Cinisuddi Fresh Cini News 

ಶಿವಣ್ಣನ ನಿವಾಸದಲ್ಲಿ ಸಚಿವ ಸಿ.ಟಿ. ರವಿ ಜೊತೆ ತಾರೆಯರ ಚರ್ಚೆ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಿವಾಸದಲ್ಲಿ ಸಚಿವ ಸಿ.ಟಿ. ರವಿ ಜೊತೆಗೆ ಚಿತ್ರೋದ್ಯಮದ ಗಣ್ಯರೆಲ್ಲರೂ ಸುದೀರ್ಘ ಚರ್ಚೆಯನ್ನ ನಡೆಸಿದರು.  ಕರೋನಾ ಸಂಕಷ್ಟದ ಸಮಯದಲ್ಲಿ ಚಿತ್ರೋದ್ಯಮ ಎದುರಿಸುತ್ತಿರುವ ನೂರಾರು ತೊಂದರೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಮೂಲಕ ಎಲ್ಲಾ ರಂಗಗಳಂತೆ ಕನ್ನಡ ಕಿರುತೆರೆ ಹಾಗೂ ಚಲನಚಿತ್ರ ಉದ್ಯಮವನ್ನು ಅವಲಂಬಿಸಿದ ಕಾರ್ಮಿಕರಿಗೆ ಪ್ಯಾಕೇಜ್ ಹಾಗೂ ಚಿತ್ರರಂಗದ ಪುನಶ್ಚೇತನದ ನೆರವಿಗೆ ಸರಕಾರ ಮುಂದಾಗಬೇಕೆಂದು ,

ಹಾಗೆಯೇ ಚಿತ್ರಮಂದಿರ ತೆರೆಯುವ ವಿಚಾರ , ದರ ನಿಗದಿ, ತೆರಿಗೆ ವಿನಾಯಿತಿ ಹಾಗೂ ಇನ್ನು ಹಲವು ವಿಚಾರಗಳನ್ನು ಸಚಿವ ಸಿ.ಟಿ. ರವಿ ರೊಂದಿಗೆ ಚರ್ಚಿಸಲಾಯಿತು. ಶಿವಣ್ಣನ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ನಟರಾದ ವಿ.ರವಿಚಂದ್ರನ್ , ಉಪೇಂದ್ರ , ಪುನೀತ್ ರಾಜ್ ಕುಮಾರ್ , ರಮೇಶ್ ಅರವಿಂದ್ , ಯಶ್, ಗಣೇಶ್, ಶ್ರೀಮುರಳಿ , ದುನಿಯಾ ವಿಜಿ , ರಕ್ಷಿತ್ ಶೆಟ್ಟಿ , ನಿರ್ಮಾಪಕರಾದ ವಿಜಯ್ ಕಿರಗಂದೂರ್ , ಪುಷ್ಕರ ಮಲ್ಲಿಕಾರ್ಜುನಯ್ಯ , ಕೆ.ಪಿ. ಶ್ರೀಕಾಂತ್, ಸೂರಪ್ಪ ಬಾಬು , ವಿತರಕರಾದ ಜಯಣ್ಣ , ಕಾರ್ತಿಕ್ ಗೌಡ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದು , ತಮ್ಮ ಸಮಸ್ಯೆಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ರವರು ಶಿವಣ್ಣ ನಿವಾಸದಲ್ಲಿ ನಡೆದ ಚರ್ಚೆಯನ್ನು ಆಲಿಸಿ ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಚಿತ್ರೋದ್ಯಮದ ಹಿರಿಯ ಮುಖಂಡರಾದ ಸಾ.ರಾ. ಗೋವಿಂದು , ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಒಂದು ತಂಡ ಶಿವಣ್ಣ ಮನೆಗೆ ಭೇಟಿ ನೀಡಿ ಕೊರೋನಾ ಸಂಕಷ್ಟದ ಪರಿಸ್ಥಿತಿ ಹಾಗೂ ಚಿತ್ರೋದ್ಯಮದ ಮುಂದಾಳತ್ವ ವಹಿಸಿಕೊಳ್ಳಲು ನಾಯಕನ ಅಗತ್ಯದ ವಿಚಾರವಾಗಿ ಸುದೀರ್ಘವಾಗಿ ಚರ್ಚಿಸಿ ನಡೆಸಿದ್ದರು. ಡಾ.ರಾಜ್‍ಕುಮಾರ್ ನಂತರ ಅಂಬರೀಶ್ ನಮಗೆ ಹಿರಿಯರಾಗಿ ನಿಂತಿದ್ದರು.

ಈಗ ಶಿವಣ್ಣ ಅವರ ನೇತೃತ್ವದಲ್ಲಿ ಇಡೀ ಚಿತ್ರೋದ್ಯಮ ಬೇಡಿಕೆಗಳನ್ನು ಮಂಡಿಸಲಿದೆ ಎಂದು ಹೇಳಿದರು. ನಮ್ಮ ಚಲನಚಿತ್ರ ಉದ್ಯಮ ಈ ಮಟ್ಟಕ್ಕೆ ಬೆಳೆದಿರಲು ಅಭಿಮಾನಿಗಳು ಕಾರಣ. ಕನ್ನಡ ಚಿತ್ರೋದ್ಯಮಕ್ಕೆ ಏನೂ ಆಗುವುದಿಲ್ಲ. ನಮ್ಮನ್ನೆಲ್ಲ ಕಾಪಾಡಲು ಜನರು ಇದ್ದೇ ಇರುತ್ತಾರೆ. ಈ ಕರೋನಾ ಶಾಶ್ವತವೇನಲ್ಲ, ಇಂದು ಬರುತ್ತೆ, ನಾಳೆ ಹೋಗುತ್ತೆ.

ಎದುರಾದ ಕಷ್ಟಗಳನ್ನು ನಾವೆಲ್ಲ ಸೇರಿ ಧೈರ್ಯವಾಗಿ ಎದುರಿಸೋಣ, ಆಗಲೇ ಗೆಲುವು ಕಾಣಲು ಸಾಧ್ಯ , ಎಂದು ಶಿವಣ್ಣ ಎಲ್ಲರಿಗೂ ಧೈರ್ಯ ತುಂಬಿದರು. ಚಿತ್ರರಂಗಕ್ಕೆ ಸ್ಪೂರ್ತಿದಾಯಕವಾಗುವಂಥ ಒಳ್ಳೇ ಆರೋಗ್ಯದಾಯಕ ಚರ್ಚೆ ನಡೆದಿದ್ದು, ಅದರ ಪರಿಣಾಮವಾಗಿ ಶಿವಣ್ಣ ಚಿತ್ರೋದ್ಯಮದ ಪ್ರಮುಖ ನಟರು, ತಂತ್ರಜ್ಞರೊoದಿಗೆ ಮಾತನಾಡಿ ತಮ್ಮ ನಿವಾಸಕ್ಕೆ ಕರೆಸಿ ಸಚಿವ ಸಿ.ಟಿ. ರವಿ ಅವರೊಂದಿಗೆ ಚಿತ್ರೋದ್ಯಮದ ಸಮಸ್ಯೆಯ ಕುರಿತು ಚರ್ಚೆ ನಡೆಸಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ.

ಅತಿ ಶೀಘ್ರದಲ್ಲಿ ಚಿತ್ರೋದ್ಯಮದ ಒಂದು ನಿಯೋಗದ ತಂಡವು ಸನ್ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ವರ ನಟ ರಾಜ್ ಕುಮಾರ್ ಹೇಳಿದಂತೆ ಚಿತ್ರೋದ್ಯಮ ಒಂದು ಮನೆ ಇದ್ದಂತೆ. ನಾವೆಲ್ಲರೂ ಅಣ್ಣ ತಮ್ಮಂದಿರಾಗಿ ಬದುಕಬೇಕು ಸಮಸ್ಯೆ ಬಂದರೆ ಎದುರಿಸಿ ನಿಲ್ಲಬೇಕು ಎನ್ನುವಂತೆ , ಈಗ ಅವರ ಸುಪುತ್ರ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಈ ಒಂದು ಕೊರೋನಾ ಹಾವಳಿಯಿಂದ ಹೂರ ಬರಲು ದಾರಿಯನ್ನು ಕಂಡುಕೊಳ್ಳಲುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಚಿತ್ರೋದ್ಯಮ ಒಂದಾಗಿ ಶಿವರಾಜ್‍ಕುಮಾರ್ ಅವರ ನಾಯಕತ್ವದಲ್ಲಿ ಮುಂದಾಗಿರುವುದು ಸಿನಿ ಕಾರ್ಮಿಕರಲ್ಲಿ ಹೊಸ ಭರವಸೆಯ ಬೆಳಕು ಮೂಡಿದಂತಾಗಿದೆ.

   

Share This With Your Friends

Related posts