Cinisuddi Fresh Cini News 

“ಓ ಮೈ ಲವ್” ಚಿತ್ರದ 3ನೇ ಹಂತದ ಚಿತ್ರೀಕರಣ ಆರಂಭ

ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ. ರಾಮಾಂಜಿನಿ ಅವರು ಕಥೆ ಬರೆದು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಚಿತ್ರ ಓ ಮೈ ಲವ್. ಕೊರೋನಾ ಬ್ರೇಕ್‌ನಿಂದ ಸ್ಥಗಿತವಾಗಿದ್ದ ಚಿತ್ರದ ಮೂರನೇ ಹಂತದ ಚಿತ್ರೀಕರಣವನ್ನು ಇದೇ ವಾರದಲ್ಲಿ ಪ್ರಾರಂಭಿಸಲು ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ.

ಬೆಂಗಳೂರು, ಕೆಂಗೇರಿ ಉಪನಗರ ಸುತ್ತಮುತ್ತ ಮಗಧೀರ ವಿಲನ್ ದೇವಗಿಲ್ ಹಾಗು ನಾಯಕ ಅಕ್ಷಿತ್ ಶಶಿಕುಮಾರ್ ನಡುವಿನ ಚೇಸಿಂಗ್ ಸೀನ್ ಚಿತ್ರೀಕರಣ ಈ ಹಂತದಲ್ಲಿ ನಡೆಯಲಿದೆ. ಈಗಾಗಲೇ ಶೇ.೬೦ರಷ್ಟು ಶೂಟಿಂಗ್ ಮುಗಿಸಿಕೊಂಡಿರುವ ಲವ್, ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಬಳ್ಳಾರಿ ದರ್ಬಾರ್ ಹಾಗೂ ೧೮-೨೫ ಸಿನಿಮಾಗಳ ನಂತರ ಸ್ಮೈಲ್ ಶ್ರೀನು ಅವರು ಚಿತ್ರಕತೆ-ಸಂಭಾಷಣೆಗಳನ್ನು ಬರೆದು ನಿರ್ದೇಶಿಸುತ್ತಿದ್ದಾರೆ.

ಚಿತ್ರದಲ್ಲಿ ಲವ್‌ಸ್ಟೋರಿಯೇ ಪ್ರಮುಖವಾಗಿದ್ದರೂ ಕಾಮಿಡಿ, ಸೆಂಟಿಮೆಂಟ್ ಜೊತೆಗೆ ಭರ್ಜರಿ ಆಕ್ಷನ್‌ಗೂ ಒತ್ತುಕೊಟ್ಟ ನಿರ್ದೇಶಕ ಸ್ಮೈಲ್ ಶ್ರೀನು ಅವರು ಚಿತ್ರಕಥೆ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಹಾಗೂ ತೆಲುಗು ಖಳನಟ ದೇವ್‌ಗಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವುದು ಅಲ್ಲದೆ ಜಿ.ರಾಮಾಂಜಿನಿ ಅವರಂಥ ಸದಭಿರುಚಿಯ ನಿರ್ಮಾಪಕರು ಹಾಗೂ ಪಾತ್ರಕ್ಕೆ ನ್ಯಾಯ ಒದಗಿಸುವಂಥ ಕಲಾವಿದರು ಸಿಕ್ಕಿರುವುದು ನನ್ನ ಅದೃಷ್ಟ ಎನ್ನುತ್ತಾರೆ ನಿರ್ದೇಶಕ ಸ್ಮೈಲ್ ಶ್ರೀನು.

ಆರಂಭದಿಂದಲೂ ಚಿತ್ರದ ಕಥೆ ಹಾಗೂ ನಿರೂಪಣೆಗೆ ಒತ್ತು ಕೊಡುವುದರೊಂದಿಗೆ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿರುವ ಸ್ಮೈಲ್ ಶ್ರೀನು ಅವರು ಈಬಾರಿಯೂ ಹೊಸಬರ ಜೊತೆ ಚಿತ್ರರಂಗದ ಹೆಸರಾಂತ ಅನುಭವಿ ಕಲಾವಿದರನ್ನು ಕೂಡ ಬಳಸಿಕೊಂಡಿದ್ದಾರೆ.

ಇನ್ನು ಈ ಚಿತ್ರಕ್ಕೆ ಚರಣ್ ಅರ್ಜುನ್ ಅವರ ಸಂಗೀತ, ಹಾಲೇಶ್ ಎಸ್. ಅವರ ಛಾಯಾಗ್ರಹಣ, ರಿಯಲ್ ಸತೀಶ್ ಅವರ ಸಾಹಸ, ಡಾ.ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ವಿ.ಮುರಳಿ ಅವರ ನೃತ್ಯ ನಿರ್ದೇಶನ, ಡಿ.ಮಲ್ಲಿಕ್ ಅವರ ಸಂಕಲನ, ಜನಾರ್ದನ್ ಅವರ ಕಲಾ ನಿರ್ದೇಶನವಿದೆ.

ಹಿರಿಯ ನಿರ್ದೇಶಕ ಎಸ್.ನಾರಾಯಣ್, ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲ್ಕೆರೆ, ದೀಪಿಕಾ ಆರಾಧ್ಯ, ಪೃಥ್ವಿರಾಜ್ , ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾಮ್‌ಕುಮಾರ್ ಹಾಗೂ ಇತರರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

Related posts