Cini Reviews Cinisuddi Fresh Cini News 

ಪ್ರೀತಿ ಹಾಗೂ ಸಂಬಂಧಗಳ ಬೆಸುಗೆ “ಮುಗಿಲ್ ಪೇಟೆ” (ಚಿತ್ರ ವಿಮರ್ಶೆ- ರೇಟಿಂಗ್ : 4/5)

ವರದಿ:ಎಸ್.ಜಗದೀಶ್ ಕುಮಾರ್
email : sjagadishtv@gmail.com


ರೇಟಿಂಗ್ : 4/5
ಚಿತ್ರ : ಮುಗಿಲ್ ಪೇಟೆ ನಿರ್ದೇಶಕ : ಭರತ್. ಎಸ್. ನಾವುಂದ
ನಿರ್ಮಾಪಕರು : ರಕ್ಷಾ ವಿಜಯ್‌ಕುಮಾರ್
ಸಂಗೀತ : ಶ್ರೀಧರ್.‌ ವಿ. ಸಂಭ್ರಮ್
ಛಾಯಗ್ರಹಣ : ರವಿವರ್ಮ
ತಾರಾಗಣ : ಮನುರoಜನ್ , ಲೋಹಾರ್ ಖಯಾದು , ತಾರಾ ,ಅವಿನಾಶ್ ,ರoಗಾಯಣ ರಘು , ಸಾಧುಕೋಕಿಲ, ಅಪ್ಪಣ್ಣ , ಪ್ರಶಾಂತ್ ಸಿದ್ದಿ , ರಿಷಿ , ಕಾವ್ಯ ಶಾ ಹಾಗೂ ಮುಂತಾದವರು….

ಎಲ್ಲೆಲ್ಲೂ ಮೋಡ ಕವಿದ ವಾತಾವರಣ , ತುಸು ಗಾಳಿಯಲ್ಲಿ ಚುಮು ಚುಮು ಜಿಟಿ ಮಳೆಹನಿ… ಮಡಿಕೇರಿಯ ಮಂಜಿನ ಹನಿಯ ವಾತಾವರಣದಲ್ಲಿ ಇದ್ದಂತೆ ಅನ್ನುವ ಈ ಸಮಯದಲ್ಲಿ ಬಿಡುಗಡೆಗೊಂಡಂತಹ ಚಿತ್ರ “ಮುಗಿಲ್ ಪೇಟೆ”. ಪ್ರೀತಿಗೆ ಸಾವಿಲ್ಲ ಅನ್ನೋ ಮಾತಿದೆ… ಅದರಂತೆ ಬಾಂಧವ್ಯಕ್ಕೂ ಕೊನೆ ಇಲ್ಲ ಎಂಬಂತೆ… ಸ್ನೇಹ , ಪ್ರೀತಿ, ಗೆಳೆತನ ,ಮಮತೆ , ಕರುಣೆ, ತ್ಯಾಗ ಇತ್ಯಾದಿ ಸೇರಿದಂತೆ ಸಂಪೂರ್ಣ ಕೌಟುಂಬಿಕ ಮನರಂಜನಾ ಹಾಸ್ಯಮಿಶ್ರಿತ ಪ್ರೇಮಮಯ ಚಿತ್ರವಾಗಿ ಹೊರಬಂದಿದೆ ಈ ಮುಗಿಲ್ ಪೇಟೆ ಚಿತ್ರ.

ಇದೊಂದು ಪಯಣದ ಕಥೆಯಾಗಿದ್ದು , ಚಿತ್ರದ ಕಥಾ ಹಂದರ ತೆರೆದುಕೊಳ್ಳುವುದೇ ಪ್ರೇಮಿಯು ತನ್ನ ಪ್ರೇಯಸಿಯನ್ನ ಹುಡುಕಿಕೊಂಡು ರೈಲ್ವೆ ನಿಲ್ದಾಣದಿಂದ ಹೊರಡುವ ಕಥೆ ವ್ಯಥೆ. ಮುಗಿಲ್ ಪೇಟೆಯಲ್ಲಿ ತನ್ನ ಗೆಳೆಯನ ಪರಿಚಯಸ್ಥರ ಮೂಲಕ ತನ್ನ ಪ್ರೇಮಿಯನ್ನು ಹುಡುಕಲು ಸಾಗುವ ನಾಯಕ ರಾಜಾ (ಮನು ರಂಜನ್) ಭಾಗವತರ್ (ರಂಗಾಯಣ ರಘು) ರನ್ನು ಭೇಟಿ ಮಾಡುತ್ತಾನೆ. ತಾನು ಬಂದ ಕಾರಣ ತಿಳಿಸಿ ಸಹಾಯವನ್ನು ಕೇಳಿ ಅವರೊಟ್ಟಿಗೆ ತನ್ನ ಪ್ರೇಯಸಿ ಇರುವ ಸ್ಥಳ ಹುಡುಕಲು ಮುಂದಾಗುತ್ತಾನೆ.

ಇದರ ನಡುವೆ ನಾಯಕನ ಫ್ಲ್ಯಾಶ್ ಬ್ಯಾಕ್ ತೆರೆದುಕೊಳ್ಳುತ್ತಾ ಹೋಗುತ್ತದೆ. ರಾಜನ ಇಂಟ್ರೊಡಕ್ಷನ್ ಭರ್ಜರಿ ಆಕ್ಷನ್ ದೃಶ್ಯದ ಮೂಲಕ ತೆರೆದುಕೊಳ್ಳುತ್ತದೆ. ತನ್ನ ತಂದೆ (ಅವಿನಾಶ್) ಸರ್ಕಾರಿ ರಿಜಿಸ್ಟರ್ ಆಗಿದ್ದು, ರೌಡಿಯ ರಿಜಿಸ್ಟರ್ ಮ್ಯಾರೇಜ್ ಗಲಾಟೆಯಲ್ಲಿ ತಂದೆಯ ರಕ್ಷಣೆಗೆ ನಿಲ್ಲುತ್ತಾನೆ.ತಂದೆಯೊಂದಿಗೆ ಮಾತನಾಡದ ಮಗ ತಾಯಿ (ತಾರಾ ಅನುರಾಧ) ರ ಮುದ್ದಿನ ಮಗನಾಗಿರುತ್ತಾನೆ.

ಲೋನ್ ರಿಕವರಿ ಕಂಪೆನಿಯಲ್ಲಿ ಕೆಲಸ ಮಾಡುವ ನಾಯಕ ರಾಜಾ ತನ್ನ ಗೆಳೆಯರಾದ ಪ್ರಶಾಂತ್ ಸಿದ್ದಿ ಮತ್ತು ಪೊಲೀಸ್ ಕಾನ್ ಸ್ಟೆಬಲ್ ಪಾತ್ರಧಾರಿ ಅಪ್ಪಣ್ಣರೊಂದಿಗೆ ತರ್ಲೆ , ಮೋಜು, ಮಸ್ತಿಯಿoದ ಸಂತೋಷದಿಂದಿರುತ್ತಾನೆ. ಲೋನ್ ಪಡೆದ ಒಬ್ಬ ಆಸಾಮಿ(ಸಾಧು ಕೋಕಿಲ) ಹಲವಾರು ವೇಷವನ್ನು ತೊಟ್ಟು , ಲೋನ್ ಕಟ್ಟದೆ ಗಾಡಿಗಳನ್ನು ಪಡೆದು ಬೇರೆಯವರಿಗೆ ಮಾರಿರುತ್ತಾನೆ. ಕಳ್ಳನನ್ನು ಹುಡುಕಲು ಹೊರಟ ನಾಯಕ ರಾಜನಿಗೆ ಅಚಾನಕ್ಕಾಗಿ ನಾಯಕಿ ಅಪೂರ್ವ ಅಪ್ಪಿ (ಲೋಹಾರ್ ಖಯಾದು) ಎದುರಾಗುತ್ತಾಳೆ.

ಈ ಹಿಂದೆ ಮದುವೆಯ ಮನೆಯಲ್ಲಿ ನೋಡಿದ ಈ ಹುಡುಗಿಯ ನೋಟಕ್ಕೆ ಸೋತು ಪ್ರೇಮ ಪಾಶಕ್ಕೆ ಸಿಲುಕುತ್ತಾನೆ. ಕಳ್ಳನಿಂದ ಅಪೂರ್ವ ಪಡೆದ ಸ್ಕೂಟಿ ಸೀಜ್ ಮಾಡಲು ಮುಂದಾಗುವ ರಾಜ ಅವಳನ್ನು ತನ್ನ ಬಲೆಗೆ ಬಿಳಿಸಿಕೊಳ್ಳಲು ತಂತ್ರ ರೂಪಿಸುತ್ತಾನೆ. ಪಿಜಿಯಲ್ಲಿ ತನ್ನ ಗೆಳತಿಯೊಂದಿಗೆ ಓದುವ ನಾಯಕಿ ಅಪ್ಪಿ ಗೂ ನಾಯಕ ರಾಜನ ಮೇಲಿನ ನಂಬಿಕೆ , ವಿಶ್ವಾಸ, ಪ್ರೀತಿ ಕಡೆ ಮನಸು ವಾಲಿಸುತ್ತದೆ. ಒಬ್ಬರನ್ನೊಬ್ಬರು ಮನಸಾರೆ ಇಷ್ಟಪಡುತ್ತಾರೆ.

ಮತ್ತೆ ಫ್ಲ್ಯಾಶ್ ಬ್ಯಾಕ್ ಹಿಂದಕ್ಕೆ ಸಾಗಿ ತನ್ನ ಗೆಳತಿ ಹುಡುಕಾಟದ ಪಯಣ ಮುಂದುವರಿಯುತ್ತದೆ… ಆ ಪ್ರಾಂತ್ಯದ ಭಾಷೆಯ ಸೊಗಡು ಒಂದಷ್ಟು ವಿಚಾರಗಳ ಅನಾವರಣ. ಪತ್ತೆ ಫ್ಲ್ಯಾಶ್ ಬ್ಯಾಕ್ ನಲ್ಲಿ ತನ್ನ ಕುಟುಂಬದೊಂದಿಗೆ ನಡೆಯುವ ಕೆಲವು ವಿಚಾರಗಳು , ಪ್ರೇಯಸಿಯೊಂದಿಗೆ ನಡೆಯುವ ಕೆಲವು ಎಡವಟ್ಟುಗಳ ಮೆಲುಕು ಹಾಕುತ್ತಾನೇ.

ಪ್ರೇಯಸಿಯೊಂದಿಗಿನ ಮಧುರ ಕ್ಷಣಗಳು ಹಾಡುಗಳ ಮೂಲಕ ಸ್ಪರ್ಶಿಸುತ್ತದೆ. ಮತ್ತೆ ಹುಡುಕಾಟದ ಹಾದಿಯಲ್ಲಿ ಸಾಗುವ ರಾಜನಿಗೆ ಹಾಗೋ ಹೀಗೋ ಸಾಧ್ಯಮಾಡಿ ತಾನು ಹುಡುಕುತ್ತಿದ್ದ ಪ್ರೇಯಸಿಯ ಗೆಳತಿಯ ಮನೆ ಮುಟ್ಟುತ್ತಾನೆ. ಆದರೆ ನಾಯಕಿಗೆ ಮದುವೆ ಆಗಿರುವ ವಿಚಾರ ತಿಳಿಸುವ ಗೆಳತಿಯ ಮಾತು ಕೇಳಿ ಕುಗ್ಗುವ ರಾಜಾ. ಹೀಗೆ ಚಿತ್ರದ ಮೊದಲ ಭಾಗ ನೋಡುಗರಿಗೆ ಯಕ್ಷಪ್ರಶ್ನೆ… ಮುಂದೆ ಏನು ಎಂಬ ಗೊಂದಲ ಕಾಡುತ್ತದೆ.

ಪ್ರೀತಿ ಸಿಗದಿದ್ರೂ ಒಮ್ಮೆಯಾದರೂ ಆಕೆಯನ್ನು ನೋಡುವ ಆಸೆ ಪಡುವ ನಾಯಕ. ಮತ್ತೆ ಅವಳನ್ನು ಹುಡುಕುತ್ತಾ ಮುಂದೆ ಸಾಗುತ್ತಾನೆ. ಇದರ ನಡುವೆ ಮತ್ತೆ ಬರುವ ಫ್ಲ್ಯಾಶ್ ಬ್ಯಾಕ್. ಹಲವಾರು ಏರುಪೇರುಗಳು ನಾಯಕನ ಬದುಕಿನಲ್ಲಿ ಎದುರಾಗುತ್ತದೆ. ಒಂದು ಕಡೆ ಕುಟುಂಬ… ಮತ್ತೊಂದು ಕಡೆ ತನ್ನ ಪ್ರೇಯಸಿ…
ಇನ್ನೊಂದು ಕಡೆ ನಿಗೂಢ ವಿಚಾರ…
ಕೊನೆಯಲ್ಲಿ ಯಾವುದಕ್ಕೆ ಉತ್ತರ ಸಿಗುತ್ತದೆ…
ಹೀಗೆ ನಾನಾ ಗೊಂದಲ ದೊಂದಿಗೆ ಸಾಗುವ ನಾಯಕ ರಾಜನ ಬದುಕಿನ ಸಮಗ್ರ ವಿಚಾರ ತಿಳಿದುಕೊಳ್ಳಬೇಕಾದರೆ ನೀವೆಲ್ಲರೂ ಈ “ಮುಗಿಲ್ ಪೇಟೆ” ಚಿತ್ರವನ್ನು ನೋಡಲೇಬೇಕು.

ನಾಯಕನ ಪಾತ್ರ ಮಾಡಿರುವ ನಟ ಮನು ರಂಜನ್ ಗೆ ಈ ಚಿತ್ರ ಹೊಸ ರೂಪ ತಂದುಕೊಟ್ಟಿದೆ. ಆಡಂಬರವಿಲ್ಲದೆ ಕಥೆಗೆ ಪೂರಕವಾಗಿ ಮನು ಕಾಣಿಸಿಕೊಂಡು , ಸಾಹಸ ದೃಶ್ಯಗಳನ್ನ ಭರ್ಜರಿಯಾಗಿ ನಿಭಾಯಿಸಿದ್ದಾರೆ. ಇನ್ನು ಹಾಡಿನ ವಿಚಾರದಲ್ಲೂ ಗಮನ ಸೆಳೆಯುತ್ತಾರೆ. ಇನ್ನು ಈ ಹಿಂದೆ ಮಾಡಿದ 2 ಚಿತ್ರಗಳಿಗಿಂತ ಈ ಚಿತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದು , ಇನ್ನಷ್ಟು ಪರಿಪಕ್ವತೆ ಅಗತ್ಯವಿತ್ತು ಎನಿಸುತ್ತದೆ.

ಇನ್ನು ಚಿತ್ರದ ನಾಯಕಿ ಲೋಹಾರ್ ಖಯಾದು ಕನ್ನಡದ ಹುಡುಗಿ ಅಲ್ಲದಿದ್ದರೂ , ಮುದ್ದಾಗಿ ಕಾಣುವ ಈ ಬೆಡಗಿ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ಇನ್ನೂ ಉತ್ತಮವಾಗಿ ಮಾಡಬಹುದಿತ್ತು.
ಗೆಳೆಯ ನಾಗಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಪ್ಪಣ್ಣ ಹಾಗೂ ಪ್ರಶಾಂತ್ ಸಿದ್ಧಿ ಗಮನ ಸೆಳೆಯುತ್ತಾರೆ. ಇನ್ನು ವಿಶೇಷವಾಗಿ ಹದಿನಾರು ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಸಾಧುಕೋಕಿಲಾ ಹಾಸ್ಯ ಸನ್ನಿವೇಶಗಳು ಚಿತ್ರದ ಓಟಕ್ಕೆ ಪೂರಕವಾಗಿದೆ.

ತಂದೆ ತಾಯಿಯಾಗಿ ಕಾಣಿಸಿಕೊಂಡಿರುವ ತಾರಾ ಅನುರಾಧಾ ಹಾಗೂ ಅವಿನಾಶ್ ತಮ್ಮ ಪಾತ್ರಪೋಷಣೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದು , ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಿಷಿ ಹಾಗೂ ಕಾವ್ಯಾ ಶಾ ಗಮನ ಸೆಳೆಯುತ್ತಾರೆ. ಇನ್ನು ಇಡೀ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಂಗಾಯಣ ರಘು “ಭಾಗವತರ್” ಪಾತ್ರವನ್ನ ಅಲ್ಲಿನ ಶೈಲಿಯಲ್ಲಿ ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಂತಹ ಸುಂದರ ಸಾಂಸಾರಿಕ ಪ್ರೇಮಮಯ ಚಿತ್ರಕ್ಕೆ ಬಂಡವಾಳ ಹೂಡಿರುವ ರಕ್ಷಾ ವಿಜಯಕುಮಾರ್ ಅವರ ಧೈರ್ಯ ಮೆಚ್ಚಲೇಬೇಕು.

ಈ ಚಿತ್ರದ ರೂವಾರಿ ಯುವ ನಿರ್ದೇಶಕ ಭರತ್. ಎಸ್. ನಾವುoದ ಪ್ರಯತ್ನ ಉತ್ತಮವಾಗಿದೆ. ಪ್ರೀತಿ , ಸ್ನೇಹ, ತಂದೆ ತಾಯಿಯ ಬಾಂಧವ್ಯ, ಗೆಳೆತನ ಹೀಗೆ ಎಲ್ಲಾ ವಿಚಾರವನ್ನು ಒಗ್ಗೂಡಿಸಿಕೊಂಡು ಸುಂದರ ಸಾಂಸಾರಿಕ ಚಿತ್ರವನ್ನು ತೆರೆಮೇಲೆ ತಂದಿದ್ದಾರೆ. ಸಾಮಾನ್ಯವಾಗಿ ಇಂತಹ ಕಥೆಗಳು ಬಹಳಷ್ಟು ಬಂದಿದ್ದರು , ವಿಭಿನ್ನವಾಗಿ ಚಿತ್ರಕತೆ ಹೆಣೆದಿದ್ದಾರೆ.

ಪ್ರೀತಿಗೆ ಎಷ್ಟು ಪ್ರಾಮುಖ್ಯತೆ ಕೊಡುತೀವೋ… ಅದೇ ರೀತಿ ಸಂಬಂಧಗಳಿಗೂ ಅಷ್ಟೆ ಬೆಲೆ ಕೊಡಬೇಕು ಎಂಬ ವಿಚಾರವನ್ನು ಮೆಚ್ಚುವಂಥದ್ದು… ಚಿತ್ರದ ಮೊದಲ ಭಾಗ ಮತ್ತಷ್ಟು ಬಿಗಿ ಮಾಡುವ ಅಗತ್ಯವಿತ್ತು ಅನಿಸುತ್ತದೆ. ಆದರೆ ದ್ವಿತೀಯ ಭಾಗ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು. ಸಂಭಾಷಣೆ ಒಂದಿಷ್ಟು ಕಡೆ ಚುರುಕಾಗಿ ಕಾಣಿಸುತ್ತದೆ. ಇನ್ನೂ ಸಾಹಸ ದೃಶ್ಯ ಗಮನ ಸೆಳೆಯುತ್ತದೆ. ಇಂತಹ ಚಿತ್ರಗಳಿಗೆ ಹಾಡು ಬಹಳ ಪ್ರಾಮುಖ್ಯತೆ ವಹಿಸುತ್ತದೆ. ತಾರಿಫ್…ಹಾಡು ಬಿಟ್ಟರೆ ಉಳಿದ ಹಾಡುಗಳು ಗುನುಗುವಂತೆ ಕಾಣಿಸುತ್ತಿಲ್ಲ. ಇನ್ನೂ ರವಿವರ್ಮ ಅವರ ಕ್ಯಾಮೆರಾ ಕೈಚಳಕ ಸೊಗಸಾಗಿ ಸುಂದರ ತಾಣಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಇಡೀ ಚಿತ್ರ ಸೊಗಸಾಗಿ ಬರಲು ಅಣ್ಣ ಮನು ರಂಜನ್ ಹಾಗೂ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತ ವಿಕ್ರಂ ಸಹಕಾರ ಮೆಚ್ಚಲೇಬೇಕು. ಮುಗಿಲ್ ಪೇಟೆ ಚಿತ್ರ ಪ್ರೇಮಕಥೆ ಆಗಿದ್ದರು, ಇದು ಪ್ರೇಮಿಗಳಿಗೆ ಸೀಮಿತವಾಗಿರದೆ ಒಂದು ಕೌಟುಂಬಿಕ ಮನೋರಂಜನ ಸಿನಿಮಾ ಎಂದು ಹೇಳಬಹುದು. ಸಂಬಂಧಗಳ ಬೆಲೆಯನ್ನು ಚಿತ್ರದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ. ಒಟ್ಟಾರೆ ಹೇಳುವುದಾದರೆ ಮುಗಿಲ್ ಪೇಟೆ ಚಿತ್ರವನ್ನ ಎಲ್ಲರೂ ಒಮ್ಮೆ ನೋಡಬಹುದಾಗಿದೆ.

Related posts