Cini Reviews Cinisuddi Fresh Cini News 

ವಾಮಾಚಾರದ ಸುಳಿಯಲ್ಲಿ ಸೋದರಿಯರು : ‘ಓ’ ಚಿತ್ರವಿಮರ್ಶೆ (ರೇಟಿಂಗ್ : 3.5/5)

ರೇಟಿಂಗ್ : 3.5/5

ಚಿತ್ರ : ” ಓ”
ನಿರ್ದೇಶಕ : ಮಹೇಶ್. ಸಿ ನಿರ್ಮಾಪಕ: ಕಿರಣ್ ತಲಕಾಡು
ಸಂಗೀತ : ಕಿರಣ್ ರವೀಂದ್ರನಾಥ್ ಛಾಯಾಗ್ರಾಹಣ : ದಿಲೀಪ್ ಚಕ್ರವರ್ತಿ
ತಾರಾಗಣ : ಸಿದ್ದು ಮೂಲಿಮನಿ, ಮಿಲನಾ ನಾಗರಾಜ್ , ಅಮೃತಾ ಅಯ್ಯಂಗಾರ್ , ಸಂಗೀತಾ, ರಮೇಶ್ ಪಂಡಿತ್, ಸುಚೇಂದ್ರಪ್ರಸಾದ್, ಶ್ರಾವ್ಯಾ ಗಣಪತಿ, ಮಾಸ್ಟರ್ ಆಲಾಪ್ ಹಾಗೂ ಮುಂತಾದವರು…

ಕುತೂಹಲ ಮೂಡಿಸುವ ಬಹಳಷ್ಟು ಹಾರರ್ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆದಿದೆ. ಆ ನಿಟ್ಟಿನಲ್ಲಿ ಸೋದರಿಯರಿಬ್ಬರ ನಡುವೆ ಅಗೋಚರ ಶಕ್ತಿಗಳ ಅಟ್ಟಹಾಸ ಮೈ ನವಿರೇಳುವಂತೆ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಮೂಲಕ ಹೊರಬಂದಿರುವ ಚಿತ್ರವೇ “ಓ”.

ಭವ್ಯವಾದ ಮನೆಯಲ್ಲಿ ತಾಯಿ (ಸಂಗೀತಾ) ಹಾಗೂ ತನ್ನ ಇಬ್ಬರು ಹೆಣ್ಣು ಮಕ್ಕಳು ನಿಖಿತಾ (ಮಿಲನಾ ನಾಗರಾಜ್) ಹಾಗೂ ನಿಶಾ (ಅಮೃತಾ ಅಯ್ಯಂಗಾರ್) ಹಾಗೂ ಪುಟ್ಟ ಪೋರ ಚಿಂಟು (ಮಾ.ಆಲಾಪ್)ರೊಂದಿಗೆ ನೆಮ್ಮದಿ ಬದುಕನ್ನು ನಡೆಸುತ್ತಿರುತ್ತಾಳೆ.

ಇಬ್ಬರು ಹೆಣ್ಣು ಮಕ್ಕಳು ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು ನಿಶಾ ಮಲತಾಯಿ ಮಗಳೆಂಬ ಕಾರಣಕ್ಕಾಗಿ ನಿಖಿತಾ ಅವಳನ್ನು ಕಂಡರೆ ಕೋಪಗೊಳ್ಳುತ್ತಾಳೆ. ಇದರ ನಡುವೆ ಅದೇ ಕಾಲೇಜಿನಲ್ಲಿ ಓದುತ್ತಿರುವ ನಾಯಕ ಸಿದ್ದು (ಸಿದ್ದು ಮೂಲಿಮನಿ) ಅವರ ಕುಟುಂಬಕ್ಕೂ ಆತ್ಮೀಯನಾಗಿದ್ದು, ನಿಶಾಳ ಜೊತೆ ಓಡಾಡಿಕೊಂಡಿದ್ದು ಪ್ರೀತಿಯ ಸೆಳೆತಕ್ಕೆ ಬಿದ್ದಿರುತ್ತಾನೆ. ಹಾಗೆಯೇ ನಿಖಿತಾ ಳನ್ನ ಮನಸಾರೆ ಇಷ್ಟಪಟ್ಟಿರುತ್ತಾನೆ.

ಇವನ ಮನಸ್ಸು ಚಂಚಲವಾಗಿದ್ದು, ತನ್ನಿಷ್ಟದಂತೆ ಸಾಗುತ್ತಿರುತ್ತಾನೆ. ಕಾಲೇಜು ವಿದ್ಯಾರ್ಥಿಗಳ ತುಂಟಾಟ ತಾರೆಗಳ ನಡುವೆ ಗೆಳತಿಯರೆಲ್ಲ ಸೇರಿ ರತಿ ಎಂಬ ಗೆಳತಿಯ ಮನೆಯಲ್ಲಿ ಪಾರ್ಟಿ ಮಾಡಲು ನಿರ್ಧರಿಸುತ್ತಾರೆ. ಆದರೆ ಅವಳ ತಂದೆ ವಾಮಾಚಾರದಲ್ಲಿ ಸಿದ್ಧಹಸ್ತರು.

ಅವರ ಮನೆಯಲ್ಲಿ ಇರುವ ಪುರಾತನ ಕಾಲದ ವಾಮಚಾರದ ಪುಸ್ತಕವನ್ನು ತನ್ನ ಮನೆಗೆ ಕೊಂಡೊಯ್ಯುವ ನಿಶಾ. ಶಕ್ತಿಯುತ ಪುಸ್ತಕದ ಬಗ್ಗೆ ಅರಿಯಲು ಹರಸಾಹಸ ಮಾಡುತ್ತಾಳೆ. ಇದರ ನಡುವೆ ತನ್ನ ಪ್ರೀತಿಯ ಗೆಳೆಯ ಸಿದ್ದು ತನ್ನ ಸಹೋದರಿ ನಿಕ್ಕಿ ಯನ್ನ ಪ್ರೀತಿಸುವ ವಿಚಾರ ತಿಳಿದು ಕೋಪಗೊಳ್ಳುತ್ತಾಳೆ.

ವಾಮಾಚಾರ ಪ್ರಯೋಗದ ಅರ್ಧಂಬರ್ಧ ತಿಳಿದ ನಿಶಾ ತನ್ನ ಸಹೋದರಿ ನಿಕ್ಕಿಯ ಕೂದಲನ್ನು ಬಳಸಿಕೊಂಡು ಅವಳ ಮೇಲೆ ವಾಮಾಚಾರ ಮಾಡುತ್ತಾಳೆ. ಮುಂದೆ ಅದು ಭಾರೀ ಯಡವಟ್ಟಯಾಗಿ ಮನೆಯವರಿಗೆ ದೊಡ್ಡ ಗೊಂದಲವೇ ಸೃಷ್ಟಿ ಮಾಡುತ್ತದೆ. ಇದರಿಂದ ಹೊರ ಬರಲಾಗದೆ ಹರಸಾಹಸ ಮಾಡುವ ನಿಶಾ ತನ್ನ ಪ್ರಾಣವನ್ನೇ ಬಿಡುವಂತಹ ಸ್ಥಿತಿ ಎದುರಾಗುತ್ತದೆ. ಇಲ್ಲಿಂದ ಚಿತ್ರದ ಓಟಕ್ಕೆ ಮತ್ತೊಂದು ಟ್ವಿಸ್ಟ್ ಸಿಗುತ್ತದೆ.

ಓ ಎಂದರೇನು…
ಈ ಸಾವಿಗೆ ಕಾರಣ ಏನು…
ವಾಮಾಚಾರದ ಪುಸ್ತಕದ ಹಿನ್ನೆಲೆ ಏನು… ಬಲಿಯಾಗುವವರು ಯಾರ್ಯಾರು…
ಪರಿಹಾರ ಸಿಗುತ್ತಾ ಇಲ್ವಾ…
ಇಂಥ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ “ಓ” ಚಿತ್ರವನ್ನು ನೋಡಲೇಬೇಕು.

ಸಾಮಾನ್ಯವಾಗಿ ವಾಮಾಚಾರ, ತಂತ್ರ, ಮಂತ್ರಗಳ ಕಥಾನಕ ಸಿದ್ಧಪಡಿಸುವುದೇ ಒಂದು ಚಾಲೆಂಜ್. ಅಂತಹ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ತರುವ ಪ್ರಯತ್ನವನ್ನು ನಿರ್ದೇಶಕ ಮಹೇಶ್.ಸಿ.ಅಮ್ಮಲ್ಲಿದೊಡ್ಡಿ ಮಾಡಿದ್ದಾರೆ. ಕೆಲವು ದೃಶ್ಯಗಳು ಬೆಚ್ಚಿಬೀಳಿಸುವಂತೆ ಮಾಡಿದ್ದು, ಚಿತ್ರದ ದ್ವಿತೀಯ ಭಾಗ ಓಟಕ್ಕೆ ಪೂರಕವಾಗಿ ಸಾಗಿದೆ. ಚಿತ್ರಕತೆಯಲ್ಲಿ ಮತ್ತಷ್ಟು ವೇಗ ಮಾಡಬಹುದಿತ್ತು.

ಇಂಥ ವಿಭಿನ್ನ ಹಾರರ್ ಚಿತ್ರವನ್ನ ಏಕಾಕ್ಷರ ಫಿಲ್ಮ್ಸ್‌ ಬ್ಯಾನರ್ ಮೂಲಕ ನಿರ್ಮಾಣ ಮಾಡುವ ಕಿರಣ್ ತಲಕಾಡು ಅವರ ಸಾಹಸವನ್ನು ಮೆಚ್ಚಲೇ ಬೇಕು. ಈ ಚಿತ್ರ ಭಾಗ ಎರಡಕ್ಕೂ ಸಾಗುವುದಕ್ಕೆ ದಾರಿ ಮಾಡಿಕೊಂಡಿರುವುದು ವಿಶೇಷ. ಈ ಚಿತ್ರಕ್ಕೆ ಸಂಗೀತ ನೀಡಿರುವ ಕಿರಣ್ ರವೀಂದ್ರನಾಥ್ ಅವರ ಹಿನ್ನೆಲೆ ಸಂಗೀತ ಉತ್ತಮವಾಗಿ ಮೂಡಿ ಬಂದಿದೆ. ಅಷ್ಟೇ ಅಚ್ಚುಕಟ್ಟಾಗಿ ದಿಲೀಪ್ ಚಕ್ರವರ್ತಿ ಅವರ ಕ್ಯಾಮೆರಾ ಕೈಚಳಕ ಕೂಡ ಗಮನ ಸೆಳೆಯುತ್ತದೆ. ತಾಂತ್ರಿಕವಾಗಿ ಈ ಚಿತ್ರ ರೋಮಾಂಚನ ಮೂಡಿಸುತ್ತದೆ .

ಇನ್ನು ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿರುವ ಸಿದ್ದು ಮೂಲಿಮನಿ ಸಿಕ್ಕ ಪಾತ್ರಕ್ಕೆ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಹಾಗೆಯೇ ನಾಯಕಿಯಾಗಿ ಅಭಿನಯಿಸಿರುವ ಮಿಲನ ನಾಗರಾಜ್ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಮತ್ತೊಬ್ಬ ನಾಯಕಿ ಅಮೃತಾ ಅಯ್ಯಂಗಾರ್ ಕೂಡ ಲೀಲಾಜಾಲವಾಗಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ತಾಯಿಯ ಪಾತ್ರಧಾರಿ ಸಂಗೀತಾ ಹಾಗೂ ಪುಟ್ಟ ಬಾಲಕನಾಗಿ ಮಾಸ್ಟರ್ ಆಲಾಪ್ ಕೂಡ ಬಹಳ ಅಚ್ಚುಕಟ್ಟಾಗಿ ಪಾತ್ರವನ್ನು ನಿರ್ವಹಿಸಿದ್ದು , ಉಳಿದಂತೆ ಮಂತ್ರವಾದಿ ಪಾತ್ರಧಾರಿ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಕೂಡ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಟ್ಟಾರೆ ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಚಿತ್ರಗಳನ್ನು ಇಷ್ಟಪಡುವ ಸಿನಿಪ್ರಿಯರಿಗೆ ಬಹಳ ಬೇಗ ಸೆಳೆಯುವಂಥ ಚಿತ್ರವಾಗಿ “ಓ” ಬಂದಿದ್ದು, ಎಲ್ಲರೂ ಒಮ್ಮೆ ಈ ಚಿತ್ರವನ್ನ  ನೋಡಬಹುದು

Related posts