Cinisuddi Fresh Cini News 

2023 ಜ.6 ರಂದು “ಮರೆಯದೆ ಕ್ಷಮಿಸು “ಚಿತ್ರ ಬಿಡುಗಡೆ

ಆರ್.ವಿ.ಎಸ್ ಪ್ರೊಡಕ್ಷನ್ ನಡಿ , ವಿ. ಶಿವರಾಂ ನಿರ್ಮಾಣದ, ಕೆ. ರಾಘವ್ ನಿರ್ದೇಶನದ ‘ಮರೆಯದೆ ಕ್ಷಮಿಸು ‘ ಚಿತ್ರ 2023 ರ ಜನವರಿ 6 ರಂದು ಬಿಡುಗಡೆಯಾಗಲಿದೆ. ಬಿಡುಗಡೆ ದಿನಾಂಕ ಘೋಷಿಸಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಡಿ.ಸಿ.ಪಿ ಮಂಜುನಾಥ್ ಬಾಬು ಹಾಗೂ ಸಿರಿ ಮ್ಯೂಸಿಕ್ ನ ಚಿಕ್ಕಣ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ, ಬಿಡುಗಡೆ ದಿನಾಂಕ ಘೋಷಣೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು.

ಇಲ್ಲಿ ಯಾರಿಗೆ ಯಾರು ಕ್ಷಮಿಸು ಎನ್ನುತ್ತಾರೆ ಎನ್ನುವುದನ್ನು ಚಿತ್ರ ನೋಡಿಯೇ ತಿಳಿಯಬೇಕು. ಉತ್ತಮ ಕಥಾಹಂದರದೊಂದಿಗೆ, ಉತ್ತಮ ತಂಡದೊಂದಿಗೆ ಈ ಚಿತ್ರ ಸಿದ್ದವಾಗಿದೆ. ಹೊಸವರ್ಷಕ್ಕೆ ನಮ್ಮ ಚಿತ್ರ ಬರುತ್ತಿದೆ. ನೋಡಿ ಹಾರೈಸಿ ಎಂದರು ನಿರ್ದೇಶಕ ಕೆ.ರಾಘವ್.

ನಾನು ತೊಂಭತ್ತನೇ ಇಸವಿಯಲ್ಲಿ ಯಶವಂತಪುರ ಬಾಳೆಮಂಡಿಯಲ್ಲಿ ಕೆಲಸಕ್ಕೆ ಸೇರಿದೆ. ಆ ನಂತರ ಎರಡು ವರ್ಷಕ್ಕೆ ನಾನೇ ಸ್ವತಃ ವ್ಯಾಪಾರ ಶುರು ಮಾಡಿದೆ. ಈಗ ಅರ್ಧ ಬೆಂಗಳೂರಿಗೆ ನಾವೇ ಬಾಳೆಹಣ್ಣುಗಳನ್ನು ಸರಬರಾಜು ಮಾಡುತ್ತೇವೆ. ಈ ಚಿತ್ರದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ಈ ಚಿತ್ರವಲ್ಲದೆ, ಇನ್ನೂ ಎರಡು ಚಿತ್ರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ‌. ಮುಂದೆ ಇನ್ನೂ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸುವ ಬಯಕೆಯಿದೆ ಎಂದರು ನಿರ್ಮಾಪಕ ವಿ.ಶಿವರಾಂ(ಬನಾನ ಶಿವರಾಂ).

ಉದಯ ಟಿವಿಯಲ್ಲಿ ವಾರ್ತಾ ವಾಚಕನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಈಗ ಈ ತಂಡ ನನ್ನನ್ನು ನಾಯಕನ್ನನಾಗಿ ಮಾಡಿದೆ‌. ಇನ್ನೂ ಈ ಚಿತ್ರದ ಬಗ್ಗೆ ಹಾಗೂ ನನ್ನ ಪಾತ್ರದ ಬಗ್ಗೆ ಹೇಳುವುದಾದರೆ, ಒಂದು ಊರಿನಲ್ಲಿ ನಮ್ಮದು ತುಂಬು ಕುಟುಂಬ.

ನಾನು ಗಾರೆ ಕೆಲಸ ಮಾಡುತ್ತಿರುತ್ತೇನೆ. ಆ‌ ಸಮಯದಲ್ಲಿ ಅದೇ ಊರಿನ ಸಾಹುಕಾರ ಹುಡುಗಿಯೊಬ್ಬಳನ್ನು ಪ್ರೀತಿಸುತ್ತೇನೆ.‌ ನಂತರ ಸಾಕಷ್ಟು ವಿಷಯಗಳು ನಡೆಯುತ್ತದೆ ಎಂದ ನಾಯಕ ಪ್ರಮೋದ್ ಬೋಪಣ್ಣ , ತಾಯಿಯ ಮಮತೆ ಹಾಗೂ ಸ್ನೇಹಿತರ ಪ್ರೀತಿ ಕೂಡ ಈ ಚಿತ್ರದಲ್ಲಿ ಎಲ್ಲರನ್ನೂ ಆಕರ್ಷಿಸುತ್ತದೆ ಎಂದರು.

ನಾಯಕಿ ಮೇಘನಾ ಗೌಡ, ಚಿತ್ರದಲ್ಲಿ ನಟಿಸಿರುವ ಸಿರುಂಡೆ ರಘು, ರಾಯಲ್ ರವಿ ಸಹ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಆರೋನ್ ಕಾರ್ತಿಕ್ ವೆಂಕಟೇಶ್ ಹೇಳಿದರು. ನೃತ್ಯ ನಿರ್ದೇಶಕ ನಂದ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಸದ್ಯ ಚಿತ್ರತಂಡ ಪ್ರಚಾರಕಾರ್ಯದಲ್ಲಿ ನಿರತರಾಗಿದ್ದಾರೆ.

Related posts