Cini Reviews Cinisuddi Fresh Cini News 

ರೇಸ್ ಪ್ರಿಯರಿಗಾಗಿ…”ಮಡ್ಡಿ” (ಚಿತ್ರ ವಿಮರ್ಶೆ )

ಚಿತ್ರ : ಮಡ್ಡಿ
ನಿರ್ದೇಶನ : ಡಾ. ಪ್ರಗ್ಬಲ್
ನಿರ್ಮಾಪಕ : ಪ್ರೇಮಕೃಷ್ಣ ದಾಸ್
ಸಂಗೀತ : ರವಿ ಬಸ್ರೂರು
ಛಾಯಾಗ್ರಹಣ : ರತೀಶ್
ತಾರಾಗಣ : ಯವನ್ ಕೃಷ್ಣ , ರಿಧಾನ್ ಕೃಷ್ಣ , ಅಮಿತ್ ಶಿವದಾಸ್ , ಅನುಷಾ ಸುರೇಶ್ , ರೆಂಜಿ ಪಣಿಕರ್ ಹಾಗೂ ಮುಂತಾದವರು…

ವಿಭಿನ್ನ ಬಗೆಯ ಚಿತ್ರವನ್ನು ಬಯಸುವವರಿಗಾಗಿಯೇ ಬಂದಂತ ಚಿತ್ರ “ಮಡ್ಡಿ” ಎನ್ನಬಹುದು. 6 ಭಾಷೆಗಳಲ್ಲಿ ಬಂದಂಥ ಈ ಚಿತ್ರ ರೇಸ್ ಪ್ರಿಯರಿಗೆ ಬಹಳ ಪ್ರಿಯವಾಗುತ್ತದೆ. ಜೀಪ್ ರೇಸ್ ಕಥಾನಕ , ಕಾಲೇಜ್ ಕ್ಯಾಂಪಸ್ ನ ಯುವಕರ ಗುದ್ದಾಟ , ಬಡಿದಾಟ , ದಟ್ಟ ಅರಣ್ಯದಲ್ಲಿ ವಾಸಿಸುವವರ ಬದುಕು , ಸೋದರರ ವೈಷಮ್ಯ ಹಾಗೂ ಅಲ್ಲೊಂದು ಪ್ರೀತಿಯ ಸೆಳೆತ ಹೀಗೆ ಒಂದಿಷ್ಟು ವಿಚಾರವನ್ನು ಬೆಸೆದುಕೊಂಡು ರೇಸ್ ನ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಮೂಲ ಮಲೆಯಾಳಿ ಪ್ರತಿಭೆಗಳು ಸೇರಿಕೊಂಡು ಸಿದ್ಧಪಡಿಸಿರುವ ಈ “ಮಡ್ಡಿ” ಚಿತ್ರವು ಮಡ್ ರೇಸ್ ನ ರೋಚಕ ದೃಶ್ಯಗಳಿಗೆ ಹೊಸ ರೂಪವನ್ನೇ ಕಟ್ಟಿಕೊಟ್ಟಿದ್ದಾರೆ.

ಚಿತ್ರದ ಕಥಾನಕ ತೆರೆದು ಕೊಳ್ಳುವುದೇ ಜೀಪ್ ರೇಸ್ ನ ಸ್ಪರ್ಧೆಯ ಮೂಲಕ. ನಂತರ ದಟ್ಟ ಅರಣ್ಯದ ಕಾಡಿನಲ್ಲಿ ಕಟ್ಟುಮಸ್ತಿನ ನಾಯಕ ಮರದ ದಿಮ್ಮಿಗಳನ್ನು ತನ್ನ ಜೀಪಿನಲ್ಲಿ ತುಂಬಿಕೊಂಡು ತಲುಪಿಸುವ ಸ್ಥಳಕ್ಕೆ ಸೇರಿಸುತ್ತಾನೆ. ಅದನ್ನು ಕಾಂಟ್ರಾಕ್ಟ್ ಪಡೆದ ವ್ಯಕ್ತಿಯೊಂದಿಗೆ ತನ್ನ ಕಾಯಕ.

ಕಾಡಿನ ಮರಗಳನ್ನ ಅರಣ್ಯ ಇಲಾಖೆಯ ಅನುಮತಿ ಪಡೆದು ಸಾಗಾಣಿಕೆ. ಇದರ ನಡುವೆ ಕದ್ದು ಮಾರುವ ಗಂಧದ ಮರಗಳ ಜಾಲ. ವಿರೋಧಿಗಳಿಗೆ ಒಂದಷ್ಟು ತಳಮಳ, ಗೊಂದಲ, ಸೋದರ ಸಂಬಂಧಿಗಳ ಕಚ್ಚಾಟ , ಮರ ಸಾಗಣೆಗೆ ವಿಚಾರದಲ್ಲಿ ಪೊಲೀಸರ ಕೈಚಳಕ , ಖರೀದಿ ಮಾಡುವ ಸೇಟುವಿನ ಕುತಂತ್ರದ ನಡುವೆ ದಟ್ಟ ಅರಣ್ಯದಲ್ಲಿ ಬದುಕು ಸಾಗಿಸುವ ಜೀವನ. ಇದಕ್ಕೆಲ್ಲ ಸೆಡ್ಡು ಹೊಡೆದು ನಿಲ್ಲುವ ನಾಯಕ. ಇವನ ಧೈರ್ಯ , ಕಟ್ಟುಮಸ್ತಿನ ದೇಹಕ್ಕೆ ಮನಸೋತು ಅವಳನ್ನು ಪ್ರೀತಿಸಲು ಮುಂದಾಗುವ ನಾಯಕಿ.

ತನ್ನ ಜೀಪಿನಲ್ಲಿ ಮರದ ದಿಮ್ಮಿಗಳನ್ನು ಸಾಗಿಸುವ ವ್ಯಕ್ತಿ ಮತ್ತೊಂದು ಕಡೆ ಜನರಿಗೂ ಸ್ಪಂದಿಸುತ್ತಾ ಅವರಿಗೂ ನೇರವಾಗಿರುತ್ತಾನೆ. ಇಡೀ ಚಿತ್ರ ದಟ್ಟಕಾಡಿನ ಸುತ್ತಲೇ ಸಾಗುತ್ತಿದ್ದರು, ಜೀಪ್ (ಗರುಡ) ಪ್ರಮುಖ ಪಾತ್ರವನ್ನು ನಿಭಾಯಿಸುವಂತೆ ಕಾಣುತ್ತದೆ. ಇದರ ನಡುವೆ ಆರಂಭದಲ್ಲಿ ಕಂಡ ಜೀಪಿ ರೇಸ್ ನ ವ್ಯಕ್ತಿಗಳಿಗೂ ಕಾಡಿನಲ್ಲಿ ವಾಸಿಸುವ ನಾಯಕನಿಗೂ ಸಂಬಂಧದ ಅನಾವರಣಗೊಳ್ಳುತ್ತದೆ.

ಇನ್ನು ದ್ವಿತೀಯ ಭಾಗದಲ್ಲಿ ಸೋದರರ ಗೊಂದಲ ಹಾಗೂ ಜೀಪ್ ರೇಸ್ ಗೂ ಇರುವ ಕಗ್ಗಂಟು ಏನೆಂಬುದು ಒಂದೊಂದಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಇನ್ನೂ ಚಿತ್ರದ ಕ್ಲೈಮ್ಯಾಕ್ಸ್ ಹಂತಕ್ಕೆ ಬರುವಷ್ಟರಲ್ಲಿ ಮತ್ತೊಂದು ರೋಚಕ ವಿಚಾರಗಳು ತೆರೆದುಕೊಳ್ಳುತ್ತದೆ. ಒಟ್ಟಾರೆ ಮೈ ಜುಮ್ಮೆನಿಸುವ ರೋಮಾಂಚನಕಾರಿ ದೃಶ್ಯಗಳನ್ನು ಕಣ್ತುಂಬಿಕೊಳ್ಳಬೇಕಾದರೆ “ಮಡ್ಡಿ” ಚಿತ್ರವನ್ನ ಒಮ್ಮೆ ನೋಡಲೇಬೇಕು.

ಸಿನಿಮಾ ನಿರ್ದೇಶನ ಮಾಡುವ ವ್ಯಕ್ತಿಗೆ ಆ ಸಿನಿಮಾದ ಸಂಪೂರ್ಣ ದೃಶ್ಯಗಳು ಅವನ ಕಣ್ಣಿಗೆ ಕಾಣಬೇಕು. ಯಾಕೆಂದರೆ ಆಗ ಮಾತ್ರ ತಾನು ಅಂದುಕೊಂಡಂತೆ ಸಿನಿಮಾ ತೆರೆ ಮೇಲೆ ತರಲು ಸಾಧ್ಯವಾಗುತ್ತದೆ ಎನ್ನಬಹುದು. ಆ ನಿಟ್ಟಿನಲ್ಲಿ ಯುವ ನಿರ್ದೇಶಕ ಡಾ. ಪ್ರಗ್ಬಲ್ ಅಡ್ವೆಂಚರಸ್ ತಿರುವುಗಳಂತೆ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಬೈಕ್ ರೇಸ್ ಕೇಂದ್ರ ಬಿಂದುವಾಗಿಸಿ , ಭಾವನಾತ್ಮಕ ಅಂಶಗಳೊಂದಿಗೆ ಸೆಂಟಿಮೆಂಟ್ ದೃಶ್ಯಗಳನ್ನು ಬೆಸೆದು , ಕಾಡಿನ ಜೀವನದ ಬದುಕು , ಬವಣೆ ಹಾಗೂ ಮರಗಳ ಸಾಗಾಣಿಕೆ ವಿಚಾರದ ಹಗ್ಗಜಗ್ಗಾಟ ಹೀಗೆ ಒಂದಕ್ಕೊಂದು ಕೊಂಡಿಯಂತೆ “ಮಡ್ಡಿ”ಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ.

ಇನ್ನು ತಾಂತ್ರಿಕ ವಿಚಾರವೇ ಈ ಚಿತ್ರದ ಹೈಲೈಟ್ ಗಳಲ್ಲಿ ಪ್ರಮುಖವಾದದ್ದು , ರೇಸ್ ನ ಒಳಗೆ ನಡೆಯುವ ವೈಷಮ್ಯಗಳು , ಬಡಿದಾಟ , ದಟ್ಟ ಕಾಡಿನ ಚಿತ್ರಣಗಳ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ನೀಡುವ ದೃಷ್ಟಿಯಲ್ಲಿ ನಿರ್ದೇಶಕ ಪ್ರಥಮ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ.

ಇನ್ನು ನಮ್ಮ ಕೆ.ಜಿ.ಎಫ್ ನ ಸಂಗೀತ ನಿರ್ದೇಶಕ ರವಿ ಬಸ್ರೂರ್ “ಮಡ್ಡಿ” ಚಿತ್ರಕ್ಕೆ ಸಂಗೀತ ನೀಡಿದ್ದು , ಇಡೀ ಚಿತ್ರದ ಆರಂಭದಿಂದ ಅಂತ್ಯದವರೆಗೆ ರೀ-ರೆಕಾರ್ಡಿಂಗ್ ಕೆಲಸ ಅದ್ಭುತವಾಗಿ ಮೂಡಿಬಂದಿದೆ. ಕಾಡಿನಲ್ಲಿ ಕೇಳಿಸುವ ಶಬ್ದಗಳು , ಜೀಪ್ ರೇಸ್ ನ ಆರ್ಭಟದ ಶಬ್ದಗಳು , ದೃಶ್ಯಗಳಿಗೆ ಒಪ್ಪುವಂಥ ಹಿನ್ನಲೆ ಸಂಗೀತ , ನೋಡುವ ಕಣ್ಣು ಕೇಳುವ ಕಿವಿಗಳಿಗೆ ಅಚ್ಚರಿ ಎನಿಸುವಂತ ಸೌಂಡ್ ಡಿಸೈನಿಂಗ್ ಚಿತ್ರದ ಹೈಲೈಟ್ ಗಳಲ್ಲಿ ಪ್ರಮುಖ ಎನ್ನಬಹುದು.

ಇನ್ನು ಈ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ರತೀಶ್ ಛಾಯಾಗ್ರಹಣ ಕೆಲಸ. ಚಿತ್ರದ ಪ್ರತಿ ದೃಶ್ಯವೂ ಮೈ ರೋಮಾಂಚನ ಗೊಳಿಸುತ್ತದೆ. ಮಡ್ ರೇಸ್ ನ ದೃಶ್ಯಗಳು ಎದೆ ಝಲ್ಲೆನಿಸುತ್ತದೆ. ಕಾಡಿನ ಸುಂದರ ತಾಣಗಳ ದೃಶ್ಯ ವೈಭವಗಳು ಸೇರಿದಂತೆ ಛಾಯಾಗ್ರಾಹಕ ಸಾಹಸ ಮಾಡಿ ಇಟ್ಟಿರುವ ಕೆಲವು ದೃಶ್ಯಗಳು ನೋಡುಗರ ನಿಬ್ಬೆರಗಾಗಿಸು ವಂತೆ ಮಾಡಿದೆ. ಅದೇ ರೀತಿ ಸಾಹಸ ದೃಶ್ಯಗಳ ಕೂಡ ಅದ್ಭುತವಾಗಿ ಮೂಡಿ ಬಂದಿದೆ.

ಇಂತಹ ಚಿತ್ರವನ್ನ ನಿರ್ಮಾಣ ಮಾಡಿರುವ ನಿರ್ಮಾಪಕರ ಸಾಹಸವನ್ನು ಮೆಚ್ಚಲೇ ಬೇಕು. ಇನ್ನೂ ಕಲಾವಿದರ ವಿಚಾರಕ್ಕೆ ಬಂದರೆ ಯವನ್ ಕೃಷ್ಣ ,ರಿಧಾನ್ ಕೃಷ್ಣ, ಅಮಿತ್ ಶಿವದಾಸ್ , ಅನುಷಾ ಸುರೇಶ ಸೇರಿದಂತೆ ಉಳಿದ ಪಾತ್ರಧಾರಿಗಳು ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಡೀ ಚಿತ್ರದ ಓಟ ನೋಡುತ್ತಾ ಹೋದಾಗ ಖಂಡಿತ ರೇಸ್ ಪ್ರಿಯರಿಗೆ ಹೇಳಿ ಮಾಡಿಸಿದ ಚಿತ್ರವಾಗಿದೆ.

Related posts