ರೈತರ ಧ್ವನಿ “ನರಗುಂದ ಬಂಡಾಯ” (ಚಿತ್ರ ವಿಮರ್ಶೆ)
ರೇಟಿಂಗ್ : 4/5
ಚಿತ್ರ : ನರಗುಂದ ಬಂಡಾಯ ನಿರ್ದೇಶಕ : ನಾಗೇಂದ್ರ ಮಾಗಡಿ ನಿರ್ಮಾಪಕರು : ಎಸ್. ಜಿ. ಸಿದ್ದೇಶ , ಶೇಖರ್ ಯಲುವಿಗಿ
ಸಂಗೀತ : ಯಶೋವರ್ಧನ್ ಛಾಯಾಗ್ರಾಹಕರು : ಆರ್. ಗಿರಿ, ಆನಂದ್
ತಾರಾಗಣ : ರಕ್ಷ , ಶುಭ ಪೂಂಜಾ , ರವಿ ಚೇತನ್, ಶಿವಕುಮಾರ್, ವಿಶ್ವಾಸ್, ನೀನಾಸಂ ಅಶ್ವತ್ಥ್ , ಸಿದ್ದರಾಜ್ ಕಲ್ಮಾಣಕರ್, ನಾಗೇಂದ್ರ ಮಾಗಡಿ ಹಾಗೂ ಮುಂತಾದವರು…
ರೈತರು ಹಾಗೂ ಸರ್ಕಾರಗಳ ನಡುವೆ ನಡೆಯುವ ಸಮರಗಳು ಒಂದಾ… ಎರಡಾ… ಅದು ಬೂದಿ ಮುಚ್ಚಿದ ಕೆಂಡದಂತೆ ಕಾಣುತ್ತ ಇರುತ್ತದೆ. 80ರ ದಶಕದಲ್ಲಿ ನಡೆದ ಒಂದು ನೈಜ ಘಟನೆ ಕೆಲವರಿಗೆ ಮಾತ್ರ ತಿಳಿದಿತ್ತು. ಈಗ ಪ್ರತಿಯೊಬ್ಬರಿಗೂ ತಿಳಿಸುವ ಕಾರ್ಯ ನಡೆದಿದೆ, ಅದು ನರಗುಂದ ಬಂಡಾಯ ಚಿತ್ರದ ಮೂಲಕ ಈ ಚಿತ್ರ ಪ್ರೇಕ್ಷಕರ ಮುಂದೆ ಬಂದಿದೆ.
ರೈತರಿಗೆ ಸಮಸ್ಯೆ ಬಂದಾಗ ಸರ್ಕಾರ ಸರಿಯಾಗಿ ಸ್ಪಂದಿಸದಿದ್ದರೆ ಏನಾಗುತ್ತದೆ ಎಂಬುದನ್ನು ನಿರ್ದೇಶಕ ನಾಗೇಂದ್ರ ಮಾಗಡಿ ಅವರು ನರಗುಂದ ಬಂಡಾಯ ಚಿತ್ರದ ಮೂಲಕ ತೋರಿಸಿದ್ದಾರೆ. ಇಂದಿನ ದಿನದಲ್ಲಿ ಸರ್ಕಾರವಿಲ್ಲದೆ ರೈತರು ಇಲ್ಲ, ರೈತರಿಂದ ಸರ್ಕಾರವಿದೆ ಎಂಬ ಖಡಕ್ ಡೈಲಾಗ್‍ನಿಂದಲೇ ಚಿತ್ರ ಪ್ರೇಕ್ಷಕರಲ್ಲಿ ಮತ್ತಷ್ಟು ಕಿಚ್ಚು ಹೆಚ್ಚಿಸುತ್ತದೆ. ಅನ್ನದಾತ ಮನಸ್ಸು ಮಾಡಿದರೆ ಎಂಥಾ ಹೋರಾಟಕ್ಕೂ ಸಿದ್ಧ ಎಂಬುದನ್ನು ರೈತರ ಏಳುಬೀಳುಗಳ ಎಳೆಯನ್ನ ಇಟ್ಟುಕೊಂಡು ನಿರೂಪಣೆ ಮಾಡಿದ್ದಾರೆ.
ಉತ್ತರ ಕರ್ನಾಟಕದಲ್ಲಿ ನಡೆಯೋ ಕಥೆ ಇದಾಗಿರುವುದರಿಂದ ಚಿತ್ರವೂ ಸಹ ಅದೇ ಶೈಲಿಯಲ್ಲಿ ಮೂಡಿಬಂದಿದೆ. ಚಿತ್ರದ ಕಥಾ ಪ್ರಕಾರ ರೈತನಾಗಿ ವೀರಣ್ಣ ( ರಕ್ಷ್)ನನ್ನು ನೋಡಿದ ಮೊದಲ ಭೇಟಿಯಲ್ಲೆ ರಾಣಿಗೆ ( ಶುಭಾ ಪೂಂಜಾ) ಪ್ರೀತಿ ಚಿಗುರುತ್ತದೆ. ಒಮ್ಮೆ ರಾಣಿ ನೀರಿಗಾಗಿ ದೇವಸ್ಥಾನದ ಬಳಿ ಬಂದಾಗ, ಊರ ಗೌಡರ ತಮ್ಮನಿಗೆ ಅವಳ ಮೇಲೆ ಆಸೆಯಾಗುತ್ತದೆ.
ಹೆಣ್ಣು ಕೇಳಲು ಆಕೆಯ ಮನೆಗೆ ಬಂದು ಆಕೆಯಿಂದಲೇ ಅವಮಾನಕ್ಕೆಗೊಳಗಾಗುತ್ತಾನೆ. ಅಂದಿನಿಂದ ರಾಣಿಯ ಮೇಲೆ ಸೇಡು ತೀರಿಸಿಕೊಳ್ಳಲು ಆತ ಪ್ರಯತ್ನಿಸುತ್ತಿರುತ್ತಾನೆ. ಹೀಗೆ ಒಂದು ಕಡೆ ಪ್ರೀತಿಯ ಕಥೆ ಸಾಗುತ್ತದೆ. ಈ ನಡುವೆ ಸರ್ಕಾರದಿಂದ ನೀರಾವರಿ, ಅಭಿವೃದ್ಧಿಗಾಗಿ ರೈತರು 2,500 ರೂ. ಕರ ನೀಡುವಂತೆ ಆದೇಶ ಹೊರಡಿಸಲಾಗುತ್ತದೆ. ಆದರೆ ಅಲ್ಲಿನ ಅನ್ನದಾತರು ಭೀಕರ ಬರಗಾಲದಿಂದ ಬಳಲಿರುತ್ತಾರೆ.
ಹಸಿರು ಸೇನೆಯಿಂದ ಕಂದಾಯ ವಸೂಲಿ ಕಡಿಮೆ ಮಾಡುವಂತೆ ಮನವಿ ನೀಡುತ್ತಾರೆ. ಈ ಮನವಿಯನ್ನು ಡಿಸಿ ಹಾಗೂ ಮಿನಿಸ್ಟರ್‍ಗಳು ತಿರಸ್ಕರಿಸುತ್ತಾರೆ. ಆನಂತರ ಸರ್ಕಾರಕ್ಕೆ ರೈತರು ಯಾವ ರೀತಿ ಬಿಸಿ ಮುಟ್ಟಿಸುತ್ತಾರೆ, ಅವರ ಹೋರಾಟಕ್ಕೆ ಸರ್ಕಾರ ಮಣಿಯುತ್ತಾ ಇಲ್ವಾ ಎನ್ನುವುದು ಚಿತ್ರದ ಕೌತುಕ, ಮಧ್ಯಂತರದ ನಂತರ ಮಠದ ಸ್ವಾಮೀಜಿ ವೀರಣ್ಣ ಬಗ್ಗೆ ಮನೆಯವರಿಗೆ ಶಾಕಿಂಗ್ ನ್ಯೂಸ್ ಕೊಡುತ್ತಾರೆ.
ನಂತರ ಪ್ರೀತಿಯ ವಿಷಯ ಮನೆಯವರಿಗೆ ತಿಳಿದು ನಿಶ್ಚಯಕ್ಕೆ ಮುಂದಾಗುತ್ತಾರೆ. ಸಿನಿಮಾದ ಕೊನೆಯಲ್ಲಿ ಮೈನವಿರೇಳಿಸುವ ರೈತರ ಹೋರಾಟ ಶುರುವಾಗುತ್ತದೆ. ಈ ವೇಳೆ ವೀರಪ್ಪ ಕಡ್ಲಿಕೊಪ್ಪ ಹಾಗೂ ಬಸಪ್ಪ ಲಕ್ಕುಂಡಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಚಿತ್ರ ಎಲ್ಲೂ ಬೋರ್ ಆಗದ ರೀತಿ, ರೈತರ ಉಗ್ರ ಹೋರಾಟದ ನಿರೂಪಣೆ ಶೈಲಿ ಚೆನ್ನಾಗಿ ಮೂಡಿಬಂದಿದೆ.
ಯುವ ಪ್ರತಿಭೆ ರಕ್ಷ್ ಅವರ ನಟನೆ ಚೆನ್ನಾಗಿದ್ದು, ಆಕ್ಷನ್ , ನೃತ್ಯ, ಹೋರಾಟದಲ್ಲಿ ಯವುದೇ ಮೋಸವಿಲ್ಲ. ಅವರಿಗೆ ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶುಭಾ ಪೂಂಜಾ ಪಕ್ಕಾ ಹಳ್ಳಿ ಹುಡುಗಿಯಾಗಿ ಉತ್ತರ ಕರ್ನಾಟಕ ಖದರ್‍ನಲ್ಲೇ ಕಾಣಿಸಿಕೊಂಡಿದ್ದಾರೆ. ಸ್ಕ್ರೀನ್ ಮೇಲೆ ಕ್ಯೂಟ್ ಆಗಿ ಚಿಕ್ಕ ಹುಡುಗಿ ತರ ಕಾಣಿಸುತ್ತಾರೆ. ಇನ್ನುಳಿದಂತೆ ವಿಶ್ವಾಸ್ ಶಿವಕುಮಾರ್, ರವಿಚೇತನ್, ನೀನಾಸಂ ಅಶ್ವಥ್, ಮೂಗು ಸುರೇಶ್ ಹಾಗೂ ಸಿದ್ಧರಾಜ್ ಕಲ್ಮಾಣಕರ್ ನಟನೆ ಕೂಡ ಚನ್ನಾಗಿ ಮೂಡಿಬಂದಿದೆ.
ಸಿನಿಮಾದಲ್ಲಿ ಯಶೋವರ್ಧನ್ ಅವರ ಸಂಗೀತ ಸಂಯೋಜನೆಯ ಹಾಡುಗಳಂತೂ ಮತ್ತೆ ಕೇಳುವಂತಿದೆ. ಆರ್. ಗಿರಿ ಹಾಗೂ ಆನಂದ್ ಎಸ್. ಛಾಯಾಗ್ರಹಣ ಕಲರ್‍ಫುಲ್ ಆಗಿ ಮೂಡಿಬಂದಿದೆ. ಒಟ್ಟಾರೆಯಾಗಿ ಲವ್ ಸ್ಟೋರಿ ಜೊತೆಗೆ ಮನರಂಜನೆ ಕೂಡ ಚಿತ್ರದಲ್ಲಿದೆ. ಉತ್ತರ ಕರ್ನಾಟಕದವರೇ ಆದ ನಿರ್ಮಾಪಕರು ಎಸ್. ಜಿ. ಸಿದ್ದೇಶ ಹಾಗೂ ಶೇಖರ್ ಯಲುವಿಗಿ ಅವರ ಧೈರ್ಯವನ್ನು ಮೆಚ್ಚಲೇಬೇಕು.ಒಟ್ಟಾರೆ ರೈತರ ಬವಣೆಯ ಜತೆಗೆ ಪ್ರೀತಿಯ ಎಳೆಯನ್ನು ಕೂಡ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ. ಎಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಬಹುದಾಗಿದೆ.