Cinisuddi Fresh Cini News 

“ನಮ್ಮ ಮಗು” ಚಿತ್ರಕ್ಕೆ ಪ್ರಶಸ್ತಿ ಸಿಗಬೇಕಿತ್ತು ಎಂದ ನಿರ್ದೇಶಕ ಕೆ. ಗಣೇಶನ್

ಸಿನಿಮಾನೇ ಜೀವನ ಎಂದು ನಂಬಿಕೊಂಡು ಬಂದಿರುವ ಹಲವಾರು ಪ್ರತಿಭೆಗಳು ಇಂದಿಗೂ ನಮ್ಮ ನಡುವೆ ಇದ್ದಾರೆ. ಸಮಾಜಮುಖಿ ಕತೆಗಳು ಜನರಲ್ಲಿ ಜಾಗೃತಿ ಮೂಡಿಸುವಂಥ ವಿಚಾರಗಳಿರುವ ಚಿತ್ರಗಳು ಆಗಾಗ ತೆರೆಮೇಲೆ ತರುತ್ತಲೇ ಇದ್ದಾರೆ.

ಆ ನಿಟ್ಟಿನಲ್ಲಿ ಕನ್ನಡ ಚಿತ್ರಗಳು ಸುಮಾರು 30 ವರ್ಷಗಳಿಂದ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾ , 12 ಚಿತ್ರಗಳನ್ನು ನಿರ್ದೇಶಿಸಿ ಹಾಗೂ ನಿರ್ಮಾಣ ಮಾಡಿರುವ ನಿರ್ದೇಶಕ ಕೆ. ಗಣೇಶನ್. ಈಗ ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬಂದಿರುವ ಮಕ್ಕಳ ಕಳ್ಳಸಾಗಾಣಿಕೆಯ ವಿಷಯವನ್ನು ಪ್ರಮುಖವಾಗಿಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರ “ನಮ್ಮ ಮಗು”.

ಈ ಚಿತ್ರ ಯುನೆಸ್ಕೋ ಅಂಗ ಸಂಸ್ಥೆಯಾದ ಇಂಟರ್‍ನ್ಯಾಷನಲ್ ಆರ್ಗನೈಸೇಷನ್ ಫಾರ್ ಮೈಗ್ರೇಷನ್(ಐಒಎಂ) ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಪ್ರದರ್ಶನ ಕಂಡ ಕನ್ನಡದ ಮೊದಲ ಸಿನಿಮಾ ಇದಾಗಿದೆ. ಚಿಕ್ಕಮಕ್ಕಳ ಅಪಹರಣದ ಜಾಲ, ಮಕ್ಕಳ ಮೇಲೆ ನಡೆಯುವ ದೌರ್ಜನ್ಯದಂತಹ ಸಮಾಜದ ಗಂಭೀರ ಸಮಸ್ಯೆಗಳನ್ನು ಇಟ್ಟುಕೊಂಡು ನಿರ್ದೇಶಕ ಕೆ. ಗಣೇಶನ್ ಅವರು ಈ ಚಿತ್ರವನ್ನು ತೆರೆಮೇಲೆ ಮೂಡಿಸಿದ್ದಾರೆ.

ಹಿಂದೆ ನವಭಾರತಿ ಚಿತ್ರ ನಿರ್ದೇಶಿಸಿದ್ದ ಗಣೇಶನ್ ಈಗಾಗಲೇ ತಮಿಳು, ಹಿಂದಿ, ಕನ್ನಡ ಭಾಷೆ ಸೇರಿದಂತೆ 10ಕ್ಕೂ ಹೆಚ್ಚು ಸಿನಿಮಾಗಳನ್ನು೬ ನಿರ್ದೇಶಿಸಿದ್ದಾರೆ. ಕೆ.ಗಣೇಶನ್ ಈ ಸಿನಿಮಾದ ಪ್ರಮುಖ ಪಾತ್ರದಲ್ಲೂ ಸಹ ಕಾಣಿಸಿಕೊಂಡಿದ್ದಾರೆ, ಹೊಸಬರ ಹೊಸ ಪ್ರಯತ್ನವಾಗಿ ಮೂಡಿಬಂದಿರುವ ಈ ಚಿತ್ರವು ಪ್ರಪಂಚದ ವಿವಿಧ ದೇಶಗಳ 13 ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ವಿಮರ್ಶಕರ ಮೆಚ್ಚುಗೆ ಪಡೆದಿದೆ.

ಅಲ್ಲದೆ ಐಒಎಂ ಸಂಸ್ಥೆಯು ದೆಹಲಿಯ ಇಂಡಿಯಾ ಅಂಡ್ ಅಮೆರಿಕನ್ ಸೆಂಟರ್ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಹ “ನಮ್ಮ ಮಗು” ಚಿತ್ರ ಪ್ರದರ್ಶನ ಕಂಡಿದೆ. ನ್ಯಾಷನಲ್ ಸ್ಲೇವರಿ ಅಂಡ್ ಹ್ಯೂಮನ್ ಟ್ರಾಫಿಕಿಂಗ್ ಪ್ರಿವೆನ್ಷನ್ ತಿಂಗಳು ಎಂಬ ಕಾರ್ಯಕ್ರಮ ಇದೇ ತಿಂಗಳಲ್ಲಿ ನಡೆಯುತ್ತಿದ್ದು, ಭಾರತದಲ್ಲಿ ನಡೆಯುತ್ತಿರುವ ಮಾನವ ಕಳ್ಳಸಾಗಾಣಿಕೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದ ಭಾಗವಾಗಿ ನಮ್ಮ ಮಗು ಚಿತ್ರವನ್ನು ವಿಶೇಷ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಮೊನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತಂತೆ ಮಾತನಾಡಿದ ನಿರ್ದೇಶಕ ಗಣೇಶನ್, “ನಮ್ಮ ಮಗು” ಚಿತ್ರ ಇಷ್ಟೆಲ್ಲ ರೆಕಾರ್ಡ್ ಮಾಡುತ್ತಿರುವುದು ನನಗೆ ತುಂಬಾ ಖುಷಿ ಕೊಟ್ಟಿದೆ. ಇದೇ ತಿಂಗಳ 21ರಂದು ದೆಹಲಿಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ನಾನು ಕೂಡ ಭಾಗಿಯಾಗಲಿದೇನೆ. ಬೇಸರದ ಸಂಗತಿ ಎಂದರೆ, ಬೇರೆ ಬೇರೆ ದೇಶಗಳಲ್ಲಿ ನಮ್ಮ ಚಿತ್ರವು ಪ್ರದರ್ಶನಗೊಂಡಿದೆ. ಆದರೆ ನಮ್ಮ ನೆಲದಲೇ ಇನ್ನೂ ಪ್ರದರ್ಶನ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ “ನಮ್ಮ ಮಗು” ಚಿತ್ರದ ಟ್ರೈಲರ್‍ನ್ನು ರಿಲೀಸ್ ಮಾಡಲಾಗಿದೆ. ಬಾಲ ನಟಿ ಮೇವಿಷ್ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕಷ್ಟಪಟ್ಟು ನಿರ್ಮಿಸಿದ ನಮ್ಮ ಚಿತ್ರಕ್ಕೆ ಈವರೆಗೆ ಸರ್ಕಾರದಿಂದ ಯಾವುದೇ ಪ್ರಶಸ್ತಿ ಪುರಸ್ಕಾರ ಬರದೇ ಇರುವುದು ನನಗೆ ಬೇಸರ ತಂದಿದೆ. ಇದಕ್ಕೆ ಏನು ಕಾರಣ ಎಂಬುದು ನನಗಿನ್ನೂ ತಿಳಿದಿಲ್ಲ , ಸಿನಿಮಾ ತುಂಬಾ ನೈಜವಾಗಿ ಮೂಡಿಬಂದಿದೆ ಎಂದರು.

ಇನ್ನು ಈ ಚಿತ್ರದಲ್ಲಿ ಬೇಬಿ ಮೇವಿಶ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಈಕೆಗೆ ಏಳನೇ ವಯಸ್ಸಿನಲ್ಲಿ ಇದ್ದಾಗ ಈ ಚಿತ್ರವನ್ನ ಚಿತ್ರೀಕರಣ ಮಾಡಿದ್ದಾರೆ. ಅಂದರೆ 2015 ರಲ್ಲಿ ಸಿದ್ಧವಾದ ಚಿತ್ರ ಇದಾಗಿದ್ದು , ಮೇವಿಷ್ ಮಾತನಾಡುತ್ತಾ ನಾನು ಬಹಳ ಶ್ರಮವಹಿಸಿ ಬಿಸಿಲಿನಲ್ಲಿ ಪಾತ್ರವನ್ನು ನಿರ್ವಹಿಸಿದ್ದೆ , ನಿರ್ದೇಶಕರು ಕೂಡ ನನ್ನ ಪಾತ್ರವನ್ನು ಕಂಡು ನಿನಗೆ ರಾಜ್ಯ ಅಥವಾ ರಾಷ್ಟ್ರ ಪ್ರಶಸ್ತಿ ಬಂದೇ ಬರುತ್ತದೆ ಎಂದು ಹೇಳಿದರು. ಆದರೆ ನಮ್ಮ ಶ್ರಮಕ್ಕೆ ಇನ್ನೂ ಯಾವ ಪ್ರತಿಫಲವೂ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದಳು ಈ ಪುಟಾಣಿ.

ಮಕ್ಕಳ ಚಿತ್ರಗಳನ್ನು ಪ್ರೋತ್ಸಾಹ ನೀಡುವುದು ಅತ್ಯಗತ್ಯ . ಒಟ್ಟಾರೆ “ನಮ್ಮ ಮಗು” ಚಿತ್ರತಂಡ ಬಹಳ ಬೇಸರ ವ್ಯಕ್ತಪಡಿಸಿದೆ. ಮತ್ತೊಂದು ವಿಷಯವೇನೆಂದರೆ ನಿರ್ದೇಶಕ ಗಣೇಶನ್ ರವರು ಇನ್ನೊಂದು ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಇದಕ್ಕೆ ಸಂಗೀತ ಮಾಂತ್ರಿಕ ಇಳಯರಾಜ ಅವರ ಸಂಗೀತ ನೀಡಿದ್ದಾರಂತೆ. ಇದೊಂದು ಪ್ರೇಮಮಯ ಚಿತ್ರವಾಗಿದ್ದು ಈ ಚಿತ್ರಕ್ಕೆ ‘ಪ್ರೀತಿಸು’ ಎಂಬ ಶೀರ್ಷಿಕೆಯನ್ನ ಇಟ್ಟಿದ್ದು , ಕನ್ನಡ , ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಚಿತ್ರವನ್ನ ಸಿದ್ಧಪಡಿಸಿದ್ದಾರಂತೆ. ಅತೀ ಶೀಘ್ರದಲ್ಲಿ ಚಿತ್ರದ ಹೆಚ್ಚಿನ ಮಾಹಿತಿಯನ್ನು ನೀಡಿ ತೆರೆಗೆ ತರಲಿದ್ದಾರಂತೆ.

Related posts