Cini Reviews Cinisuddi Fresh Cini News 

ಯೂತ್ ಫುಲ್ ಎಂಟರ್ ಟೈನರ್ ಚಿತ್ರ ‘ನಿನ್ನ ಸನಿಹಕೆ’ (ಚಿತ್ರ ವಿಮರ್ಶೆ)

ರೇಟಿಂಗ್ :4/5
ಚಿತ್ರ : ನಿನ್ನ ಸನಿಹಕೆ
ನಿರ್ದೇಶಕ : ಸೂರಜ್ ಗೌಡ
ನಿರ್ಮಾಪಕರು : ಅಕ್ಷಯ್ ರಾಜಶೇಖರ್, ರಂಗನಾಥ್ ಕೊಡ್ಲಿ
ಛಾಯಾಗ್ರಹಕ : ಅಭಿಲಾಷ್
ಸಂಗೀತ : ರಘು ದೀಕ್ಷಿತ್
ತಾರಾಗಣದಲ್ಲಿ : ಸೂರಜ್ ಗೌಡ, ಧನ್ಯಾ ರಾಮ್ ಕುಮಾರ್ , ಮಂಜುನಾಥ್ ಹೆಗ್ಡೆ, ಚಿತ್ಕಲಾ ಬಿರಾದಾರ್ , ಅರುಣಾ ಬಾಲರಾಜ್ ,ರಾಜನಿಕಾoತ್ ಸೌಮ್ಯ ಭಟ್ ಹಾಗೂ ಮುಂತಾದವರು…

ಚಿತ್ರಮಂದಿರದಲ್ಲಿ 100% ವೀಕ್ಷಕರು ಸಿನಿಮಾ ನೋಡೋ ಅವಕಾಶ ಸಿಗದಂತೆ ಬಿಡುಗಡೆಗೊಂಡಂತಹ ಚಿತ್ರ “ನಿನ್ನ ಸನಿಹಕೆ” ಚಿತ್ರದ ಕಥಾ ಹಂದರ ಪ್ರಕಾರ ಪ್ರಸ್ತುತ ಯುವ ಪೀಳಿಗೆಯ ಮನಸನ್ನ ಮುಟ್ಟುವಂಥ ಅಂಶವನ್ನು ಒಳಗೊಂಡಿದೆ. ಒಂದು ಗಂಡು ಹೆಣ್ಣಿನ ಸ್ನೇಹ, ಪ್ರೀತಿ, ಸಂಬಂಧ ಯಾವೆಲ್ಲಾ ರೂಪವನ್ನು ಪಡೆಯುತ್ತದೆ ಎಂಬುದನ್ನು ಒಂದಷ್ಟು ಕೌಟುಂಬಿಕ ಅಂಶಗಳನ್ನು ಒಳಗೊಂಡಂತೆ ತೆರೆ ಮೇಲೆ ತರುವ ಪ್ರಯತ್ನವನ್ನು ಮಾಡಿದೆ “ನಿನ್ನ ಸನಿಹಕೆ” ಪ್ರೀತಿಯನ್ನು ಕಳೆದುಕೊಂಡ ಪ್ರೇಮಿ… ಎಲ್ಲಿರುತ್ತಾನೆ ಎಂದರೆ ಬಾರ್ ನಲ್ಲಿ. ಹೌದು ನಾಯಕನ ಇಂಟ್ರಡಕ್ಷನ್ ಕೂಡ ಖದರ್ ಲುಕ್ ನಲ್ಲಿ ತೆರೆದುಕೊಳ್ಳುತ್ತದೆ. ಇನ್ನೂ ಚಿತ್ರದ ಕಥೆ ಫ್ಲ್ಯಾಶ್ ಬ್ಯಾಕ್ ಮೂಲಕ ಓಪನ್ನಾಗಿ ನಾಯಕಿಯ ಆಗಮನ ಕೂಡ ಕಲರ್ ಫುಲ್ ಆಗಿ ಸೆಳೆಯುತ್ತದೆ.

ಸಾಮಾನ್ಯವಾಗಿ ಒಂಟಿ ಹುಡುಗಿಯರು ಪಿಜಿಗಳಲ್ಲಿ ಅಥವಾ ಗೆಳತಿಯರೊಂದಿಗೆ ವಾಸ ಮಾಡುತ್ತಾರೆ. ಆದೇ ರೀತಿ ಚಿತ್ರದ ನಾಯಕಿ ಅಮೃತ (ಧನ್ಯಾ ರಾಮ್‍ಕುಮಾರ್) ದಂತ ವೈದ್ಯೆಯಾಗಿ ಕೆಲಸ ಮಾಡುತ್ತಾ ಸ್ವತಂತ್ರವಾಗಿ ವಾಸ ಮಾಡುತ್ತಿರುತ್ತಾಳೆ. ಅದೇ ರೀತಿ ನಾಯಕ ಆದಿತ್ಯ (ಸೂರಜ್ ಗೌಡ) ಕೂಡ ಕಂಪೆನಿ ಒಂದರಲ್ಲಿ ಕೆಲಸ ಮಾಡುತ್ತಾ ಗೆಳೆಯನ ರೂಮಿನಲ್ಲಿ ವಾಸ ಮಾಡುತ್ತಾನೆ. ಬೆಂಗಳೂರಿನಲ್ಲಿ ವಾಸಮಾಡುವ ಇವರಿಬ್ಬರು ಅಚಾನಕ್ಕಾಗಿ ಎದುರು ಬದುರಾಗುತ್ತಾರೆ.

ಅದುವೇ ಆದಿ ಯನ್ನ ಬಕ್ರಾ ಮಾಡಲು ಹೋಗಿ ತಾನೇ ಬಕ್ರಾ ಆಗುತ್ತಾಳೆ ಡಿಂಪಿ. ನಂತರ ಇವರಿಬ್ಬರ ಪರಿಚಯದೊಂದಿಗೆ ಅವರವರ ಕುಟುಂಬದ ವಿಚಾರ ವಿನಿಮಯ. ಹಾಗೆಯೇ ಒಡನಾಟ ಗಾಢವಾಗಿ ಅದು ಪ್ರೀತಿಯ ಸೆಳೆತಕ್ಕೂ ಕಾರಣವಾಗುತ್ತದೆ. ಇವರಿಬ್ಬರದೂ ಒಂದೊಂದು ಆಸೆ ಇರುತ್ತದೆ ಅದು ಕೈಗೂಡಿಸುವ ತವಕ ಹೊಂದಿರುತ್ತಾರೆ.

ಇದರ ನಡುವೆ ಗೆಳೆಯನ ಮದುವೆ ನಿಶ್ಚಯವಾಗಿ ಮನೆಯಿಂದ ಹೊರಬರುವ ಪರಿಸ್ಥಿತಿ ಆದಿಗೆ ಎದುರಾಗುತ್ತದೆ. ನಂತರ ಡಿಂಪಿಯ ಮನೆ ಸೇರುವ ಹಾದಿ. ಇದರೊಂದಿಗೆ ಮನೆಯ ಖರ್ಚು ವೆಚ್ಚವೆಲ್ಲ ಹಂಚಿಕೊಳ್ಳುವ ತೀರ್ಮಾನ ಕೈಗೊಳ್ಳುತ್ತಾರೆ.
ಈ ಪ್ರೇಮಿಗಳ ಮಧ್ಯೆ ಒಂದಷ್ಟು ಅದ್ಭುತ ಕ್ಷಣಗಳು ತಂಟೆ , ತರಲೆ ,ಪ್ರೀತಿ ಎಲ್ಲವೂ ಬೆಸೆದುಕೊಂಡು ಸಾಗುತ್ತದೆ. ದಿನಕಳೆದಂತೆ ಆರೋಪ, ಪ್ರತ್ಯಾರೋಪ, ಜಗಳ, ಶುರುವಾಗುತ್ತದೆ. ಲಿವಿಂಗ್ ರಿಲೇಷನ್ ಶಿಪ್ ನಲ್ಲಿ ಇರುವ ಒಡನಾಟದಲ್ಲಿ ಒಂದಷ್ಟು ಗೊಂದಲ ಶುರುವಾಗಿ ಚಿತ್ರದ ಕ್ಲೈಮ್ಯಾಕ್ಸ್ ಹಂತ ಗಮನ ಸೆಳೆಯುವoತಾಗುತ್ತದೆ.

ಇವರಿಬ್ಬರ ಒಂದಾಗುತ್ತಾರಾ…
ಆದಿ ಕನಸು ಕೈಗೂಡುತ್ತಾ….
ಡಿoಪಿ ಆಸೆ ಈಡೇರುತ್ತಾ….
ಈ ಎಲ್ಲ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ನೀವು “ನಿನ್ನ ಸನಿಹಕೆ” ಚಿತ್ರವನ್ನು ನೋಡಲೇಬೇಕು.

ತನ್ನ ಪ್ರಥಮ ನಿರ್ದೇಶನದ ಚಿತ್ರದಲ್ಲಿ ಬಹಳ ಅಚ್ಚುಕಟ್ಟಾದ ಕತೆಯನ್ನು ಕಟ್ಟಿಕೊಂಡು ಮುಂದೆ ಬಂದಿದ್ದಾರೆ ನಟ ಸೂರಜ್ ಗೌಡ. ಯುವ ಪೀಳಿಗೆಯ ಮನಸ್ಥಿತಿಯನ್ನು ತೆರೆಮೇಲೆ ತರುವುದರೊಂದಿಗೆ ನವಿರಾದ ಪ್ರೇಮ ಕಾವ್ಯವನ್ನ ತೆರೆದಿಟ್ಟಿದ್ದಾರೆ. ಇದರೊಂದಿಗೆ ಕುಟುಂಬಗಳಲ್ಲಿ ಇರುವ ಒಂದಷ್ಟು ಸೂಕ್ಷ್ಮ ವಿಚಾರವನ್ನು ಚಿತ್ರದ ಓಟಕ್ಕೆ ಪೂರಕವಾಗಿ ಕೊಂಡೊಯ್ದಿದ್ದಾರೆ. ಇನ್ನೂ ಆ್ಯಕ್ಷನ್ ದೃಶ್ಯಗಳು ಭರ್ಜರಿ ಅನಿಸಿದ್ರು, ಸ್ಲೋ ಬಿಲ್ಡಪ್ ಹಾಗೂ ಒಂದಷ್ಟು ದೃಶ್ಯಗಳು ಅನಗತ್ಯ ಅನ್ನಿಸುತ್ತದೆ. ಆದರೆ ಒಬ್ಬ ನಟನಾಗಿ ಹಾಗೂ ನಿರ್ದೇಶಕನಾಗಿ ಉತ್ತಮವಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅದೇ ರೀತಿ ನಾಯಕನಾಗಿ ಕೂಡ ತೆರೆಯ ಮೇಲೆ ಸುಂದರವಾಗಿ ಕಾಣುತ್ತಾರೆ. ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ ಎಲ್ಲರ ಗಮನ ಸೆಳೆಯುತ್ತಾರೆ.
ಇನ್ನು ನಾಯಕಿ ವಿಚಾರವಾಗಿ ಹೇಳುವುದಾದರೆ ಧನ್ಯಾ ರಾಮ್ ಕುಮಾರ್ ಪ್ರಥಮವಾಗಿ ಬೆಳ್ಳಿಪರದೆ ಪ್ರವೇಶ ಮಾಡಿದ್ದು , ಪಾತ್ರಕ್ಕೆ ಜೀವ ತುಂಬುವಲ್ಲಿ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಮತ್ತಷ್ಟು ತಯಾರಿ ಅತ್ಯಗತ್ಯ ಅನಿಸಿದರೂ ಕೆಲವೊಂದು ದೃಶ್ಯಗಳಲ್ಲಿ ಹಾಗೂ ಡೈಲಾಗ್ ಡೆಲಿವರಿಯಲ್ಲಿ ಗಮನ ಸೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ನಟಿಯಾಗಿ ಮಿoಚುವ ಲಕ್ಷಣಗಳು ಕಾಣುತ್ತದೆ.
ಉಳಿದಂತೆ ಈ ಚಿತ್ರದ ನಾಯಕನ ತಾಯಿಯಾಗಿ ಅಭಿನಯಿಸಿರುವ ಅರುಣಾ ಬಾಲರಾಜ್ ಹಾಗೂ ನಾಯಕಿಯ ತಂದೆ ತಾಯಿಯಾಗಿ ಮಂಜುನಾಥ್ ಹೆಗ್ಡೆ ಹಾಗೂ ಚಿತ್ಕಲಾ ಬಿರಾದಾರ್ ಸಿಕ್ಕ ಪಾತ್ರಕ್ಕೆ ಜೀವತುಂಬಿ ನಟಿಸಿದ್ದಾರೆ. ಹಾಗೆಯೇ ಇನ್ನೂ ಗೆಳೆಯ ಗೆಳತಿಯರ ಪಾತ್ರಧಾರಿಗಳು ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ.
ಇನ್ನು ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರ ಕೈ ಚಳಕ ಇನ್ನಷ್ಟು ಉತ್ತಮವಾಗಿದೆ. ಛಾಯಾಗ್ರಾಹಕ ಅಭಿಲಾಷ್ ಕಳತ್ತಿ ಕೆಲಸ ಕೂಡಾ ಗಮನಾರ್ಹವಾಗಿದೆ. ಒಟ್ಟಾರೆ ಇಡೀ ಕುಟುಂಬ ಕುಳಿತು ನೋಡುವoತಹ ವಿಭಿನ್ನ ಚಿತ್ರ ತೆರೆ ಮೇಲೆ ಬಂದಿದೆ. ಪ್ರೇಕ್ಷಕರು ಕೂಡ ಈ ಚಿತ್ರವನ್ನು ನೋಡಬಹುದು.

Related posts