Cinisuddi Fresh Cini News 

ಈ ವಾರ ತೆರೆಮೇಲೆ ‘ನವರತ್ನ’ ಪ್ರದರ್ಶನ


ಪ್ರೇಮಿಗಳ ದಿನಾಚರಣೆಯಂದು ಸ್ಯಾಂಡಲ್‍ವುಡ್‍ನಲ್ಲಿ ಬಹಳಷ್ಟು ಚಿತ್ರಗಳು ಬೆಳ್ಳಿಪರದೆಯ ಮೇಲೆ ಪ್ರತ್ಯಕ್ಷವಾಗುತ್ತಿದ್ದು ಅವುಗಳ ಸಾಲಿನಲ್ಲಿ ನವರತ್ನವೊಂದು ಪ್ರಜ್ವಲಿಸಲಿದೆ. ಹುಚ್ಚುಡುಗ್ರು ಖ್ಯಾತಿಯ ಪ್ರತಾಪ್‍ರಾಜ್ ನಿರ್ದೇಶಿಸಿ ನಟಿಸಿರುವ ನವರತ್ನದ ಟ್ರೇಲರ್ ಈಗಾಗಲೇ ಜೋರು ಸದ್ದು ಮಾಡುತ್ತಿದ್ದು, ಪ್ರತಾಪ್‍ಗೆ ಜೋಡಿಯಾಗಿ ಮೋಕ್ಷ ಕುಶಾಲ್ ಇದ್ದು ,ವೈಲ್ಡ್ ಲೈಫ್ ಫೋಟೋಗ್ರಾಫರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮಿತ್‍ಗೆ ನಾಯಕನ ಸ್ನೇಹಿತನ ಪಾತ್ರ.

ನವರತ್ನ ಚಿತ್ರದ ಬಹುತೇಕ ಚಿತ್ರೀಕರಣವನ್ನು ಶೃಂಗೇರಿಯ ಕಗ್ಗ ಹತ್ತಿರದ ದಟ್ಟ ಕಾಡಿನಲ್ಲಿ ಚಿತ್ರೀಕರಿಸಿಕೊಂಡಿರುವುದರಿಂದ ಪ್ರೇಕ್ಷಕರಿಗೆ ಭಯ ಹಾಗೂ ನಗೆ ಎರಡರ ಅನುಭವವನ್ನು ನೀಡಲಿದೆ. ಇಂಡೋನೇಷಿಯಾದಲ್ಲಿ ಎರಡು ಸಾಂಗ್ ಮತ್ತು ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣ ಮಾಡಿದ್ದಾರೆ. ಚಿತ್ರದ ಬಿಡುಗಡೆ ಕುರಿತು ಸುದ್ದಿಗೋಷ್ಠಿ ನಡೆಯಿತು.

ನಿರ್ದೇಶಕ ಪ್ರತಾಪ್ ರಾಜ್ ಮಾತನಾಡಿ, ನವರತ್ನ ಚಿತ್ರವನ್ನು ಕೇವಲ ಒಂದು ಅಂಶವನ್ನು ಇಟ್ಟುಕೊಂಡು ಮಾಡಿದ ಚಿತ್ರ. ಚಿತ್ರೀಕರಣವಾಗುತ್ತಿದ್ದಂತೆ ಇದರ ಕಥೆಯು ಬಿಚ್ಚಿಕೊಂಡು ಹೋಯಿತು. ಆದ್ದರಿಂದಲೇ 2 ವರ್ಷಗಳ ಹಿಂದೆ ಸೆಟ್ಟೇರಿದ ಚಿತ್ರ ಈಗ ಚಿತ್ರಮಂದಿರಗಳಿಗೆ ಲಗ್ಗೆ ಇಡುತ್ತಿದೆ. ನಮಗೆ ಮೊದಲಿನಿಂದಲೂ ಎಲ್ಲರಿಂದಲೂ ಸಹಕಾರ ಸಿಕ್ಕಿತು.

ಆದರೆ ಚಿತ್ರ ಬಿಡುಗಡೆಯಾಗುತ್ತಿರುವ ಸಮಯದಲ್ಲಿ ಭಯ ಕಾಡುತ್ತಿದೆ. ಏಕೆಂದರೆ ಈ ವಾರ 9 ಚಿತ್ರಗಳು ನಮ್ಮ ನವರತ್ನ ಚಿತ್ರಕ್ಕೆ ಪೈಪೋಟಿ ನೀಡುತ್ತಿದೆ. ಆದರೆ ವಿಭಿನ್ನ ಕಥಾಹಂದರವನ್ನು ಹೊಂದಿರುವ ನಮ್ಮ ಚಿತ್ರವನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು.

ನಟಿ ಮೋಕ್ಷಾ ಕುಶಾಲ್ ಮಾತನಾಡಿ, ನನ್ನ ಅಭಿನಯದ ಮೊದಲ ಚಿತ್ರದಲ್ಲೆ ಈ ರೀತಿಯ ಚಿತ್ರದಲ್ಲಿ ನಟಿಸಿರುವುದು ಥ್ರಿಲ್ಲಿಂಗ್ ಗಿದೆ, ಈ ಚಿತ್ರದಲ್ಲಿ ನಾನು ವೈಲ್ಡ್ ನೇಚರ್ ಫೋಟೋಗ್ರಾಫರ್ ಆಗಿದ್ದು ಒಮ್ಮೆ ಕಾಡಿಗೆ ಹೋದಾಗ ನನಗೆ ನಾಯಕ ಹಾಗೂ ಅವರ ಸ್ನೇಹಿತನ ಭೇಟಿಯಾಗುತ್ತದೆ. ನಂತರ ನಡೆಯುವ ಕಥೆಯನ್ನು ನಿರ್ದೇಶಕರು ಥ್ರಿಲ್ಲರ್, ಸಸ್ಪೆನ್ಸ್ ಮೂಲಕ ಹೇಳಿದ್ದು ನನ್ನ ಚಿತ್ರಜೀವನದಲ್ಲಿ ಇದೊಂದು ಸ್ಪೆಷಲ್ ಸಿನಿಮಾವಾಗಿ ನಿಲ್ಲುವ ನವರತ್ನ ಚಿತ್ರವನ್ನು ನೋಡಲು ನಾನು ಕೂಡ ಕಾತರಿಸುತ್ತಿದ್ದೇನೆ ಎಂದು ಹೇಳಿದರು.

ಪ್ರವೀಣ್ ಪೌಲ್ ಅವರ ಸಂಗೀತ ನಿದೇಶನದಲ್ಲಿ ಮೂಡಿಬಂದಿರುವ ನಾಲ್ಕು ಸಾಂಗ್‍ಗಳು ಚಿತ್ರದಲ್ಲಿದೆ. ರಿಜೋ ಜಾನ್ ಹಾಗೂ ಲಕ್ಷ್ಮಿ ರಾಜ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸ್ಯಾಂಡಲ್‍ವುಡ್‍ನಲ್ಲಿ ಈ ವಾರ ಬಿಡುಗಡೆಯಾಗುತ್ತಿರುವ ನವ ಸಿನಿಮಾಗಳ ನಡುವೆಯೂ ನವರತ್ನ ಪ್ರಜ್ವಲಿಸಿ ಗೆಲುವಿನ ದಡ ಮುಟ್ಟುವಂತಾಗಲಿ.

Share This With Your Friends

Related posts