸಂಕಷ್ಟದಲ್ಲಿ ಅವರಿಗೆ ಒಟಿಟಿ (ಓವರ್ ದಿ ಟಾಪ್) ಪ್ಲಾಟ್ ಫಾರ್ಮ್ ನಿಜಕ್ಕೂ ಒಂದು ವರದಾನವಾಗಿ ಸಿಕ್ಕಿದಂತಾಗಿದೆ.

ಈ ಹಿಂದೆ ಯಾವುದೇ ಒಂದು ಹೊಸ ಚಿತ್ರವು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ 60 ದಿನಗಳ ನಂತರವಷ್ಟೇ ಒಟಿಟಿಯಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಆದರೆ ಈಗ ಒದಗಿ ಬಂದಿರುವ ಆರ್ಥಿಕ ಹೊರೆಯನ್ನು ತಗ್ಗಿಸಲು ತಮ್ಮ ಚಿತ್ರಗಳನ್ನು ನೇರವಾಗಿ ಒಟಿಟಿಯಲ್ಲಿಯೇ ಬಿಡುಗಡೆ ಮಾಡಲು ಹಲವಾರು ನಿರ್ಮಾಪಕರುಗಳು ಮುಂದಾಗಿದ್ದಾರೆ.

ಇದರಿಂದ ನಿರ್ಮಾಪಕರಿಗೆ ದೊಡ್ಡ ಮಟ್ಟದ ಲಾಭವಾಗದೆ ಇದ್ದರೂ ಈಗಿನ ಸಂಕಷ್ಟ ತಗ್ಗಿಸಲು ನೆರವಾಗುತ್ತದೆ. ಆದರೆ ನಿರ್ಮಾಪಕರ ಈ ನಡೆ ಪ್ರದರ್ಶಕರಿಗೆ ನುಂಗಲಾಗದ ತುತ್ತಾಗಿದೆ. ಒಟಿಟಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವುದು ಸರಿಯಲ್ಲ.

ಸಿನಿಮಾ ಮತ್ತು ಮಲ್ಟಿಪ್ಲೆಕ್ಸ್‍ಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ನೀವು ಈ ಸಂದರ್ಭದಲ್ಲಿ ಚಿತ್ರಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿರುವುದು ಬೇಸರ ತಂದಿದೆ. ಚಿತ್ರಮಂದಿರಗಳಲ್ಲಿಯೇ ಚಿತ್ರ ಪ್ರದರ್ಶನ ಮಾಡಿ ಎಂದು ನಿರ್ಮಾಪಕರನ್ನು ಕೇಳಿಕೊಳ್ಳುತ್ತಿವೆ. ಈ ಸಂಬಂಧ ಐನಾಕ್ಸ್ ಸಂಸ್ಥೆ ಬರೆದಿರುವ ಸುದೀರ್ಘ ಪತ್ರವು ಇದೀಗ ವೈರಲ್ ಆಗಿದೆ.

ಮಲ್ಟಿಪ್ಲೆಕ್ಸ್‍ಗಳು ನಿರ್ಮಾಪಕರಿಗೆ ಬರೆದಿರುವ ಪತ್ರದ ಕುರಿತು ಸಿನಿರಸಿಕರು ಟೀಕಿಸಿದ್ದಾರೆ. ಸಾಮಾಜಿಕ ಜÁಲತಾಣಗಳಲ್ಲಿ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಟಿಕೆಟ್, ಪಾನೀಯ ಮತ್ತು ತಿನಿಸಿಗೆ ದುಬಾರಿ ಹಣ ಕೀಳುತ್ತಿದ್ದ ಅವರು ಈಗ ಅಂಗಲಾಚುತ್ತಿದ್ದಾರೆ. ಇಷ್ಟು ದಿನ ಮಾಡಿದ ಸುಲಿಗೆಗೆ ತಕ್ಕ ಪಾಠ ಸಿಕ್ಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬರುವ ಜೂನ್ ತಿಂಗಳಲ್ಲಿ ವಿವಿಧ ಭಾಷೆಗಳ ಒಟ್ಟು ಏಳು ಸಿನಿಮಾಗಳು ಒಟಿಟಿ ಪ್ಲಾಟ್ ಪಾರ್ಮನಲ್ಲಿ ನೇರವಾಗಿ ಬಿಡುಗಡೆಯಾಗುತ್ತಿವೆ. ಅದರಲ್ಲಿ ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಪ್ರೊಡಕ್ಷನ್ಸ್‍ನ ಎರಡು ಚಿತ್ರಗಳು ಕೂಡ ಸೇರಿಕೊಂಡಿವೆ.

ಕನ್ನಡದಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣ ಸಂಸ್ಥೆಯೊಂದು ತಮ್ಮ ಚಿತ್ರವನ್ನು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿಕೊಂಡಿದೆ. ಈ ಹಿಂದೆ ಥಿಯೇಟರ್ ಸಿಗದೆ ಭಿನ್ನ ಎಂಬ ಚಿತ್ರತಂಡವೂ ಸಹ ಇದೇ ನೀತಿ ಅನುಕರಿಸಿತ್ತು.

ಇದಲ್ಲದೆ ಸೂಪರ್‍ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಅಭಿನಯದ ಗುಲಾಬೊ ಸಿತಾಬೋ, ವಿದ್ಯಾಬಾಲನ್ ನಾಯಕಿಯಾಗಿ ನಟಿಸಿರುವ ಶಕುಂತಲಾ ದೇ, ಹಾಗೆಯೇ ತಮಿಳು ನಟ ಸೂರ್ಯ ಮತ್ತು ಆರ್. ಜ್ಯೋತಿಕಾ ನಟನೆಯ ಪೊನ್ ಮಗಳ್ ವಂದಾಳ್ ಚಿತ್ರವನ್ನೂ ಸಹ ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಈಗಾಗಲೇ ಜ್ಯೋತಿಕಾ ಅವರ ಸಿನಿಮಾಗಳನ್ನು ಬಹಿಷ್ಕಾರ ಮಾಡುವುದಾಗಿ ತಮಿಳು ನಾಡಿನ ಚಿತ್ರಮಂದಿರಗಳ ಮಾಲೀಕರು ಎಚ್ಚರಿಕೆ ನೀಡಿದ್ದಾರೆ. ಆದರೂ ಚಿತ್ರತಂಡಗಳು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಬದಲಾಗುವ ದಿಟ್ಟತನ ತೋರಿದ್ದಾರೆ.

ಅಲ್ಲದೆ ಯಾವುದೇ ಒಂದು ನಿರ್ಮಾಣ ಸಂಸ್ಥೆ ತನ್ನ ಎರಡು ಚಲನಚಿತ್ರಗಳನ್ನು ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಮಾಡುವ ಧೈರ್ಯ ಮಾಡಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಈ ರೀತಿ ಕನ್ನಡದ ಸ್ಟಾರ್ ನಟರೊಬ್ಬರು ಒಟಿಟಿ ವೇದಿಕೆಯನ್ನು ಅನುಸರಿಸಿದ್ದು, ಇತರೆ ಅನೇಕ ನಿರ್ಮಾಪಕರಿಗೆ ಸೂರ್ತಿ ನೀಡಿದೆ.

Share This With Your Friends

Related posts