Cini NewsMovie ReviewSandalwood

ಹರಕೆ , ನಂಬಿಕೆಯ ನಡುವೆ ಬದುಕಿನ ವಿಧಿಯ ಆಟ “ಮಾರ್ನಮಿ” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

Spread the love

ರೇಟಿಂಗ್ : 3.5 /5

ಚಿತ್ರ : ಮಾರ್ನಮಿ
ನಿರ್ದೇಶಕ : ರಿಶಿತ್ ಶೆಟ್ಟಿ
ನಿರ್ಮಾಪಕರು : ಶಿಲ್ಪಾ ನಿಶಾಂತ್, ನಿಶಾಂತ್
ಸಂಗೀತ : ಚರಣ್ ರಾಜ್
ಛಾಯಾಗ್ರಹಣ : ಶಿವಸೇನ
ತಾರಾಗಣ : ರಿತ್ವಿಕ್ ಮಠದ್ , ಚೈತ್ರಾ ಜೆ ಆಚಾರ್ , ಸುಮನ್ ತಲ್ವಾರ್, ರೋಚಿತ್, ಪ್ರಕಾಶ್ ತುಮಿನಾಡು , ಸೋನು ಗೌಡ , ಜ್ಯೋತೀಶ್ ಶೆಟ್ಟಿ, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಮುಂತಾದವರು…

 

ಈ ಭೂಮಿಯ ಮೇಲೆ ಬದುಕು ಸಾಗುವುದು ಬಹುತೇಕ ನಂಬಿಕೆ , ವಿಶ್ವಾಸ , ಆಚರಣೆ , ಪದ್ಧತಿ , ಒಡನಾಟ , ಸ್ನೇಹ , ಪ್ರೀತಿ , ಸಂಬಂಧದೊಂದಿಗೆ ಅನ್ನೋ ಮಾತು ತಿಳಿದಿರುವ ವಿಚಾರವೇ. ಇಂತಹದ್ದೇ ಒಂದು ಕರಾವಳಿ ಭಾಗದ ದೈವ ಪೂಜೆ , ನಂಬಿಕೆ , ಹರಿಕೆಯ ನಡುವೆ ಬದುಕು ಸಾಗಿಸೋ ಕಡಲ ಮಕ್ಕಳ ಬದುಕು ಬವಣೆಯ ಜೊತೆಗೆ ಮಾರ್ನಮಿ ಹಬ್ಬಕ್ಕೆ ನಡೆಯುವ ಮಾರಿ ಅಮ್ಮನ ಜಾತ್ರೆಯಲ್ಲಿ ಹುಲಿ ವೇಷ ಕುಣಿತದ ಎರಡು ತಂಡಗಳ ಜಗಳ, ಅಲ್ಲೊಂದು ತಾಯಿ ಮಗನ ಸಂಬಂಧ, ನಿಸ್ವಾರ್ಥ ಪ್ರೀತಿಯಲ್ಲಿ ತಲ್ಲಣ ಬದುಕು, ಸೇಡು , ದ್ವೇಷದ ನಡುವೆ ವಿಧಿಯ ಆಟದ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಮಾರ್ನಮಿ”.

ಕಡಲ ಕಿನಾರೆಯಲ್ಲಿ ವಾಸ ಮಾಡುತ್ತಾ ಮೀನು ಮಾರುವ ಜಲಜಾ (ಸೋನು ಗೌಡ)ಗೆ ತನ್ನ ಮಗ ಚೇತು (ರಿತ್ವಿಕ್ ಮಠದ್) ನೆ ಜೀವನ. ಮಗನ ಆರೋಗ್ಯದಲ್ಲಿ ಏರುಪೇರಾದಾಗ ದೇವರಿಗೆ ಹರಿಕೆ ಒತ್ತು ಹುಲಿವೇಷ ಹಾಕಿಸುವುದೇ ವಾಡಿಕೆ. ಈ ಸಂಪ್ರದಾಯ ಅಲ್ಲಿನ ಭಕ್ತರ ಬಹುದೊಡ್ಡ ನಂಬಿಕೆ. ತಾಯಿಯನ್ನು ಕಳೆದುಕೊಳ್ಳುವ ಚೇತುಗೆ ಆಸರೆಯಾಗಿ ವಸಂತ ಮತ್ತು ಸುಶೀಲ ಸಾಕುತ್ತಾರೆ.

ಇನ್ನು ಊರಿನ ಊದು ಪೂಜೆಗೆ ಹುಲಿ ವೇಷ ಹಾಕಲು ಎರಡು ತಂಡಗಳ ನಡುವೆ ಗುದ್ದಾಟ, ಅದರಲ್ಲಿ ಜ್ಯೋತಿಷ್ಯ ಶೆಟ್ಟಿ ತನ್ನ ತಂಡದ ಸದಸ್ಯರು ಮತ್ತೊಂದು ತಂಡ ಮಾರಿಗುಡಿ ಟೈಗರ್ಸ್ ಬಳಗಕ್ಕೆ ಹೋಗಿರುವ ವಿಚಾರಕ್ಕೆ ಗಲಾಟೆ. ಇನ್ನು ಆ ತಂಡದ ಮುಖಂಡ ದಿವಾಕರ್ (ಸುಮನ್ ತಲ್ವಾರ್) ತನ್ನ ಹುಡುಗರ ತಂಟೆಗೆ ಬರದಂತೆ ಎಚ್ಚರಿಕೆ ನೀಡುತ್ತಾನೆ. ಈ ಗಲಾಟೆ ಕೊಲೆ ಮಾಡುವ ಹಂತಕ್ಕೂ ಪ್ಲಾನ್ ನಡೆಯುತ್ತದೆ.

ಇದರ ನಡುವೆ ಚೇತುಗೆ ಮದುವೆ ಮಾಡಲು ನಿರ್ಧರಿಸಿದಾಗ ದೀಕ್ಷಾ ( ಚೈತ್ರಾ ಜೆ ಆಚಾರ್)ಳ ಮನೆಯವರು ಒಪ್ಪಿಗೆ ಇಲ್ಲದಿದ್ದರೂ ಕೈ ಹಿಡಿಯುವಂತಹ ಸ್ಥಿತಿ ಚೇತುಗೆ ಎದುರಾಗುತ್ತದೆ. ಜೀವನದಲ್ಲಿ ತಾನು ಬಯಸಿದ್ದು ಏನು ನಡೆಯದಿದ್ದರೂ ಸಮಯ ಸಂದರ್ಭಕ್ಕೆ ಅನುಗುಣವಾಗಿ ಸಾಗುತ್ತಾ ಪ್ರೀತಿಸುವ ಹೆಂಡತಿ , ನೆಮ್ಮದಿಯ ಬದುಕು , ತಂದೆ ಆಗುವ ಆಸೆ ಎನ್ನುವ ಹೊತ್ತಿಗೆ ಜೈಲು ಸೇರುವ ಪರಿಸ್ಥಿತಿ , ಮುಂದೆ ಬದುಕಿನ ಉದ್ದಕ್ಕೂ ಒಂದಲ್ಲ
ಒಂದು ಸಮಸ್ಯೆ ಅಡೆತಡೆ ಕಾಣುತ್ತಾ ಹೋಗುತ್ತದೆ. ಇದಕೆಲ್ಲ ಪರಿಹಾರ ಸಿಗುತ್ತಾ… ಇಲ್ಲವಾ… ಹರಕೆ… ನಂಬಿಕೆ… ತೋರುವ ದಾರಿ ಏನು… ಇದೆಲ್ಲದಕ್ಕೂ ಉತ್ತರ ಒಮ್ಮೆ ಮಾರ್ನಮಿ ನೋಡಬೇಕು.

ಈ ಚಿತ್ರದ ಕಥೆಯನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರ ಆಲೋಚನೆ ವಿಭಿನ್ನವಾಗಿದೆ. ಊರಿನ ಆಚರಣೆಯ, ಹರಕೆ , ನಂಬಿಕೆಯ, ಮಮತೆಯ ಸೆಳೆತ , ದರ್ಪ, ಸೇಡಿನ ನಡುವೆ ನಂಬಿಕೆ ದ್ರೋಹ ಹೀಗೆ ಒಂದಷ್ಟು ಬದುಕಿನ ಸೂಕ್ಷ್ಮ ವಿಚಾರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.

ಚಿತ್ರಕಥೆಯ ಪಯಣ ನಿಧಾನಗತಿಯಲ್ಲಿ ಸಾಗಿದೆ. ಇನ್ನಷ್ಟು ಚುರುಕುತನ ಅವಶ್ಯಕತೆ ಅನಿಸುತ್ತದೆ. ಆದರೆ ಪ್ರಯತ್ನ ಉತ್ತಮವಾಗಿದೆ. ನಿರ್ಮಾಪಕರ ಖರ್ಚು ವೆಚ್ಚ ತೆರೆಯ ಮೇಲೆ ಕಾಣುತ್ತದೆ. ಇನ್ನು ಒಂದು ಹಾಡು ಗುನುಗುವಂತಿದ್ದು , ಹಿನ್ನೆಲೆ ಸಂಗೀತ ಆವರಿಸಿಕೊಂಡಿದೆ. ಛಾಯಾಗ್ರಾಹಕರ ಕೈಚಳಕ ಸೊಗಸಾಗಿದ್ದು , ಸಂಕಲನ , ಸಾಹಸ ಕೂಡ ಗಮನ ಸೆಳೆಯುತ್ತದೆ. ನಾಯಕನಾಗಿ ರಿತ್ವಿಕ್ ಮಠದ್ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಲು ಬಹಳಷ್ಟು ಶ್ರಮ ಪಟ್ಟಿದ್ದಾರೆ.

ಇನ್ನು ನಾಯಕಿಯಾಗಿ ಚೈತ್ರಾ ಜೆ ಆಚಾರ್ ಅದ್ಭುತವಾಗಿ ತಮ್ಮ ಪಾತ್ರದಲ್ಲಿ ಜೀವಿಸಿದ್ದಾರೆ. ಪ್ರಕಾಶ್ ತುಮ್ಮಿ ನಾಡು ರವರ ಸಮಯ ಪ್ರಜ್ಞೆ ಪಾತ್ರ ಗಮನ ಸೆಳೆಯುತ್ತದೆ. ಉಳಿದಂತೆ ಸೋನು ಗೌಡ , ಜೋತಿಷ್ಯ ಶೆಟ್ಟಿ , ಸುಮನ್ ತಲ್ವಾರ್ , ರಾಧಾ ರಾಮಚಂದ್ರ, ಸ್ವರಾಜ್ ಶೆಟ್ಟಿ ಹಾಗೂ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಂದಷ್ಟು ಸೂಕ್ಷ್ಮ ವಿಚಾರವನ್ನು ಹೇಳಲು ಹೊರಟಿರುವ ಈ ಚಿತ್ರವನ್ನು ಒಮ್ಮೆ ನೋಡಬಹುದು.

Visited 1 times, 1 visit(s) today
error: Content is protected !!