Cini Reviews Cinisuddi Fresh Cini News 

ರೌಡಿಯಾದವನ ಕಥೆ ವ್ಯಥೆ (ನಾನ್ ರೌಡಿ ಚಿತ್ರವಿಮರ್ಶೆ – ರೇಟಿಂಗ್ : 3/5)

ರೇಟಿಂಗ್ : 3/5

ಚಿತ್ರ : ನಾನ್ ರೌಡಿ
ನಿರ್ದೇಶಕ : ಪ್ರಶಾಂತ್.ಕೆ.ಶೆಟ್ಟಿ ನಿರ್ಮಾಪಕ : ಕುಮಾರ್.ಎನ್.ಬಂಗೇರ
ಸಂಗೀತ : ಗುರುರಾಜ್ ಹೊಸಕೋಟೆ
ಛಾಯಾಗ್ರಹಕ : ಅಣಜಿ ನಾಗರಾಜ್
ತಾರಾಗಣ : ಪ್ರಶಾಂತ್, ತನುಶ್ರೀ ಚಟರ್ಜಿ, ಸಮೀರಾ ಖಾನ್, ಗುರುರಾಜ್ ಹೊಸಕೋಟೆ, ಗಣೇಶ್ ರಾವ್ ಹಾಗೂ ಮುಂತಾದವರು…

ಮಾಯಾನಗರಿಗೆ ಬಂದು ಬದುಕು ಕಟ್ಟಿಕೊಳ್ಳಲು ಮುಂದಾಗುವ ಅದೆಷ್ಟೋ ಮಂದಿಗಳ ಜೀವನದ ದಿಕ್ಕೇ ಬದಲಾಗಿದೆ. ಹಣ, ಹೆಸರು ಸಂಪಾದನೆ ಮಾಡಬೇಕೆಂಬ ದೃಷ್ಟಿಯಿಂದ ಸರಿ ದಾರಿಯನ್ನು ಬಿಟ್ಟು ಅಡ್ಡದಾರಿಗೆ ನುಗ್ಗಿದವರೇ ಹಚ್ಚು. ಹೆಸರು ಮಾಡುವ ನೆಪದಲ್ಲಿ ಲಾಂಗು, ಮಚ್ಚು ಹಿಡಿದು ಗ್ಯಾಂಗ್ ಕಟ್ಟಿಕೊಂಡು ಡಾನ್ ಆಗುವ ಆಸೆಯೊಂದಿಗೆ ಕಟೌಟ್ ಹಾಕಿಸಿಕೊಂಡ ಕೆಲವು ದುಷ್ಟ ರಾಜಕೀಯ,ಪೊಲೀಸ್ ವ್ಯಕ್ತಿಗಳ ಜೊತೆ ಕೈಜೋಡಿಸಿ ಬದುಕುತ್ತಾರೆ.

ಇನ್ನೂ ಕೆಲವರು ಬದುಕಿಗಾಗಿ ಬರುವ ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ದಂಧೆ ನಡೆಸುತ್ತಾ ಅವರ ಭವಿಷ್ಯವನ್ನ ಮಣ್ಣುಪಾಲು ಮಾಡುತ್ತಾರೆ. ದಿನಿತ್ಯ ಸಮಾಜದಲ್ಲಿ ನಡೆಯುತ್ತಿರುವ ಅದೆಷ್ಟೋ ನೋವಿನ ಕಥೆಗಳು ಕಣದಂತೆ ಮಾಯವಾಗುತ್ತಿದೆ. ಅದರ ಭಾಗವಾಗಿ ಒಂದಷ್ಟು ಜಾಗೃತಿ ಮೂಡಿಸುವ ಅಂಶದೊಂದಿಗೆ ಪಾಪಿಗಳ ಅಟ್ಟಹಾಸ, ಹೆಣ್ಣುಮಕ್ಕಳ ನರಕಯಾತನೆ, ಮುಗ್ಧರ ಬದುಕಿನ ಚಡಪಡಿಕೆ ಬದುಕು ಬವಣೆಯನ್ನು ತೆರೆಮೇಲೆ ತಂದಿರುವ ಚಿತ್ರವೇ “ನಾನ್ ರೌಡಿ”.

ಚಿತ್ರದ ಕಥಾಹಂದರ ತೆರೆದುಕೊಳ್ಳುವುದೇ ಜೈಲು ಆವರಣದೊಳಗೆ.ನಾಯಕ ಪಚ್ಚಿ (ಪ್ರಶಾಂತ್.ಕೆ. ಶೆಟ್ಟಿ).ಬೆಂಗ್ಳೂರಿಗೆ ಡಾನ್ ಆಗಿದ್ದವರು ಕೊಂದು ಜೈಲುವಾಸ ಅನುಭವಿಸುವ ಪ್ರಕಾಶ್ ಜೈಲಿನಿಂದ ಹೊರಬರಲು ಮತ್ತೊಬ್ಬ ಪುಡಿರೌಡಿಯನ್ನ ಹೊಡೆದು ಹೊರಬಂದು ತಾಯಿ ಹಾಗೂ ಮಗಳನ್ನು ರೇಪ್ ಹಾಗೂ ಮಗುವೊಂದನ್ನು ಕೊಲ್ಲುತ್ತಾನೆ.

ಇದು ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೂ ದೊಡ್ಡ ತಲೆನೋವಾಗುತ್ತದೆ.ಇವನನ್ನು ಹಿಡಿಯಲು ಹರಸಾಹಸವೇ ಮಾಡಬೇಕಾಗುತ್ತದೆ. ತನ್ನ ಚಟ ತೀರಿಸಿಕೊಳ್ಳಲು ವೇಶ್ಯೆಯ ಮನೆಗೆ ಹೋಗುವ ಪಚ್ಚಿ ಅವಳನ್ನೇ ಮದುವೆ ಆಗಲು ನಿರ್ಧರಿಸುತ್ತಾನೆ. ಎಲ್ಲದಕ್ಕೂ ಕೊಂಡಿಯಂತೆ ಫ್ಲ್ಯಾಶ್ ಬ್ಯಾಕ್ ತೆರೆದುಕೊಳ್ಳುತ್ತಾ ಹೋಗುತ್ತದೆ.

ಹಳ್ಳಿಯ ಹುಡುಗನಾಗಿ ಊರಿನಲ್ಲಿ ತನ್ನ ಆಟ, ತುಂಟಾಟ, ತರ್ಲೆ ಮಾಡುತ್ತಾ ಮನೆ ಕಟ್ಟುವ ಸಲುವಾಗಿ ಮರಳು ಸಾಗಿಸುವ ಕೆಲಸ ಮಾಡುತ್ತಾ, ಸರ್ಕಾರಿ ಟೀಚರ್ ಹುಡುಗಿಯೊಬ್ಬಳನ್ನು ಪಟಾಯಿಸಿ ಮದುವೆಯಾಗಲು ಮುಂದಾಗುತ್ತಾನೆ. ಆದರೆ ಆ ಹುಡುಗಿ ಅವನೊಟ್ಟಿಗೆ ಓಡಾಡಿ ಕೊನೆಗೆ ಕೈ ಕೊಡುತ್ತಾಳೆ.

ಇತ್ತ ತನ್ನ ತಂದೆಯಿಂದ ಸದಾ ಉಗ್ಗಿಸಿಕೊಳ್ಳುವ ನಾಯಕ ತನ್ನ ಅಕ್ಕನ ಮಾತಿನಂತೆ ಬೆಂಗಳೂರಿಗೆ ಹೋಗಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸುತ್ತಾನೆ. ನಗರಕ್ಕೆ ಬರುವ ನಾಯಕ ಪೊಲೀಸ್ ಇಲಾಖೆಯ ವ್ಯಕ್ತಿಯೊಬ್ಬನ ಬೈಕಿನಲ್ಲಿ ಡ್ರಾಪ್ ಪಡೆಯುವ ಮಾರ್ಗ ಮಧ್ಯೆ ಹಲವು ಏರಿಯಾಗಳ ರೌಡಿಗಳ ಕಟೌಟ್ ಬಗ್ಗೆ ತಿಳಿದುಕೊಳ್ಳುತ್ತಾನೆ. ಬದುಕು ಹೇಗೆಲ್ಲಾ ಇದೆ ಎಂಬ ಪ್ರಶ್ನೆ ಅವನನ್ನು ಕಾಡುತ್ತಿದೆ. ತಾನೊಂದು ಪಿಜಿ ಹಾಗೂ ತನ್ನ ಅಕ್ಕ ಮತ್ತು ಪಿಜಿ ವಾಸವಿರುವ ಸಮಯದಲ್ಲೇ ಹಲವು ವಿಚಾರಗಳು ಪ್ರಕಾಶನ ಗಮನಕ್ಕೆ ಬರುತ್ತದೆ. ತನ್ನ ಮನೆಗೆ ಆಸರೆಯಾಗಿದ್ದ ಅಕ್ಕ ಸಾವನ್ನಪ್ಪುತ್ತಾಳೆ. ಇದು ಪ್ರಕಾಶನ ಮನಸಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ.ಇದು ಕಥೆಗೆ ಮತ್ತೊಂದು ಟ್ವಿಸ್ಟ್ ನೀಡುತ್ತಾದೆ.
ಚಿತ್ರದ ಕ್ಲೈಮ್ಯಾಕ್ಸ್ ಹಂತದವರೆಗೂ ಚಿತ್ರದಲ್ಲಿ ಹಲವಾರು ಏರಿಳಿತಗಳನ್ನು, ಫ್ಲ್ಯಾಶ್ ಬ್ಯಾಕ್ ಗಳು ರೋಚಕವಾಗಿ ಸಾಗುತ್ತಾ ಹೋಗುತ್ತದೆ.

ರೌಡಿ ಆಗಲು ಕಾರಣವೇನು…
ಅಕ್ಕನ ಸಾವಿಗೆ ಕಾರಣ… ಇಷ್ಟಪಟ್ಟವಳನ್ನ ಮದುವೆ ಆಗ್ತನಾ..
ರೇಪ್ ಹಾಗೂ ಮರ್ಡರ್ ಮಾಡಲು ಕಾರಣವೇನು..
ಪೊಲೀಸ್ ಕೈಗೆ ಸಿಕ್ತಾನಾ…
ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಒಮ್ಮೆ ನಾನ್ ರೌಡಿ ಯನ್ನ ನೋಡ್ಬೇಕು.

ಈ ಹಿಂದೆ ಮನಸಿನ ಪುಟದಲಿ ಹಾಗೂ ಬ್ರಾಂಡ್ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರಶಾಂತ್.ಕೆ.ಶೆಟ್ಟಿ ಈ “ನಾನ್ ರೌಡಿ” ಚಿತ್ರವನ್ನು ನಿರ್ದೇಶನ , ನಿರ್ಮಾಣದ ಜೊತೆಗೆ ನಟನಾಗಿ ಅಭಿನಯಿಸಿದ್ದಾರೆ. ಚಿತ್ರದ ಮೂಲ ಕಥಾವಸ್ತು ಜಾಗೃತಿ ಮೂಡಿಸುವ ಅಂಶ ಒಳಗೊಂಡಿದ್ದರೂ ಚಿತ್ರಕಥೆ ಹಣೆಯುವುದರಲ್ಲಿ ದಾರಿ ತಪ್ಪಿದ್ದಾರೆ ಎನ್ನಬಹುದು. ಬಹಳಷ್ಟು ವಿಚಾರಗಳನ್ನು ಹೇಳುವ ಹರಿಬಿರಿ ಕಾಣುತ್ತದೆ.

ಇನ್ನು ಅಭಿನಯ ವಿಚಾರವಾಗಿ ಇನ್ನಷ್ಟು ಪರಿಪಕ್ವತೆ ಅಗತ್ಯವಿದೆ. ಮಾತಿಗೆ ಫಿಲ್ಟರ್ ಇಲ್ಲದೆ ನೇರವಾಗಿ ತೋಚಿದ್ದು ಮಾತನಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಹೆಣ್ಣುಮಕ್ಕಳ ಬದುಕಿಗೆ ರಕ್ಷಣೆ ವಿಚಾರ, ರೌಡಿಗಳ ಅಟ್ಟಹಾಸಕ್ಕೆ ತೆರೆ ಎಳೆಯುವುದರ ಜತೆಗೆ ಸಮಾಜಕ್ಕೆ ಸಂದೇಶ ನೀಡುವ ಹಾದಿಯಲ್ಲಿ ಸಾಗಿರುವುದು ಗಮನಾರ್ಹವಾಗಿದೆ.

ಮುಂಬೈ ಮೂಲದ ತನುಶ್ರೀ ಚಟರ್ಜಿ ನಾಯಕಿಯಾಗಿ ವೇಶ್ಯೆಯ ಪಾತ್ರದಲ್ಲಿ ಬೋಲ್ಡ್ ಯಾಗಿ ನಟಿಸಿದ್ದಾರೆ. ಐಟಂ ಹಾಡಿನಲ್ಲಿ ಸಮೀರಾಖಾನ್ ಹೆಜ್ಜೆ ಹಾಕಿದ್ದಾರೆ. ಇನ್ನು ಈ ಚಿತ್ರದಲ್ಲಿ ಅಭಿನಯಿಸಿರುವ ಗಣೇಶ್ ರಾವ್ , ಫಯಾಜ್‌ಖಾನ್ ಸೇರಿದಂತೆ ಬರುವ ಬಹುತೇಕ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ.

ಈ ಚಿತ್ರದ ಹಾಡುಗಳಿಗೆ ಹಿರಿಯ ಜನಪದ ಗಾಯಕ ಗುರುರಾಜ ಹೊಸಕೋಟೆ ಸಂಗೀತ, ಸಾಹಿತ್ಯ ರಚನೆಯ ಜೊತೆ ಅವರೇ ಒಂದು ಹಾಡಿಗೆ ದನಿಯಾಗಿದ್ದಾರೆ.ವಿನು ಮನಸು ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಹಾಗೆಯೇ ಹಿರಿಯ ಛಾಯಾಗ್ರಾಹಕ ಅಣಜಿ ನಾಗರಾಜ್ ತಮ್ಮ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಆ್ಯಕ್ಷನ್ ಹಾಗೂ ಸೆಂಟಿಮೆಂಟ್ ಅಂಶವನ್ನು ಒಳಗೊಂಡಿದ್ದು , ಮಾಸ್ ಪ್ರಿಯರಿಗೆ ಇಷ್ಟವಾಗುವಂತಹ ಕಂಟೆಂಟ್ ಈ “ನಾನ್ ರೌಡಿ” ಚಿತ್ರದಲ್ಲಿದ್ದು ಒಮ್ಮೆ ಈ ಚಿತ್ರವನ್ನ ನೋಡಬಹುದಾಗಿದೆ.

Related posts