Cini Reviews Cinisuddi Fresh Cini News 

ನಿಗೂಢ ಪಯಣದ “ನವರತ್ನ” ಹಾರ

ರೇಟಿಂಗ್ : 4/5
ಚಿತ್ರ : ನವರತ್ನ
ನಿರ್ದೇಶಕ : ಪ್ರತಾಪ್ ರಾಜ್
ನಿರ್ಮಾಪಕ : ಚಂದ್ರಶೇಖರ್
ಸಂಗೀತ : ವೆoಗಿ
ಛಾಯಾಗ್ರಾಹಕ : ರಿಯೋ .ಪಿ. ಜಾನ್ , ಲಕ್ಷ್ಮೀ ರಾಜ್
ಸಂಕಲನ : ವಿಷ್ಣು
ತಾರಾಗಣ : ಪ್ರತಾಪ್ ರಾಜ್ , ಮೋಕ್ಷ ಕುಶಾಲ್, ಅಮಿತ್ , ಸಿದ್ದರಾಜ್ ಕಲ್ಯಾಣ್ಕರ್ , ಸ್ವಾತಿ , ಶರತ್ ಲೋಹಿತಾಶ್ವ ಹಾಗೂ ಮುಂತಾದವರು…

ರಾಜವಂಶಸ್ಥರ ಕಾಲದಲ್ಲಿ ನಡೆದ ತಂತ್ರ , ಕುತಂತ್ರದ ಕೇಂದ್ರಬಿಂದು ವಿಶೇಷ ಮಂತ್ರಶಕ್ತಿಯಿಂದ ಸಿದ್ಧಪಡಿಸಿದಂತ “ನವರತ್ನ” ದ ಹಾರ ಇಂದಿನ ಪ್ರಸ್ತುತ ಜನಸಾಮಾನ್ಯರ ಕಣ್ಣಿಗೆ ಬಿದ್ದಾಗ ಆಗುವ ಹಲವಾರು ಏರಿಳಿತಗಳ ಕುತೂಹಲಭರಿತ ಚಿತ್ರವೇ ಈ ನವರತ್ನ . ನಾಯಕ (ಪ್ರತಾಪ್) ಪ್ರತಾಪ್‍ರಾಜ್ ಹಾಗೂ ಆತನ ಸ್ನೇಹಿತ(ಲಿಂಗ) ಅಮಿತ್, ನಾಯಕಿ (ಮೋಕ್ಷ) ಮೋಕ್ಷ ಕುಶಾಲ್ ಈ ಮೂರು ಪ್ರಮುಖ ಪಾತ್ರಗಳ ಸುತ್ತ ನಡೆವ ಕಥೆ ಈ ಚಿತ್ರದಲ್ಲಿದೆ.

ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಜಾನರ್‍ನಲ್ಲಿ ನಡೆಯುವ ಈ ಕಥಾಚಿತ್ರದಲ್ಲಿ ಹಲವಾರು ತಿರುವುಗಳಿವೆ. ಕಟ್ಟಡದ ಪಾಯ ಅಗೆಯುವಾಗ ಕೂಲಿ ಕೆಲಸಗಾರನಿಗೆ ಸಿಗುವ ಪೆಟ್ಟಿಗೆಯಲ್ಲಿ ಆ ವಜ್ರ ಖಚಿತವಾದ ಕೋಟಿ ಕೋಟಿ ಬೆಲೆಬಾಳುವ ವಜ್ರಗಳಿಂದಾವೃತವಾದ ನವರತ್ನದ ಹಾರ ಸಿಗುತ್ತದೆ. ಅದರೆ ಜೊತೆಗೊoದು ತಾಳೆಗರಿಯ ಓಲೆಯೂ ಸಿಗುತ್ತದೆ.

ಅಲ್ಲಿಂದ ಚಿತ್ರದ ಕಥೆ ಆರಂಣಭವಾಗಿ ಆ ಹಾರ ಯಾರ್ಯಾರ ಬಳಿ ಹೋಗುತ್ತದೋ ಅವರೆಲ್ಲ ಒಂದಲ್ಲ ಒಂದು ರೀತಿಯ ಅನಾಹುತಗಳಿಂದ ಸಾವನ್ನಪ್ಪುತ್ತಾರೆ. ಆ ಥರ ಆಗುವುದಕ್ಕೆ ಒಂದು ಕಾರಣವೂ ಇರುತ್ತದೆ. ಅದು ಸಾಮಾನ್ಯದ ಹಾರವಾಗಿರುವುದಿಲ್ಲ.

ರಾಜನೊಬ್ಬ ತನ್ನ ದುಷ್ಟ ಆಲೋಚನೆಗಳಿಂದ ಅದರಲ್ಲಿ ದುಷ್ಟ ಶಕ್ತಿಗಳನ್ನು ಆವಾಹನೆಯಾಗುವಂತೆ ಮಾಡಿದ್ದು ಅದನ್ನು ಯಾರೇ ಧರಿಸಿದರೂ ಅವರಿಗೆ ಅನಾಹುತವಾಗುವಂತೆ ಮಾಡಿರುತ್ತಾನೆ. ನಾಯಕ ಒಬ್ಬ ಅಂಡರ್ ಕವರ್ ಪೋಲೀಸ್ ಏಜೆಂಟ್ ಆಗಿದ್ದು, ಕಾಡಿನಲ್ಲಿ ನಡೆಯುವ ನಾಪತ್ತೆ ಪ್ರಕರಣಗಳನ್ನು ಪತ್ತೆ ಹಚ್ಚಲು ನೇಮಕವಾಗಿರುತ್ತಾನೆ.

ಚಿತ್ರದ ಕ್ಲೈಮಾಕ್ಸ್ ಬಹಳ ಕುತೂಹಲಕಾರಿಯಾಗಿದ್ದು , ನಾಯಕ ತನ್ನ ಗುರಿಯನ್ನು ಮುಟ್ಟುತ್ತಾನಾ… ನಾಯಕಿ ಅಂದುಕೊಂಡಂತೆ ನಡೆಯುತ್ತಾ… ಮುತ್ತಿನ ಆಹಾರದ ಗುಟ್ಟು ರಟ್ಟಾಗುತ್ತಾ ಎಂಬ ಎಲ್ಲ ವಿಚಾರವನ್ನು ತಿಳಿಯಬೇಕಾದರೆ ನೀವೆಲ್ಲರೂ ಚಿತ್ರಮಂದಿರದಲ್ಲಿ ನವರತ್ನ ಚಿತ್ರ ನೋಡಲೇಬೇಕು.

ತಮ್ಮ ಪ್ರಥಮ ನಿರ್ದೇಶನದಲ್ಲಿ ನಾಯಕ ಕಂ ನಿರ್ದೇಶಕ ಪ್ರತಾಪ್ ರಾಜ್ ತುಂಬಾ ಇಂಟರೆಸ್ಟಿಂಗ್ ಆಗಿ ತೆಗೆದುಕೊಂಡು ಹೋಗಿದ್ದಾರೆ. ಚಿತ್ರ ಆರಂಭವಾದಾಗಿನಿಂದ ಅಂತ್ಯದವರೆಗೆ ಎಲ್ಲೂ ಬೋರಾಗದಂತೆ ಕುತೂಹಲದಿಂದ ನೋಡಿಸಿಕೊಂಡು ಹೋಗುತ್ತದೆ. ಅದ್ಭುತವಾದ ಫೋಟೋಗ್ರಫಿ ಚಿತ್ರದ ಹೈಲೈಟ್‍ಗಳಲ್ಲೊಂದು. ಕಿಗ್ಗಾ ಹಾಗೂ ಇಂಡೋನೇಷಿಯದ ದಟ್ಟ ಕಾಡಿನ ಸೊಬಗನ್ನು ತೆರೆಮೇಲೆ ಸುಂದರವಾಗಿ ಮೂಡಿಸಿದ್ದಾರೆ. ಹಾಡುಗಳು ಕೇಳಲು, ನೋಡಲು ಬಹು ಸುಂದರವಾಗಿವೆ. ಒಂದು ನವರತ್ನ ಹಾರ ಹಾಗೂ ಅದರ ಸುತ್ತ ನಡೆಯುವ ಕುತೂಹಲಕರ ಕಥಾನಕವನ್ನು ಎರಡೂವರೆ ಗಂಟೆಗಳ ಕಾಲ ಕ್ಯಾರಿ ಮಾಡುವಲ್ಲಿ ಪ್ರತಾಪರಾಜ್ ಮೊದಲ ಪ್ರಯತ್ನದಲ್ಲೇ ಸೈ ಎನಿಸಿಕೊಂಡಿದ್ದಾರೆ. ಹಾಸ್ಯನಟ ಅಮಿತ್ ಇಡೀ ಚಿತ್ರವನ್ನು ತನ್ನ ಚಾಣಾಕ್ಷ ಮಾತುಗಳಿಂದಲೇ ಹಿಡಿದುಕೊಂಡು ಮುಂದೆ ಸಾಗಿ ಚಿತ್ರದ ಓಟಕ್ಕೆ ಸಾಥ್ ನೀಡಿದ್ದಾರೆ. ನಾಯಕಿ ಮೋಕ್ಷಾ ಕುಶಾಲ್ ಬಾಲಿವುಡ್ ನಟಿಯರನ್ನು ಮೀರಿಸುವಂತೆ ಕಾಣುತ್ತಾರೆ. ತನ್ನ ಗ್ಲಾಮರ್ ಹಾಗೂ ಮಾದಕ ಅಭಿನಯದ ಮೂಲಕ ಆಕರ್ಷಿಸುತ್ತಾರೆ. ಚಿತ್ರದಲ್ಲಿ ಎಲ್ಲಾ ಪಾತ್ರಗಳಲ್ಲಿ ಹುಡುಕಾಟವಿರುತ್ತದೆ. ಆದರೆ ಅವರೆಲ್ಲ ಯಾವ ಉದ್ದೇಶಕ್ಕಾಗಿ ಕಾಡಿಗೆ ಹೋಗಿರುತ್ತಾರೆ ಎನ್ನುವುದೇ ಈ ಚಿತ್ರದ ಸಸ್ಪೆನ್ಸ್. ಬಹುತೇಕ ದಟ್ಟ ಕಾಡಿನ ನಡುವೆಯೇ ನಡೆಯುವ ಕುತೂಹಲಕರ ಕಥಾಹಂದರ ಈ ಚಿತ್ರದಲ್ಲಿದೆ. ಚಿತ್ರದ ಓಟ ಮತ್ತಷ್ಟು ಚುರುಕಾಗಬೇಕಿತ್ತು. ಕೆಲವು ಕಡೆ ಅನಗತ್ಯ ದೃಶ್ಯಗಳು ಬೇಕಿರಲಿಲ್ಲ ಅನ್ನಿಸುತ್ತದೆ.
ವೆಂಗಿ ಅವರ ಸಂಗೀತದ ಹಾಡುಗಳು ಕೇಳುವಂತಿವೆ. ರಿಜೋ ಪಿ. ಜಾನ್ ಅವರ ಅದ್ಭೂತ ಕ್ಯಾಮೆರಾ ವರ್ಕ್ ಈ ಚಿತ್ರದ ಮತ್ತೊಂದು ಹೈಲೈಟ್. ಇನ್ನು ಪ್ರಥಮ ಬಾರಿಗೆ ಸಂಕಲನ ಮಾಡಿರುವಂತಹ ವಿಷ್ಣು ಕೈ ಚಳಕ ಕೂಡ ಅಚ್ಚುಕಟ್ಟಾಗಿದೆ. ಉಳಿದಂತೆ ಶರತ್ ಲೋಹಿತಾಶ್ವ, ಬಲ ರಾಜ್ವಾಡಿ, ಸಿದ್ದರಾಜ್ ಕಲ್ಯಾಣ್ಕರ್ ಹಾಗೂ ಸ್ವಾತಿ ತಂತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಟ್ಟಾರೆ ಸಸ್ಪೆನ್ಸ್ , ಥ್ರಿಲ್ಲರ್ ಹಾಗೂ ಆ್ಯಕ್ಷನ್ ಇಷ್ಟಪಡುವವರು ಈ ನವರತ್ನ ಚಿತ್ರವನ್ನು ನೋಡಬಹುದು.

Share This With Your Friends

Related posts