Cinisuddi Fresh Cini News 

ಶ್ವಾನವೇ ‘ನಾನು ಮತ್ತು ಗುಂಡ’ ಚಿತ್ರದ ನಾಯಕ

ಸ್ಯಾಂಡಲ್‍ವುಡ್‍ನಲ್ಲಿ ಹಿಂದಿನಿಂದಲೂ ಮಾನವ ಹಾಗೂ ನಾಯಿಯ ನಡುವೆ ಸಂಬಂಧದ ಕುರಿತು ಹಲವು ಚಿತ್ರಗಳು ಬಂದಿವೆ, ಡಾ.ವಿಷ್ಣುವರ್ಧನ್ ನಟಿಸಿದ್ದ ನಿಶ್ಯಬ್ದ ಚಿತ್ರದಲ್ಲಿ ನಾಯಿಗಳೇ ದುಷ್ಟ ಕೂಟವನ್ನು ಸದೆಬಡಿಯುವ ದೃಶ್ಯವಿದ್ದರೆ, ಕರಾಟೆಕಿಂಗ್ ಶಂಕರ್‍ನಾಗ್ ಅಭಿನಯದ ತಾಳಿಯ ಆಣೆಯಲ್ಲೂ ನಾಯಿ ಖಳನಟರನ್ನು ಸದೆ ಬಡಿಯುವ ಮೂಲಕ ತಮ್ಮ ಸ್ವಾಮಿ ನಿಷ್ಠೆಯನ್ನು ತೋರಿಸಿತ್ತು. ಈಗ ರಘು ಹಾಸನ್ ನಿರ್ಮಿಸಿರುವ ನಾನು ಮತ್ತು ಗುಂಡ ಚಿತ್ರದಲ್ಲೂ ನಾಯಿಗೆ ಪ್ರಮುಖ ಪಾತ್ರವಿದೆ.

ಅಲ್ಲದೆ ಇತ್ತೀಚೆಗೆ ಬರುವ ಚಿತ್ರಗಳಲ್ಲೂ ನಾಯಿಗೆ ಒಂದು ಪ್ರಮುಖ ಪಾತ್ರ ಇದ್ದೆ ಇರುತ್ತದೆ, ಖನನ ಎಂಬ ಚಿತ್ರದಲ್ಲಿ ಕರೀನಾಯಿ, ವೈಟ್ ಎಂಬ ಕಿರುಚಿತ್ರದಲ್ಲಿ ಬಿಳೀನಾಯಿ ಇದ್ದರೆ, ರಕ್ಷಿತ್‍ಶೆಟ್ಟಿ ಅಭಿನಯದ ಚಾರ್ಲಿ 777ರಲ್ಲೂ ನಾಯಿಗೆ ಮಹತ್ವ ಪಾತ್ರವಿದೆ, ನಾನು ಮತ್ತು ಗುಂಡ ಚಿತ್ರದಲ್ಲಿ ಬಿಳೀ ಬಣ್ಣದ ಲ್ಯಾಬ್ರಡಾರ್ ನಾಯಿಗೆ ಮುಖ್ಯ ಪಾತ್ರ.

ಮೊನ್ನೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭಕ್ಕೆ ನಾಯಿಯ ತರಬೇತುದಾರ ಮರಿದೇವ್ ಆಗಮಿಸಿ ಶುಭ ಕೋರಿದರು.

ತಿಪಟೂರಿನಲ್ಲಿ ನಡೆದ ನೈಜ ಘಟನೆಯನ್ನು ಆಧಾರಿಸಿದ ಈ ಚಿತ್ರದಲ್ಲಿ ಶಿವರಾಜ್ ಕೆ.ಆರ್.ಪೇಟೆ ಹಾಗೂ ಸಂಯುಕ್ತ ಹೊರನಾಡು ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ, ಶ್ರೀನಿವಾಸ ತಿಮ್ಮಯ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ.
ನಿರ್ಮಾಪಕ ಹಾಸನ್ ರಘು ಮಾತನಾಡಿ, ನಾನು ಗಾಂಧಿಗಿರಿ ಎಂಬ ಸಿನಿಮಾವನ್ನು ಮಾಡುವಾಗಲೇ ಶ್ರೀನಿವಾಸ್ ಅವರಲ್ಲಿನ ನಿರ್ದೇಶನದ ಹಸಿವನ್ನು ಕಂಡಿದ್ದೆ.

ಅದಕ್ಕೆ ನಾನೇ ಸ್ವತಃ ನಿರ್ದೇಶಕನಾಗಿದ್ದರೂ ಕೂಡ ಶ್ರೀನಿವಾಸ ತಿಮ್ಮಯ್ಯಗೆ ಈ ಚಿತ್ರವನ್ನು ನಿರ್ದೇಶಿಸುವ ಅವಕಾಶ ಮಾಡಿಕೊಟ್ಟೆ .ನಾಯಿ ಹಾಗೂ ಅದರ ಮಾಲೀಕನ ನಡುವಿನ ಸಂಬಂಧ ಪ್ರೀತಿ, ಬಾಂಧವ್ಯದ ಸುತ್ತ ನಡುವಿನ ಕಥೆ ಈ ಚಿತ್ರದಲ್ಲಿದೆ.

ಅದಕ್ಕೂ ಮಿಗಿಲಾಗಿ ಒಂದು ಪ್ರಮುಖ ಎಳೆ ಈ ಚಿತ್ರದಲ್ಲಿದ್ದು ಅದನ್ನು ಹೇಳಿದರೆ ಇಡೀ ಕಥೆಯೇ ಓಪನ್ ಆಗುತ್ತೆ ಎಂಬ ಕಾರಣಕ್ಕೆ ನಿರ್ಮಾಪಕ ರಘು ಹಾಸನ್ ಕಥೆ ಬಿಟ್ಟು ಉಳಿದಲ್ಲವನ್ನು ಹೇಳಿಕೊಂಡರು.

ನಿರ್ದೇಶಕ ಶ್ರೀನಿವಾಸ ತಿಮ್ಮಯ್ಯ ಮಾತನಾಡಿ, ನನಗೆ ಚಿತ್ರರಂಗದಲ್ಲಿ ಸುಮಾರು ಹತ್ತು ವರ್ಷಗಳ ಅನುಭವವಿದ್ದರೂ ಕೂಡ ನಾನು ಇದುವರೆಗೂ ನಿರ್ದೇಶಿಸಿದ ಯಾವ ಚಿತ್ರಕ್ಕೂ ಕುಂಬಳಕಾಯಿ ಒಡೆಯುವ ಯೋಗ ಬಂದಿರಲಿಲ್ಲ, ಆದರೆ ನಾನು ಮತ್ತು ಗುಂಡ ಎಂಬ ಚಿತ್ರಕ್ಕೆ ಆ ಭಾಗ್ಯ ಬಂದಿದ್ದು ನಿರ್ಮಾಪಕ ರಘು ಹಾಸನ್ ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡಿದ್ದೇನೆ ಎಂದು ಹೇಳಿದರು.

ಹಾಸನ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು ಅಲ್ಲಿ ಭಾಷೆಯನ್ನೇ ಇಡೀ ಚಿತ್ರದಲ್ಲಿ ಬಳಸಲಾಗಿದೆ. ಕಾರ್ತೀಕ್ ಶರ್ಮಾ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದಾರೆ. ಬಂದನ ಅವರ ಕ್ಯಾಮರಾ ವರ್ಕ್ ಈ ಚಿತ್ರಕ್ಕಿದೆ.

ಇಲ್ಲಿ ಸಿಂಬ ಎಂಬ ಹೆಸರಿನ ನಾಯಿಯನ್ನು ಬಳಸಿಕೊಳ್ಳಲಾಗಿದ್ದು ಮರಿದೇವರು ಎಂಬುವವರು ಇದಕ್ಕೆ ತರಬೇತಿ ನೀಡಿದ್ದಾರೆ. ಮೊನ್ನೆ ನಡೆದ ಸಮಾರಂಭದಲ್ಲಿ ಆ ನಾಯಿಯೇ ಪ್ರಮುಖ ಆಕರ್ಷಣಿಯಾಗಿತ್ತು.

Share This With Your Friends

Related posts